ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲೀಗ ಹಿಮದ ಮಳೆ...

|
Google Oneindia Kannada News

ಚಾಮರಾಜನಗರ, ಜೂನ್ 20: ಮುಂಗಾರು ಆರಂಭವಾಯಿತೆಂದರೆ ನಿಸರ್ಗದಲ್ಲೊಂದು ಪುಳಕ ಸದ್ದಿಲ್ಲದೆ ಆರಂಭವಾಗಿ ಬಿಡುತ್ತದೆ. ಅದರಲ್ಲೂ ಬೆಟ್ಟಗುಡ್ಡಗಳು ಹಸಿರನ್ನೊದ್ದು ಕಂಗೊಳಿಸುವುದರೊಂದಿಗೆ ಕಣ್ಣನ್ನು ತಂಪಾಗಿಸುತ್ತವೆ.

Recommended Video

ಚೀನಾಗೆ 'ಕ್ಲೀನ್ ಚಿಟ್' ನೀಡಿದ್ರಾ ಮೋದಿ? ಪಿ ಚಿದಂಬರಂ ಸರಣಿ ಪ್ರಶ್ನೆಗಳು | P Chidambaram | Oneindia Kannada

ಇದೀಗ ಎಲ್ಲಿ ನೋಡಿದರೂ ಹಸಿರು ಹಚ್ಚಡದ ಸುಂದರ ಪ್ರಕೃತಿ ನೋಡುಗರಿಗೆ ಖುಷಿ ಕೊಡುತ್ತದೆ. ಅದರಲ್ಲೂ ಈಗ ಹಿಮ ಮಳೆಗೆರೆಯುವ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಸೌಂದರ್ಯವಂತೂ ಇಮ್ಮಡಿಗೊಂಡಿದ್ದು ನಿಸರ್ಗದ ಸುಂದರ ನೋಟ ಪ್ರಕೃತಿ ಪ್ರೇಮಿಗಳನ್ನು ಮೂಕವಿಸ್ಮಿತರನ್ನಾಗಿಸುತ್ತಿದೆ. ಎಲ್ಲೆಂದರೆಲ್ಲಿ ಹರಡಿ ನಿಂತ ಗಿರಿಶಿಖರಗಳು... ಸಣ್ಣಗೆ ಸುರಿಯುವ ಹಿಮಮಳೆ... ಒಬ್ಬರಿಗೊಬ್ಬರು ಕಾಣಿಸದಷ್ಟು ದಟ್ಟವಾಗಿ ಹರಡಿ ನಿಲ್ಲುವ ಮಂಜು... ಅದರಾಚೆಗೆ ಸುಯ್ಯೆಂದು ಬೀಸುವ ಗಾಳಿಗೆ ತಲೆದೂಗುವ ಗಿಡಮರಗಳು... ಆಗೊಮ್ಮೆ ಈಗೊಮ್ಮೆ ಮೌನವನ್ನು ಸೀಳಿಕೊಂಡು ಬರುವ ದೇಗುಲದ ಗಂಟೆಯ ನಿನಾದ ಸುಂದರ, ನೆಮ್ಮದಿಯ ಅನುಭವವನ್ನು ನೀಡುತ್ತದೆ.

ಹಸಿರನ್ನೊದ್ದ ಚಾಮುಂಡಿ ಬೆಟ್ಟದಲ್ಲೀಗ ಬೆಳ್ಮೋಡಗಳ ಮನಮೋಹಕ ಚಿತ್ತಾರ...ಹಸಿರನ್ನೊದ್ದ ಚಾಮುಂಡಿ ಬೆಟ್ಟದಲ್ಲೀಗ ಬೆಳ್ಮೋಡಗಳ ಮನಮೋಹಕ ಚಿತ್ತಾರ...

