• search
  • Live TV
ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮುಂಗಾರು-ಸೂರ್ಯಕಾಂತಿ ಜುಗಲ್ಬಂದಿ ನೋಡಬನ್ನಿ!

|

ಚಾಮರಾಜನಗರ, ಜೂನ್ 30: ಸೊಬಗಿನ ಮುಂಗಾರು ತಣ್ಣನೆ ಗಾಳಿಯೊಂದಿಗೆ ಮೈನಡುಗಿಸುತ್ತಾ ಮುದ ನೀಡುತ್ತಿದೆ. ಭೂರಮೆ ಹಸಿರ ಚಾದರ ಹೊದ್ದುಕೊಂಡಿದೆ. ಅದರ ಮೇಲೆ ಬೀಳುವ ಮಳೆ ಹನಿಗಳ ಸದ್ದು ಪುಳಕ ಹುಟ್ಟಿಸುತ್ತಿದೆ.

ತಂಗಾಳಿ ಹೊತ್ತು ತರುವ ನೀರ ಹನಿಗಳು ಮುಖಕ್ಕೆ ಸಣ್ಣನೆ ಬಡಿದಾಗ ಉಂಟಾಗುವ ಕಚಗುಳಿಯನ್ನು ಅನುಭವಿಸುತ್ತಾ, ಧೋ ಎಂದು ಅಬ್ಬರಿಸುವ ಮಳೆಯ ರೌದ್ರಾವತಾರವನ್ನು ಸುಡು ಕಾಫಿ ಹೀರುತ್ತಾ ನೋಡುವ ಮಜಾ, ಜತೆಗೆ ಬಿಸಿಬಿಸಿ ಬೋಂಡ, ಬಜ್ಜಿ, ಹಲಸಿನ ಹಪ್ಪಳದ ರುಚಿಯನ್ನು ನಾಲಗೆಗೆ ಮತ್ತೆ ಮತ್ತೆ ನೆನಪಿಸುತ್ತಾ...

ಮಳೆಗಾಲ ಎಂಬ ಜೀವನಪ್ರೀತಿಯನ್ನು ನೂರ್ಮಡಿಗೊಳಿಸುವ ರಮ್ಯಕಾಲದ ಸೊಬಗನ್ನು ಸಂಭ್ರಮಿಸದವರಾರು? ಮುಂಗಾರಿನ ಅಭಿಷೇಕಕ್ಕೆ ಮಿದುವಾದ ನೆಲದೊಳಗೆ ಪಾದಗಳನ್ನು ಹುದುಕಿಸಿಕೊಂಡು ಮತ್ತೆ ಬಾಲ್ಯಕ್ಕೆ ಮರಳುವ ಮನಸ್ಸುಗಳಿಗೆ ಇವುಗಳ ನಡುವೆ ಏನೋ ಒಂದು ಕೊರತೆ ಕಾಡುತ್ತಿದೆಯೇ?

ಹೌದು, ಭೋರ್ಗರೆಯುವ ಮಳೆಯಲ್ಲಿ ಕಷ್ಟಗಳನ್ನು ಅನುಭವಿಸುತ್ತಲೇ ಒಂದು ಪ್ರವಾಸ ಹೋಗದಿದ್ದರೆ ಹೇಗೆ? ಮಳೆ ಜೋರಾಗಿ ಅಬ್ಬರಿಸುತ್ತಿರುವಾಗ ದೂರದ ಊರುಗಳ ಪ್ರಯಾಣ ಸುರಕ್ಷಿತವಲ್ಲ. ಇನ್ನು ಬೇಸಿಗೆಯಲ್ಲಿ ಮುಳುಗೆದ್ದು ಮೀಯುವ ಜಲಪಾತಗಳಂತೂ ಬಲು ಅಪಾಯಕಾರಿ.

ಹಾಗೆಂದು ಹೋಗುವುದು ಎಲ್ಲಿಗೆ? ನಮ್ಮ ಸುತ್ತಮುತ್ತಲ ಊರುಗಳಲ್ಲಿಯೇ ಅನೇಕ ಪ್ರೇಕ್ಷಣೀಯ ಸ್ಥಳಗಳಿರುತ್ತವೆ. ಅವುಗಳ ಮಧ್ಯೆ ಒಂದು ಸುತ್ತಾಟ ನಡೆಸಿದರೂ ಅದ್ಭುತ ಅನುಭವ ದೊರಕುತ್ತದೆ. ಅದಕ್ಕೆ ಮಳೆ ಆಗಾಗ ವಿರಾಮ ನೀಡಬೇಕಷ್ಟೇ. ಕೆಲವೊಮ್ಮೆ ಮಳೆ ಬಂದರೂ ಚೆಂದ.

