ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಕಷ್ಟದಲ್ಲಿ ಚಾಮರಾಜನಗರ ಜಿಲ್ಲೆಯ ಹೂ ಬೆಳೆಗಾರರು

By Coovercolly Indresh
|
Google Oneindia Kannada News

ಚಾಮರಾಜನಗರ, ಮೇ 28; ರಾಜ್ಯದ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಒಂದು ಚಾಮರಾಜನಗರ. ಜಿಲ್ಲೆಯ ಬಹುತೇಕ ಜನಸಂಖ್ಯೆ ಬಡತನದ ರೇಖೆಗಿಂತ ಕೆಳಗಿರುವವರೇ ಆಗಿದ್ದಾರೆ. ಕೃಷಿಕ ಪ್ರಧಾನವೇ ಆಗಿರುವ ಈ ಜಿಲ್ಲೆಯ ಶೇಕಡಾ 80 ರಷ್ಟು ರೈತರು ಅರ್ಧ ಎಕರೆ ಅಥವಾ ಅದಕ್ಕಿಂತ ಕಡಿಮೆ ಭೂಮಿ ಹೊಂದಿರುವ ವರ್ಗದವರು.

ಜಿಲ್ಲೆಯ ಕೃಷಿಕರು ಮುಖ್ಯವಾಗಿ ಬೆಳೆಯುವುದು ರಾಗಿ, ಜೋಳ, ಅರಶಿಣ ಮತ್ತು ಕಬ್ಬು. ನೀರಾವರಿ ಸೌಲಭ್ಯ ಇರುವವರು ಮಾತ್ರ ಕಬ್ಬು ಬೆಳೆಯುತ್ತಾರೆ. ಗುಂಡ್ಲುಪೇಟೆ, ಕೊಳ್ಳೇಗಾಲ ತಾಲ್ಲೂಕಿನ ಕೆಲವು ಪ್ರದೇಶಗಳಲ್ಲಿ ರೈತರು ಹೂವನ್ನೂ ಬೆಳೆಯುತ್ತಾರೆ. ಇವರು ಬೆಳೆದ ಹೂವು ಮುಖ್ಯವಾಗಿ ಮೈಸೂರಿನ ಹೂವಿನ ಮಾರುಕಟ್ಟೆಗೆ ಸರಬರಾಜು ಆಗುತ್ತದೆ.

ಪೊಲೀಸರ ಮುಂದೆ ಕಣ್ಣೀರು ಹಾಕಿದ ಹೂವು ಮತ್ತು ತರಕಾರಿ ವ್ಯಾಪಾರಿಗಳು ಪೊಲೀಸರ ಮುಂದೆ ಕಣ್ಣೀರು ಹಾಕಿದ ಹೂವು ಮತ್ತು ತರಕಾರಿ ವ್ಯಾಪಾರಿಗಳು

ಜಿಲ್ಲೆಯ ಜನರು ವ್ಯಾಪಾರ ವಹಿವಾಟಿಗೆ ಆಶ್ರಯಿಸಿರುವುದು ಮೈಸೂರು ಜಿಲ್ಲೆಯನ್ನು. ಆದರೆ ಕಳೆದ ಬಾರಿಯ ಕೊರೊನಾ ಲಾಕ್‌ಡೌನ್ ಮತ್ತು ಈ ಬಾರಿಯ ಲಾಕ್‌ಡೌನ್‌ನಿಂದಾಗಿ ಹೂವಿನ ವ್ಯಾಪಾರ ಸಂಪೂರ್ಣ ನೆಲ ಕಚ್ಚಿದೆ. ಹೂವು ಬೆಳೆಗಾರರು ಅಕ್ಷರಶಃ ಬೀದಿಗೆ ಬಂದಿದ್ದಾರೆ.