 ಕೊರೊನಾದಿಂದಾಗಿ ಪ್ರವಾಸಿಗರಿಲ್ಲ

ಕೊರೊನಾದಿಂದಾಗಿ ಪ್ರವಾಸಿಗರಿಲ್ಲ

ಬಹುಶಃ ಎಲ್ಲವೂ ಸರಿಯಿದ್ದಿದ್ದರೆ, ಕೊರೊನಾ ವೈರಸ್ ಈ ಮಟ್ಟಿಗೆ ಅಟ್ಟಹಾಸ ಮೆರೆಯದೆ ಹೋಗಿದ್ದರೆ ಈ ತಾಣಕ್ಕೆ ಪ್ರತಿದಿನ ಸಾವಿರಾರು ಪ್ರವಾಸಿಗರು ಬರುತ್ತಿದ್ದರೇನೋ? ಆದರೆ ಈಗ ಪರಿಸ್ಥಿತಿ ಸರಿಯಿಲ್ಲದ ಕಾರಣ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಬೇಸಿಗೆಯ ಮೂರು ತಿಂಗಳ ಕಾಲ ಲಾಕ್ ಡೌನ್ ಇದ್ದ ಕಾರಣ ಇತ್ತ ಯಾರೂ ಸುಳಿಯಲಿಲ್ಲ. ಇದು ಪ್ರಕೃತಿಗೊಂದು ವರದಾನವಾಯಿತು ಎಂದರೆ ತಪ್ಪಾಗಲಾರದು. ಏಕೆಂದರೆ ಈ ವ್ಯಾಪ್ತಿಯಲ್ಲಿ ಯಾವುದೇ ಕಾಡ್ಗಿಚ್ಚು ಸಂಭವಿಸಲಿಲ್ಲ. ಪರಿಸರ ಕಲುಷಿತಗೊಳ್ಳಲಿಲ್ಲ.

 ಪ್ರಕೃತಿಗೆ ಜೀವ ತುಂಬಿದ ಮಳೆ

ಪ್ರಕೃತಿಗೆ ಜೀವ ತುಂಬಿದ ಮಳೆ

ಬೇಸಿಗೆಯಲ್ಲಿ ಸುರಿದ ಮಳೆ ಮರಗಿಡಗಳಿಗೆ ಜೀವ ಸೆಲೆಯಾಯಿತು. ಮೇ ತಿಂಗಳಲ್ಲಿ ಸುರಿದ ಮಳೆಯೂ ಇಡೀ ಪ್ರಕೃತಿಗೆ ಜೀವ ತುಂಬಿತು. ಇದೀಗ ಇಡೀ ಬೆಟ್ಟಗುಡ್ಡಗಳು ಹಸಿರಿನಿಂದ ಕಂಗೊಳಿಸುವುದರೊಂದಿಗೆ ಹಸಿರ ಸ್ವರ್ಗವನ್ನು ಕಣ್ಮುಂದೆ ತಂದಿಟ್ಟಂತಿದೆ. ರಾಜ್ಯದ ಅತ್ಯಂತ ಎತ್ತರದ ಬೆಟ್ಟಗಳಲ್ಲಿ ಮೂರನೇ ಬೆಟ್ಟವಾಗಿರುವ ಹಿಮವದ್ ‌ಗೋಪಾಲಸ್ವಾಮಿ ಬೆಟ್ಟ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯ ಪ್ರದೇಶದಲ್ಲಿದೆ.

