ಬಾಲ ಕಳೆದುಕೊಂಡಿದ್ದ ಕಾಡಾನೆಗೆ ಅರಣ್ಯ ಇಲಾಖೆ ಚಿಕಿತ್ಸೆ
ಚಾಮರಾಜನಗರ, ನವೆಂಬರ್ 07: ಕಾದಾಟದಲ್ಲಿ ಬಾಲ ಕಳೆದುಕೊಂಡು ನರಳಾಡುತ್ತಿದ್ದ ಸಲಗವೊಂದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಚಿಕಿತ್ಸೆ ನೀಡಿ ಮತ್ತೆ ಅರಣ್ಯಕ್ಕೆ ಬಿಟ್ಟಿದ್ದಾರೆ. ಕಾವೇರಿ ವನ್ಯಜೀವಿಧಾಮ ಸಂಗಮ ವಲಯಕ್ಕೆ ಆನೆಯನ್ನು ಬಿಡಲಾಗಿದೆ.
ನಾಲ್ಕು ದಿನಗಳ ಹಿಂದೆ ಕಾದಾಟದಲ್ಲಿ ಬಾಲ ಕಳೆದುಕೊಂಡ ಆನೆಯೊಂದು ನೋವಿನಿಂದ ಉಪಶಮನ ಪಡೆಯಲು ನೀರಿನಲ್ಲಿ ನಿಂತಿದ್ದನ್ನು ಗಮನಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಮೂರು ದಿನಗಳಿಂದ ನಿಗಾ ಇಟ್ಟಿದ್ದರು. ಶುಕ್ರವಾರ ಗೋಪಾಲಸ್ವಾಮಿ ಹಾಗೂ ಅಭಿಮನ್ಯು ಆನೆಗಳ ಸಹಾಯ ಪಡೆದು ಡಾ.ಉಮಾ ಶಂಕರ್ ಮತ್ತು ಡಾ.ಮಂಜುನಾಥ ಸಲಗಕ್ಕೆ ಅರಿವಳಿಕೆ ನೀಡಿ ನೋವು ನಿವಾರಕ ಚುಚ್ಚುಮದ್ದು ನೀಡಿದ್ದು, ಗಾಯ ಮಾಯುವ ತನಕ ನಿರಂತರ ನಿಗಾ ಇಡಲು ಅರಣ್ಯ ಇಲಾಖೆ ನಿರ್ಧರಿಸಿದೆ.
ಚಾಮರಾಜನಗರ; ಬಾಲ ಕಳೆದುಕೊಂಡು ನೋವು ತಾಳಲಾರದೇ ನೀರಲ್ಲೇ ನಿಂತ ಆನೆ
ಈ ಕುರಿತು ಕಾವೇರಿ ವನ್ಯಜೀವಿಧಾಮದ ಡಿಎಫ್ ಒ ರಮೇಶ್ ಮಾತನಾಡಿ, ಸಲಗಕ್ಕೆ 25 ವರ್ಷ ವಯಸ್ಸಾಗಿದ್ದು ಲದ್ದಿ, ಗಂಜಲದಿಂದಾಗಿ ಗಾಯ ಹರಡಿ ಹುಳು ಬಂದಿತ್ತು. ಬೆಲ್ಲ ಹಾಗೂ ಹುಲ್ಲಿನೊಂದಿಗೆ ಔಷಧಿ ನೀಡಲಾಗಿದೆ. ಇಂದು 50ಕ್ಕೂ ಹೆಚ್ಚು ಸಿಬ್ಬಂದಿ ಆನೆಗೆ ಚಿಕಿತ್ಸೆ ನೀಡುವ ಕಾರ್ಯಾಚರಣೆ ಮಾಡಿದ್ದು, ನಮ್ಮ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದರು.