India
 • search
 • Live TV
ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮರಾಜನಗರ; ವರುಣನ ಕೃಪೆಗೆ ಹಸಿರಾದ ಬಂಡೀಪುರ!

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಮೇ 20; ಈ ಬಾರಿಯ ಬೇಸಿಗೆಗೆ ವರುಣ ಸೆಡ್ಡು ಹೊಡೆದಿದ್ದಾನೆ. ನಡು ಬೇಸಿಗೆಯಲ್ಲಿ ಆಗೊಮ್ಮೆ ಈಗೊಮ್ಮೆ ಅಲ್ಲದೆ, ಪೂರ್ವ ಮುಂಗಾರಿನಲ್ಲಿ ಮನಸ್ಸೋ ಇಚ್ಚೆ ಮಳೆ ಸುರಿಸುತ್ತಿರುವ ಪರಿಣಾಮ ಬಿಸಿಲ ಧಗೆಯಲ್ಲಿ ಬೆಂದು ಹೋಗಬೇಕಿದ್ದ ಗಿಡ ಮರಗಳು ಬಾಡದೆ, ಒಣಗದೆ ನಿಸರ್ಗಕ್ಕೊಂದು ಜೀವ ಕಳೆ ನೀಡಿವೆ.

ಹೆಚ್ಚಿನ ಅರಣ್ಯ ಪ್ರದೇಶ ಹೊಂದಿರುವ ಚಾಮರಾಜನಗರ ಜಿಲ್ಲೆಯಲ್ಲಿ ಬೇಸಿಗೆ ಬಂತೆಂದರೆ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುವ ಅಧಿಕಾರಿಗಳಿಂದ ಹಿಡಿದು ಅರಣ್ಯ ವೀಕ್ಷಕರ ತನಕ ದುಗುಡ ಶುರುವಾಗುತ್ತಿತ್ತು. ಬಿಸಿಲಿನ ಧಗೆಗೆ ಒಣಗಿ ನಿಂತ ಅರಣ್ಯ ಎಲ್ಲಿ ಕಾಡ್ಗಿಚ್ಚಿಗೆ ಬಲಿಯಾಗಿ ಬಿಡುತ್ತದೆಯೋ ಎಂಬ ಆತಂಕ ಮನೆ ಮಾಡುತ್ತಿತ್ತು.

ಭಾರಿ ಮಳೆ: ಶಿವಮೊಗ್ಗದ ಜಲಾಶಯಗಳಿಗೆ ಒಳ ಹರಿವು ಹೆಚ್ಚಳ ಭಾರಿ ಮಳೆ: ಶಿವಮೊಗ್ಗದ ಜಲಾಶಯಗಳಿಗೆ ಒಳ ಹರಿವು ಹೆಚ್ಚಳ

ಏಕೆಂದರೆ ಕಳೆದ ಕೆಲ ವರ್ಷಗಳ ಹಿಂದೆ ರಣ ಬಿಸಿಲಿಗೆ ಸಿಕ್ಕಿ ಹೊತ್ತಿ ಉರಿದ ಬಂಡೀಪುರ ಅರಣ್ಯದ ಆ ದುರಂತ ದೃಶ್ಯ ಇವತ್ತಿಗೂ ಎಲ್ಲರ ಕಣ್ಮುಂದೆ ಇದೆ. ಮನುಷ್ಯ, ಪ್ರಾಣಿ ಸಹಿತ ಸಜೀವ ದಹನಗೊಂಡ ಕರುಣಾ ಜನಕ ಕಥೆ ಜಿಲ್ಲೆಯ ಜನರ ಕಣ್ಣೆದುರಲ್ಲಿ ಅಚ್ಚಳಿಯದೆ ಉಳಿದಿದೆ.

ಚಾಮರಾಜನಗರ ಆಕ್ಸಿಜನ್ ದುರಂತಕ್ಕೆ 1 ವರ್ಷ, ಕಣ್ಣೀರು ನಿಂತಿಲ್ಲಚಾಮರಾಜನಗರ ಆಕ್ಸಿಜನ್ ದುರಂತಕ್ಕೆ 1 ವರ್ಷ, ಕಣ್ಣೀರು ನಿಂತಿಲ್ಲ

ಇಷ್ಟೇ ಅಲ್ಲದೆ ನಡು ಬೇಸಿಗೆಯಲ್ಲಿ ಮಳೆಯ ಅಭಾವದಿಂದ ನೀರಿಲ್ಲದೆ ಕಾಡು ಪ್ರಾಣಿಗಳು ನಲುಗಿದ ಭೀಕರ ದಿನಗಳು ಕೂಡ ನೆನಪಾಗಿ ಉಳಿದಿವೆ. ಇದೆಲ್ಲವೂ ಮೇಲಿಂದ ಮೇಲೆ ಕಾಡುತ್ತಿದ್ದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳಲ್ಲಿ ಬೇಸಿಗೆಯ ಭಯ ಇದ್ದೇ ಇತ್ತು.

