ಕಳ್ಳತನವಾಗಿದ್ದ 50 ಲಕ್ಷ ರೂ ಪಾನ್ ಮಸಾಲಾ ತಮಿಳುನಾಡಿನಲ್ಲಿ ಪತ್ತೆ
ಚಾಮರಾಜನಗರ, ನವೆಂಬರ್ 24: ಕಳ್ಳತನದ ದೂರು ಸ್ವೀಕರಿಸಿದ 12 ಗಂಟೆಗಳ ಒಳಗೇ 50 ಲಕ್ಷ ರೂಪಾಯಿ ಮೌಲ್ಯದ ಪಾನ್ ಮಸಾಲಾವನ್ನು ಜಿಲ್ಲೆಯ ಪೊಲೀಸರು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಸೋಮವಾರದ ಮುಂಜಾನೆ ನಗರದ ಹೊರವಲಯದಲ್ಲಿರುವ ಕೋಲಿಪಾಳ್ಯದಲ್ಲಿರುವ ತಂಬಾಕು ಉತ್ಪನ್ನಗಳ ಗೋಡೌನ್ ನಿಂದ 50 ಲಕ್ಷ ರೂಪಾಯಿ ಮೌಲ್ಯದ ಪಾನ್ ಮತ್ತು ತಂಬಾಕು ಉತ್ಪನ್ನಗಳನ್ನು ಕಳ್ಳತನ ಮಾಡಲಾಗಿತ್ತು. ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಇವುಗಳನ್ನು ತಮಿಳುನಾಡಿನ ಧರ್ಮಪುರಿ ತಾಲ್ಲೂಕಿನ ತಿರ್ಪುರ ಎಂಬಲ್ಲಿ ಪತ್ತೆ ಮಾಡಿ ವಶಪಡಿಸಿಕೊಂಡಿದ್ದಾರೆ.
ಈ ಪ್ರಕರಣದ ಮುಖ್ಯ ಆರೋಪಿ ಅಬುಥಲ (21) ಎಂಬಾತನನ್ನು ಬಂಧಿಸಲಾಗಿದ್ದು, ಉಳಿದ ಹನ್ನೊಂದು ಜನರು ತಲೆ ಮರೆಸಿಕೊಂಡಿದ್ದಾರೆ.
ಮಹಾವೀರ್ ಮಾರ್ಕೆಟಿಂಗ್ ನ ಮಾಲೀಕರಾದ ವ್ಯಾಪಾರಿ ಬನ್ವರ್ ಲಾಲ್ ಅವರು ತಂಬಾಕು ಉತ್ಪನ್ನವನ್ನು ಗೋಡೌನ್ ನಲ್ಲಿ ಸಂಗ್ರಹಿಸಿದ್ದರು. ಇದನ್ನು ಗೋಡೌನ್ ಬೀಗ ಮುರಿದು ಎರಡು ಲಾರಿಗಳಲ್ಲಿ ಕಳ್ಳತನ ಮಾಡಿ ತಮಿಳುನಾಡಿನಲ್ಲಿ ಮಾರಾಟ ಮಾಡಲು ಕಳ್ಳರು ಯೋಜಿಸಿದ್ದರು. ಎಸ್ಪಿ ದಿವ್ಯಾ ಸಾರಾ ಥಾಮಸ್ ಅವರು ತ್ವರಿತವಾಗಿ ಪ್ರಕರಣ ಭೇದಿಸಿದ ಪೊಲೀಸ್ ತಂಡವನ್ನು ಶ್ಲಾಘಿಸಿದ್ದು, ನಗದು ಬಹುಮಾನವನ್ನು ಘೋಷಿಸಿದ್ದಾರೆ.