ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬೆಹುಣಸೆ ಡ್ಯಾಂ ಭರ್ತಿಯಾದರೂ ರೈತರಿಗಿಲ್ಲ ಪ್ರಯೋಜನ!

|
Google Oneindia Kannada News

ಚಾಮರಾಜನಗರ, ಡಿಸೆಂಬರ್ 10: ಚಾಮರಾಜನಗರ ಜಿಲ್ಲೆಯ ಹನೂರು ವ್ಯಾಪ್ತಿಯ ಉದ್ದನೂರು ಬಳಿಯ ಹುಬ್ಬೆಹುಣಸೆ ಡ್ಯಾಂ (ಹೊಸಕೆರೆ) ಈ ಬಾರಿಯ ಹಿಂಗಾರುಮಳೆಗೆ ಭರ್ತಿ ಆಗುವುದರೊಂದಿಗೆ ನಾಲ್ಕೈದು ವರ್ಷಗಳಿಂದ ಡ್ಯಾಂ ಭರ್ತಿಯಾಗಿಲ್ಲ ಎಂಬ ನಿರಾಸೆಯನ್ನು ದೂರ ಮಾಡಿ ರೈತರಲ್ಲಿ ಹರ್ಷ ತಂದಿದೆ.

ಈ ಬಾರಿ ಹುಬ್ಬೆಹುಣಸೆ ಡ್ಯಾಂ ಭರ್ತಿಯಾಗಿರುವುದರಿಂದ ಇದನ್ನು ನಂಬಿಕೊಂಡಿದ್ದ ಹಲವು ರೈತರು ತಾವು ತಮ್ಮ ಜಮೀನಿನಲ್ಲಿ ಕೃಷಿ ಮಾಡಬಹುದೆಂದು ಖುಷಿಪಟ್ಟಿದ್ದರು. ಆದರೆ ಆಗಿದ್ದೇ ಬೇರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಲುವೆಗಳನ್ನು ದುರಸ್ತಿ ಮಾಡದ ಕಾರಣದಿಂದ ಸಮರ್ಪಕವಾಗಿ ನೀರು ಹರಿಯದೆ ರೈತರು ಹಿಡಿಶಾಪ ಹಾಕುವಂತಾಗಿದೆ. ಇಷ್ಟಕ್ಕೂ ಹುಬ್ಬೆಹುಣಸೆ ಡ್ಯಾಂನ್ನು ರೈತರ ಅನುಕೂಲಕ್ಕಾಗಿಯೇ ನಿರ್ಮಿಸಲಾಗಿದ್ದು, ಈ ಜಲಾಶಯ ತುಂಬಿದರೆ ಸುತ್ತಲಿನ ರೈತರ ಜಮೀನಿಗೆ ನೀರು ಹರಿಯುವುದಲ್ಲದೆ, ಅಂತರ್ಜಲ ವೃದ್ಧಿಯಾಗಿ ರೈತರು ನೆಮ್ಮದಿಪಡುವಂತಾಗುತ್ತದೆ.

ರೈತರ ಜಮೀನಿಗೆ ಸೇರದೆ ನೀರು ವ್ಯರ್ಥ

ರೈತರ ಜಮೀನಿಗೆ ಸೇರದೆ ನೀರು ವ್ಯರ್ಥ

ಆದರೆ ಈ ಬಾರಿ ಡ್ಯಾಂ ಭರ್ತಿಯಾಗಿದೆ. ಆದರೆ "ಡ್ಯಾಂ'ನಿಂದ ನೀರು ಹರಿಯಲು ನಿರ್ಮಿಸಿದ ಕಾಲುವೆಗಳನ್ನು ದುರಸ್ತಿ ಮಾಡದ ಕಾರಣದಿಂದಾಗಿ ನೀರು ರೈತರ ಜಮೀನಿಗೆ ಸೇರದೆ ವ್ಯರ್ಥವಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಈ ಡ್ಯಾಂ ನಿರ್ಮಾಣದ ಬಗ್ಗೆ ನೋಡುವುದಾದರೆ ಹಿಂದೆ ಮಳೆಗಾಲದಲ್ಲಿ ಬೆಟ್ಟ ಪ್ರದೇಶವಾದ ದೊಡ್ಡಸಂಪಿಗೆ, ಪಿ.ಜಿ. ಪಾಳ್ಯ ಹಾಗೂ ಸುತ್ತಮುತ್ತಲ ಬೆಟ್ಟ- ಗುಡ್ಡಗಳಿಂದ ಯಥೇಚ್ಛವಾಗಿ ನೀರು ಹರಿದು ಬರುತ್ತಿತ್ತಲ್ಲದೆ, ಬೆಳತ್ತೂರು, ಉದ್ದನೂರು ಹಾಗೂ ಹನೂರು ಮಾರ್ಗವಾಗಿ ಹಳ್ಳಕೊಳ್ಳಗಳ ಮೂಲಕ ಹರಿದು ನೀರು ವ್ಯರ್ಥವಾಗುತ್ತಿತ್ತು. ಇದನ್ನು ಗಮನಿಸಿದ ರೈತರು ಅಂದಿನ ಶಾಸಕರಾಗಿದ್ದ ದಿ. ರಾಜುಗೌಡರಿಗೆ ಡ್ಯಾಂವೊಂದನ್ನು ನಿರ್ಮಾಣ ಮಾಡಿಕೊಡುವಂತೆ ಮನವಿ ಮಾಡಿದ್ದರು.

