• search
  • Live TV
ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಶಾಪಗ್ರಸ್ಥ' ಜಿಲ್ಲೆ ಚಾಮರಾಜನಗರಕ್ಕೆ ಎರಡೆರಡು ಸಚಿವ ಸ್ಥಾನ

|

ಚಾಮರಾಜನಗರ, ಜೂನ್ 7: ಮುಖ್ಯಮಂತ್ರಿ, ಸಚಿವರ ಸ್ಥಾನಕ್ಕೆ ಕುತ್ತು ತರುವ ಜಿಲ್ಲೆ ಎಂಬ ಹಣೆಪಟ್ಟಿ ಅಂಟಿಸಿಕೊಂಡಿರುವ ಚಾಮರಾಜನಗರ ಜಿಲ್ಲೆಗೆ ಈ ಅಪವಾದದ ಕಾರಣದಿಂದಲೇ ಅಭಿವೃದ್ಧಿ ಮರೀಚಿಕೆಯಾಗಿದೆ.

ಈ ಬಾರಿಯ ಸಮ್ಮಿಶ್ರ ಸರ್ಕಾರ ರಚನೆ ವೇಳೆ ಏನೇ ಗೊಂದಲಗಳಿದ್ದರೂ, ಚಾಮರಾಜನಗರದ ಜನರಲ್ಲಿ ಈಗ ನಿರೀಕ್ಷೆಗಳು 'ದ್ವಿಗುಣ'ಗೊಂಡಿವೆ.

ಪ್ರಮಾಣ ವಚನ ಸ್ವೀಕರಿಸಿದ ಜಿಲ್ಲಾವಾರು ಸಚಿವರುಗಳ ಪಟ್ಟಿ

ಮೈತ್ರಿ ಸರ್ಕಾರದಲ್ಲಿ ಸಚಿವರಾಗಿ ಕಾಂಗ್ರೆಸ್‌ನಿಂದ ಸಿ. ಪುಟ್ಟರಂಗಶೆಟ್ಟಿ ಪ್ರಮಾಣವಚನ ಸ್ವೀಕರಿಸಿದ್ದರೆ, ಬಿಎಸ್‌ಪಿಯಿಂದ ಗೆಲುವು ಕಂಡಿರುವ ಏಕೈಕ ಮುಖಂಡ ಎನ್. ಮಹೇಶ್ ಅವರು ಜೆಡಿಎಸ್ ಕೋಟಾದಡಿ ಸಚಿವರಾಗಿದ್ದಾರೆ.

ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಖಾತೆಗಳ ಹಂಚಿಕೆಯಾಗಿದೆ. ಪಕ್ಷಗಳು ಜಿಲ್ಲಾವಾರು ಮತ್ತು ಜಾತಿವಾರು ಪ್ರಾತಿನಿಧ್ಯಕ್ಕೆ ಮಣೆ ಹಾಕಿವೆ. ಒಂದು ಸರ್ಕಾರದ ಅವಧಿಯಲ್ಲಿ ಇಬ್ಬರಿಗೆ ಸಚಿವರಾಗುವ ಅವಕಾಶ ದೊರಕಿರುವುದು ಜಿಲ್ಲೆಯ ಇತಿಹಾಸದಲ್ಲಿಯೇ ಇದು ಮೊದಲ ಬಾರಿ.

ಚಾಮರಾಜನಗರದಲ್ಲಿ ಇರುವುದೇ ನಾಲ್ಕು ವಿಧಾನಸಭೆ ಕ್ಷೇತ್ರಗಳು. ನಾಲ್ವರು ಶಾಸಕರ ಪೈಕಿ ಇಬ್ಬರಿಗೆ ಸಚಿವ ಸ್ಥಾನ ದೊರಕಿರುವುದು ವಿಶೇಷ.

ಸಂಪುಟ ಸಚಿವರು : ಜಾತಿವಾರು ಲೆಕ್ಕಾಚಾರದಲ್ಲಿ ಒಕ್ಕಲಿಗರಿಗೆ ಸಿಂಹಪಾಲು

ಜಿಲ್ಲೆಯಲ್ಲಿ ಚಾಮರಾಜನಗರ ಮತ್ತು ಹನೂರು ಕಾಂಗ್ರೆಸ್ ಪಾಲಾಗಿದ್ದರೆ, ಇನ್ನು ಕೊಳ್ಳೇಗಾಲ ಕ್ಷೇತ್ರ ಚುನಾವಣೆಗೆ ಮುನ್ನವೇ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿದ್ದ ಬಿಎಸ್‌ಪಿ ಪಾಲಾಗಿದೆ. ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಗುಂಡ್ಲುಪೇಟೆಯನ್ನು ಬಿಜೆಪಿ ತನ್ನದಾಗಿಸಿಕೊಂಡಿದೆ.