ಕರಾಳ ದಿನ: ಕೃಷಿ ಕಾಯ್ದೆ ವಿರುದ್ಧ ರೈತರ ಹೋರಾಟಕ್ಕೆ 6 ತಿಂಗಳುಕರಾಳ ದಿನ: ಕೃಷಿ ಕಾಯ್ದೆ ವಿರುದ್ಧ ರೈತರ ಹೋರಾಟಕ್ಕೆ 6 ತಿಂಗಳು

 Flower Growers In Trouble Due To Lockdown

ಲಾಕ್‌ಡೌನ್ ಇಲ್ಲದಿದ್ದಾಗ ಹೂವಿನ ಬೆಳೆ ನೂರಾರು ರೈತರಿಗೆ ಉತ್ತಮ ಆದಾಯವನ್ನು ತಂದು ಕೊಟ್ಟು ಬದುಕನ್ನು ಹಸನಾಗಿಸಿತ್ತು. ಏಕೆಂದರೆ ಜನವರಿಯಿಂದ ಮದುವೆ ಸೀಸನ್ ಆರಂಭಗೊಂಡರೆ ಜೂನ್‌ನ ಮಳೆಗಾಲ ಬರುವವರೆಗೂ ಹೂವಿಗೆ ಉತ್ತಮ ಧಾರಣೆ ಸಿಗುತಿತ್ತು. ದಶಕಗಳ ಹಿಂದೆ ಶುಭ ಸಮಾರಂಭಗಳಿಗೆ ಹೂವು ಮೈಸೂರಿನಿಂದ ಸರಬರಾಜಾಗುತಿತ್ತು. ಆದರೆ ಈಗ ಜಿಲ್ಲೆಯಲ್ಲಿಯೇ ಸಾಕಷ್ಟು ಹೂವುಗಳು ಉತ್ಪಾದನೆ ಆಗುತ್ತಿರುವುದರಿಂದ ಇತರೆಡೆಗಳಿಗೂ ಮಾರಾಟ ಮಾಡಲಾಗುತ್ತಿದೆ.

ಲಾಕ್‌ಡೌನ್ ನಷ್ಟವನ್ನು ರೈತರಿಗೆ ತುಂಬಿಕೊಡಿ; ರೈತ ಸಂಘ ಆಗ್ರಹ ಲಾಕ್‌ಡೌನ್ ನಷ್ಟವನ್ನು ರೈತರಿಗೆ ತುಂಬಿಕೊಡಿ; ರೈತ ಸಂಘ ಆಗ್ರಹ

ಚಾಮರಾಜನಗರ ತಾಲ್ಲೂಕಿನ ಚೆನ್ನಿಪುರದಮೋಳೆ ಹೂವಿನ ಮಾರುಕಟ್ಟೆಗೆ ಹೆಸರುವಾಸಿ. ಬಹುತೇಕ ಜಿಲ್ಲೆಯ ಹೂವಿನ ಕೃಷಿಕರು ಇದೇ ಮಾರುಕಟ್ಟೆಯ ಮೂಲಕವೇ ತಾವು ಬೆಳೆದ ಹೂವುಗಳನ್ನು ಮಾರಾಟ ಮಾಡುತಿದ್ದರು. ಆದರೆ ಈಗ ಮಾರುಕಟ್ಟೆ ಖರೀದಿದಾರರು ಇಲ್ಲದೆ ಬಂದ್ ಆಗಿದೆ.

ಕಳೆದ ವರ್ಷವೂ ಇದೇ ರೀತಿ ಲಾಕ್‌ಡೌನ್ ಹೇರಲಾಗಿತ್ತು. ಶುಭ ಸಮಾರಂಭಗಳು ಸಾಲು ಸಾಲಾಗಿ ನಡೆಯುವ ಈ ವಸಂತ ಮಾಸದಲ್ಲೇ ಕೊರೊನಾ ಸೋಂಕು ಮತ್ತೆ ದಾಂಗುಡಿ ಇಟ್ಟಿದೆ. ಶುಭ ಸಮಾರಂಭಗಳ ಮೇಲೆ ಕಳೆದೆರಡು ತಿಂಗಳುಗಳಿಂದಲೂ ನಿಯಂತ್ರಣವಿದ್ದು, ಇದೀಗ ಸಂಪೂರ್ಣ ಇಲ್ಲವಾಗಿದೆ. ದೇವವಾಲಯಗಳಲ್ಲೂ ಉತ್ಸವಗಳೂ ನಡೆಯದೇ ಹೂವಿಗೆ ಬೇಡಿಕೆಯೇ ಇಲ್ಲದಂತಹ ವಾತಾವರಣ ಸೃಷ್ಟಿಯಾಗಿದೆ.