1994ರಲ್ಲಿ ನಿರ್ಮಿಸಲಾಗಿರುವ ಡ್ಯಾಂ

1994ರಲ್ಲಿ ನಿರ್ಮಿಸಲಾಗಿರುವ ಡ್ಯಾಂ

ಹೀಗಾಗಿ 1994ರಲ್ಲಿ ಕಾವೇರಿ ನೀರಾವರಿ ನಿಗಮದ ವತಿಯಿಂದ 2.5 ಕೋಟಿ ರೂ. ವೆಚ್ಚದಲ್ಲಿ ಡ್ಯಾಂ ನಿರ್ಮಾಣ ಮಾಡಲಾಗಿತ್ತು. ಈ ಡ್ಯಾಂ ಸಾಮರ್ಥ್ಯ ಹೇಗಿದೆ ಎಂದರೆ 52.42 ಚದರ ಮೈಲಿಗಳನ್ನು ಹೊಂದಿದ್ದು, 42 ದಶಲಕ್ಷ ಘನ ಅಡಿಗಳಷ್ಟು ನೀರಿನ ಶೇಖರಣಾ ಸಾಮರ್ಥ್ಯ ಹೊಂದಿದೆ. 200 ಎಕರೆ ಅಚ್ಚುಕಟ್ಟು ಪ್ರದೇಶವನ್ನು ಹೊಂದಿದ್ದು, ಕೋಡಿಯು 130 ಮೀ., ಪ್ರದೇಶದ ಗರಿಷ್ಠ ಎತ್ತರ 12.25 ಮೀ. ಹಾಗೂ 107.72 ಮೀ. ನೀರಿನ ಗರಿಷ್ಠ ಮಟ್ಟವನ್ನು ಹೊಂದಿದೆ. 5.40 ಕಿ.ಮೀ ಉದ್ದವಿರುವ ಬಲದಂಡೆ ನಾಲೆಯ ಮೂಲಕ 9.96 ಕ್ಯೂಸೆಕ್ ನೀರನ್ನು ಹಾಯಿಸಬಹುದಾಗಿದೆ.

ಉತ್ತಮ ಮಳೆಯಿಂದ ಭರ್ತಿಯಾದ ಡ್ಯಾಂ

ಉತ್ತಮ ಮಳೆಯಿಂದ ಭರ್ತಿಯಾದ ಡ್ಯಾಂ

ಡ್ಯಾಂ ನಿರ್ಮಾಣವಾದ ಬಳಿಕ ಮಳೆ ನೀರು ಸಂಗ್ರಹಗೊಂಡು ಅಂತರ್ಜಲ ಮಟ್ಟ ಉತ್ತಮಗೊಂಡಿತ್ತು. ಆದರೆ ಕಳೆದ ನಾಲ್ಕೈದು ವರ್ಷಗಳ ಹಿಂದೆ ಈ ಭಾಗದಲ್ಲಿ ಮಳೆಯಾಗಿಲ್ಲದ ಪರಿಣಾಮ ಡ್ಯಾಂ ಬರಿದಾಗಿತ್ತು. ಇದರಿಂದ ಅಂತರ್ಜಲ ಮಟ್ಟ ಕುಸಿತಗೊಂಡು ಈ ಭಾಗದ ರೈತರು ಸಂಕಷ್ಟಪಡುವಂತಾಗಿತ್ತು, ಖಾಲಿಯಾಗಿದ್ದ ಡ್ಯಾಂ ನೋಡಿದ ಜನ ಮತ್ತೆ ಯಾವಾಗ ತುಂಬುತ್ತೋ ಎಂದು ಕಾಯುತ್ತಿದ್ದರು. ಆದರೆ ಈ ವರ್ಷ ಈ ಭಾಗದಲ್ಲಿ ಉತ್ತಮ ಮಳೆಯಾದ್ದರಿಂದ ಡ್ಯಾಂ ಭರ್ತಿಯಾಗಿದ್ದು ರೈತರಲ್ಲಿ ಹರ್ಷ ಮೂಡಿಸಿತ್ತು.