ಇದುವರೆಗಿನ ಸರ್ಕಾರಗಳಲ್ಲಿ ಜಿಲ್ಲೆಯಿಂದ ಒಬ್ಬ ಸಚಿವರನ್ನು ಮಾತ್ರ ಕಾಣುತ್ತಿದ್ದ ಚಾಮರಾಜನಗರದ ಪಾಲಿಗೆ ಬಂಪರ್ ಹೊಡೆದಿದೆ.

ಕುಡಿಯುವ ನೀರು, ರಸ್ತೆ, ಶೌಚಾಲಯ ಸೇರಿದಂತೆ ಅನೇಕ ಮೂಲಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿರುವ ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಯ ನಿರೀಕ್ಷೆಗಳು ಗರಿಗೆದರಿವೆ.

ಕೊನೆಗೂ ಒಲಿದ ಸಚಿವ ಸ್ಥಾನ

ಕೊನೆಗೂ ಒಲಿದ ಸಚಿವ ಸ್ಥಾನ

ಚಾಮರಾಜನಗರ ಕ್ಷೇತ್ರದಲ್ಲಿ ಸತತ ಮೂರು ಬಾರಿ ಗೆದ್ದ ಮೊದಲಿಗ ಎಂಬ ಹೆಗ್ಗಳಿಕೆ ಪಡೆದುಕೊಂಡಿರುವ ಕಾಂಗ್ರೆಸ್ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರಿಗೆ ಈ ಬಾರಿ ಸಚಿವ ಸ್ಥಾನ ಒಲಿದಿದೆ.

ಜತೆಗೆ, ಚಾಮರಾಜನಗರ ವಿಧಾನಸಭೆ ಕ್ಷೇತ್ರದಿಂದ ಗೆದ್ದು, ಸಚಿವರಾದ ಮೊದಲಿಗ ಎಂಬ ಕೀರ್ತಿಗೂ ಅವರು ಪಾತ್ರರಾಗಿದ್ದಾರೆ.

ಇದುವರೆಗಿನ ಅನೇಕ ಸರ್ಕಾರಗಳ ಅವಧಿಯಲ್ಲಿ ಆಡಳಿತಾರೂಢ ಪಕ್ಷದ ಶಾಸಕರೇ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರೂ, ಚಾಮರಾಜನಗರದ ಯಾವ ಶಾಸಕರಿಗೂ ಸಚಿವರಾಗುವ ಅವಕಾಶ ದೊರಕಿರಲಿಲ್ಲ. ಪುಟ್ಟರಂಗಶೆಟ್ಟಿ ಅವರು ಸಚಿವರಾಗುವುದರೊಂದಿಗೆ ಈ ಕೊರಗು ನಿವಾರಣೆಯಾಗಿದೆ.

ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪುಟ್ಟರಂಗಶೆಟ್ಟಿ ಅವರು ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದರು.

ಉಪ್ಪಾರ ಜನಾಂಗದ ಪ್ರಭಾವಿ ಮುಖಂಡರಾದ ಪುಟ್ಟರಂಗಶೆಟ್ಟಿ ಅವರಿಗೆ ಜಾತಿ ಹಾಗೂ ಪ್ರಾದೇಶಿಕತೆಗೆ ಅನುಗುಣವಾಗಿ ಈ ಬಾರಿ ಸಚಿವ ಸ್ಥಾನ ನೀಡುವುದು ಕಾಂಗ್ರೆಸ್‌ಗೆ ಅನಿವಾರ್ಯವಾಗಿತ್ತು.

