• search
  • Live TV
ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಳಿಗಿರಿ ರಂಗನಾಥನ ಬೆಟ್ಟ ಇನ್ಮುಂದೆ ಪರಿಸರ ಸೂಕ್ಷ್ಮವಲಯ; ವಾಣಿಜ್ಯ ಚಟುವಟಿಕೆಗೆ ಬ್ರೇಕ್!

|

ಚಾಮರಾಜನಗರ, ನವೆಂಬರ್ 27: ಜಿಲ್ಲೆಯ ಬಿಳಿಗಿರಿರಂಗನಾಥಸ್ವಾಮಿ ದೇವಾಲಯ ಸೇರಿದಂತೆ ಸುತ್ತಮುತ್ತಲಿನ ಹುಲಿ ಸಂರಕ್ಷಿತ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಘೋಷಿಸಿರುವ ಹಿನ್ನೆಲೆಯಲ್ಲಿ ಇನ್ಮುಂದೆ ಇಲ್ಲಿನ ಹತ್ತು ಹಲವು ಚಟುವಟಿಕೆಗಳಿಗೆ ಕಡಿವಾಣ ಬೀಳಲಿದೆ.

ಈಗಾಗಲೇ ಬಿಳಿಗಿರಿರಂಗನಾಥಸ್ವಾಮಿ ದೇವಾಲಯ ವ್ಯಾಪ್ತಿಯ ಸುತ್ತಲೂ ೦.5 ಕಿ.ಮೀ.ನಿಂದ 6ಕಿ.ಮೀ.ವರೆಗಿನ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಿ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಗೆಜೆಟ್ ಅಧಿಸೂಚನೆ ಹೊರಡಿಸಿದ್ದು, ಇದರಿಂದ ಜಿಲ್ಲೆಯ ಯಳಂದೂರು, ಕೊಳ್ಳೇಗಾಲ ಮತ್ತು ಚಾಮರಾಜನಗರ ತಾಲೂಕಿನ 49 ಗ್ರಾಮಗಳು ಸೇರಿದಂತೆ ಒಟ್ಟು 262.43 ಚದರ ಕಿ.ಮೀ ವ್ಯಾಪ್ತಿಯ ಪ್ರದೇಶ ಪರಿಸರ ಸೂಕ್ಷ್ಮ ವಲಯ ಪ್ರದೇಶದಲ್ಲಿ ಬರುತ್ತದೆ. ಐದು ಗ್ರಾಮಗಳನ್ನು ಬಿಟ್ಟರೆ ಉಳಿದ ಎಲ್ಲ ಗ್ರಾಮಗಳು ಸೂಕ್ಷ್ಮ ವಲಯದಲ್ಲೇ ಬರುತ್ತವೆ ಎಂಬುದನ್ನು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.

 ವಾಣಿಜ್ಯ ಚಟುವಟಿಕೆಗಳಿಗೆ ಕಡಿವಾಣ

ವಾಣಿಜ್ಯ ಚಟುವಟಿಕೆಗಳಿಗೆ ಕಡಿವಾಣ

ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯವು ನವೆಂಬರ್ 19ರಂದು ಅಧಿಸೂಚನೆಯನ್ನು ಹೊರಡಿಸಿದ್ದು, ಇನ್ಮುಂದೆ ಈ ಪ್ರದೇಶದಲ್ಲಿರುವ ಸುಮಾರು 25ಕ್ಕೂ ಹೆಚ್ಚು ವಾಣಿಜ್ಯ ಚಟುವಟಿಕೆಗಳಿಗೆ ಕಡಿವಾಣ ಬೀಳುವುದು ಖಚಿತವಾಗಿದೆ. ಜೊತೆಗೆ ಪರಿಸರಕ್ಕೆ, ವನ್ಯಪ್ರಾಣಿಗಳಿಗೆ ತೊಂದರೆಯಾಗುವ ಯಾವ ಚಟುವಟಿಕೆಯನ್ನು ನಡೆಸುವಂತಿಲ್ಲ ಎಂದು ಕಟ್ಟುನಿಟ್ಟಾಗಿ ಆದೇಶ ನೀಡಲಾಗಿದೆ.

