ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಣೇಶ ಹಬ್ಬದ ವಿಶೇಷ: ಕಡಲೆ ಹಿಟ್ಟಿನ ಗೌರಮ್ಮ ಸ್ವರ್ಣ ಗೌರಿಯಾದ ಕಥೆ!

|
Google Oneindia Kannada News

ಚಾಮರಾಜನಗರ, ಸೆಪ್ಟೆಂಬರ್ 9: ಗೌರಿ ಗಣೇಶ ಹಬ್ಬದ ಸಡಗರ ಸಂಭ್ರಮ ಎಲ್ಲ ಕಡೆ ಮನೆ ಮಾಡಿದೆ. ಕೊರೊನಾ ಸೋಂಕಿನ ಭಯವನ್ನು ಬದಿಗಿಟ್ಟು ಬದುಕಿಗೆ ಒಳಿತು ಮಾಡೆಂದು ಹೆಣ್ಣುಮಕ್ಕಳು ಗೌರಿಯಲ್ಲಿ ಬೇಡಿಕೊಳ್ಳುತ್ತಿದ್ದಾರೆ.

ಹಾಗೆ ನೋಡಿದರೆ ಹೆಣ್ಣುಮಕ್ಕಳಿಗೆ ಗೌರಿ ಹಬ್ಬವೆಂದರೆ ಎಲ್ಲಿಲ್ಲದ ಸಡಗರ- ಸಂಭ್ರಮ. ಜೊತೆಗೆ ಹಬ್ಬವನ್ನು ಮನೆ, ಮನೆಗಳಲ್ಲಿ ಆಚರಿಸುವುದು ರೂಢಿ. ಆದರೆ ಮನೆಯಲ್ಲಿ ಆಚರಿಸದೆ ಇಡೀ ಊರಿಗೆ ಊರೇ ಒಂದೆಡೆ ಕಲೆತು ಹಬ್ಬವನ್ನು ಆಚರಿಸುವುದು ಚಾಮರಾಜನಗರ ಜಿಲ್ಲೆಯ ಕುದೇರಿನಲ್ಲಿ ಕಂಡು ಬರುತ್ತದೆ.

ಇಲ್ಲಿನ ಗೌರಮ್ಮ ಹೆಣ್ಣುಮಕ್ಕಳ ಇಷ್ಟಾರ್ಥವನ್ನು ನೆರವೇರಿಸುವ ತಾಯಿಯಾಗಿದ್ದು, ಆಕೆಯಲ್ಲಿ ಭಕ್ತಿಯಿಂದ ಬೇಡಿಕೊಂಡರೆ ಇಷ್ಟಾರ್ಥಗಳನ್ನು ಅದರಲ್ಲೂ ಕಂಕಣ ಮತ್ತು ಸಂತಾನ ಭಾಗ್ಯವನ್ನು ನೆರವೇರಿಸುತ್ತಾಳೆ ಎಂಬುದು ಗ್ರಾಮಸ್ಥರ ಹಾಗೂ ದೇವಿಯ ಭಕ್ತರ ನಂಬಿಕೆಯಾಗಿದೆ.

