ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಸರಾದಲ್ಲಿ ವಜ್ರಮುಷ್ಠಿ ಕಾಳಗದಲ್ಲಿ ತೊಡೆ ತಟ್ಟಲು ಸಿದ್ಧರಾದ ಚಾಮರಾಜನಗರದ ಜಟ್ಟಿ

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ವಿಶ್ವವಿಖ್ಯಾತ ಮೈಸೂರು ದಸರಾಗೆ ದಿನಗಣನೆ ಆರಂಭವಾಗಿದ್ದು ನಾಡಹಬ್ಬದ ಪ್ರಮುಖ ಆಕರ್ಷಣೆಯಾದ ಮುಷ್ಠಿ ಕಾಳಗಕ್ಕೆ ಚಾಮರಾಜನಗರದ ಜಟ್ಟಿ ತಯಾರಿ ಜೋರಾಗಿದ್ದು ನಿತ್ಯ ಬೆವರು ಹರಿಸುತ್ತಿದ್ದಾರೆ.

ನಾಡಹಬ್ಬ ದಸರಾದ ವಿಜಯದಶಮಿ ದಿನದಂದು ಮೈಸೂರಿನ ಅಂಬಾ ವಿಲಾಸ ಅರಮನೆಯ ಕರಿಕಲ್ಲುತೊಟ್ಟಿಯಲ್ಲಿ ನಡೆಯುವ ಮೈನವಿರೇಳಿಸುವ ವಜ್ರಮುಷ್ಟಿ ಕಾಳಗಕ್ಕೆ ಚಾಮರಾಜನಗರ ಜಟ್ಟಿ , ಉಸ್ತಾದ್ ಕೃಷ್ಣಪ್ಪ ಅವರ ಪುತ್ರ ಅಚ್ಯುತ್ ಜಟ್ಟಿ ಸಜ್ಜುಗೊಳ್ಳುತ್ತಿದ್ದಾರೆ.

ಮೈಸೂರು ಸಂಸ್ಥಾನಕ್ಕೆ ಅಂಟಿದ ಆ ಶಾಪ ಯಾವುದು?ಮೈಸೂರು ಸಂಸ್ಥಾನಕ್ಕೆ ಅಂಟಿದ ಆ ಶಾಪ ಯಾವುದು?

ಕಳೆದ ಎರಡು ತಿಂಗಳಿನಿಂದ ಚಾಮರಾಜನಗರದ ದೊಡ್ಡ ಗರಡಿಯಲ್ಲಿ ತರಬೇತುದಾರ ಪುಟ್ಟಣ್ಣ ಜಟ್ಟಿ ಮತ್ತು ಹೇಮಂತ್ ಜಟ್ಟಿ, ತಿರುಮಲೇಶ್ ಜಟ್ಟಿ ಅವರುಗಳಿಂದ ಅಚ್ಯುತ್ ತರಬೇತಿ ಪಡೆಯುತ್ತಿದ್ದಾರೆ. ಈ ಹಿಂದೆ 2008ರಲ್ಲಿ ಮುಷ್ಠಿ ಕಾಳಗದಲ್ಲಿ ಭಾಗವಹಿಸಿದ್ದರು.

ದಸರಾ ಮಹೋತ್ಸವದಲ್ಲಿ ವಜ್ರಮುಷ್ಠಿ ಕಾಳಗಕ್ಕೆ ಅತ್ಯಂತ ಮಹತ್ವವಿದೆ. ವಿಜಯದಶಮಿಯ ದಿನ ನಡೆಯುವ ಜಂಬೂ ಸವಾರಿಗೂ ಮೊದಲು ರಾಜ ಮನೆತನದವರ ಸಮ್ಮುಖದಲ್ಲಿ ಈ ಕಾಳಗ ನಡೆಯುತ್ತದೆ. ಸಂಪ್ರದಾಯದ ಉದ್ದೇಶದಿಂದ ನಡೆಯುವ ಈ ಕಾಳಗ ಕೆಲವೇ ಸೆಕೆಂಡುಗಳಲ್ಲಿ ಮುಗಿಯುತ್ತದೆ. ಆದರೂ, ಈ ಕಾಳಗವನ್ನು ವೀಕ್ಷಿಸಲು ಜನರ ದಂಡೇ ನೆರೆಯುತ್ತದೆ.