ಜಿಲ್ಲಾ ಉಸ್ತುವಾರಿಯ ಹೊಣೆಯ ನಿರೀಕ್ಷೆ

ಜಿಲ್ಲಾ ಉಸ್ತುವಾರಿಯ ಹೊಣೆಯ ನಿರೀಕ್ಷೆ

ಸಚಿವರಾಗಿದ್ದ ಎಚ್. ಎಸ್. ಮಹದೇವ ಪ್ರಸಾದ್ ಅವರ ನಿಧನದ ಬಳಿಕ ನಡೆದ 2017ರ ಉಪಚುನಾವಣೆಯಲ್ಲಿ ಜಯಿಸಿದ ಗೀತಾ ಮಹದೇವಪ್ರಸಾದ್ ಅವರಿಗೆ ಸಿದ್ದರಾಮಯ್ಯ ಸರ್ಕಾರ ಮಂತ್ರಿಗಿರಿ ನೀಡಿತ್ತು.

ಮಹದೇವಪ್ರಸಾದ್ ಅವರ ನಿಧನದ ನಂತರ ಜಿಲ್ಲೆಯ ಉಸ್ತುವಾರಿಯನ್ನು ಯು.ಟಿ. ಖಾದರ್ ಅವರಿಗೆ ವಹಿಸಲಾಗಿತ್ತು. ಅನನುಭವಿ ಗೀತಾ ಮಹದೇವಪ್ರಸಾದ್ ಅವರಿಗೆ ಸಚಿವ ಸ್ಥಾನ ನೀಡಿ, ಉಸ್ತುವಾರಿ ಸಚಿವರನ್ನಾಗಿಸಿದ್ದು ಪುಟ್ಟರಂಗಶೆಟ್ಟಿ ಅವರ ಬೆಂಬಲಿಗರಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು.

ಈಗ ಪುಟ್ಟರಂಗಶೆಟ್ಟಿ ಅವರಿಗೆ ಕಾಂಗ್ರೆಸ್ ಸಚಿವ ಸ್ಥಾನ ಕಲ್ಪಿಸಿದೆ. ಜಿಲ್ಲಾ ಕೇಂದ್ರದಲ್ಲಿಯೇ ಇರುವುದರಿಂದ ಅವರಿಗೇ ಈ ಬಾರಿ ಜಿಲ್ಲೆಯ ಉಸ್ತುವಾರಿ ಹೊಣೆಗಾರಿಕೆಯೂ ಲಭಿಸುವ ಸಾಧ್ಯತೆಯಿದೆ. ಅವರಿಗೆ ಯಾವ ಖಾತೆ ಲಭಿಸಬಹುದು ಎಂಬ ಬಗ್ಗೆ ಕುತೂಹಲವಿದೆ.

ಬಿಎಸ್‌ಪಿಯ ಏಕೈಕ ಶಾಸಕ, ಸಚಿವ!

ಬಿಎಸ್‌ಪಿಯ ಏಕೈಕ ಶಾಸಕ, ಸಚಿವ!

ಬುಧವಾರ ಪ್ರಮಾಣವಚನ ಸ್ವೀಕರಿಸಿದ ಸಚಿವರ ನಡುವೆ ವಿಭಿನ್ನವಾಗಿ ಗುರುತಿಸಿಕೊಂಡವರು ಬಿಎಸ್‌ಪಿ ರಾಜ್ಯಾಧ್ಯಕ್ಷ ಎನ್. ಮಹೇಶ್.

ನೀಲಿ ಬಣ್ಣದ ಸೂಟ್ ಧರಿಸಿ ಅಂಬೇಡ್ಕರ್ ಅವರಂತೆ ವೇಷಧಾರಿಯಾಗಿ ಬಂದಿದ್ದ ಎನ್. ಮಹೇಶ್ ಅವರು, ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು.

ಜೆಡಿಎಸ್‌ ಮತ್ತು ಬಿಎಸ್‌ಪಿ ನಡುವಣ ಚುನಾವಣಾ ಪೂರ್ವ ಮೈತ್ರಿಯಲ್ಲಿ ಬಿಎಸ್‌ಪಿಯಿಂದ ಗೆದ್ದ ಏಕೈಕ ಅಭ್ಯರ್ಥಿಯಾಗಿರುವ ಎನ್. ಮಹೇಶ್, ವಿಧಾನಸಭೆಯ ಮೆಟ್ಟಿಲು ತುಳಿಯುವ ಮೊದಲ ಗಳಿಗೆಯಲ್ಲೇ ಸಚಿವರಾಗುವ ಅವಕಾಶ ಪಡೆದುಕೊಂಡಿದ್ದಾರೆ.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಜಯಣ್ಣ ಅವರಿಗೆ ತೀವ್ರ ಪೈಪೋಟಿ ನೀಡಿ ಅಲ್ಪ ಅಂತರದಿಂದ ಸೋಲು ಅನುಭವಿಸಿದ್ದ ಎನ್. ಮಹೇಶ್, ಈ ಬಾರಿ ಕಾಂಗ್ರೆಸ್‌ನ ಎ.ಆರ್. ಕೃಷ್ಣಮೂರ್ತಿ ಎದುರು ಗೆಲುವು ಸಾಧಿಸಿದ್ದರು.

