ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಲೆ ಮಹದೇಶ್ವರ ದೇಗುಲಕ್ಕೆ ಲಾಕ್‌ಡೌನ್‌ನಿಂದ 18 ಕೋಟಿ ರೂ. ನಷ್ಟ

By Coovercolly Indresh
|
Google Oneindia Kannada News

ಚಾಮರಾಜನಗರ, ಜುಲೈ 5: ಕೋವಿಡ್ ಲಾಕ್‌ಡೌನ್‌ ಕಾರಣದಿಂದಾಗಿ ಚಾಮರಾಜನಗರ ಜಿಲ್ಲೆಯ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ 18 ಕೋಟಿ ರೂ.ಗಳಷ್ಟು ಆದಾಯ ಕುಸಿತ ಆಗಿದೆ.

ರಾಜ್ಯ ಸರ್ಕಾರವು ಲಾಕ್‌ಡೌನ್‌ ಘೋಷಿಸಿದ ಸಂದರ್ಭದಲ್ಲೇ ಕಳೆದ ಏಪ್ರಿಲ್‌ 22 ರಿಂದ ದೇವಾಲಯವನ್ನು ಬಂದ್‌ ಮಾಡಲಾಗಿದೆ. ಇಂದಿನಿಂದ (ಸೋಮವಾರ) ರಾಜ್ಯಾದ್ಯಂತ ಲಾಕ್‌ಡೌನ್‌ ಸಡಿಲಿಕೆ ಮಾಡಿದ ನಂತರ ಇಂದಿನಿಂದ (ಜು.5) ಚಾಮರಾಜನಗರ ಜಿಲ್ಲೆಯ ಎಲ್ಲ ದೇವಾಲಯ, ವನ್ಯಜೀವಿ ತಾಣಗಳಿಗೂ ಸಾರ್ವಜನಿಕ ಪ್ರವೇಶ ನೀಡಲಾಗುತ್ತಿದೆ.

ಪ್ರವಾಸಿಗರೇ ವಿಶ್ವವಿಖ್ಯಾತ ಮೈಸೂರು ಅರಮನೆಗೆ ಸ್ವಾಗತ!ಪ್ರವಾಸಿಗರೇ ವಿಶ್ವವಿಖ್ಯಾತ ಮೈಸೂರು ಅರಮನೆಗೆ ಸ್ವಾಗತ!

ಮಲೆ ಮಹದೇಶ್ವರ ದೇವಾಲಯದಲ್ಲಿ ಬೆಳಿಗ್ಗೆ 6ರಿಂದ ಸಂಜೆ 6 ಗಂಟೆಯವರೆಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದ್ದರೂ, ಉತ್ಸವ, ಸೇವೆಗಳನ್ನು ಮಾಡಿಸಲು ಅವಕಾಶ ನೀಡಿಲ್ಲ. ದಾಸೋಹ ವ್ಯವಸ್ಥೆ, ಲಾಡು ಪ್ರಸಾದ ವಿತರಣೆಯನ್ನೂ ನಿಲ್ಲಿಸಲಾಗಿದೆ.

Charamarajanagar: Rs 18 Cr Revenue Loss For Male Mahadeshwara Temple Due To Covid-19

"ಪ್ರತಿ ತಿಂಗಳ, ಹುಂಡಿ ಕಾಣಿಕೆ ಹಾಗೂ ವಿವಿಧ ಸೇವೆಗಳಿಂದ ದೇವಾಲಯಕ್ಕೆ 7 ಕೋಟಿ ರೂ.ನಷ್ಟು ಆದಾಯ ಬರುತ್ತದೆ. ಎರಡೂವರೆ ತಿಂಗಳ ಅವಧಿಯನ್ನು ಲೆಕ್ಕ ಹಾಕಿದರೆ 17ರಿಂದ 18 ಕೋಟಿ ರೂ. ಆಗುತ್ತದೆ. ಲಾಕ್‌ಡೌನ್‌ ಕಾರಣಕ್ಕೆ ಭಕ್ತರ ಪ್ರವೇಶ ನಿಷೇಧಿಸಿದ್ದರಿಂದ ಅಷ್ಟು ಆದಾಯ ಕೈತಪ್ಪಿದೆ,'' ಎಂದು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವ ಸ್ವಾಮಿ ತಿಳಿಸಿದರು.

"ಲಾಕ್‌ಡೌನ್‌ ಅವಧಿಯಲ್ಲಿ ಕಾಯಂ ನೌಕರರಿಗೆ ವೇತನ ನೀಡಲಾಗಿದೆ. ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಮೇ ತಿಂಗಳಿನವರೆಗೆ ವೇತನ ನೀಡಲಾಗಿದೆ. ಜೂನ್‌ನಿಂದ ಗುತ್ತಿಗೆ ನೌಕರರ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ನೌಕರರ ವೇತನಕ್ಕಾಗಿಯೇ ತಿಂಗಳಿಗೆ 2 ಕೋಟಿ ರೂ. ಬೇಕು,'' ಎಂದು ಜಯವಿಭವ ಸ್ವಾಮಿ ತಿಳಿಸಿದರು.