 4 ಜಿಲ್ಲೆಗಳಿಂದ ಜಟ್ಟಿಗಳು ಭಾಗಿ

4 ಜಿಲ್ಲೆಗಳಿಂದ ಜಟ್ಟಿಗಳು ಭಾಗಿ

ಜಟ್ಟಿ ಜನಾಂಗಕ್ಕೆ ಸೇರಿದ ನಾಲ್ವರು ಪೈಲ್ವಾನರು ವಜ್ರಮುಷ್ಠಿ ಕಾಳಗ ಮಾಡುತ್ತಾರೆ. ಕೈಯಲ್ಲಿ ದಂತದ ನಖವನ್ನು ಧರಿಸಿ ಮಾಡುವ ಈ ಹೊಡೆದಾಟದಲ್ಲಿ ಯಾರಾದರೂ ಒಬ್ಬ ಜಟ್ಟಿಯ ತಲೆಯಲ್ಲಿ ರಕ್ತ ಸುರಿಯಲು ಆರಂಭವಾದ ತಕ್ಷಣ ಕಾಳಗವನ್ನು ಮುಕ್ತಾಯ ಮಾಡುವುದು ರೂಢಿಯಿಂದಲೂ ನಡೆದುಕೊಂಡು ಬಂದಿದೆ.

ಬೆಂಗಳೂರು, ಮೈಸೂರು, ಚನ್ನಪಟ್ಟಣ ಮತ್ತು ಚಾಮರಾಜನಗರದ ತಲಾ ಒಬ್ಬೊಬ್ಬ ಜಟ್ಟಿ ಈ ವಜ್ರಮುಷ್ಠಿ ಕಾಳಗದಲ್ಲಿ ಭಾಗವಹಿಸುವುದು ರೂಢಿ. ಈ ನಾಲ್ಕು ಊರುಗಳಿಂದ ಪ್ರತಿವರ್ಷ ಜಟ್ಟಿಗಳನ್ನು ಕಳುಹಿಸಲೇಬೇಕು. ಇದರಲ್ಲಿ ಭಾಗವಹಿಸುವವರು ಜಟ್ಟಿ ಜನಾಂಗದವರೇ ಆಗಬೇಕು. ತಾವು ಕೂಡ ಅನೇಕ ವರ್ಷಗಳಿಂದ ಓರ್ವರನ್ನು ಭಾಗವಹಿಸುತ್ತಿದ್ದು ತರಬೇತಿ ಕೊಡಲಾಗುತ್ತದೆ, ತರಬೇತಿ ನೋಡಲು ಯುವಪೀಳಿಗೆಯು ಬರಲಿದೆ ಎಂದು ಹಿರಿಯ ಪಟು ಪುಟ್ಟಪ್ಪ ಜಟ್ಟಿ ತಿಳಿಸಿದರು.

ಲಾಲ್‌ಬಾಗ್ ಮಾದರಿಯಲ್ಲಿ ಲಿಂಗಾಂಬುಧಿ ಕೆರೆ ಆವರಣದಲ್ಲಿ ಬೊಟಾನಿಕಲ್ ಗಾರ್ಡನ್ಲಾಲ್‌ಬಾಗ್ ಮಾದರಿಯಲ್ಲಿ ಲಿಂಗಾಂಬುಧಿ ಕೆರೆ ಆವರಣದಲ್ಲಿ ಬೊಟಾನಿಕಲ್ ಗಾರ್ಡನ್

