• search
  • Live TV
ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಂಡೀಪುರದಲ್ಲಿ ಕಾಡ್ಗಿಚ್ಚು ತಡೆಗೆ ಅರಣ್ಯ ಸಿಬ್ಬಂದಿ ಸನ್ನದ್ಧ!

|
Google Oneindia Kannada News

ಚಾಮರಾಜನಗರ, ಜನವರಿ 28: ಬೇಸಿಗೆ ಬರುತ್ತಿದ್ದಂತೆಯೇ ಗಿಡಮರಗಳೆಲ್ಲವೂ ಎಲೆಗಳನ್ನು ಉದುರಿಸುತ್ತಿದ್ದರೆ, ಕುರುಚಲು ಕಾಡುಗಳು ಒಣಗುತ್ತಿವೆ. ಹೀಗಿರುವಾಗ ಸಣ್ಣದೊಂದು ಕಿಡಿ ಬಿದ್ದರೂ ಭಾರೀ ಅನಾಹುತ ಸಂಭವಿಸುವ ಸಾಧ್ಯತೆಯಿದೆ. ಹೀಗಾಗಿ ಬೇಸಿಗೆ ಮುನ್ನವೇ ಮುಂಜಾಗ್ರತೆ ವಹಿಸಿರುವ ಅರಣ್ಯ ಇಲಾಖೆ ಕಾಡ್ಗಿಚ್ಚು ತಡೆಗೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಚಾಮರಾಜನಗರ ಜಿಲ್ಲೆಯು ಹೆಚ್ಚಿನ ಅರಣ್ಯ ಭಾಗವನ್ನು ಹೊಂದಿದ್ದು, ಒಂದಲ್ಲ ಒಂದು ಕಡೆ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಸದ್ಯ ಬಂಡೀಪುರ ಅರಣ್ಯ ಮತ್ತು ಮಲೆಮಹದೇಶ್ವರ ಬೆಟ್ಟ ಪ್ರದೇಶಗಳು ಸೇರಿದಂತೆ ಸಣ್ಣಪುಟ್ಟ ಅರಣ್ಯ ಪ್ರದೇಶಗಳಲ್ಲಿ ಆಗಾಗ್ಗೆ ಕಾಡ್ಗಿಚ್ಚುಗಳು ಸಂಭವಿಸುತ್ತಿದ್ದು, ಅರಣ್ಯ ನಾಶವಾಗುತ್ತಿದೆ.

 ಅದೊಂದು ಮರೆಯಲಾಗದ ಘಟನೆ

ಅದೊಂದು ಮರೆಯಲಾಗದ ಘಟನೆ

ಬಂಡೀಪುರ ಅರಣ್ಯದಲ್ಲಿ 2018ರಲ್ಲಿ ಸಂಭವಿಸಿದ ಬೆಂಕಿ ಅವಘಡವನ್ನು ಯಾರೂ ಮರೆಯಲಾರರು. ಅವತ್ತು ಅರಣ್ಯ ಸಿಬ್ಬಂದಿ ಸಜೀವ ದಹನವಾಗಿದ್ದಲ್ಲದೆ, ಪ್ರಾಣಿ, ಪಕ್ಷಿ, ಕ್ರಿಮಿ-ಕೀಟ ಸೇರಿದಂತೆ ಹತ್ತಾರು ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿತ್ತು. ಈ ಘಟನೆಯ ನಂತರ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಹಲವು ಕ್ರಮಗಳನ್ನು ಕೈಗೊಳ್ಳುವ ಮೂಲಕ ಕಾಡ್ಗಿಚ್ಚಿನಿಂದ ಅರಣ್ಯವನ್ನು ಕಾಪಾಡುವ ಪಣ ತೊಟ್ಟಿದೆ.