ಚಾಮರಾಜನಗರದ ಚೆಂದ

ಚಾಮರಾಜನಗರದ ಚೆಂದ

ಪರಿಸರ, ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಕಾರಣಗಳಿಂದ ಖ್ಯಾತಿ ಹಾಗೂ ಕುಖ್ಯಾತಿ ಎರಡನ್ನೂ ಪಡೆದಿರುವ ಚಾಮರಾಜನಗರ ಜಿಲ್ಲೆ ಮಳೆಗಾಲದ ಸುತ್ತಾಟಕ್ಕೆ ಅದ್ಭುತ ತಾಣ. ಒಂದು ದಿಕ್ಕಿಗೆ ಬಂಡೀಪುರ ಉದ್ಯಾನದ ಕಾಡಿನ ಹಸಿರು ಖುಷಿ ನೀಡಿದರೆ, ಇನ್ನೊಂದು ದಿಕ್ಕಿನಲ್ಲಿರುವ ಹೊಗೆನಕಲ್, ಗೋಪಿನಾಥಂ ಮುಂತಾದ ಅರಣ್ಯದ ಅಪ್ಪುಗೆಯಲ್ಲಿರುವ ಸ್ಥಳಗಳು ಅಪೂರ್ವ ಅನುಭವ ನೀಡಬಲ್ಲವು. ನಡುವೆ ಕೆ.ಗುಡಿ, ಬಿಳಿಗಿರಿರಂಗನಾಥ ಬೆಟ್ಟಗಳದ್ದು ಇನ್ನೊಂದು ಲೋಕ.

ಇರುವುದು ಕಾಡು, ಆದರೂ...

ಇರುವುದು ಕಾಡು, ಆದರೂ...

ಚಾಮರಾಜನಗರದಲ್ಲಿ ಶೇ 49ರಷ್ಟು ಅರಣ್ಯ ಪ್ರದೇಶವಿದೆ ಎನ್ನುತ್ತದೆ ಸರ್ಕಾರಿ ದಾಖಲೆಗಳು. ಈ ಅರಣ್ಯ ಪ್ರದೇಶಗಳು ಉದ್ದಕ್ಕೂ ತಮಿಳುನಾಡಿನ ಗಡಿಗೆ ಅಂಟಿಕೊಂಡಿವೆ. ಇನ್ನೊಂದಿಷ್ಟು ಕೇರಳದ ಜತೆಗೆ ಸಖ್ಯ ಬೆಳೆಸಿಕೊಂಡಿವೆ. ಈ ಅರಣ್ಯಗಳಲ್ಲಿ ವೈವಿಧ್ಯವಿದೆ. ಕಾವೇರಿ ವನ್ಯಜೀವಿಧಾಮದ ಬೆಟ್ಟಗುಡ್ಡಗಳಲ್ಲಿ ಕುರುಚಲು ಗಿಡಗಳದ್ದೇ ಹಾವಳಿ. ಪಕ್ಕದ ಮಲೆಮಹದೇಶ್ವರ ಬೆಟ್ಟದಲ್ಲಿ ಮರಗಳದ್ದು ಆಗಸದೆತ್ತರ.

ಬಿಳಿಗಿರಿರಂಗನಾಥ ಬೆಟ್ಟದ ಸಮೀಪ ಬಂದರೆ ಇಲ್ಲಿನ ಕಾಡು ಮಳೆಗಾಲದಲ್ಲಂತೂ ಮಲೆನಾಡಿನ ತುಂಡೊಂದು ಅಲ್ಲಿ ಬಿದ್ದಿದೆಯೇನೋ ಎಂಬ ಭಾವನೆ ಮೂಡಿಸುತ್ತದೆ. ಬಂಡೀಪುರ, ಸತ್ಯಮಂಗಲಕ್ಕೆ ಹೊಂದಿಕೊಂಡ ಕಾಡುಗಳದ್ದು ಇನ್ನೊಂದು ಗುಣ. ಇಷ್ಟೆಲ್ಲಾ ಕಾಡು ಇದ್ದರೂ ಇಲ್ಲಿ ಮಳೆ ಮತ್ತು ನೀರಿನ ಕೊರತೆ ತಪ್ಪಿದ್ದಲ್ಲ. ಹಾಗೆಂದು ಪ್ರವಾಸದ ತಾಣಗಳ ಅಂದಕ್ಕೇನೂ ಕುಂದಾಗುವುದಿಲ್ಲ.

