ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮರಾಜನಗರ: ಕಾಡಂಚಿನ ರೈತರ ನಿದ್ದೆಗೆಡಿಸಿದ ಕಾಡಾನೆಗಳು

|
Google Oneindia Kannada News

ಚಾಮರಾಜನಗರ, ಜನವರಿ 29: ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಕಾಡಂಚಿನಲ್ಲಿ ಕೃಷಿ ಮಾಡುತ್ತಿರುವ ರೈತರಿಗೆ ಕಾಡಾನೆಗಳ ಭಯ ಶುರುವಾಗುತ್ತದೆ. ಇದುವರೆಗೆ ಅರಣ್ಯದಲ್ಲಿದ್ದ ಕಾಡಾನೆಗಳು ಈಗ ಆಹಾರವನ್ನು ಅರಸುತ್ತಾ ನೇರವಾಗಿ ಜಮೀನಿನತ್ತ ಮುಖ ಮಾಡುತ್ತಿರುವುದರಿಂದ ರೈತರು ನಿದ್ದೆಗೆಡುವಂತಾಗಿದೆ.

ಕಳೆದ ಎರಡು ವರ್ಷಗಳಿಂದ ಕೊರೊನಾ ಸಂಕಷ್ಟದ ನಡುವೆಯೂ ಸಾಲ ಮಾಡಿ ಕೃಷಿ ಮಾಡಿರುವ ರೈತರು ಉತ್ತಮ ಫಸಲು ಬಂದರೆ ಜೀವನ ಸಾಗಿಸಬಹುದು ಎಂಬ ನಿರೀಕ್ಷೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಬೇಸಿಗೆ ಸಮಯದಲ್ಲಿ ಬಾಳೆ ಫಸಲು ಬಂದರೆ ಒಂದಷ್ಟು ಆದಾಯ ಪಡೆಯಬಹುದು ಎಂಬ ಕಾರಣಕ್ಕೆ ಹೆಚ್ಚಿನ ರೈತರು ಬಾಳೆ ಬೆಳೆದಿದ್ದಾರೆ.

 ಬಾಳೆ ಬೆಳೆದ ರೈತರಿಗೆ ಸಂಕಷ್ಟ

ಬಾಳೆ ಬೆಳೆದ ರೈತರಿಗೆ ಸಂಕಷ್ಟ

ಬಾಳೆ ವಾಣಿಜ್ಯ ಬೆಳೆಯಾಗಿರುವುದರಿಂದ ಮತ್ತು ಜಿಲ್ಲೆಯಿಂದ ತಮಿಳುನಾಡು, ಕೇರಳಕ್ಕೆ ಸರಬರಾಜಾಗುವುದರಿಂದ ರೈತರಿಗೆ ಒಂದಷ್ಟು ಉತ್ತಮ ಬೆಲೆ ಸಿಗುತ್ತದೆ ಎಂಬ ಕಾರಣಕ್ಕೆ ತಮ್ಮ ಜಮೀನಿನಲ್ಲಿ ಬಂಡವಾಳ ಸುರಿದು ಎಕರೆಗಟ್ಟಲೆ ಬಾಳೆ ಬೆಳೆದಿದ್ದಾರೆ. ಆದರೆ ಈ ಬಾಳೆ ಬೆಳೆಯನ್ನೇ ಟಾರ್ಗೆಟ್ ಮಾಡಿಕೊಂಡಿರುವ ಕಾಡಾನೆಗಳು ಮಾತ್ರ, ಹೇಗಾದರೂ ಮಾಡಿ ಕಾಡಿನಿಂದ ನುಸುಳಿ ಬಂದು ಬಾಳೆ ತೋಟಕ್ಕೆ ಲಗ್ಗೆಯಿಡುತ್ತಿವೆ.