 ಶನಿವಾರ-ಭಾನುವಾರ ದಿನಪೂರ್ತಿ ತರಬೇತಿ

ಶನಿವಾರ-ಭಾನುವಾರ ದಿನಪೂರ್ತಿ ತರಬೇತಿ

ಈ ವರ್ಷ ಇಂತಹವರನ್ನು ಕಳುಹಿಸುತ್ತೇವೆ ಎಂದು ರಾಜಮನೆತನಕ್ಕೆ ಮೊದಲೇ ತಿಳಿಸುತ್ತೇವೆ. ದಸರಾ ಆರಂಭಕ್ಕೆ ಒಂದು ತಿಂಗಳು ಇರುವಾಗ ಆಯ್ಕೆ ಮಾಡಿದವರಿಗೆ ತರಬೇತಿ ನೀಡಲು ಆರಂಭಿಸುತ್ತೇವೆ. ಕಾಳಗದ ನಡೆಗಳನ್ನು ಕಲಿಸಲಾಗುತ್ತದೆ. ಪ್ರತಿ ದಿನ ಬೆಳಿಗ್ಗೆ ತರಬೇತಿ ಇರುತ್ತದೆ. ಶನಿವಾರ-ಭಾನುವಾರ ದಿನಪೂರ್ತಿ ತರಬೇತಿ ನಡೆಯಲಿದ್ದು ಜಟ್ಟಿಗಳಾಗಿರುವುದು ನಮಗೆ ಹೆಮ್ಮೆ ಎಂದು ಹೇಮಂತ್ ಜಟ್ಟಿ ಸಂತಸಪಟ್ಟರು.

 ಜಟ್ಟಿಗಳಿಗೆ ಗೌರವಧನ

ಜಟ್ಟಿಗಳಿಗೆ ಗೌರವಧನ

ವಜ್ರಮುಷ್ಠಿ ಕಾಳಗದಲ್ಲಿ ಭಾಗವಹಿಸುವುದು ಎಂದರೆ ಅದೊಂದು ಗೌರವ. ನಮ್ಮ ಜನಾಂಗಕ್ಕೆ ಮಾತ್ರ ಇದರಲ್ಲಿ ಭಾಗಿಯಾಗಲು ಅವಕಾಶ. ಇದಕ್ಕಾಗಿ ನಮಗೆ ಗೌರವಧನ ಸಿಗುತ್ತದೆ. ಆದರೆ, ದುಡ್ಡಿಗಾಗಿ ನಾವು ಇದರಲ್ಲಿ ಪಾಲ್ಗೊಳ್ಳುತ್ತಿಲ್ಲ. ಅದು ನಮಗೆ ಮುಖ್ಯವೂ ಅಲ್ಲ. ಹಲವಾರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುವುದು ಮತ್ತು ರೋಮಾಂಚನಕಾರಿಯಾದ ಈ ಸಮರ ಕಲೆಯನ್ನು ಉಳಿಸುವುದಕ್ಕಾಗಿ ಸಂತೋಷದಿಂದಲೇ ಪಾಲ್ಗೊಳ್ಳುತ್ತೇವೆ ಎಂದು ಈ ಬಾರಿ ಕಾಳಗಕ್ಕೆ ಅಣಿಯಾಗುತ್ತಿರುವ ಅಚ್ಯುತ್ ಜಟ್ಟಿ ಮಾಹಿತಿ ಹಂಚಿಕೊಂಡರು.