"ಭಕ್ತರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶ ನೀಡಿದ್ದರೂ, ಯಾವುದೇ ರೀತಿಯ ಸೇವೆಗಳನ್ನು ಆರಂಭಿಸಿಲ್ಲದಿರುವುದರಿಂದ ಭಕ್ತರು ಹುಂಡಿಗೆ ಹಾಕುವ ಕಾಣಿಕೆ ಮಾತ್ರ ಆದಾಯದ ಮೂಲವಾಗಲಿದೆ. ಮುಂದಿನ ಆದೇಶದವರೆಗೂ ಅದ್ಯಾವುದೂ ಇರುವುದಿಲ್ಲ. ಹಾಗಾಗಿ, ಆದಾಯ ನಿರೀಕ್ಷೆ ಮಾಡಲು ಸಾಧ್ಯವಿಲ್ಲ,'' ಎಂದು ಜಯವಿಭವ ಸ್ವಾಮಿ ಅವರು ಹೇಳಿದರು.

"ಸದ್ಯದ ಮಟ್ಟಿಗೆ, ದಾಸೋಹ, ಲಾಡು ತಯಾರಿಕೆ ಸೇರಿದಂತೆ ಹಲವು ಕೆಲಸಗಳು ಇಲ್ಲದಿರುವುದರಿಂದ ನೌಕರರ ಅಗತ್ಯವಿಲ್ಲ. ತಾತ್ಕಾಲಿಕವಾಗಿ ಸೇವೆ ಸ್ಥಗಿತಗೊಳಿಸಲಾಗಿರುವ 189 ಮಂದಿ ಗುತ್ತಿಗೆ ಆಧಾರಿತ ನೌಕರರನ್ನು ತಕ್ಷಣಕ್ಕೆ ವಾಪಸ್‌ ಕರೆಸುವುದಿಲ್ಲ. ದೇವಾಲಯ ಪೂರ್ಣ ಪ್ರಮಾಣದಲ್ಲಿ ತೆರೆದ ನಂತರ ಹಂತ ಹಂತವಾಗಿ ಅವರನ್ನು ಮರು ನೇಮಕ ಮಾಡಿಕೊಳ್ಳಲಾಗುವುದು,'' ಎಂದು ಅವರು ಹೇಳಿದರು.

"ತಿಂಗಳಿಗೆ ಪ್ರಾಧಿಕಾರಕ್ಕೆ ಸರಾಸರಿ 3 ಕೋಟಿ ರೂ. ಖರ್ಚು ಇದೆ. ಅಭಿವೃದ್ಧಿ ಕಾಮಗಾರಿಗಳ ಬಿಲ್‌ ಕೂಡ ಇರುತ್ತದೆ. ಇದು ಸರಾಸರಿ 5 ಕೋಟಿ ಬರುತ್ತದೆ. ದೇವಸ್ಥಾನದಲ್ಲಿ ಆದಾಯ ಇಲ್ಲದೇ ಇದ್ದಾಗ, ಅನಿವಾರ್ಯವಾಗಿ ಸಂಚಿತ ನಿಧಿಯಿಂದ ಹಣ ಬಳಸಬೇಕಾಗುತ್ತದೆ,'' ಎಂದು ಜಯವಿಭವ ಸ್ವಾಮಿ ಮಾಹಿತಿ ನೀಡಿದರು.

"ಕೋವಿಡ್ ಮೊದಲನೇ ಅಲೆಯಲ್ಲೂ ದೇವಾಲಯದ ಆದಾಯ ಗಣನೀಯವಾಗಿ ಇಳಿಕೆಯಾಗಿತ್ತು. 2020ರ ಡಿಸೆಂಬರ್‌ ನಂತರ ಭಕ್ತರ ಸಂಖ್ಯೆ ಹೆಚ್ಚಳವಾಗಿ ಆದಾಯದಲ್ಲಿ ಚೇತರಿಕೆ ಕಂಡು ಬಂದಿತ್ತು. 2020-21ನೇ ಸಾಲಿನಲ್ಲಿ ಪ್ರಾಧಿಕಾರವು 80 ಕೋಟಿ ರೂ.ಗಳಷ್ಟು ಆದಾಯ ನಿರೀಕ್ಷಿಸಿದ್ದರೂ, 42 ಕೋಟಿಗಳಷ್ಟು ಮಾತ್ರ ಆದಾಯ ಬಂದಿತ್ತು. ದೇವಾಲಯದ ವಾರ್ಷಿಕ ರಥೋತ್ಸವವನ್ನು ರದ್ದುಗೊಳಿಸಿದ್ದರಿಂದ ಆದಾಯದಲ್ಲಿ ಗಣನೀಯ ಕುಸಿತ ಆಗಿದೆ,'' ಎಂದು ಅವರು ಹೇಳಿದರು.

English summary
Due to the Covid-19 lockdown, Rs 18 crore revenue loss to Male mahadeswara Swamy Temple.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X