ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಳಂದೂರು ತಾಲೂಕಿನ ಅಕ್ರಮ ಕಲ್ಲು ಗಣಿಗಾರಿಕೆಗೆ ತಡೆಯಾಜ್ಞೆ

By ಒನ್ಇಂಡಿಯಾ ಡೆಸ್ಕ್
|
Google Oneindia Kannada News

ಬೆಂಗಳೂರು/ಚಾಮರಾಜನಗರ, ಸೆಪ್ಟೆಂಬರ್ 13: ಕಳೆದ ಐದಾರು ವರ್ಷಗಳಿಂದ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ನಡೆಸಿದ್ದ ಯರಗಂಬಳ್ಳಿ ಗ್ರಾಮಸ್ಥರಿಗೆ ಕೊನೆಗೂ ಶುಭ ಸುದ್ದಿ ಸಿಕ್ಕಿದೆ.

ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಯರಗಂಬಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿ ಸೋಮವಾರದಂದು ಆದೇಶಿಸಿದೆ.

ಬಿಳಿಗಿರಿ ರಂಗನಾಥನ ಬೆಟ್ಟ ಇನ್ಮುಂದೆ ಪರಿಸರ ಸೂಕ್ಷ್ಮವಲಯ; ವಾಣಿಜ್ಯ ಚಟುವಟಿಕೆಗೆ ಬ್ರೇಕ್!ಬಿಳಿಗಿರಿ ರಂಗನಾಥನ ಬೆಟ್ಟ ಇನ್ಮುಂದೆ ಪರಿಸರ ಸೂಕ್ಷ್ಮವಲಯ; ವಾಣಿಜ್ಯ ಚಟುವಟಿಕೆಗೆ ಬ್ರೇಕ್!

ಎಂ. ಸಮೀವುಲ್ಲಾ ಎಂಬವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ನ್ಯಾಯಪೀಠ ಆದೇಶ ಮಾಡಿದೆ.

HC stays Stone Mining at Yeragamballi, Yelandur Taluk

ಈ ಹಿಂದೆ ಇಲ್ಲಿನ ಅಕ್ರಮ ಗಣಿಗಾರಿಕೆ ಬಗ್ಗೆ ದೂರು ಬಂದ ಬಳಿಕ ಸ್ಥಳ ಪರಿಶೀಲನೆಗೆ ಕೋರ್ಟ್ ಆದೇಶಿಸಿತ್ತು. ಸ್ಥಳ ಪರಿಶೀಲನೆ ನಡೆಸಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕರು ಹೈಕೋರ್ಟ್‌ಗೆ ವರದಿ ಸಲ್ಲಿಸಿದ್ದರು. ಯರಗಂಬಳ್ಳಿ ಗ್ರಾಮದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಪ್ರದೇಶದಿಂದ ನೀರು ವಿತರಣಾ ಕಾಲುವೆ 60 ಮೀಟರ್ ದೂರಲ್ಲಿದೆ ಎಂದು ವರದಿಯಲ್ಲಿ ಹೇಳಿದ್ದರು.

ಆದರೆ, ನೀರು ವಿತರಣಾ ಕಾಲುವೆಯು ಗಣಿಗಾರಿಕೆಯ ಪ್ರದೇಶದಿಂದ ಕೇವಲ 20 ಮೀಟರ್ ದೂರದಲ್ಲಿದೆ ಎಂದು ಅರ್ಜಿದಾರ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿ, ಉಪ ನಿರ್ದೇಶಕರು ಸುಳ್ಳು ವರದಿ ಸಲ್ಲಿಸಿದ್ದಾರೆ. ಹಾಗಾಗಿ, ಸ್ಥಳ ಪರಿಶೀಲನೆ ನಡೆಸಲು ಕೋರ್ಟ್ ಕಮಿಷನರ್‌ ಅವರನ್ನು ನೇಮಕ ಮಾಡಬೇಕು ಎಂದು ಮನವಿ ಮಾಡಿದ್ದರು.

ಹೈಕೋರ್ಟ್ ನಿರ್ದೇಶನದಂತೆ, ವಕೀಲರಾದ ಮಿಶಾ ಥಾಮಸ್ ಅವರನ್ನು ನ್ಯಾಯಾಲಯದ ಆಯುಕ್ತರನ್ನಾಗಿ ನೇಮಕ ಮಾಡಿ ಆಗಸ್ಟ್‌ 9ರಂದು ಆದೇಶಿಸಿತ್ತು. ಅಲ್ಲದೆ, ನ್ಯಾಯಾಲಯದ ಆಯುಕ್ತರು ಸ್ಥಳ ಪರಿಶೀಲನೆ ನಡೆಸಿ 30 ದಿನಗಳಲ್ಲಿ ವರದಿ ಸಲ್ಲಿಸಬೇಕು ಎಂದು ಸೂಚಿಸಿತ್ತು.