ಆದರೆ ಮಳೆ ನೀರು ಸಂಗ್ರಹ, ಸಾವಯವ ಕೃಷಿ, ಪರಿಸರ ತಂತ್ರಜ್ಞಾನ ಅಳವಡಿಕೆ, ಪರಿಸರ ಸಾರಿಗೆ, ಗುಡಿ ಕೈಗಾರಿಕೆ ಸೇರಿದಂತೆ ಪರಿಸರಸ್ನೇಹಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವಂತೆ ಸೂಚನೆ ನೀಡಲಾಗಿದೆ. ಇದರೊಂದಿಗೆ ಪರಿಸರ ಸೂಕ್ಷ್ಮವಲಯಕ್ಕಾಗಿ ರಾಜ್ಯ ಸರ್ಕಾರವು ವಿವಿಧ ಇಲಾಖೆಗಳೊಂದಿಗೆ ಚರ್ಚಿಸಿ ಇನ್ನು ಎರಡು ವರ್ಷಗಳಲ್ಲಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಬೇಕು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ. ಘೋಷಿತ ವಲಯದ ಸಂರಕ್ಷಣೆಗಾಗಿ ಮೈಸೂರು ವಿಭಾಗದ ಆಯುಕ್ತರ ನೇತೃತ್ವದಲ್ಲಿ 13 ಸದಸ್ಯರ ಮೇಲ್ವಿಚಾರಣಾ ಸಮಿತಿಯನ್ನೂ ಕೇಂದ್ರ ಸರ್ಕಾರ ರಚಿಸಿದೆ.

ಇನ್ನು ಪರಿಸರ ಸೂಕ್ಷ್ಮವಲಯ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ರೈತರು ನಡೆಸುತ್ತಿರುವ ಕೃಷಿ ಚಟುವಟಿಕೆ, ಡೇರಿ ಸೇರಿದಂತೆ ವ್ಯವಸಾಯಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ ಮೇಲ್ವಿಚಾರಣಾ ಸಮಿತಿಯು ಚಟುವಟಿಕೆಗಳ ಮೇಲೆ ನಿಗಾ ಇಡುತ್ತದೆ ಎಂದು ಬಿಆರ್ ‌ಟಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ.ಶಂಕರ್ ತಿಳಿಸಿದ್ದಾರೆ.

ಮಲೆ ಮಹದೇಶ್ವರ ವನ್ಯಧಾಮದಲ್ಲಿ ಅಭಿವೃದ್ಧಿ ಚಟುವಟಿಕೆಗೆ ತಡೆ

 ಅಪರೂಪದ ವನ್ಯಜೀವಿಗಳ ಆವಾಸ ಸ್ಥಾನ

ಅಪರೂಪದ ವನ್ಯಜೀವಿಗಳ ಆವಾಸ ಸ್ಥಾನ

574.82 ಚದರ ಕಿ.ಮೀ ವ್ಯಾಪ್ತಿಯ ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನ ರಕ್ಷಿತಾರಣ್ಯವನ್ನು 2011ರ ಜನವರಿ 24ರಂದು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲಾಗಿತ್ತು. ಅಪರೂಪದ ಪ್ರಾಣಿ ಹಾಗೂ ಸಸ್ಯ ಸಂಕುಲಗಳಿಗೆ ಆಶ್ರಯ ನೀಡಿರುವ ಬಿಆರ್ ‌ಟಿಯಲ್ಲಿ 35ರಿಂದ 50 ಹುಲಿಗಳಿವೆ ಎಂದು ಅಂದಾಜಿಸಲಾಗಿದೆ.

ಇದಲ್ಲದೆ 28 ಪ್ರಭೇದದ ಸಸ್ತನಿಗಳು, 274 ಬಗೆಯ ಹಕ್ಕಿಗಳು, 14 ಪ್ರಭೇದಗಳ ಉಭಯಚರಗಳು, 23 ಜಾತಿಯ ಸರೀಸೃಪಗಳು, 1,350 ಬಗೆಯ ಗಿಡಮರಗಳು, 145 ಬಗೆಯ ಚಿಟ್ಟೆಗಳು, 886 ಗಿಡಮೂಲಿಕೆಗಳು ಹಾಗೂ 25 ಆರ್ಕಿಡ್ ಪ್ರಭೇದಗಳು ಇಲ್ಲಿ ಬದುಕು ಕಟ್ಟಿಕೊಂಡಿವೆ.

