• search
 • Live TV
ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಾಮರಾಜನಗರ: ಭಯದಲ್ಲೇ ಕರ್ತವ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು

By Coovercolly Indresh
|
Google Oneindia Kannada News

ಚಾಮರಾಜನಗರ, ಜೂನ್ 16: ಹಿಂದುಳಿದ ಜಿಲ್ಲೆ ಎಂದು ಖ್ಯಾತವಾಗಿರುವ ಚಾಮರಾಜನಗರ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಇದಕ್ಕೆ ಕಾರಣಕರ್ತರು ಆರೋಗ್ಯ ಇಲಾಖೆಯ ಸಿಬ್ಬಂದಿಗಿಂತಲೂ ಮುಂಚೂಣಿಯಲ್ಲಿರುವ ಆಶಾ ಕಾರ್ಯಕರ್ತೆಯರು. ಆದರೆ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆಯುತ್ತಿದ್ದು, ಇವರು ಭಯದ ನೆರಳಲ್ಲೇ ಮನೆ ಮನೆ ತಿರುಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಚಾಮರಾಜನಗರ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಜನರು ಲಸಿಕೆ ಸ್ವೀಕರಿಸುವುದಕ್ಕೆ ನಿರಾಕರಿಸುತ್ತಿದ್ದಾರೆ. ಅಂತಹವರಿಗೆ ಜಾಗೃತಿ ಮೂಡಿಸಿ ಲಸಿಕೆ ನೀಡುವ ಕೆಲಸ ಈ ಕಾರ್ಯಕರ್ತೆಯರದ್ದು. ಜೂನ್ 9ರಂದು ತಾಲ್ಲೂಕಿನ ನಲ್ಲೂರು ಗ್ರಾಮದಲ್ಲಿ ಸ್ಥಳೀಯ ಆಶಾ ಕಾರ್ಯಕರ್ತೆಯೊಬ್ಬರು ಕೋವಿಡ್ ದೃಢಪಟ್ಟ ಮಹಿಳೆಯನ್ನು ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಿದರು ಎಂಬ ಕಾರಣಕ್ಕೆ ಆ ಮಹಿಳೆಯ ಕುಟುಂಬದವರು ಆಶಾ ಕಾರ್ಯಕರ್ತೆ ಮನೆಯ ಮುಂದೆ ಗಲಾಟೆ ಮಾಡಿದರು. ತಕ್ಷಣ ಆಶಾ ಕಾರ್ಯಕರ್ತೆ ಪೊಲೀಸ್ ಇಲಾಖೆಯ ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿ, ಪೊಲೀಸರಿಗೆ ಮಾಹಿತಿ ನೀಡಿದರು.

ಸಿಬ್ಬಂದಿ ಜೊತೆ ಗಲಾಟೆ

ಸಿಬ್ಬಂದಿ ಜೊತೆ ಗಲಾಟೆ

ವಾಹನದಲ್ಲಿ ಬಂದ ಪೊಲೀಸರು, ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಅದರ ಮುನ್ನಾ ದಿನ (ಜೂನ್ 8) ತಾಲ್ಲೂಕಿನ ಅಮಚವಾಡಿಯಲ್ಲಿ ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ನಡೆಯುತ್ತಿತ್ತು. ಈ ಸಂದರ್ಭದಲ್ಲೂ ಗ್ರಾಮದ ಕೆಲವರು ಆಶಾ ಕಾರ್ಯಕರ್ತೆ ಹಾಗೂ ಆರೋಗ್ಯ ಸಿಬ್ಬಂದಿ ಜೊತೆ ಗಲಾಟೆ ಮಾಡಿದರು. ಸ್ಥಳಕ್ಕೆ ಬಂದ ಪೊಲೀಸರು ಸಮಸ್ಯೆಯನ್ನು ಇತ್ಯರ್ಥ ಪಡಿಸಿದರು. ಇದು ಎರಡು ಉದಾಹರಣೆಗಳಷ್ಟೇ. ಕೋವಿಡ್ ಸಂಕಷ್ಟದ ಸಮಯದಲ್ಲಿ ಜೀವದ ಹಂಗು ತೊರೆದು ಮನೆ ಮನೆಗೆ ಹೋಗಿ ಸೋಂಕು ನಿಯಂತ್ರಣಕ್ಕೆ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರನ್ನು ಬೆದರಿಸುವ, ಅವಾಚ್ಯ ಶಬ್ದಗಳಿಂದ ನಿಂದಿಸುವ, ಅವರೊಂದಿಗೆ ಗಲಾಟೆ ಮಾಡುತ್ತಿರುವ ಪ್ರಕರಣಗಳು ಜಿಲ್ಲೆಯಲ್ಲಿ ಪದೇ ಪದೇ ವರದಿಯಾಗುತ್ತಿವೆ.