ಇದುವರೆಗೆ ಮಳೆಯಿದ್ದ ಕಾರಣ ಅರಣ್ಯದಲ್ಲಿ ಹಸಿರು ಮೇವು ತಿಂದು ಆರಾಮಾಗಿದ್ದ ಕಾಡಾನೆಗಳು ಅಲ್ಲಿ ಆಹಾರಕ್ಕೆ ಕೊರತೆಗಳು ಕಾಣಿಸಿರುವ ಕಾರಣ ಜಮೀನಿನಲ್ಲಿ ಹುಲುಸಾಗಿ ಬೆಳೆದಿರುವ ಬಾಳೆ, ಅಡಿಕೆ, ತರಕಾರಿ ಬೆಳೆಗಳನ್ನು ಅರಸಿಕೊಂಡು ಬರುತ್ತಿವೆ. ಹೀಗಾಗಿ ರೈತರು ಸ್ವಲ್ಪ ಮೈಮರೆತರೂ ಕಷ್ಟಪಟ್ಟು ಬೆಳೆದ ಬೆಳೆಗಳು ಕಾಡಾನೆಗಳ ಪಾಲಾಗುವುದರಲ್ಲಿ ಎರಡು ಮಾತಿಲ್ಲ.

 ನಿಲ್ಲದ ವನ್ಯಪ್ರಾಣಿಗಳೊಂದಿಗೆ ಹೋರಾಟ

ನಿಲ್ಲದ ವನ್ಯಪ್ರಾಣಿಗಳೊಂದಿಗೆ ಹೋರಾಟ

ಬಂಡೀಪುರ ಸೇರಿದಂತೆ ಜಿಲ್ಲೆಯಲ್ಲಿರುವ ಅರಣ್ಯ ವ್ಯಾಪ್ತಿಯ ಅಂಚಿನಲ್ಲಿರುವ ಗ್ರಾಮಗಳ ರೈತರ ಬದುಕು ವನ್ಯಪ್ರಾಣಿಗಳೊಂದಿಗೆ ಹೋರಾಡುವುದರಲ್ಲಿಯೇ ಕಾಲ ಕಳೆದು ಹೋಗುತ್ತಿದ್ದು, ಕಷ್ಟಪಟ್ಟು ಬೆಳೆ ಬೆಳೆದರೂ ಅದು ಕೊಯ್ಲು ತನಕ ಉಳಿಯುತ್ತದೆ ಎಂಬ ನಂಬಿಕೆ ರೈತರಿಗಿಲ್ಲದಾಗಿದೆ. ಅರಣ್ಯದಿಂದ ಕಾಡಾನೆಗಳು ಬಾರದಂತೆ ಆನೆಕಂದಕ, ಸೋಲಾರ್ ಬೇಲಿ, ರೈಲ್ವೆ ಹಳಿಯನ್ನು ಅಳವಡಿಸಿದ್ದರೂ ಅವುಗಳ ನಿರ್ವಹಣೆ ಕೊರತೆಯಿಂದ ಹಾಳಾಗಿದ್ದು, ಕಾಡಾನೆಗಳು ನುಸುಳಿಕೊಂಡು ನಾಡಿನತ್ತ ಬರುತ್ತಿವೆ.

ಕೆಲವು ರೈತರು ತಾವು ಬೆಳೆದ ಬೆಳೆಯನ್ನು ರಕ್ಷಿಸಿಕೊಳ್ಳುವ ಸಲುವಾಗಿ ಜಮೀನಿನ ಸುತ್ತ ಬೇಲಿ ನಿರ್ಮಿಸಿ ಅದಕ್ಕೆ ಅಕ್ರಮವಾಗಿ ವಿದ್ಯುತ್ ಹರಿಸುತ್ತಿದ್ದು, ವಿದ್ಯುತ್ ಸ್ಪರ್ಶದಿಂದ ಕಾಡಾನೆಗಳು ಸಾವನ್ನಪ್ಪಿದ ಘಟನೆಗಳು ಹಲವು ನಡೆದಿವೆ.

 ಮುನ್ನೂರಕ್ಕೂ ಹೆಚ್ಚು ಬಾಳೆ ನಾಶ

ಮುನ್ನೂರಕ್ಕೂ ಹೆಚ್ಚು ಬಾಳೆ ನಾಶ

ಈ ನಡುವೆ ಜಿಲ್ಲೆಯ ಬಂಡೀಪುರ ಹುಲಿಸಂರಕ್ಷಿತ ಪ್ರದೇಶದ ಕುಂದಕೆರೆ ಅರಣ್ಯ ವಲಯಕ್ಕೆ ಸೇರಿದ ಯರಗನಹಳ್ಳಿಯಲ್ಲಿ ಜಮೀನೊಂದಕ್ಕೆ ನುಗ್ಗಿದ ಕಾಡಾನೆ ರೈತರು ಬೆಳೆದಿದ್ದ ಸುಮಾರು 300ಕ್ಕೂ ಹೆಚ್ಚು ಬಾಳೆ ಬೆಳೆಯನ್ನು ತಿಂದು ತುಳಿದು ನಾಶ ಮಾಡಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿದ ಬೆಳೆ ನಾಶವಾಗಿರುವುದರಿಂದ ರೈತರು ಕಂಗಾಲಾಗಿದ್ದಾರೆ.