ಕಳೆದ ಎರಡು ವರ್ಷಗಳಿಂದ ಬೇಸಿಗೆಯಲ್ಲಿ ಕೊರೊನಾ ಉಲ್ಭಣಗೊಂಡ ಕಾರಣ ಲಾಕ್‌ಡೌನ್ ಮಾಡಿದ ಹಿನ್ನಲೆಯಲ್ಲಿ ಅರಣ್ಯಗಳ ನಡುವೆ ವಾಹನ ಸಂಚಾರಕ್ಕೆ ಬ್ರೇಕ್ ಬಿತ್ತು. ಹೀಗಾಗಿ ಯಾವುದೇ ರೀತಿಯ ಬೆಂಕಿ ಅವಘಡಗಳು ಸಂಭವಿಸಿಲ್ಲ. ಈ ಬಾರಿ ಡಿಸೆಂಬರ್ ತನಕವೂ ಮಳೆ ಬಿದ್ದಿದ್ದರಿಂದ ಅರಣ್ಯಗಳು ಹಸಿರಾಗಿವೆ.

 ಬಂಡೀಪುರ ಹೆದ್ದಾರಿಯಲ್ಲಿ ಬೆಂಕಿ ರೇಖೆ

ಬಂಡೀಪುರ ಹೆದ್ದಾರಿಯಲ್ಲಿ ಬೆಂಕಿ ರೇಖೆ

ಸಾಮಾನ್ಯವಾಗಿ ಈ ವೇಳೆಗೆ ಕುರುಚಲು ಕಾಡುಗಳು ಒಣಗುತ್ತಿದ್ದವು. ಆದರೆ ಈ ವರ್ಷ ಇನ್ನೂ ಕೂಡ ಹಸಿರಾಗಿವೆ. ಹೀಗಾಗಿ ಅರಣ್ಯ ಇಲಾಖೆ ಕಾಡಿನ ಅಂಚಿನಲ್ಲಿದ್ದ ಕುರುಚಲು ಕಾಡುಗಳನ್ನು ತೆರವುಗೊಳಿಸಿ ಬೆಂಕಿ ರೇಖೆ ನಿರ್ಮಾಣ ಮಾಡುವ ಕಾರ್ಯಕ್ಕೆ ಮುಂದಾಗಿದೆ.

ಬಂಡೀಪುರ ಅರಣ್ಯದ ನಡುವೆ ಹೆದ್ದಾರಿ ಹಾದು ಹೋಗಿದ್ದು, ಕೇರಳ ಮತ್ತು ತಮಿಳುನಾಡಿನ ಸಂಪರ್ಕ ಹೊಂದಿರುವುದರಿಂದ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತವೆ. ಈ ಮಾರ್ಗದಲ್ಲಿ ವಾಹನಗಳನ್ನು ನಿಲ್ಲಿಸುವುದಕ್ಕೆ ನಿರ್ಬಂಧವಿದ್ದರೂ ಕೆಲವರು ಅದನ್ನು ಉಲ್ಲಂಘಿಸುತ್ತಾರೆ. ಅಷ್ಟೇ ಅಲ್ಲದೆ ವಾಹನದಲ್ಲಿ ಧೂಮಪಾನ ಮಾಡುವವರು ಇಲ್ಲದಿಲ್ಲ. ಇಂತಹ ಸಂದರ್ಭದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಅದರಿಂದ ದೊಡ್ಡದಾದ ಪರಿಣಾಮವನ್ನು ಎದುರಿಸಬೇಕಾಗುತ್ತದೆ.

 ಅರಣ್ಯ ರಕ್ಷಣೆ ಎಲ್ಲರ ಕರ್ತವ್ಯ

ಅರಣ್ಯ ರಕ್ಷಣೆ ಎಲ್ಲರ ಕರ್ತವ್ಯ

ಅರಣ್ಯ ಮತ್ತು ಅದರೊಳಗಿನ ಪ್ರಾಣಿ ಮತ್ತು ಸಸ್ಯ ಸಂಪತ್ತನ್ನು ಕಾಪಾಡಿಕೊಳ್ಳುವುದು ಕೇವಲ ಅರಣ್ಯ ಇಲಾಖೆಯ ಕರ್ತವ್ಯ ಮಾತ್ರವಲ್ಲ. ಪ್ರತಿಯೊಬ್ಬ ನಾಗರಿಕರ ಕರ್ತವ್ಯವೂ ಆಗಿದೆ. ಆದ್ದರಿಂದ ಅರಣ್ಯ ವ್ಯಾಪ್ತಿಯಲ್ಲಿ ಓಡಾಡುವವರು ತುಂಬಾ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಇನ್ನು ಅರಣ್ಯದಂಚಿನಲ್ಲಿ ವಾಸಿಸುವ ಜನರು ಕೂಡ ಅರಣ್ಯಕ್ಕೆ ಬೆಂಕಿ ತಗುಲದಂತೆ ನೋಡಿಕೊಳ್ಳಬೇಕಾಗುತ್ತದೆ.