ಅವಾಚ್ಯ ಶಬ್ದಗಳಿಂದ ನಿಂದಿಸಿದರು

ಅವಾಚ್ಯ ಶಬ್ದಗಳಿಂದ ನಿಂದಿಸಿದರು

ಇತ್ತೀಚೆಗೆ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಅವರು ಭಾಗವಹಿಸಿದ್ದ ಟಾಸ್ಕ್‌ಫೋರ್ಸ್ ಸಭೆಯಲ್ಲಿ ಗುಂಡ್ಲುಪೇಟೆ ತಾಲ್ಲೂಕಿನ ಬಾಚಹಳ್ಳಿ ಗ್ರಾಮದ ಆಶಾ ಕಾರ್ಯಕರ್ತೆಯರೊಬ್ಬರು, "ಕೋವಿಡ್ ಪರೀಕ್ಷೆ ಅಥವಾ ಲಸಿಕೆ ಪಡೆದುಕೊಳ್ಳುವಂತೆ ತಿಳಿ ಹೇಳಿದರೂ ಗ್ರಾಮದ ಕೆಲವು ಮಂದಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕುತ್ತಾರೆ. ಆರೋಗ್ಯವಾಗಿರುವ ನಮಗೆ ಲಸಿಕೆ ಹಾಕಬೇಡಿ. ಒಂದು ವೇಳೆ ಲಸಿಕೆ ಹಾಗಿ ಆರೋಗ್ಯದಲ್ಲಿ ವ್ಯತ್ಯಯ ಉಂಟಾದರೆ ನೀವೇ ಜವಾಬ್ದಾರಿ ತೆದುಕೊಳ್ಳುತ್ತೀರಾ? ಈ ಬಗ್ಗೆ ನಮಗೆ ಬಾಂಡ್ ಪೇಪರ್‌ನಲ್ಲಿ ಬರೆದುಕೊಡಿ,'' ಎಂದು ಹೇಳುತ್ತಾರೆ ಎಂಬುದಾಗಿ ಅಳಲು ತೋಡಿಕೊಂಡಿದ್ದರು.

ಆಶಾ ಕಾರ್ಯಕರ್ತೆಯರಿಗೆ ಆತ್ಮಸ್ಥೈರ್ಯ ತುಂಬಿ

ಆಶಾ ಕಾರ್ಯಕರ್ತೆಯರಿಗೆ ಆತ್ಮಸ್ಥೈರ್ಯ ತುಂಬಿ

ಸಭೆಯಲ್ಲಿ ಮಾತನಾಡಿದ್ದ ಸಚಿವ ಎಸ್.ಸುರೇಶ್ ಕುಮಾರ್, "ಆಶಾ ಕಾರ್ಯಕರ್ತೆಯರಿಗೆ ಆತ್ಮಸ್ಥೈರ್ಯ ತುಂಬಿ ಎಂಬ ಸಲಹೆಯನ್ನು ಅಧಿಕಾರಿಗಳಿಗೆ ನೀಡಿದ್ದರು. ತಿಂಗಳಿಗೆ ಗರಿಷ್ಠ ಎಂದರೆ 7,500 ರೂ. ನಷ್ಟು ವೇತನ ಪಡೆಯುವ ಆಶಾ ಕಾರ್ಯಕರ್ತೆಯರು ಮಾಡುವ ಕೆಲಸದ ಪಟ್ಟಿ ದೊಡ್ಡದಿದೆ. ಕೋವಿಡ್ ಕಾಟ ಆರಂಭಗೊಂಡ ನಂತರ ಇದು ದುಪ್ಪಟ್ಟಾಗಿದೆ. ಮನೆ- ಮನೆಗಳಿಗೆ ತೆರಳಿ ಆತ್ಮವಿಶ್ವಾಸ ತುಂಬಿ ಜನರನ್ನು ಸಂತೈಸುವುದು, ಕುಟುಂಬಸ್ಥರ ಗಂಟಲು ದ್ರವ ಸಂಗ್ರಹ, ಸೋಂಕಿತರ ಚಲನವಲನಗಳ ಬಗ್ಗೆ ಕಣ್ಣಿಡುವುದು ಸೇರಿದಂತೆ ಸಣ್ಣ, ಪುಟ್ಟ ಕಾಯಿಲೆಗಳಿಗೂ ಶುಶ್ರೂಷೆ ಒದಗಿಸಬೇಕು.