ಕೊರೊನಾದಿಂದ ಸಾವಿಗೀಡಾದವರ ಸಂಖ್ಯೆಯೂ ಜಿಲ್ಲೆಯಲ್ಲಿ ಕಡಿಮೆ ಏನಲ್ಲ. ಆದರೆ ಸರ್ಕಾರ ಅಂತ್ಯ ಸಂಸ್ಕಾರಕ್ಕೆ ಕೇವಲ 5 ಜನರು ಮಾತ್ರ ಭಾಗವಹಿಸಬೇಕೆಂದು ನಿರ್ಭಂಧ ಹೇರಿರುವುದರಿಂದ ಮೃತಪಟ್ಟವರ ಪಾರ್ಥಿವ ಶರೀರದ ಮೇಲೆ ಹೂವನಿರಿಸಲೂ ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಮೃತಪಟ್ಟವರ ಅಂತಿಮ ದರ್ಶನಕ್ಕೂ ಜನರು ಹೋಗುತ್ತಿಲ್ಲ. ಹೂವಿಗೆ ದೇವರ ಮುಡಿ ಇರಲಿ, ಕನಿಷ್ಠ ಮೃತಪಟ್ಟವರ ಶರೀರದ ಮೇಲೆಯೂ ಸ್ಥಾನ ಸಿಗುತ್ತಿಲ್ಲ.

ಹೂವುಗಳು ಗಿಡದಲ್ಲೇ ಒಣಗಿ ಹೋಗುತ್ತಿವೆ. ಗಿಡದಲ್ಲಿ ಅರಳಿದ ಹೂಗಳು ಬಾಡಿ ಉದುರುತ್ತಿರುವುದನ್ನು ಕಂಡರೆ ಹೊಟ್ಟೆಯಲ್ಲಿ ಬೆಂಕಿ ಬಿದ್ದಂತಹ ಅನುಭವವಾಗುತ್ತದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಹ ಸ್ಥಿತಿ ಬಂದಿದೆ ಎಂದು ಕೃಷಿಕರು ಅಳಲು ತೋಡಿಕೊಳ್ಳುತ್ತಾರೆ.

ಜಿಲ್ಲೆಯ ಕೊಳ್ಳೇಗಾಲ ಭಾಗದಲ್ಲಿ ಬೆಳೆಯುತ್ತಿದ್ದ ಅಲಂಕಾರಿಕ ಹೂ ಜರ್ಬಾರ ಈ ಬಾರಿ ಕಡಿಮೆಯಾಗಿದೆ. ಸುಮಾರು ಶೇ 30ರಿಂದ 40ರಷ್ಟು ಮಂದಿ ಈ ಕೃಷಿಯಿಂದ ವಿಮುಖರಾಗಿದ್ದಾರೆ. ಇದರ ನಿರ್ವಹಣೆಗೆ ಹೆಚ್ಚಿನ ಹಣ ಬೇಕಿರುವುದರಿಂದ ಒಂದು ತಿಂಗಳು ಹೂಗಳು ಮಾರಾಟವಾಗದಿದ್ದರೆ ನಿರ್ವಹಣೆ ಕಷ್ಟವಾಗುತ್ತದೆ. ಇದರಿಂದ ಅನಿವಾರ್ಯವಾಗಿ ಇವರು ಈ ಬೇಸಾಯವನ್ನು ಕೈಬಿಡಬೇಕಾಗಿದೆ.

