ಚಾಮರಾಜನಗರ; ಆನೆ ದಂತ ಹಿಡಿದು ಆಟವಾಡಿದ ಹಾಡಿಯ ಮಕ್ಕಳು
ಚಾಮರಾಜನಗರ, ಫೆಬ್ರವರಿ 02: ಹಾಡಿಯ ಮಕ್ಕಳು ಆನೆ ದಂತ ಹಿಡಿದು ಆಟವಾಡುತ್ತಿದ್ದ ಘಟನೆ ಹನೂರು ತಾಲೂಕಿನ ಮಾದಪ್ಪನ ಬೆಟ್ಟದ ತಮ್ಮಡಗೇರಿಯಲ್ಲಿ ನಡೆದಿದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆಯನ್ನು ನಡೆಸುತ್ತಿದ್ದಾರೆ.
ಬೆಟ್ಟದ ತಪ್ಪಲಿನ ಹೊಸಕೊಳ ಸಮೀಪದ ತಮ್ಮಡಿಗೇರಿಯಿಂದ ಹುಲಿಗೂಡಿಗೆ ಹೋಗುವ ರಸ್ತೆಯಲ್ಲಿ ಮಕ್ಕಳು ಆನೆ ದಂತ ಹಿಡಿದು ಆಟವಾಡುತ್ತಿದ್ದರು. ಇದನ್ನು ನೋಡಿದ ಸ್ಥಳೀಯ ಜಿಲ್ಲಾ ಪಂಚಾಯಿತಿ ಸದಸ್ಯರೊಬ್ಬರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಭಯಾನಕ ವಿಡಿಯೋ: ಸುಡುವ ಟೈರ್ ಎಸೆದ ತಮಿಳುನಾಡು ರೆಸಾರ್ಟ್ ಕಾರ್ಮಿಕರು: ಆನೆ ಸಾವು
ಕೂಡಲೇ ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಅಷ್ಟರಲ್ಲಿ ಆಟವಾಡುತ್ತಿದ್ದ ಮಕ್ಕಳು ಅದನ್ನು ಸಮೀಪದ ತಿಪ್ಪೆ ಗುಂಡಿಗೆ ಎಸೆದು ಮನೆಗೆ ಹೋಗಿದ್ದರು. ಆನೆ ದಂತವನ್ನು ಪತ್ತೆ ಹಚ್ಚಿದ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.
ನಾಗರಹೊಳೆಯಲ್ಲಿ ಆನೆ ದಾಳಿ; ಅರಣ್ಯ ವೀಕ್ಷಕ ಸಾವು
ಈ ಕುರಿತು ಮಾತನಾಡಿರುವ ಎಂ. ಎಂ. ಹಿಲ್ಸ್ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ. ಏಡುಕುಂಡಲು, "ಮಕ್ಕಳು ಆನೆದಂತ ಹಿಡಿದು ಆಟವಾಡುತ್ತಿದ್ದಾರೆ ಎಂಬ ಮಾಹಿತಿ ತಿಳಿದ ಕೂಡಲೇ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಆನೆಯ ಎಡಭಾಗದ ದಂತ ಇದಾಗಿದ್ದು, ದಂತದ ಕೆಲಭಾಗ ಮುರಿದಿದೆ. ಈ ಕುರಿತು ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ" ಎಂದು ಹೇಳಿದ್ದಾರೆ.
ಮೈಸೂರಲ್ಲಿ ಆನೆ ಕಾರಿಡಾರ್ ಕಂಬಿಗಳ ಕಳ್ಳ ಸಾಗಣೆ!
ಮಕ್ಕಳು ಆಟವಾಡುವ ಸ್ಥಳದಲ್ಲಿ ಆನೆದಂತ ಬಂದಿದ್ದು ಹೇಗೆ, ಯಾರು ಅದನ್ನು ತಂದಿದ್ದರು? ಎಂಬ ಪ್ರಶ್ನೆಗಳಿಗೆ ತನಿಖೆ ಬಳಿಕ ಉತ್ತರ ಸಿಗಲಿದೆ.