ಸಂಬಳ ಮತ್ತು ಸಾರಿಗೆ ಹೆಚ್ಚಿಸುವ ಮನಃಸ್ಥಿತಿ ಇಲ್ಲ

ಸಂಬಳ ಮತ್ತು ಸಾರಿಗೆ ಹೆಚ್ಚಿಸುವ ಮನಃಸ್ಥಿತಿ ಇಲ್ಲ

"ಗ್ರಾಮ ಪಂಚಾಯಿತಿ ಮಟ್ಟದ ಟಾಸ್ಕ್‌ಫೋರ್ಸ್ ಸಭೆಗಳಲ್ಲಿ ಮಾಹಿತಿ ಒದಗಿಸುವುದು, ಪಿಡಿಒ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ತಾಲ್ಲೂಕು ಆಸ್ಪತ್ರೆಗಳ ಜೊತೆ ಸದಾ ಸಂಪರ್ಕದಲ್ಲಿ ಇದ್ದು, ಆಯಾ ಕ್ಷಣದ ಮಾಹಿತಿ ಒದಗಿಸುವುದು. ಇದರ ನಡುವೆ ಲಸಿಕೆ ಅಭಿಯಾನ, ವಯಸ್ಸಿನ ವರ್ಗೀಕರಣ ಮಾಡಿ ಲಸಿಕೆ ಕೊಡಿಸಲು ಸಿದ್ಧತೆ ಮಾಡುವುದು, ಇದರ ಜೊತೆಗೆ ತಮ್ಮ ಆರೋಗ್ಯ ಹಾಗೂ ಕುಟುಂಬದವರ ಯೋಗ ಕ್ಷೇಮವನ್ನೂ ನೋಡಿಕೊಳ್ಳಬೇಕು. ಇಷ್ಟೆಲ್ಲ ಕೆಲಸಗಳನ್ನು ಮಾಡಿದರೂ ಸಂಬಳ ಮತ್ತು ಸಾರಿಗೆ ಹೆಚ್ಚಿಸುವ ಮನಃಸ್ಥಿತಿ ಯಾರಿಗೂ ಇಲ್ಲ,'' ಎಂದು ಆಶಾ ಕಾರ್ಯಕರ್ತೆಯರು ಅಳಲು ತೋಡಿಕೊಳ್ಳುತ್ತಾರೆ.