 ಸೂಕ್ಷ್ಮ ವಲಯಕ್ಕೊಳಪಡುವ ಗ್ರಾಮಗಳು

ಸೂಕ್ಷ್ಮ ವಲಯಕ್ಕೊಳಪಡುವ ಗ್ರಾಮಗಳು

ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನ, ಎಮ್ಮೆಹಟ್ಟಿ, ಹೊನ್ನಮೆಟ್ಟಿ, ಬೇಡಗುಳಿ, ಚಿಕ್ಕಮುದ್ದಹಳ್ಳಿ, ದೊಡ್ಡಮುದ್ದಹಳ್ಳಿ, ಪುಣಜನೂರು, ಪುಣಜನೂರು ರಾಜ್ಯ ಅರಣ್ಯ, ಹೊನ್ನೇಗೌಡನಗುಂಡಿ, ಹರದನಹಳ್ಳಿ ಜಿಲ್ಲಾ ಅರಣ್ಯ, ಅಟ್ಟುಗೂಳಿಪುರ, ಹೊಂಗಲವಾಡಿ, ಕುಂಬೇಶ್ವರ ಕಾಲೊನಿ, ಅಯ್ಯನಪುರ, ಮಲ್ಲದೇವನಹಳ್ಳಿ, ಹರದನಹಳ್ಳಿ ಜಿಲ್ಲಾ ಅರಣ್ಯ, ಹೊಂಡರಬಾಳು, ಜ್ಯೋತಿಗೌಡನಪುರ (1 ಕಿ.ಮೀ ವ್ಯಾಪ್ತಿ), ಮೇಲುಮಾಳ, ತಿಮ್ಮೇಗೌಡನಪಾಳ್ಯ, ಯರಗಂಬಳ್ಳಿ (1 ಕಿ.ಮೀ ವ್ಯಾಪ್ತಿ), ಗುಂಬಳ್ಳಿ (1 ಕಿ.ಮೀ ವ್ಯಾಪ್ತಿ), ವಡ್ಡಗೆರೆ, ಗೌಡಹಳ್ಳಿ, ಆಲ್ಕೆರೆ ಅಗ್ರಹಾರ, ಜೋಡಿಮೇಲ್ಲಹಳ್ಳಿ, ಮಲಾರಪಾಳ್ಯ, ದೇವರಹಳ್ಳಿ, ಶಿವಕಹಳ್ಳಿ, ಅರೆಪಾಳ್ಯ, ಸೂರಾಪುರ, ಜಕ್ಕಳ್ಳಿ ದೊಡ್ಡಿ, ತಿಮ್ಮರಾಜಿಪುರ, ಹೊಂಡರಬಾಳು, ಮಧುವನಹಳ್ಳಿ, ಹರುವನಪುರ, ಲಕ್ಷ್ಮಿಪುರ, ಹೊನ್ನ ಬೀರಬೆಟ್ಟ, ಚೆನ್ನಲಿಂಗನಹಳ್ಳಿ, ಚಿಕ್ಕ ಮಾಲಾಪುರ, ಸೀರಗೋಡು, ಲಕ್ಕನಹಳ್ಳಿ, ಮಾವತ್ತೂರು, ಗುಂಡಿಮಾಳ, ಅರಬಿಕೆರೆ, ಪರಸೆಗೌಡನಪಾಳ್ಯ, ಉತ್ತೂರು ಮತ್ತು ಬೈಲೂರು ಮೊದಲಾದ ಗ್ರಾಮಗಳು ಸೂಕ್ಷ್ಮ ವಲಯಕ್ಕೊಳಪಡಲಿವೆ.

ಬನ್ನೇರುಘಟ್ಟ ಪರಿಸರ ಸೂಕ್ಷ್ಮ ವಲಯ ಪ್ರದೇಶ ಕಡಿತ!