ಹೂವುಗಳೇ ಸೆಳೆತ

ಹೂವುಗಳೇ ಸೆಳೆತ

ಮಳೆಗಾಲದಲ್ಲಿ ಮುಖ್ಯವಾಗಿ ಪ್ರವಾಸಿಗರನ್ನು ಸೆಳೆಯುವುದು ವೈವಿಧ್ಯಮಯ ಹೂವುಗಳು. ಅರಳಿನಿಂತ ಪಕಳೆಗಳ ಮೇಲೆ ಮಳೆಯ ಹನಿಗಳಿಗೂ ಜಾಗ ನೀಡುವ ಈ ಹೂವುಗಳಿಗೆ ಅದರಲ್ಲೂ ಸ್ವಾರ್ಥವಿದೆ. ಮಳೆಹನಿಗಳು ತನ್ನಂದವನ್ನು ಹೆಚ್ಚಿಸಬಲ್ಲವು ಎನ್ನುವುದು ಹೂವುಗಳಿಗೂ ಗೊತ್ತಾಗಿದೆ. ಇಲ್ಲದಿದ್ದರೆ ಕ್ಯಾಮೆರಾ ಹಿಡಿದ ಕಣ್ಣುಗಳೇಕೆ ಹೂವುಗಳ ಮೇಲಿನ ಹನಿಯನ್ನೂ ಸೆರೆ ಹಿಡಿದುಕೊಳ್ಳಲು ಸಾಹಸಪಡುತ್ತವೆ?

ಪುಷ್ಪ ಪ್ರವಾಸೋದ್ಯಮ!

ಪುಷ್ಪ ಪ್ರವಾಸೋದ್ಯಮ!

ಹೂವುಗಳು ಪ್ರೇಮಿಗಳಿಗೆ, ಕವಿಗಳಿಗೆ ಅತಿ ಪ್ರೀತಿಯ ವಸ್ತು. ಹೋಲಿಕೆಗೆ ಸದಾ ಬಳಕೆಯಾಗುವ ಹೂವು, ಅಷ್ಟೇ ವ್ಯಾವಹಾರಿಕವಾಗಿಯೂ ಬಳಕೆಯಾಗುತ್ತದೆ. ಅಲಂಕಾರಿಕ ಹೂವುಗಳನ್ನು ಬೆಳೆಯುವುದು ಮತ್ತು ಮಾರುವುದು ವ್ಯವಹಾರದ ಕೆಲಸ.

ಕಾಡಿನಲ್ಲಿ ಸಹಜವಾಗಿ ಬೆಳೆಯುವ ಹೂವುಗಳನ್ನು ನೋಡಲೆಂದೇ ಪ್ರವಾಸಿಗರು ಹುಡುಕಾಡುವುದಿದೆ. ದೇಶದಲ್ಲಿ ಬಗೆಬಗೆಯ ಹೂವುಗಳನ್ನು ಅರಳಿಸುವ ಪುಷ್ಪ ಕಣಿವೆಗಳೇ ಇವೆ. ಹಾಗೆಯೇ ರೈತರು ತಮ್ಮ ಜೀವನೋಪಾಯಕ್ಕಾಗಿ ಬೆಳೆದ ಹೂವುಗಳು ಸಹ ಪ್ರವಾಸಿಗರನ್ನು ಆಕರ್ಷಿಸಬಲ್ಲವು.

ಪುಷ್ಪರಾಶಿಯ ಪ್ರೇಮಕಾಲ

ಪುಷ್ಪರಾಶಿಯ ಪ್ರೇಮಕಾಲ

ಚಾಮರಾಜನಗರ ಹೂ ಗಿಡಗಳ ತಾಣ. ಪ್ರವಾಸಿಗರನ್ನು ಸೆಳೆಯುವ ಹೂದೋಟಗಳು ರೈತರ ಹೊಲದಲ್ಲಿ ಮೂಡಿದ್ದರೆ, ಇನ್ನು ಕೆಲವು ಪ್ರಕೃತಿ ಪ್ರೀತಿಯ ಕೊಡುಗೆ.

ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಾಥ ಅರಣ್ಯ ಪ್ರದೇಶ, ಕೆ. ಗುಡಿ ಅರಣ್ಯ ವಲಯಗಳಲ್ಲಿ ಅಡ್ಡಾಡಿದರೆ ಅಪರೂಪದ, ಅತಿ ಸುಂದರ ಆರ್ಕಿಡ್‌ಗಳು ಕಾಣಿಸುತ್ತವೆ. ನಾನಾ ಆಕಾರ ಮತ್ತು ಗಾತ್ರದ ವಿಶಿಷ್ಟ ಪರಿಮಳ ಸೂಸುವ ಬಗೆಬಗೆಯ ಬಣ್ಣಗಳ ಹೂವುಗಳು ನಿಮ್ಮನ್ನು ಪರವಶಗೊಳಿಸದೆ ಇರಲಾರವು. ಈ ಬೆಟ್ಟದಲ್ಲಿ ಅಷ್ಟೇ ವೈವಿಧ್ಯಮಯ ಪಾತರಗಿತ್ತಿಗಳೂ ಇವೆ.