ಬಂಡೀಪುರ; ಹುಲಿ ಜೊತೆ ಸಸ್ಯಾಹಾರಿ ಪ್ರಾಣಿಗಳ ಗಣತಿ ಬಂಡೀಪುರ; ಹುಲಿ ಜೊತೆ ಸಸ್ಯಾಹಾರಿ ಪ್ರಾಣಿಗಳ ಗಣತಿ

ಡಿಸೆಂಬರ್‌ನಿಂದಲೇ ತಯಾರಿ

ಡಿಸೆಂಬರ್‌ನಿಂದಲೇ ತಯಾರಿ

ಈ ಬಾರಿಯ ಬೇಸಿಗೆಯಲ್ಲಿ ಕಾಡ್ಗಿಚ್ಚಿನಿಂದ ಅರಣ್ಯವನ್ನು ರಕ್ಷಿಸಲು ಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಡಿಸೆಂಬರ್ ನಿಂದಲೇ ತಯಾರಿ ಆರಂಭಿಸಲಾಗಿತ್ತು. ಅರಣ್ಯದ ಸುತ್ತ ಬೆಂಕಿ ರೇಖೆ ನಿರ್ಮಾಣ ಸೇರಿದಂತೆ ತಂತ್ರಜ್ಞಾನದ ಮೂಲಕವೂ ಅರಣ್ಯವನ್ನು ಕಾಯುವ ಕೆಲಸವನ್ನು ಅರಣ್ಯ ಇಲಾಖೆ ಮಾಡಿತ್ತಲ್ಲದೆ, ಕಾಡ್ಗಿಚ್ಚಿನ ಅರಿವನ್ನು ಸಾರ್ವಜನಿಕವಾಗಿ ಮೂಡಿಸಿತ್ತು.

ಇದೆಲ್ಲದರ ನಡುವೆಯೂ ಬೇಸಿಗೆಯಲ್ಲಿ ವರುಣ ಅರಣ್ಯದತ್ತ ದಯೆ ತೋರಿದ್ದನು. ಮಾರ್ಚ್ ನಲ್ಲಿ ಒಂದಷ್ಟು ಮಳೆ ಸುರಿದಿತ್ತು. ಅದಾದ ನಂತರ ಆಗೊಮ್ಮೆ ಈಗೊಮ್ಮೆ ಮಳೆ ಸುರಿದಿದ್ದು, ಮರಗಿಡಗಳಿಗೆ ಜೀವಜಲ ಸಿಕ್ಕಂತಾಗಿತ್ತು. ಒಣಗಿ ಹೋಗಿದ್ದ ಕುರುಚಲು ಗಿಡಗಳ ಸಹಿತ ಗಿಡಮರಗಳು ಚೇತರಿಕೆ ಕಂಡವು.

ಕೆರಗಳಿಗೆ ನೀರು ಹರಿದು ಬಂದಿದೆ

ಕೆರಗಳಿಗೆ ನೀರು ಹರಿದು ಬಂದಿದೆ

ಅದರಲ್ಲೂ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆ ಬಂಡೀಪುರ ಅರಣ್ಯದಲ್ಲಿರುವ ಗಿಡಮರಗಳು ಮಾತ್ರವಲ್ಲದೆ ಕೆರೆಕಟ್ಟೆಗಳಿಗೆ ನೀರು ಹರಿದು ಬರುವಂತೆ ಮಾಡಿದೆ. ಒಣಗಿ ಸತ್ತೇ ಹೋಗಿದ್ದ ಹುಲ್ಲು ಚಿಗುರಿದೆ. ಕುರುಚಲು ಗಿಡಗಳು ಜೀವಪಡೆದುಕೊಂಡಿವೆ. ಒಟ್ಟಾರೆ ಇಡೀ ಅರಣ್ಯ ಹಸಿರು ಸೀರೆಯುಟ್ಟ ನಿಂತ ಷೋಡಸಿಯಂತೆ ಕಂಗೊಳಿಸುತ್ತಿದೆ.