ಈ ಕುರಿತು ಮಾತನಾಡಿದ ಗುಂಡ್ಲುಪೇಟೆ ತಾಲ್ಲೂಕಿನ ರೈತ ಬಸವರಾಜಪ್ಪ, "ಹೂವಿನ ಬೇಸಾಯಕ್ಕೆ ಲಕ್ಷಾಂತರ ರೂಪಾಯಿ ಹಣ ಮತ್ತು ಕಾರ್ಮಿಕ ಶಕ್ತಿ ಬೇಕು. ನಾವು ಬೆಳೆದ ಹೂಗಳು ಇಷ್ಟು ವರ್ಷ ಬೆಂಗಳೂರಿನ ಕೆ. ಆರ್. ಮಾರುಕಟ್ಟೆಯಲ್ಲಿಯೇ ಉತ್ತಮ ದರಕ್ಕೆ ಮಾರಾಟ ಆಗುತಿದ್ದವು. ಆದರೆ ಕಳೆದ ವರ್ಷದ ಲಾಕ್‌ಡೌನ್ ನಂತರ ಅಲಂಕಾರಕ್ಕಾಗಿ ಬಳಸುವ ಹೂವಿಗೆ ಬೇಡಿಕೆ ಇಲ್ಲವಾಗಿದೆ ಈಗಾಗಲೇ ಕೊಳ್ಳೇಗಾಲ ತಾಲ್ಲೂಕಿನ ಕೊತ್ತನೂರು, ಕಾಮಗೆರೆ, ಕುರುಬನಕಟ್ಟೆ, ಆಮಕೆರೆ, ತಿಮ್ಮರಾಜಿಪುರ ಇಲ್ಲೆಲ್ಲ ಒಂದು ವರ್ಷದಿಂದ ಈ ಬೆಳೆ ನಶಿಸಿದೆ" ಎಂದರು.

"ಪಾಳ್ಯ ಗ್ರಾಮದಲ್ಲಿ 4 ಎಕರೆಯಷ್ಟು ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಈ ಹೂವಿನ ಬಿತ್ತನೆ ಬೀಜವನ್ನು ಪುಣೆಯಿಂದ ತರಬೇಕು. ಒಂದು ಎಕರೆಗೆ 25 ಸಾವಿರ ಪೈರು ಬೇಕು. ಒಂದು ಎಕರೆ ಹೂ ಬೆಳೆಯಲು ಕನಿಷ್ಟ ಪಕ್ಷ 5 ಲಕ್ಷ ರೂಪಾಯಿ ಖರ್ಚಾಗುತ್ತದೆ. ಇಷ್ಟು ಹಣವ್ಯಯಿಸಿ ನಷ್ಟವಾದರೆ ಬೆಳೆಗಾರರ ಗತಿ ಏನು?" ಎಂದು ಮತ್ತೋರ್ವ ರೈತ ನಾಗರಾಜು ಪ್ರಶ್ನಿಸುತ್ತಾರೆ.

Recommended Video

ಸರ್ಕಾರದ ಈ ನಿರ್ಧಾರಕ್ಕೆ ಕಾರಣ ಏನು? | Oneindia Kannada

ಸುಮಾರು ಐನೂರಕ್ಕೂ ಅಧಿಕ ಮಂದಿ ಹೂ ಬೆಳೆಗಾರರು ಜಿಲ್ಲೆಯಲ್ಲಿದ್ದಾರೆ. ಕನಕಾಂಬರ, ಮಲ್ಲಿಗೆ, ಕಾಕಡ ಮೊದಲಾದ ಹೂಗಳನ್ನು ಇವರು ಬೆಳೆಯುತ್ತಿದ್ದಾರೆ. ಇವರಿಗೆ ಮುಖ್ಯ ಮಾರುಕಟ್ಟೆಯೇ ಬೆಂಗಳೂರಿನ ಕೃಷ್ಣ ರಾಜ ಮಾರುಕಟ್ಟೆ. ಆದರೆ ಲಾಕ್‌ಡೌನ್ ನಿಂದಾಗಿ ಇಡೀ ಮಾರುಕಟ್ಟೆಯೇ ಬಂದ್‌ ಆಗಿದ್ದು ಲಾರಿಗಳೂ ಸಂಚರಿಸುತ್ತಿಲ್ಲ, ಖರೀದಿದಾರರೂ ಸುಳಿಯುತ್ತಿಲ್ಲ.

English summary
Flower growers of Chamarajanagar district in trouble after announcement of lockdown. There is no buyers for flower.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X