 ಆಸ್ತಿಕ-ನಾಸ್ತಿಕರ ಮೆಚ್ಚಿನ ತಾಣ

ಆಸ್ತಿಕ-ನಾಸ್ತಿಕರ ಮೆಚ್ಚಿನ ತಾಣ

ಇಲ್ಲಿನ ಹಂಗಳ ಗ್ರಾಮದಿಂದ ಮುಂದಕ್ಕೆ ರಸ್ತೆಯಲ್ಲಿ ಸಾಗುತ್ತಿದ್ದರೆ ಆಕಾಶ ಭೂಮಿಯನ್ನು ಒಂದಾಗಿಸಿದಂತೆ ಕಾಣುವ ಮೋಡಗಳ ಆಟ, ಜೇನು ಹುಳುಗಳ ಝೇಂಕಾರ... ಹಕ್ಕಿಗಳ ಇಂಚರ... ಎಲ್ಲವೂ ಮುಂದೆ ಸಾಗಲು ಪ್ರೇರಣೆ ನೀಡುತ್ತವೆ. ಇನ್ನು ಸುಮಾರು 1450 ಅಡಿ ಎತ್ತರದ ಈ ಬೆಟ್ಟದಲ್ಲಿ ಶ್ರೀ ಗೋಪಾಲಸ್ವಾಮಿ ನೆಲೆನಿಂತಿದ್ದು, ಕೊಳಲೂದುವ ಶ್ರೀಕೃಷ್ಣನ ಮೂರ್ತಿ ಆಕರ್ಷಕವಾಗಿದೆ. ಇಲ್ಲಿಗೆ ಸಾಮಾನ್ಯವಾಗಿ ಆಸ್ತಿಕರು-ನಾಸ್ತಿಕರನ್ನೆದೆ ಎಲ್ಲರೂ ಬರುತ್ತಾರೆ. ಹೀಗಾಗಿ ಇದೊಂದು ರೀತಿಯಲ್ಲಿ ಚಾರಣ ಪ್ರಿಯರಿಗೆ ಹುರುಪಿನ ತಾಣವಾಗಿಯೂ, ನಿಸರ್ಗ ಪ್ರೇಮಿಗಳಿಗೆ ಮುದ ನೀಡುವ, ಭಕ್ತರಿಗೆ ಇಷ್ಟಾರ್ಥ ನೆರವೇರಿಸುವ ಕ್ಷೇತ್ರವಾಗಿದೆ ಎಂದರೆ ತಪ್ಪಾಗಲಾರದು.

 ಮನೋಲ್ಲಾಸ ನೀಡುವ ನಿಸರ್ಗ

ಮನೋಲ್ಲಾಸ ನೀಡುವ ನಿಸರ್ಗ

ಪ್ರತಿ ವರ್ಷವೂ ಬೇಸಿಗೆ ಕಳೆದು ಮುಂಗಾರು ಆರಂಭವಾಗುತ್ತಿದ್ದಂತೆಯೇ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಸೌಂದರ್ಯ ಇಮ್ಮಡಿಯಾಗುವುದರೊಂದಿಗೆ ಹಿಮಮಳೆಯ ಸುಂದರ ವಾತಾವರಣ ಸೃಷ್ಟಿಯಾಗಿಬಿಡುತ್ತದೆ. ಹೀಗಾಗಿ ಈ ಸಮಯದಲ್ಲಿ ಸದಾ ಒತ್ತಡಗಳಿಂದ ಕೂಡಿದ ಜೀವನ ನಡೆಸುವವರು, ಪೇಟೆ, ಪಟ್ಟಣಗಳ ಗೌಜುಗದ್ದಲಗಳಲ್ಲಿ ಬದುಕು ಕಟ್ಟಿಕೊಂಡವರು ತಮ್ಮ ವಾರದ ರಜಾ ದಿನಗಳನ್ನು ಕಳೆಯಲು ಇಲ್ಲಿಗೆ ಹೆಚ್ಚಾಗಿ ಬರುತ್ತಿದ್ದರು. ಈ ಬಾರಿ ಕೊರೊನಾದಿಂದಾಗಿ ಪ್ರವಾಸಿಗರಾಗಲೀ, ಭಕ್ತರಾಗಲೀ ಬರುವಂತಿಲ್ಲ. ಎಲ್ಲವೂ ಸರಿ ಹೋಗಿ ಕೊರೊನಾ ಅಟ್ಟಹಾಸಕ್ಕೆ ಬ್ರೇಕ್ ಬಿದ್ದದ್ದೇ ಆದರೆ ಮುಂದಿನ ದಿನಗಳಲ್ಲಿ ಪ್ರವಾಸಿಗರು ಇತ್ತ ಬಂದು ನಿಸರ್ಗ ಸೌಂದರ್ಯವನ್ನು ಸವಿಯಬಹುದೇನೋ?

English summary
The beauty of Himavad gopalaswamy nature enhanced with fog and greenary now,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X