ಅರಣ್ಯ ಇಲಾಖೆ ಮುಂದಿನ ಬೇಸಿಗೆ ದಿನಗಳಲ್ಲಿ ಅರಣ್ಯದಲ್ಲಿ ಸಂಭವಿಸಬಹುದಾದ ಬೆಂಕಿ ಅವಘಡಗಳನ್ನು ತಪ್ಪಿಸುವ ಸಲುವಾಗಿ ಮುಂಜಾಗ್ರತಾ ಕ್ರಮಗಳನ್ನು ಈಗಿನಿಂದಲೇ ಆರಂಭಿಸಿದೆ. ಬಂಡೀಪುರ ಅರಣ್ಯವನ್ನು ಆಕಸ್ಮಿಕ ಬೆಂಕಿಯಿಂದ ರಕ್ಷಿಸಲು ಅರಣ್ಯ ಇಲಾಖೆ ರಸ್ತೆ ಬದಿಗಳಲ್ಲಿದ್ದ ಹುಲ್ಲನ್ನು ತೆಗೆದು ಅದನ್ನು ಸುಡುವ ಮೂಲಕ ಫೈರ್‌ಲೈನ್ ನಿರ್ಮಿಸುವ ಕಾರ್ಯಕ್ಕೆ ಮುಂದಾಗಿದೆ. ಇದರ ಜತೆಗೆ ಸುತ್ತಮುತ್ತಲಿನ ಕಾಡಂಚಿನ ಗ್ರಾಮಗಳಲ್ಲಿ ಸಭೆ ನಡೆಸಿ ಅವರ ವಿಶ್ವಾಸಕ್ಕೆ ತೆಗೆದುಕೊಂಡು ಅವರಲ್ಲಿ ಕಾಡ್ಗಿಚ್ಚು ಕುರಿತಂತೆ ಜಾಗೃತಿ ಮೂಡಿಸುವ ಕಾರ್ಯಕ್ಕೂ ಮುಂದಾಗಿದೆ.

 2450 ಕಿಮೀ ಬೆಂಕಿ ರೇಖೆ ನಿರ್ಮಾಣ

2450 ಕಿಮೀ ಬೆಂಕಿ ರೇಖೆ ನಿರ್ಮಾಣ

ಬಂಡೀಪುರದ ಅರಣ್ಯ ಪ್ರದೇಶದ ನಡುವೆ ತಮಿಳುನಾಡು ಹಾಗೂ ಕೇರಳವನ್ನು ಸಂಪರ್ಕಿಸುವ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದುಹೋಗಿವೆ. ಈ ಹೆದ್ದಾರಿಗಳೇ ಕಾಡ್ಗಿಚ್ಚು ಹಬ್ಬಿಸುವ ಹಾಟ್‌ಸ್ಪಾಟ್‌ಗಳಾಗಿರುವುದರಿಂದ ಅರಣ್ಯ ಇಲಾಖೆ ಇತ್ತ ಹೆಚ್ಚಿನ ನಿಗಾವಹಿಸಿದ್ದು, ಸದ್ಯ ಮೇಲುಕಾಮನಹಳ್ಳಿಯಿಂದ ಕೆಕ್ಕನಹಳ್ಳದವರೆಗೆ ರಸ್ತೆ ಬದಿಗಳಲ್ಲಿ ಅರಣ್ಯ ಸಿಬ್ಬಂದಿ ಬಂಬಿನಿಂದ ಹುಲ್ಲು ಸುಡುವ ಕಾರ್ಯವನ್ನು ನಡೆಸುತ್ತಿದೆ. ಜತೆಗೆ ಬೆಂಕಿ ಅರಣ್ಯಕ್ಕೆ ತಾಕದಂತೆ ಸ್ಪ್ರೇಯರ್ ಮೂಲಕ ನೀರು ಸಿಂಪಡಿಸಿ ತಹಬದಿಗೆ ತರಲಾಗುತ್ತಿದೆ.