ಮಿಶಾ ಥಾಮಸ್ ಹಾಗೂ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ, ವರದಿಯನ್ನು ಸೋಮವಾರ ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ. ಹಾಗೂ ಈ ಪ್ರಕರಣದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಪ್ರದೇಶದಿಂದ ನೀರು ವಿತರಣಾ ಕಾಲುವೆಯು 20 ಮೀಟರ್ ಒಳಗಿದೆ ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಆ ವರದಿ ಪರಿಗಣಿಸಿದ ನ್ಯಾಯಪೀಠ, ಅರ್ಜಿಯ ಮುಂದಿನ ವಿಚಾರಣೆವರೆಗೆ ಯರಗಂಬಳ್ಳಿ ಗ್ರಾಮದಲ್ಲಿ ನಡೆಸುತ್ತಿರುವ ಕಲ್ಲು ಗಣಿಗಾರಿಕೆ ಚಟುವಟಿಕೆಗಳನ್ನು ನಿಲ್ಲಿಸಬೇಕು ಎಂದು ತಡೆಯಾಜ್ಞೆ ಆದೇಶ ನೀಡಿ ವಿಚಾರಣೆ ಮುಂದೂಡಿತು. ಜತೆಗೆ, ನ್ಯಾಯಾಲಯದ ಆಯುಕ್ತರ ವರದಿಗೆ ಪ್ರತಿಕ್ರಿಯಿಸುವಂತೆ ಗಣಿಗಾರಿಕೆ ನಡೆಸುತ್ತಿರುವ ಕರಿಕಲ್ಲು ನಂಜಶೆಟ್ಟಿ ಅವರ ಪರ ವಕೀಲರಿಗೆ ನಿರ್ದೇಶಿಸಿತು.

ಯರಗಂಬಳ್ಳಿ ಗ್ರಾಮದ ಸರ್ವೇ ನಂಬರ್ 711/1, 711/2, 711/3ರ ಕೃಷಿ ಜಮೀನನ್ನು ನಂಜನಶೆಟ್ಟಿ ಅವರು ಖರೀದಿಸಿ, ಗ್ರಾನೈಟ್ಸ್ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ. ಅಲ್ಲದೆ, ಆ ಪಕ್ಕದ ಸರ್ವೇ ನಂಬರ್ 710/1ರಲ್ಲಿನ ಸರ್ಕಾರಿ ಜಮೀನಿನಲ್ಲಿಯೂ ಅಕ್ರಮವಾಗಿ ಗಣಿಗಾರಿಕೆ ಚಟುವಟಿಕೆಗಳನ್ನು ವಿಸ್ತರಿಸಿದ್ದಾರೆ. ಅಲ್ಲಿಂದ ಕೇವಲ 20 ಮೀಟರ್ ದೂರದಲ್ಲಿ ನೀರು ವಿತರಣಾ ಕಾಲುವೆಯಿದೆ. ಕಲ್ಲು ಗಣಿಗಾರಿಕೆಗಾಗಿ ಸಮೀಪದ ಈದ್ಗಾ ಮೈದಾನದ ತಡೆಗೋಡೆಯನ್ನು ಅಕ್ರಮವಾಗಿ ನೆಲಸಮಗೊಳಿಸಲಾಗಿದೆ.

ಈ ಬಗ್ಗೆ 2016ರಿಂದಲೂ ಮನವಿ ನೀಡಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿದಾರರು ದೂರಿದ್ದಾರೆ. ಅರ್ಜಿದಾರರ ಪರ ವಕೀಲ ರೆಹಮತ್‌ಉಲ್ಲಾ ಕೊತ್ವಾಲ್ ವಕಾಲತ್ತು ವಹಿಸಿದ್ದರು.

Recommended Video

ವಿರಾಟ್ ಕೊಹ್ಲಿ ಬದಲಿಗೆ ಹೊಸ ನಾಯಕನಾಗಿ ರೋಹಿತ್ ಶರ್ಮಾ | Oneindia Kannada

ಗಣಿಗಾರಿಕೆ ಪ್ರದೇಶ ಸಮೀಪದಲ್ಲೇ ಶಾಲೆ, ವಸತಿಗೃಹಗಳಿವೆ, ಈಗಾಗಲೇ ಕುಡಿಯುವ ನೀರು ಕಲುಷಿತವಾಗಿದೆ, ಗುಂಬಳ್ಳಿ ಕೆರೆಯಲ್ಲಿ ಮೀನುಗಳು ಸತ್ತಿರುವುದನ್ನು ವರದಿಯಲ್ಲಿ ಸೇರಿಸಬೇಕಿದೆ. ಇದಲ್ಲದೆ, ಹುಲಿ ಸಂರಕ್ಷಣಾ ಯೋಜನೆ ಪ್ರದೇಶ ಕೂಡಾ ಸಮೀಪದಲ್ಲಿದ್ದು, ಸುತ್ತ ಮುತ್ತಲ ಪ್ರದೇಶದಲ್ಲಿ ಭಾರಿ ತೊಂದರೆಯಾಗುತ್ತಿದೆ ಎಂದು ಭ್ರಷ್ಟಾಚಾರ ವಿರೋಧಿ ಆಂದೋಲನ ವೇದಿಕೆಯ ಯರಂಗಬಳ್ಳಿ ಪರಮಶಿವಮೂರ್ತಿ ದೂರಿದ್ದರು. (ಮಾಹಿತಿ ಕೃಪೆ: ಬಾರ್ ಅಂಡ್ ಬೆಂಚ್)

English summary
Karnataka High Court today issued stay order to Stone Mining activiities at Yeragamballi, Yelandur Taluk in Chamaraja Nagar district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X