ಆದರೆ, ಈ ಡ್ಯಾಂನಿಂದ ರೈತರ ಜಮೀನಿಗೆ ನೀರು ಹರಿಸಲು ನಿರ್ಮಿಸಿರುವ ಕಾಲುವೆಗಳು ಹಲವು ವರ್ಷಗಳಿಂದ ಡ್ಯಾಂ ಭರ್ತಿಯಾಗದೆ ಇದ್ದುದರಿಂದ ನೀರು ಹರಿಯದೆ ಅವುಗಳೆಲ್ಲವೂ ಪಾಳು ಬಿದ್ದಿದ್ದವು. ಅವುಗಳನ್ನು ದುರಸ್ತಿ ಮಾಡುವ ಕೆಲಸಕ್ಕೆ ಸಂಬಂಧಿಸಿದವರು ಮನಸ್ಸು ಮಾಡಿರಲಿಲ್ಲ. ಹೀಗಾಗಿ ಡ್ಯಾಂನ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳ ಹಲವು ಕಡೆ ಮುಚ್ಚಿ ಹೋಗಿದ್ದಲ್ಲದೆ, ಗಿಡಗಂಟಿಗಳು ಬೆಳೆದಿವೆ.

ರೈತರ ಪ್ರಯೋಜನಕ್ಕೆ ಬಾರದ ನೀರು

ರೈತರ ಪ್ರಯೋಜನಕ್ಕೆ ಬಾರದ ನೀರು

ಸದ್ಯ ಡ್ಯಾಂ ತುಂಬಿ ಕೋಡಿ ಬಿದ್ದಿದ್ದು, ನೀರು ಕಾಲುವೆಗಳ ಮೂಲಕ ನೀರು ಹರಿಯುತ್ತಿದ್ದರೂ ಅದು ಸಮರ್ಪಕವಾಗಿ ರೈತರ ಜಮೀನಿಗೆ ತಲುಪದೆ ಹಳ್ಳದ ಮೂಲಕ ಕಾವೇರಿ ನದಿಯನ್ನು ಸೇರುವ ಮೂಲಕ ವ್ಯರ್ಥವಾಗುತ್ತಿದೆ. ಇದರಿಂದ ಡ್ಯಾಂನ ನೀರು ರೈತರ ಪ್ರಯೋಜನಕ್ಕೆ ಬರುತ್ತಿಲ್ಲ ಎಂಬುದು ಈ ಭಾಗದ ರೈತರ ಆರೋಪವಾಗಿದೆ. ಹುಬ್ಬೆಹುಣಸೆ ಡ್ಯಾಂ ಭರ್ತಿಯಾಗಿರುವುದರಿಂದ ಉದ್ದನೂರು, ಬೆಳತ್ತೂರು ಗ್ರಾಮಗಳು ನೀರಾವರಿಯ ಪ್ರಯೋಜನ ಪಡೆಯಬಹುದಾಗಿತ್ತು, ಜತೆಗೆ ಸುಮಾರು 200 ಎಕರೆ ಪ್ರದೇಶದಲ್ಲಿ ಅರೆ ನೀರಾವರಿ ಬೆಳೆಗಳನ್ನು ಬೆಳೆಯಬಹುದಾಗಿತ್ತು.

ಆದರೆ ಡ್ಯಾಂ ಒಳಗಡೆ ಹಾಗೂ ನೀರು ಹರಿದು ಬರುವ ಮಾರ್ಗದಲ್ಲಿ ಗಿಡಗಂಟಿಗಳು ಬೆಳೆದು ನಿಂತಿರುವುದರಿಂದ ನೀರು ಸರಾಗವಾಗಿ ಹರಿಯದ ಕಾರಣದಿಂದ ಡ್ಯಾಂ ಭರ್ತಿಯಾದರೂ, ರೈತರ ಪಾಲಿಗೆ ಪ್ರಯೋಜನ ಇಲ್ಲದಂತಾಗಿದೆ. ಸಂಬಂಧಿಸಿದವರು ಇತ್ತ ಗಮನಹರಿಸಿ ಕಾಲುವೆಗಳನ್ನು ದುರಸ್ತಿ ಮಾಡಿದರೆ ರೈತರಿಗೆ ಮುಂದಿನ ದಿನಗಳಲ್ಲಿ ಅನುಕೂಲವಾಗಬಹುದೇನೋ?

English summary
Farmers are not benefited even though the Hubbe hunase dam filled in Chamarajanagar district near Hanoor range.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X