 ಕುದೇರು ಗ್ರಾಮಕ್ಕೊಬ್ಬಳೇ ಗೌರಮ್ಮ

ಕುದೇರು ಗ್ರಾಮಕ್ಕೊಬ್ಬಳೇ ಗೌರಮ್ಮ

ಸಾಮಾನ್ಯವಾಗಿ ಗೌರಿಗಣೇಶ ಹಬ್ಬದಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿ ಸಾಮೂಹಿಕವಾಗಿ ಪೂಜಾ ಕಾರ್ಯಕ್ರಮಗಳನ್ನು ನಡೆಸುವುದು ಹಿಂದಿನಿಂದಲೂ ನಡೆದು ಬಂದಿದೆ. ಆದರೆ ಗೌರಿಯನ್ನು ಸಾಮೂಹಿಕವಾಗಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುವುದು ಅಪರೂಪ. ಆದರೆ ಕುದೇರುನಲ್ಲಿ ಮಾತ್ರ ಕಡಲೆಹಿಟ್ಟಿನಿಂದ ಗೌರಿಯನ್ನು ತಯಾರಿಸಿ ಮೆರವಣಿಗೆಯಲ್ಲಿ ಕೊಂಡೊಯ್ದು ಪ್ರತಿಷ್ಠಾಪಿಸಿ ಗ್ರಾಮಸ್ಥರೆಲ್ಲರೂ ಸಾಮೂಹಿಕವಾಗಿ ಪೂಜೆ ಸಲ್ಲಿಸಲಾಗುತ್ತದೆ. ಜತೆಗೆ ಇಡೀ ಊರಿನ ಹೆಂಗಳೆಯರೆಲ್ಲರೂ ಗೌರಿಗೆ ವಿಶೇಷ ಪೂಜೆ ಸಲ್ಲಿಸುತ್ತಾ ಎಲ್ಲ ವರ್ಗದ ಜನತೆ ಯಾವುದೇ ಜಾತಿ ಭೇದ ಭಾವವಿಲ್ಲದೇ ಹಬ್ಬವನ್ನು ಆಚರಿಸಿ ಸಂಭ್ರಮಿಸುತ್ತಾರೆ.

 ಊರಿನ ಬೀದಿಯಲ್ಲಿ ಗೌರಮ್ಮನ ಮೆರವಣಿಗೆ

ಊರಿನ ಬೀದಿಯಲ್ಲಿ ಗೌರಮ್ಮನ ಮೆರವಣಿಗೆ

ಗೌರಿ ದೇಗುಲವೇ ಗ್ರಾಮದಲ್ಲಿ ಇರುವುದರಿಂದ ಗೌರಿಯನ್ನು ಮನೆಯಲ್ಲಿ ಪ್ರತಿಷ್ಠಾಪಿಸದೆ, ಎಲ್ಲರೂ ಒಂದೆಡೆ ಸೇರಿ ಹಬ್ಬವನ್ನು ಆಚರಿಸುತ್ತಾರೆ. ಇದು ಊರಿನಲ್ಲಿ ಸಾಮರಸ್ಯವನ್ನು ಬೆಸೆಯಲು ಕಾರಣವಾಗಿದೆ. ಇನ್ನು ಹಬ್ಬದ ಆಚರಣೆ ಹೇಗಿರುತ್ತದೆ ಎಂದರೆ ಗ್ರಾಮದ ದೊಡ್ಡಕೆರೆ ಯಮುನಾ ತಡಿಯಲ್ಲಿ ಹಬ್ಬಕ್ಕೂ ಮೊದಲು ಮರಳಿನ ಗೌರಿಯನ್ನು ಸಿದ್ದಗೊಳಿಸಿ ನಂತರ ಹಬ್ಬದ ದಿನ ವಿಶೇಷ ಪೂಜೆಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಗೌರಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ದೇವಾಲಯದಲ್ಲಿ ಐದನೇ ದಿನಕ್ಕೆ ಮರಳಿನ ಗೌರಿಯನ್ನು ಬದಲಿಸಿ, ಕಡಲೆ ಹಿಟ್ಟಿನ ಗೌರಿಯನ್ನು ಪ್ರತಿಷ್ಠಾಪಿಸಿ ಅದಕ್ಕೆ ಚಿನ್ನದ ಕವಚ ಆಭರಣ ಹಾಕಲಾಗುತ್ತದೆ. ದೇವಾಲಯದಲ್ಲಿ ಗೌರಿಯನ್ನು ಪ್ರತಿಷ್ಠಾಪಿಸಿದಾಗಿನಿಂದ ಹನ್ನೆರಡು ದಿನಗಳ ಕಾಲ ಪ್ರತಿನಿತ್ಯ ಪೂಜೆ ನಡೆಯುತ್ತದೆ.