ಸೂರ್ಯಕಾಂತಿ ಎಂಬ ಚೆಲುವು

ಸೂರ್ಯಕಾಂತಿ ಎಂಬ ಚೆಲುವು

ಗುಂಡ್ಲುಪೇಟೆಯ ಸುತ್ತಮುತ್ತಲಿನ ರಸ್ತೆಯಲ್ಲಿ ಒಂದು ಸುತ್ತು ಹಾಕಿಬಂದರೂ ಸಾಕು ಮೈಮನವೆಲ್ಲ ನಿರಾಳವಾಗುತ್ತದೆ. ಮನಸ್ಸಿನ ಒತ್ತಡಗಳಿಗೆ ಇಲ್ಲಿ ಸುಲಭದ ಚಿಕಿತ್ಸೆ ಸಿಗುತ್ತದೆ.

ಇದು ಸೂರ್ಯಕಾಂತಿ ಅರಳುವ ಕಾಲ. ಮಳೆ ಬೇಗನೆ ಕೃಪೆ ತೋರಿದ್ದರಿಂದ ಈ ಭಾಗದ ರೈತರು ಸಂತಸದಿಂದ ಸೂರ್ಯಕಾಂತಿ ಬಿತ್ತಿದ್ದರು. ಈಗ ರೈತರ ಜಮೀನುಗಳಲ್ಲಿ ಸೂರ್ಯಕಾಂತಿ ಅರಳಿ ನಿಂತಿವೆ. ಎಕರೆಗಟ್ಟಲೆ ಜಮೀನುಗಳಲ್ಲಿ ಹರಡಿ ನಿಂತಿರುವ 'ಚಿನ್ನ'ದ ಹೂವಿಗೆ ಮನಸೋಲದವರಿಲ್ಲ.

ಸೂರ್ಯಕಾಂತಿಗೆ ಅದೇ ಸಾಟಿ

ಸೂರ್ಯಕಾಂತಿಗೆ ಅದೇ ಸಾಟಿ

ಗುಂಡ್ಲುಪೇಟೆಯ ಹಂಗಳ, ಹಿರೀಕಾಟಿ, ಭೀಮನಬೀಡು, ಬೇಗೂರು, ಕಗ್ಗಲಹುಂಡಿ, ಬಂಡೀಪುರ ಹೀಗೆ ಅನೇಕ ಗ್ರಾಮಗಳಲ್ಲಿನ ರೈತರ ಜಮೀನುಗಳಲ್ಲಿ ಈಗ ಸೂರ್ಯಕಾಂತಿಯದ್ದೇ ಚಿತ್ತಾರ. ಕೇರಳದವರೆಗೂ ಸೂರ್ಯಕಾಂತಿಯ ಚೆಲುವನ್ನು ವೀಕ್ಷಿಸುತ್ತಾ ಹೋಗಬಹುದು.

ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ದೇವರದರ್ಶನ ಮಾಡುವ ಬಯಕೆ ಉಳ್ಳವರು, ಬೆಟ್ಟದಲ್ಲಿ ಮೋಡಗಳ ಜತೆ ಸಂವಾದಿಸಿ ಹೋಗಿ ಬರುವಾಗ ಸೂರ್ಯಕಾಂತಿ ಹೂವುಗಳು ಮೆಲು ಗಾಳಿಗೆ ತೂರಾಡುತ್ತಾ ನಮಗೆ 'ಹಾಯ್' ಎಂದಂತೆ ಭಾಸವಾಗುತ್ತದೆ.