ಅದೃಷ್ಟವಶಾತ್ ಇದುವರೆಗೆ ಜೀವ ಹಾನಿ ಸಂಭವಿಸಿಲ್ಲ

ಅದೃಷ್ಟವಶಾತ್ ಇದುವರೆಗೆ ಜೀವ ಹಾನಿ ಸಂಭವಿಸಿಲ್ಲ

ಚಾಮರಾಜನಗರ ಜಿಲ್ಲೆಯಲ್ಲಿ 796 ಮಂದಿ ಆಶಾ ಕಾರ್ಯಕರ್ತೆಯರಿದ್ದಾರೆ. ಇದುವರೆಗೆ 30 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಅದೃಷ್ಟವಶಾತ್ ಇದುವರೆಗೆ ಜೀವ ಹಾನಿ ಸಂಭವಿಸಿಲ್ಲ."ಆರೋಗ್ಯ ಇಲಾಖೆ ಸೂಚಿಸುವ ಎಲ್ಲ ಕೆಲಸಗಳನ್ನು ಮಾಡುವ ತಮಗೆ ಸರ್ಕಾರ ಸೂಕ್ತ ಸಂಭಾವನೆ ಕೊಡುವುದಿಲ್ಲ. ಸಾರಿಗೆ ಹಾಗೂ ಇತರ ಸೌಲಭ್ಯಗಳೂ ಸರಿಯಾಗಿ ಸಿಗುವುದಿಲ್ಲ. ಕೋವಿಡ್ ಸಂದರ್ಭದಲ್ಲಿ ಎಲ್ಲ ಆಶಾ ಕಾರ್ಯಕರ್ತೆಯರಿಗೆ ಇಲಾಖೆ ಮಾಸ್ಕ್, ಸ್ಯಾನಿಟೈಸರ್, ಇತರ ಸುರಕ್ಷತಾ ಸಲಕರಣೆಗಳನ್ನು ಪೂರೈಸಿರಲಿಲ್ಲ'' ಎಂಬುದು ಅವರ ಆರೋಪ.

7,500– 8,000 ರೂ. ಸಂಬಳ ಬರುತ್ತದೆ

7,500– 8,000 ರೂ. ಸಂಬಳ ಬರುತ್ತದೆ

ಇತ್ತೀಚೆಗೆ ಗ್ರಾಮ ಪಂಚಾಯಿತಿಗಳಿಂದ ತಲಾ ಎರಡು ಮಾಸ್ಕ್, ಸ್ಯಾನಿಟೈಸರ್ ವಿತರಿಸಲಾಗಿದೆ. ಜೀವದ ಹಂಗು ತೊರೆದು ಕೋವಿಡ್ ಕಷ್ಟಕಾಲದಲ್ಲೂ ಕೆಲಸ ಮಾಡುತ್ತಿದ್ದೇವೆ. ಆದರೆ ಸರ್ಕಾರದಿಂದ ಸರಿಯಾದ ಉತ್ತೇಜನ, ಸೌಲಭ್ಯ ಸಿಗುತ್ತಿಲ್ಲ. ಗೌರವಧನ, ಪ್ರೋತ್ಸಾಹ ಧನ ಸೇರಿ ತಿಂಗಳಿಗೆ ಗರಿಷ್ಠ 7,500- 8,000 ರೂ. ಸಂಬಳ ಬರುತ್ತದೆ. ತಿಂಗಳಿಗೆ 12 ಸಾವಿರ ರೂ. ಗೌರವಧನ ನಿಗದಿ ಮಾಡಿ ಎಂದು ಹಲವು ಸಮಯದಿಂದ ಒತ್ತಾಯಿಸುತ್ತಲೇ ಬಂದಿದ್ದೇವೆ. ನಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸುತ್ತಲೇ ಇಲ್ಲ,'' ಎಂದು ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಕವಿತ ತಿಳಿಸಿದರು.