 ಕಂಕಣ, ಸಂತಾನಕ್ಕಾಗಿ ಗೌರಿಗೆ ಪ್ರಾರ್ಥನೆ

ಕಂಕಣ, ಸಂತಾನಕ್ಕಾಗಿ ಗೌರಿಗೆ ಪ್ರಾರ್ಥನೆ

ಆರಂಭ ದಿನದಲ್ಲಿ ನವದಂಪತಿಗಳು ಬಾಗಿನ ಅರ್ಪಿಸುತ್ತಾರೆ. ಆ ನಂತರ ಮಕ್ಕಳಿಲ್ಲದವರು ಸಂತಾನ ಭಾಗ್ಯಕ್ಕಾಗಿ ಚಿನ್ನ, ಬೆಳ್ಳಿಯ ತೊಟ್ಟಿಲು ಸಮರ್ಪಣೆ ಮಡುತ್ತಾರೆ. ಯುವತಿಯರು ಕಂಕಣ ಭಾಗ್ಯಕ್ಕಾಗಿ ಮಾಂಗಲ್ಯವನ್ನು ದೇವರಿಗೆ ಅರ್ಪಣೆ ಮಾಡುತ್ತಾರೆ. ಅಷ್ಟೇ ಅಲ್ಲ ದೀಪೋತ್ಸವ, ದೀಪಾರಾಧನೆ ಸೇರಿದಂತೆ ಇಷ್ಟಾರ್ಥ ಸಿದ್ಧಿಗಾಗಿ ನಾನಾ ಹರಕೆಗಳನ್ನು ಹರಿಸಿಕೊಂಡ ಭಕ್ತರು ಸಲ್ಲಿಸಿ ಗೌರಿಯನ್ನು ಒಳಿತು ಮಾಡಲೆಂದು ಪ್ರಾರ್ಥನೆ ಸಲ್ಲಿಸುತ್ತಾರೆ. ಕುದೇರು ಗ್ರಾಮದಲ್ಲಿರುವ ಗೌರಿ ದೇವಾಲಯದ ಬಗ್ಗೆ ಹೇಳುವುದಾದರೆ ಈ ದೇವಾಲಯವನ್ನು 1912ರಲ್ಲಿ ನಿರ್ಮಿಸಲಾಯಿತು ಎನ್ನಲಾಗಿದೆ.

Recommended Video

ನೀವು ಧರ್ಮಸ್ಥಳಕ್ಕೆ ಹೋಗಬೇಕಾ ? ಹಾಗಾದ್ರೆ ಈ ಸ್ಟೋರಿ ನೋಡಿ | Oneindia Kannada
 ಸ್ವರ್ಣಗೌರಿ ಎಂದೇ ಹೆಸರುವಾಸಿ

ಸ್ವರ್ಣಗೌರಿ ಎಂದೇ ಹೆಸರುವಾಸಿ

ದೇವಾಲಯ ಈಗಾಗಲೇ ಸುವರ್ಣ ಸಂಭ್ರಮವನ್ನು ಕಂಡಿದ್ದು, ಮೊದಲಿಗೆ ಗೌರಿಗೆ ಕಡಲೆ ಹಿಟ್ಟಿನ ಗೌರಮ್ಮ ಎನ್ನುತ್ತಿದ್ದ ಜನತೆ ತದನಂತರ ಊರ ಹಬ್ಬವಾಗಿ ಆಚರಿಸಲು ವಿಗ್ರಹಕ್ಕೆ ಚಿನ್ನದ ಕವಚ, ಆಭರಣ ತೊಡಿಸಿದರು. ಅಂದಿನಿಂದ ಇದು ಸ್ವರ್ಣಗೌರಿ ಎಂದೇ ಹೆಸರುವಾಸಿಯಾಗಿದೆ. ಇತರೆ ದಿನಗಳಲ್ಲಿ ಇಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತವೆಯಾದರೂ, ಗೌರಿ ಹಬ್ಬದಂದು ವಿಶೇಷ ಪೂಜೆಗಳು ನಡೆಯುತ್ತವೆ. ಅಂದು ಗೌರಿಯ ದರ್ಶನ ಮಾಡಿದರೆ ಇಷ್ಟಾರ್ಥ ನೆರವೇರುತ್ತದೆ ಎಂಬ ಪ್ರತೀತಿ ಇರುವುದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸಿ, ದೇವಿಯ ದರ್ಶನ ಪಡೆದು ಪುನೀತರಾಗುತ್ತಾರೆ. ಜತೆಗೆ ಇಡೀ ಊರೇ ಗೌರಿಯ ಸ್ಮರಣೆಯಲ್ಲಿ ತೊಡಗಿರುತ್ತದೆ.

English summary
The Gauri Ganesha festival is celebrated by all the Kuderu villagers of Chamarajanagar district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X