ಇದೀಗ ಕಣ್ಣು ಹಾಯಿಸಿದುದ್ದಕ್ಕೂ ಹಸಿರು ಹಚ್ಚಡದ ನಿಸರ್ಗ ಸುಂದರ ನೋಟ ಕಣ್ಣನ್ನು ತಂಪಾಗಿಸುತ್ತದೆ. ಇದರೊಂದಿಗೆ ಅರಣ್ಯದೊಳಗೆ ಖುಷಿ ಖುಷಿಯಾಗಿ ವಿಹರಿಸುವ ಕಾಡಾನೆಗಳು, ಜಿಂಕೆ, ಸಾರಂಗಗಳು, ರಾಜನಡಿಗೆಯ ಹುಲಿ, ಮೇಯುವುದರಲ್ಲಿ ತಲ್ಲೀನರಾದ ಕಾಡುಕೋಣಗಳು ಅಪರೂಪಕ್ಕೆ ದರ್ಶನ ನೀಡುವ ಕರಡಿ, ಚಿರತೆ, ಕಾಡಂದಿ ಹಿಂಡು, ಮುಂಗುಸಿ, ಛಂಗನೆ ಓಡುವ ಅಳಿಲು, ಬಗೆ ಬಗೆಯ ಪಕ್ಷಿಗಳು, ಹಾವುಗಳು ಹೀಗೆ ಹಲವು ಬಗೆಯ ಜೀವ ರಾಶಿಗಳು ನೋಡುಗರನ್ನು ಆಕರ್ಷಿಸುತ್ತವೆ.

ನಿಸರ್ಗಪ್ರೇಮಿಗಳ ಸೆಳೆದ ಹಸಿರು

ನಿಸರ್ಗಪ್ರೇಮಿಗಳ ಸೆಳೆದ ಹಸಿರು

ಹಾಗೆ ನೋಡಿದರೆ ಬೇಸಿಗೆ ಬಂತೆಂದರೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದ ಬಂಡೀಪುರ ಕಳೆದ ಮೂರು ವರ್ಷಗಳಿಂದ ಕೊರೊನಾ ಬಂದ ಬಳಿಕ ಆದಾಯದಲ್ಲಿ ಖೋತಾ ಆದರೂ ಪ್ರಾಕೃತಿಕವಾಗಿ ಸಮಸ್ಯೆಯಿಂದ ಮುಕ್ತವಾಗಿದೆ ಎಂದರೆ ತಪ್ಪಾಗಲಾರದು. ಇದೇ ರೀತಿ ಪ್ರತಿ ವರ್ಷ ಮಳೆ ಸುರಿದಿದ್ದೇ ಆದರೆ ನಿಸರ್ಗಕ್ಕೆ ವರದಾನವಾಗಲಿದೆ.

  RCB ಅಭಿಮಾನಿಗಳೆಲ್ಲಾ ಈಗ Mumbai Indians ಅಭಿಮಾನಿಗಳು | Oneindia Kannada
  ಪ್ರಾಣಿಗಳಿಗೆ ತೊಂದರೆ ಇಲ್ಲ

  ಪ್ರಾಣಿಗಳಿಗೆ ತೊಂದರೆ ಇಲ್ಲ

  ಸದ್ಯ ಬಂಡೀಪುರದಲ್ಲಿ ವನ್ಯ ಪ್ರಾಣಿಗಳು ಯಾವುದೇ ತೊಂದರೆಯಿಲ್ಲದೆ ನಿರ್ಭಯವಾಗಿ ಓಡಾಡಲಾರಂಭಿಸಿವೆ. ಪ್ರಾಣಿಗಳಿಗೆ ಕುಡಿಯಲು ನೀರು, ತಿನ್ನಲು ಮೇವು ಸಿಗುತ್ತಿದೆ. ಕಳೆದ ಬಾರಿಯ ಮಳೆಗೆ ಕೆರೆಕಟ್ಟೆಗಳು ತುಂಬಿದ್ದವು. ಸಾಮಾನ್ಯವಾಗಿ ಬೇಸಿಗೆ ಹೊತ್ತಿಗೆ ನೀರು ಬತ್ತುತ್ತಿತ್ತಾದರೂ ಈಗ ಮಳೆ ಸುರಿಯುತ್ತಿರುವುದರಿಂದ ಜೀವ ಕಳೆ ಬಂದಿದೆ. ಹೀಗಾಗಿ ಪ್ರಕೃತಿ ಪ್ರೇಮಿಗಳು ಇದೀಗ ಬಂಡೀಪುರ ಅರಣ್ಯವನ್ನು ನೋಡುತ್ತಾ ನಿಸರ್ಗದ ಸುಂದರ ಪರಿಸರದಲ್ಲಿ ವಿಹರಿಸುವ ಸಲುವಾಗಿ ಇತ್ತ ಧಾವಿಸುತ್ತಿದ್ದಾರೆ.

  English summary
  Heavy rain in Chamarajanagar district brings back greenery in Bandipur forest. The grass has turned green again.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X