ಇನ್ನು ಬಂಡೀಪುರದ ಎಲ್ಲ 13 ವಲಯಗಳ 2450 ಕಿಮೀ ಉದ್ದಕ್ಕೂ ಬೆಳೆದಿದ್ದ ಕಳೆ ಸಸ್ಯ ಲಾಂಟಾನವನ್ನು ತೆರವುಗೊಳಿಸುವ ಮೂಲಕ ಫೈರ್‌ಲೈನ್ ನಿರ್ಮಾಣ ಮಾಡಲಾಗಿದೆ. ಈ ಕಾರ್ಯವನ್ನು ಕೆಲವು ದಿನಗಳ ಹಿಂದಿನಿಂದಲೇ ಆರಂಭಿಸಲಾಗಿದ್ದು, ಬಹುತೇಕ ಮುಗಿಯುವ ಹಂತಕ್ಕೆ ಬಂದಿದೆ.

 ಹದ್ದಿನ ಕಣ್ಣಿಟ್ಟು ಕಾಯುವ ಸಿಬ್ಬಂದಿ

ಹದ್ದಿನ ಕಣ್ಣಿಟ್ಟು ಕಾಯುವ ಸಿಬ್ಬಂದಿ

ಹಿಂದಿನ ಬೆಂಕಿ ಅನಾಹುತಗಳ ಬಳಿಕ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ, ಸ್ಯಾಟಲೈಟ್ ನೆರವಿನಿಂದ ಅರಣ್ಯಪ್ರದೇಶದ ಮೇಲೆ ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದು, ಒಂದು ವೇಳೆ ಯಾವುದಾದರು ಅರಣ್ಯ ವಲಯದಲ್ಲಿ ಕಾಡ್ಗಿಚ್ಚು ಕಂಡುಬಂದರೆ ತಕ್ಷಣ ಕಂಟ್ರೋಲ್ ರೂಂಗೆ ಎಚ್ಚರಿಕೆ ಕರೆ ಬರಲಿದ್ದು, ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿಯನ್ನು ನಂದಿಸುವ ಕಾರ್ಯಕ್ಕೆ ಮುಂದಾಗಲಿದ್ದಾರೆ.

ಇಷ್ಟೇ ಅಲ್ಲದೆ ಕಾಡಂಚಿನಲ್ಲಿ ಡ್ರೋಣ್ ಕ್ಯಾಮೆರಾಗಳ ಮೂಲಕ ಕಣ್ಗಾವಲು ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹಗಲು ರಾತ್ರಿ ಗಸ್ತು ನಡೆಸುವ ಮೂಲಕ ಅರಣ್ಯ ರಕ್ಷಣೆಗೆ ಸಿಬ್ಬಂದಿ ಟೊಂಕ ಕಟ್ಟಿ ನಿಂತಿದ್ದಾರೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಬೇಸಿಗೆಯ ದಿನಗಳಲ್ಲಿ ಬಂಡೀಪುರ ಅರಣ್ಯಕ್ಕೆ ಕಾಡ್ಗಿಚ್ಚಿನಿಂದ ಯಾವುದೇ ರೀತಿಯ ತೊಂದರೆಯಾಗದಂತೆ ತಡೆಯಲು ಅರಣ್ಯ ಇಲಾಖೆ ಸಜ್ಜಾಗಿದೆ. ಅರಣ್ಯ ಇಲಾಖೆಗೆ ಸಾರ್ವಜನಿಕರು ಸಹಕಾರ ನೀಡಿದರೆ ಕಾಡ್ಗಿಚ್ಚಿನಿಂದ ಅರಣ್ಯವನ್ನು ರಕ್ಷಿಸುವುದು ಕಷ್ಟವಾಗಲಾರದು.

English summary
Chamarajanagar district has a large forest area and it is common to see fires on one side or another. Forest Staff Ready To Prevent Forest Fires in Bandipur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
Desktop Bottom Promotion