ಮುಂದೆ ಇದೆ ಚೆಂಡು ಮಲ್ಲಿಗೆ ದರ್ಬಾರು

ಮುಂದೆ ಇದೆ ಚೆಂಡು ಮಲ್ಲಿಗೆ ದರ್ಬಾರು

ಸೂರ್ಯಕಾಂತಿ ಕಟಾವಿನ ಬಳಿಕ ಈ ಭಾಗದ ಬಹುತೇಕ ಜಮೀನುಗಳು ಮತ್ತೊಂದು ಬಗೆಯ ಹೂವಿಗೆ ಹೊರಳುತ್ತವೆ. ಅದು ಚೆಂಡು ಮಲ್ಲಿಗೆ ಅಥವಾ ಚೆಂಡು ಹೂವು. ಚೆಂಡುಹೂವು ಸಾಮಾನ್ಯವಾಗಿ ಬಣ್ಣದ ತಯಾರಿಕೆಗೆ ಹೆಚ್ಚಾಗಿ ಬಳಕೆಯಾಗುತ್ತವೆ. ಹೀಗಾಗಿ ಇಲ್ಲಿ ಬೆಳೆಯುವುದು ಕಡು ಹಳದಿ ಬಣ್ಣದ ಹೂವುಗಳನ್ನು ಮಾತ್ರ. ಸೂರ್ಯಕಾಂತಿಯಂತೆಯೇ ಚೆಂಡು ಹೂವು ಸಹ ಪ್ರವಾಸಿಗರ ಪ್ರೀತಿಯನ್ನು ಪಡೆದುಕೊಳ್ಳುತ್ತವೆ.

ಸೆಲ್ಫಿ ಬೇಕಾ ಸೆಲ್ಫಿ?

ಸೆಲ್ಫಿ ಬೇಕಾ ಸೆಲ್ಫಿ?

ಸೂರ್ಯಕಾಂತಿ ಮತ್ತು ಚೆಂಡುಮಲ್ಲಿಗೆಯ ಸೌಂದರ್ಯಕ್ಕೆ ಮನಸೋಲುವ ಪ್ರವಾಸಿಗರು ರೈತರ ಹೊಲಕ್ಕಿಳಿದು ಸೆಲ್ಫಿಗೆ ಮುಖವೊಡ್ಡುತ್ತಾರೆ. ಇದೀಗ ಗುಂಡ್ಲುಪೇಟೆ ಭಾಗದಲ್ಲಿ 'ಸೆಲ್ಫಿ ವ್ಯವಹಾರ'ಕ್ಕೂ ಉತ್ತೇಜನ ನೀಡಿದೆ.

ಪ್ರವಾಸಿಗರು ಮತ್ತು ಪ್ರಯಾಣಿಕರು ತೆರಳುವ ಮಾರ್ಗಮಧ್ಯೆ ವಾಹನ ನಿಲ್ಲಿಸಿ ತಮ್ಮ ಹೊಲದಲ್ಲಿ ಚೆಂಡುಮಲ್ಲಿಗೆ ನಡುವೆ ಸೆಲ್ಫಿ ತೆಗೆದುಕೊಳ್ಳುವುದನ್ನು ನೋಡಿ ರೈತರೊಬ್ಬರು ಸೆಲ್ಫಿ ಹತ್ತು ರೂಪಾಯಿ ಎಂದು ಫಿಕ್ಸ್ ಮಾಡಿ ಹೊಸ ವ್ಯವಹಾರಕ್ಕೆ ಕೈಹಾಕಿದ್ದರು.

ಇದನ್ನು ಕಂಡು ಅನೇಕ ರೈತರು ತಾವೂ ಅದನ್ನು ಅನುಕರಿಸಿದ್ದರು. ಆದರೆ, ಕಳೆದ ವರ್ಷ ಅಕಾಲಿಕವಾಗಿ ಸುರಿದ ಮಳೆ ಅಪಾರ ಪ್ರಮಾಣದ ಚೆಂಡುಮಲ್ಲಿಗೆ ಬೆಲೆಯನ್ನು ಹಾಳುಮಾಡಿತ್ತು.

ಈ ಬಾರಿಯೂ ಸೂರ್ಯಕಾಂತಿ ಹೂವಿನ ಅಂದ ಕಂಡವರು ವಾಹನ ನಿಲ್ಲಿಸಿ ಸೆಲ್ಫಿಗಾಗಿ ಹಾತೊರೆಯುತ್ತಾರೆ. ಕೆಲವರು ಫೋಟೊ ಎಷ್ಟಾದರೂ ತೆಗೆದುಕೊಳ್ಳಲಿ, ಗಿಡಗಳನ್ನು ಹಾಳುಮಾಡದಿದ್ದರೆ ಸಾಕು ಸುಮ್ಮನಿದ್ದರೆ, ಇನ್ನು ಕೆಲವರು ಒಬ್ಬರಿಗೆ ಇಂತಿಷ್ಟು ಎಂದು ಶುಲ್ಕ ನಿಗದಿಪಡಿಸಿ ಹೊಲದೊಳಗೆ ಬಿಡುತ್ತಿದ್ದಾರೆ.

English summary
Flowers attracting tourists in chamarajanagar district. A feature article on 'Flower Tourism'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X