ಮನೆಗಳಿಗೆ ಹೋದರೆ ವಿಚಿತ್ರವಾಗಿ ನೋಡುತ್ತಾರೆ

ಮನೆಗಳಿಗೆ ಹೋದರೆ ವಿಚಿತ್ರವಾಗಿ ನೋಡುತ್ತಾರೆ

"ಕೋವಿಡ್ ಸಮಯದಲ್ಲಿ ನಾವು ಮಾಡುತ್ತಿರುವ ಕೆಲಸದ ಬಗ್ಗೆ ಹೆಮ್ಮೆ ಇದೆ. ಗ್ರಾಮೀಣ ಭಾಗಗಳಲ್ಲಿ ಮನೆ ಮನೆಗೆ ತೆರಳಿ ಆರೋಗ್ಯ ಸೇವೆ ನೀಡುತ್ತಾ ಗೌರವ ಸಂಪಾದಿಸಿದ್ದೆವು. ಜನರು ತಮ್ಮನ್ನು ಮನೆಯೊಳಕ್ಕೆ ಕರೆದು, ಮಾತನಾಡಿಸುತ್ತಿದ್ದರು. ಅವರ ಆರೋಗ್ಯ ಸಮಸ್ಯೆ, ಕಷ್ಟ ಸುಖಗಳನ್ನು ಹೇಳಿಕೊಳ್ಳುತ್ತಿದ್ದರು. ಆದರೆ, ಕೋವಿಡ್ ಬಂದ ನಂತರ ಬಹುತೇಕ ಕಡೆಗಳಲ್ಲಿ ನಾವು ಮನೆಗಳಿಗೆ ಹೋದರೆ ವಿಚಿತ್ರವಾಗಿ ನೋಡುತ್ತಾರೆ. ಅಸ್ಪೃಶ್ಯರಂತೆ ಕಾಣುತ್ತಿದ್ದಾರೆ. ಕೆಲವು ಜನರ ವರ್ತನೆಯಿಂದ ಮಾನಸಿಕ ಹಿಂಸೆ ಅನುಭವಿಸುತ್ತಿದ್ದೇವೆ.''

  ಜೂನ್ 21ರಿಂದ unlock ಪ್ರಕ್ರಿಯೆ ಶುರು ! | Oneindia Kannada
  ಜನಪ್ರತಿನಿಧಿಗಳ ಸಹಕಾರವೂ ಸಿಗುತ್ತಿಲ್ಲ

  ಜನಪ್ರತಿನಿಧಿಗಳ ಸಹಕಾರವೂ ಸಿಗುತ್ತಿಲ್ಲ

  "ಕೆಲವು ಕಡೆಗಳಲ್ಲಿ ಸಾಮಾಜಿಕವಾಗಿ, ದೈಹಿಕವಾಗಿಯೂ ತೊಂದರೆಯಾಗಿದೆ. ಇದರಿಂದಾಗಿ ಆಶಾ ಕಾರ್ಯಕರ್ತೆಯರ ಮನೆಗಳಲ್ಲೂ ಸಮಸ್ಯೆಯಾಗುತ್ತಿದೆ. ಕೆಲವು ಕಡೆ ನಮಗೆ ಸ್ಥಳೀಯ ಜನಪ್ರತಿನಿಧಿಗಳ ಸಹಕಾರವೂ ಸಿಗುತ್ತಿಲ್ಲ. ಇತ್ತೀಚೆಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಟಾಸ್ಕ್‌ಫೋರ್ಸ್ ಸಮಿತಿ ರಚನೆಯಾದ ಬಳಿಕ ಹಾಗೂ ಪೊಲೀಸರು ಕೂಡ ಸಹಾಯಕ್ಕೆ ಬರಲು ಆರಂಭಿಸಿದ ನಂತರ ನಮಗೆ ಸ್ವಲ್ಪ ಸಮಾಧಾನವಾಗಿದೆ. ಏನಾದರೂ ತೊಂದರೆಯಾದರೆ ಸಮಿತಿಗೆ ತಿಳಿಸುತ್ತೇವೆ, ಪೊಲೀಸರನ್ನು ಸಂಪರ್ಕಿಸುತ್ತೇವೆ.''

  "ಒಂದು ಕೋವಿಡ್ ಪ್ರಕರಣ ಪತ್ತೆ ಮಾಡಿದರೆ ಎಷ್ಟು ದುಡ್ಡು ಕೊಡುತ್ತಾರೆ ಎಂದು ಜನ ಕೇಳುತ್ತಾರೆ. ನಮಗೆ ಏನೂ ಸಿಗುವುದಿಲ್ಲ. ಜನರಿಗೆ ಯಾರೋ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದೂ,'' ಅವರು ಹೇಳಿದರು. ರಾಜ್ಯ ಸರ್ಕಾರ ಆಶಾ ಕಾರ್ಯಕರ್ತೆಯರಿಗೆ ಸಂಬಳ ಹೆಚ್ಚಿಸಿ ಭದ್ರತೆಯನ್ನೂ ಒದಗಿಸಿಕೊಟ್ಟರೆ ಮಾತ್ರ ಸಾಂಕ್ರಮಿಕ ನಿಯಂತ್ರಣಕ್ಕೆ ಬರುತ್ತದೆ.

  English summary
  Due to the efforts of Asha activists, the number of Covid cases in Chamarajanagar district has decreased.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X