 ವಯಸ್ಸಿನ ಮಿತಿ ಇಲ್ಲ

ವಯಸ್ಸಿನ ಮಿತಿ ಇಲ್ಲ

ಜಟ್ಟಿಯನ್ನು ಆಯ್ಕೆ ಮಾಡುವಾಗ ವಯಸ್ಸಿನ ಮಿತಿ ನೋಡುವುದಿಲ್ಲ. ಆರೋಗ್ಯದಿಂದ ಇರಬೇಕು. ದೈಹಿಕವಾಗಿ ಸದೃಢರಾಗಿರಬೇಕು, ರಾಜಮನೆತನದ ಅಂಗರಕ್ಷಕರಾಗಿರುವ ಜಟ್ಟಿ ಸಮುದಾಯದ ಶೌರ್ಯ, ತ್ಯಾಗ, ರಾಜರಿಗೆ ಒಳಿತಾಗಲೆಂಬ ಸಂಕೇತ ಈ ಜಟ್ಟಿ ಕಾಳಗವಾಗಿದೆ ಎಂದು 2017 ರಲ್ಲಿ ದಸರಾದಲ್ಲಿ ಭಾಗಿಯಾಗಿದ್ದ ತಿರುಮಲೇಶ್ ಜಟ್ಟಿ ಹೇಳಿದರು.

 ಜಟ್ಟಿ ಕಾಳಗದ ಇತಿಹಾಸ

ಜಟ್ಟಿ ಕಾಳಗದ ಇತಿಹಾಸ

ಪ್ರಾಚೀನ ಸಮರಕಲೆಗಳಲ್ಲಿ ಒಂದಾದ ವಜ್ರಮುಷ್ಠಿ ಕಾಳಗಕ್ಕೆ ಸುಮಾರು 5 ಸಾವಿರ ವರ್ಷಗಳ ಇತಿಹಾಸವಿದೆ. ಗುಜರಾತ್‌ನ ಪಠಾಣ್ ಜಿಲ್ಲೆ ಇದರ ಮೂಲನೆಲೆ. ಈ ಸಮರ ಕಲೆಯನ್ನು ಶ್ರೀಕೃಷ್ಣ-ಬಲರಾಮರು ಜಟ್ಟಿ ಸಮುದಾಯಕ್ಕೆ ಧಾರೆ ಎರೆದು ಕೊಟ್ಟರೆಂದು ಮಲ್ಲಪುರಾಣದಲ್ಲಿ ಉಲ್ಲೇಖವಿದೆ. ಹಿಂದೆ ಮೈಸೂರಿನ ರಾಜರು ದಸರಾ ಮಹೋತ್ಸವಕ್ಕೆ ಸಾಮಂತ ರಾಜರು, ಸ್ನೇಹಿತರು, ಆಪ್ತರನ್ನು ಆಹ್ವಾನಿಸಿ ವಜ್ರಮುಷ್ಟಿ ಕಾಳಗ ನಡೆಸಲಾಗುತ್ತಿತ್ತಂತೆ. ಸೈನಿಕರು ರಾಜನಿಗಾಗಿ ಪ್ರಾಣವನ್ನಾದರೂ ಅರ್ಪಿಸಲು ಸಿದ್ಧ ಎಂಬುದನ್ನು ಪರೋಕ್ಷವಾಗಿ ತಿಳಿಸುವುದು ಹಾಗೂ ಸೈನಿಕರ ರಾಜನಿಷ್ಠೆ ಎಷ್ಟಿದೆ ಎಂಬುದನ್ನು ತೋರಿಸುವುದು ಇದರ ಉದ್ದೇಶವಾಗಿತ್ತು.

ಕೊರೊನಾ ಕರಿಛಾಯೆ ಇಲ್ಲದ ಈ ಬಾರಿ ದಸರಾ ಅದ್ಧೂರಿಯಾಗಿ ನಡೆಯುವ ಹಿನ್ನೆಲೆಯಲ್ಲಿ ಜಟ್ಟಿಗಳು ಕೂಡ ಸಂಭ್ರಮದಿಂದಲೇ ತಾಲೀಮು ನಡೆಸುತ್ತಿದ್ದಾರೆ, ಮೈ ನವಿರೇಳಿಸುವ ಕಾರ್ಯಕ್ರಮಕ್ಕೆ ಕೆಲವೇ ದಿನಗಳಲ್ಲಿ ಸಾಕ್ಷೀಕರಿಸಲಿದ್ದಾರೆ.

English summary
Chamarajanagar Traditional wrestlers are Ready for this Vajra Mushti kalaga which will be held during vijayadasami day in Mysuru,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X