20 ಲಕ್ಷ ಮೌಲ್ಯದ ಅರಿಶಿಣ ಕಳ್ಳತನ; ಇಬ್ಬರ ಬಂಧನ
ಚಾಮರಾಜನಗರ, ನವೆಂಬರ್ 09; ಇಲ್ಲಿಗೆ ಸಮೀಪದ ಹನೂರು ಪಟ್ಟಣದ ಕಾರ್ಖಾನೆಯೊಂದರಿಂದ 20 ಲಕ್ಷ ಮೌಲ್ಯದ ಅರಿಶಿಣವನ್ನು ಕದ್ದೊಯ್ದಿದ್ದ ಕಳ್ಳರನ್ನು ಬಂಧಿಸುವಲ್ಲಿ ಹನೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ತಾಲೂಕಿನ ಕಾಂಚಳ್ಳಿ ಗ್ರಾಮದ ಚಂದ್ರಪ್ಪ (34), ರಮೇಶ್(28) ಬಂಧಿತ ಆರೋಪಿಗಳಾಗಿದ್ದು, ಮತ್ತೋರ್ವ ಆರೋಪಿ ರಾಜೇಶ್ ಎಂಬಾತ ಪರಾರಿಯಾಗಿದ್ದಾನೆ. ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಮಾಜಿ ಸಚಿವೆ ಉಮಾಶ್ರೀ ಮನೆ ಕಳವು ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ಪಟ್ಟಣದ ಎಲ್ಲೇಮಾಳ ಮುಖ್ಯ ರಸ್ತೆಯಲ್ಲಿ ಯುವರಾಜ ಇಂಡಸ್ಟ್ರೀಸ್ ಎಂಬ ಕಾರ್ಖಾನೆಯು ಅರಿಶಿಣದ ಉತ್ಪನ್ನಗಳನ್ನು ತಯಾರು ಮಾಡಿ ಮಾರಾಟ ಮಾಡುತ್ತದೆ. ಈ ಕಾರ್ಖಾನೆಯ ಗೋದಾಮಿನಿಂದ ನ.3ರಂದು ರಾತ್ರಿ ಸುಮಾರು 20 ಲಕ್ಷ ಮೌಲ್ಯದ 100 ಮೂಟೆಗಳಷ್ಟು ಅರಿಶಿಣ ಕಳ್ಳತನವಾಗಿತ್ತು. ಆ ನಂತರ ಪೊಲೀಸರು ತನಿಖೆ ಕೈಗೊಂಡಿದ್ದರು.
ಖಚಿತ ಮಾಹಿತಿಯ ಮೇರೆಗೆ ಎಡಳ್ಳಿ ದೊಡ್ಡಿ ಸಮೀಪದ ಅಲಗುಮೂಲೆ ಕ್ರಾಸ್ ಬಳಿ ದಾಳಿ ನಡೆಸಿ ಈಚರ್ ವಾಹನ ಮತ್ತು ಟಾಟಾ ಇಂಟ್ರಾ ವಾಹನದಲ್ಲಿ ಸಾಗಿಸಲಾಗುತಿದ್ದ ಅರಿಶಿಣವನ್ನು ವಶಪಡಿಸಿಕೊಂಡಿದ್ದಾರೆ. ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು 96 ಮೂಟೆ ಅರಿಶಿಣ ಮತ್ತು ಸಾಗಾಣಿಕೆ ಮಾಡುತ್ತಿದ್ದ 2 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ತಲೆ ಮರೆಸಿಕೊಂಡಿರುವ ಆರೋಪಿಗೆ ಶೋಧ ನಡೆಯುತ್ತಿದೆ.