ಸಮಾಜ ಕಲ್ಯಾಣ ಖಾತೆ?

ಸಮಾಜ ಕಲ್ಯಾಣ ಖಾತೆ?

ಎನ್. ಮಹೇಶ್ ಅವರು ರಾಜ್ಯದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿ ಬಹುಜನ ಸಮಾಜ ಪಕ್ಷದ ಏಕಮಾತ್ರ ಸಚಿವರೂ ಹೌದು.

ಸಮಾಜ ಕಲ್ಯಾಣ ಇಲಾಖೆಯಲ್ಲಿ ಈ ಮೊದಲು ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಅನುಭವ ಇರುವ ಎನ್. ಮಹೇಶ್ ಅವರಿಗೆ ಸಮಾಜ ಕಲ್ಯಾಣ ಖಾತೆ ದೊರಕಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಎನ್. ಮಹೇಶ್ ಜನಸೇವಾ ಕೇಂದ್ರದ ಮೂಲಕ ವಿವಿಧ ಸೇವಾಕಾರ್ಯಗಳನ್ನು ಮಾಡುತ್ತಿರುವ ಅವರು, ಕೊಳ್ಳೇಗಾಲ ಹಾಗೂ ಜಿಲ್ಲೆಯ ವಿವಿಧೆಡೆ ಬಿಎಸ್‌ವಿ ವಿದ್ಯಾರ್ಥಿ ಘಟಕವನ್ನು ಬಲಪಡಿಸಿದ್ದರು.

ನರೇಂದ್ರ ಅವರಿಗೆ ನಿಗಮ/ಮಂಡಳಿ?

ನರೇಂದ್ರ ಅವರಿಗೆ ನಿಗಮ/ಮಂಡಳಿ?

ಪುಟ್ಟರಂಗಶೆಟ್ಟಿ ಅವರಂತೆಯೇ ಹ್ಯಾಟ್ರಿಕ್ ಗೆಲುವು ಸಾಧಿಸಿದ ಕೀರ್ತಿಗೆ ಪಾತ್ರರಾಗಿರುವವರು ಜಿಲ್ಲೆಯ ಹನೂರು ವಿಧಾನಸಭೆ ಕ್ಷೇತ್ರದ ಶಾಸಕ ಆರ್. ನರೇಂದ್ರ.

ಬಿಜೆಪಿಯಿಂದ ಸ್ಪರ್ಧಿಸಿದ್ದ ಪರಿಮಳಾ ನಾಗಪ್ಪ ಅವರ ಮಗ ಪ್ರೀತನ್ ನಾಗಪ್ಪ ಅವರ ಎದುರು ನರೇಂದ್ರ ಜಯಗಳಿಸಿದ್ದರು.

ಸತತ ಮೂರನೇ ಗೆಲುವು ಸಾಧಿಸಿದ್ದರೂ ನರೇಂದ್ರ ಅವರಿಗೆ ಮೈತ್ರಿ ಸರ್ಕಾರದಲ್ಲಿ ಸಚಿವರಾಗುವ ಅವಕಾಶ ದೊರೆತಿಲ್ಲ. ನರೇಂದ್ರ ಅವರ ತಂದೆ ರಾಜೂಗೌಡ ಈ ಹಿಂದೆ ಸಚಿವರಾಗಿದ್ದರು.

ಸಚಿವ ಸ್ಥಾನ ಸಿಗದೆ ಇದ್ದರೂ, ಹಿರಿತನ ಆಧಾರದಲ್ಲಿ ನರೇಂದ್ರ ಅವರಿಗೆ ಯಾವುದಾದರೂ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ಸಿಗುವುದು ಖಚಿತ ಎನ್ನಲಾಗುತ್ತಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Having only four constituencies, Chamarajanagar district has got two ministers in coalition government. C. Puttarangashetty became the first minister who represents Chamarajanagar constituency and BSP's alone MLA, N. Mahesh also entered cabinet under JDS qouta.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more