 ಯಾವ್ಯಾವ ಚಟುವಟಿಕೆ ನಡೆಸುವಂತಿಲ್ಲ?

ಯಾವ್ಯಾವ ಚಟುವಟಿಕೆ ನಡೆಸುವಂತಿಲ್ಲ?

ವಾಣಿಜ್ಯ ಗಣಿಗಾರಿಕೆ, ಕಲ್ಲು ಕ್ವಾರಿ ಹಾಗೂ ಕ್ರಶಿಂಗ್ ಘಟಕಗಳು, ನೀರು, ಗಾಳಿ, ಮಣ್ಣು ಹಾಗೂ ಶಬ್ದಮಾಲಿನ್ಯ ಉಂಟುಮಾಡುವ ಉದ್ಯಮಗಳ ಸ್ಥಾಪನೆ, ದೊಡ್ಡ ಜಲವಿದ್ಯುತ್ ಘಟಕಗಳು, ಹಾನಿಕಾರಕ ವಸ್ತುಗಳ ಬಳಕೆ ಅಥವಾ ಉತ್ಪಾದನೆ, ಸಂಸ್ಕರಿಸಿದ ನೀರನ್ನು ನೈಸರ್ಗಿಕ ನೀರಿನ ಮೂಲಗಳಿಗೆ ಹರಿಬಿಡುವುದು, ಕಂಪನಿಗಳ ದೊಡ್ಡಮಟ್ಟದ ವಾಣಿಜ್ಯ ಉದ್ದೇಶದ ಕೋಳಿ ಹಾಗೂ ದನಕರುಗಳ ಫಾರ್ಮ್‌ಗಳು, ಮರದ ಮಿಲ್‌ಗಳು, ಇಟ್ಟಿಗೆ ಗೂಡುಗಳು, ಉರುವಲು ಕಟ್ಟಿಗೆಯ ವಾಣಿಜ್ಯ ಉದ್ದೇಶದ ಬಳಕೆ ಮೊದಲಾದವುಗಳನ್ನು ನಡೆಸುವಂತಿಲ್ಲ.

ಇದಲ್ಲದೆ, ಪರಿಸರಸ್ನೇಹಿ ಪ್ರವಾಸೋದ್ಯಮ ಉದ್ದೇಶಕ್ಕೆ ನಿರ್ಮಿಸಿಕೊಂಡಿರುವ ತಾತ್ಕಾಲಿಕ ಡೇರೆಗಳು, ಮಾಲಿನ್ಯರಹಿತ ಸಣ್ಣ ಪ್ರಮಾಣದ ಉದ್ಯಮಗಳು, ಮರಗಳ ತೆರವು, ವಿದ್ಯುತ್, ದೂರವಾಣಿ ಹಾಗೂ ಇತರೆ ಸಂಪರ್ಕ ಮಾಧ್ಯಮಗಳ ಕಂಬಗಳ ಅಳವಡಿಕೆ, ರಸ್ತೆ ವಿಸ್ತರಣೆ ಹಾಗೂ ಹೊಸ ರಸ್ತೆಗಳ ನಿರ್ಮಾಣ, ರಾತ್ರಿ ರಸ್ತೆ ಸಂಚಾರ, ಸಂಸ್ಕರಿಸಿದ ನೀರನ್ನು ನೈಸರ್ಗಿಕ ಭೂಪ್ರದೇಶಗಳಿಗೆ ಬಿಡುವುದು, ಪಾಲಿಥೀನ್ ಬ್ಯಾಗ್ ಬಳಕೆ, ವಾಣಿಜ್ಯ ಫಲಕಗಳ ಅಳವಡಿಕೆ ಮೊದಲಾದವುಗಳನ್ನು ಮಾಡಬೇಕಾದರೆ ಅನುಮತಿ ಪಡೆಯುವುದು ಕಡ್ಡಾಯ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

English summary
As the Ministry of Environment and Forests has declared that the surrounding tiger reserve area of biligiri ranganatha hill as ecologically sensitive area So there will be shut down for many commercial activities,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X