ಈ ಬಗ್ಗೆ ಅರಣ್ಯಾಧಿಕಾರಿಗಳ ಗಮನಕ್ಕೆ ತಂದರೆ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಚಾಮರಾಜನಗರ ಪ್ರಾದೇಶಿಕ ವಲಯದ ಅಧಿಕಾರಿಗಳು ಹೇಳಿದರೆ, ಬಂಡೀಪುರ ವ್ಯಾಪ್ತಿಯ ಕುಂದಕೆರೆ ವಲಯದ ಅಧಿಕಾರಿಗಳು ನಮ್ಮ ಕರೆ ಸ್ವೀಕರಿಸುತ್ತಿಲ್ಲ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ. ಅಷ್ಟೇ ಅಲ್ಲದೆ ಅರಣ್ಯ ಇಲಾಖೆಯು ಕಾಡಾನೆಗಳು ನಾಶ ಮಾಡುವ ಬೆಳೆಗಳಿಗೆ ಅಲ್ಪ ಪರಿಹಾರ ನೀಡುವ ಬದಲು ಕಾಡಾನೆಗಳು ಅರಣ್ಯದಿಂದ ದಾಟಿ ನಾಡಿಗೆ ಬಾರದಂತೆ ನೋಡಿಕೊಳ್ಳುವಂತೆ ರೈತರು ಆಗ್ರಹಿಸುತ್ತಿದ್ದಾರೆ.

 ರೈತರ ಸಂಕಷ್ಟ ಕೇಳುವವರು ಯಾರು?

ರೈತರ ಸಂಕಷ್ಟ ಕೇಳುವವರು ಯಾರು?

ಒಮ್ಮೆ ಕಾಡಾನೆಗಳು ಜಮೀನಿಗೆ ನುಗ್ಗಿದರೆ ಕೇವಲ ಬೆಳೆಯನ್ನಷ್ಟೆ ಹಾಳು ಮಾಡುವುದಿಲ್ಲ. ಜಮೀನಿಗೆ ಅಳವಡಿಸಿದ ಸೋಲಾರ್ ಬೇಲಿ, ಪಂಪ್ ಸೆಟ್, ತಂತಿಬೇಲಿಯನ್ನೆಲ್ಲ ಹಾಳು ಮಾಡುತ್ತವೆ ಇದರಿಂದ ಬೆಳೆಯೊಂದಿಗೆ ಸಾವಿರಾರು ರೂಪಾಯಿ ನಷ್ಟವಾಗುತ್ತವೆ. ನಾವು ಕೃಷಿಯಿಂದಲೇ ಜೀವನ ನಿರ್ವಹಣೆ ಮಾಡಬೇಕಾಗಿದೆ. ಹೀಗಿರುವಾಗ ಫಸಲು ಬರುವಾಗಲೇ ಕಾಡಾನೆಗಳು ಜಮೀನಿಗೆ ನುಗ್ಗಿ ಬೆಳೆ ನಾಶ ಮಾಡಿದರೆ ಜೀವನ ಮಾಡುವುದಾದರೂ ಹೇಗೆ ಎಂಬ ಪ್ರಶ್ನೆಯನ್ನು ರೈತರು ಕೇಳುತ್ತಿದ್ದಾರೆ. ಇದಕ್ಕೆ ಉತ್ತರ ಅರಣ್ಯ ಇಲಾಖೆಯೇ ಹೇಳಬೇಕಾಗಿದೆ.

Recommended Video

AB De ರೀತಿಯಲ್ಲೇ ಆಡುವ Brevis ಯಾರು ? | Oneindia Kannada

English summary
Farmers are worried that Elephants in the forest are comming to the farm in search of food.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X