ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಜಿಡಿಪಿ ದರ ಶೇ. 7.5: ಎರಡನೇ ಬಾರಿ ವಿಶ್ವಬ್ಯಾಂಕ್ ಅಂದಾಜು ಬದಲಾವಣೆ

|
Google Oneindia Kannada News

ನವದೆಹಲಿ, ಜೂನ್ 7: ಕೋವಿಡ್‌ನಿಂದ ಚೇತರಿಸಿಕೊಂಡು ಓಡಲು ಸಿದ್ಧವಾಗಿದ್ದ ಭಾರತದ ಆರ್ಥಿಕತೆಗೆ ಈಗ ಸ್ವಲ್ಪ ತೊಡರುಗಾಲು ಬಿದ್ದಿದೆ. ಈ ಹಣಕಾಸು ವರ್ಷದಲ್ಲಿ (2022 ಏಪ್ರಿಲ್‌ನಿಂದ 2023 ಮಾರ್ಚ್‌ವರೆಗಿನ ಅವಧಿ) ಭಾರತದ ಜಿಡಿಪಿ ಶೇ. 7.5ರಷ್ಟು ಮಾತ್ರ ಏರಿಕೆ ಕಾಣಬಹುದು ಎಂದು ವಿಶ್ವಬ್ಯಾಂಕ್ ಅಂದಾಜು ಮಾಡಿದೆ. ಈ ಹಣಕಾಸು ವರ್ಷಕ್ಕೆ ವಿಶ್ವಬ್ಯಾಂಕ್ ಎರಡನೇ ಬಾರಿ ತನ್ನ ಅಂದಾಜನ್ನು ಬದಲಾಯಿಸಿದಂತಾಗಿದೆ.

ಹಣದುಬ್ಬರ ಏರಿಕೆ, ರಷ್ಯಾ ಉಕ್ರೇನ್ ಯುದ್ಧ ಇತ್ಯಾದಿ ಕಾರಣಗಳಿಂದ ಜಾಗತಿಕವಾಗಿ ಆರ್ಥಿಕ ಹಿಂಜರಿತವಾಗಿದ್ದು, ಅದರ ಪರಿಣಾಮ ಭಾರತದ ಮೇಲೂ ಆಗುತ್ತಿದೆ. ಇದೇ ಕಾರಣಕ್ಕೆ ಭಾರತದ ಜಿಡಿಪಿ ಬೆಳವಣಿಗೆಯ ವೇಗ ನಿರೀಕ್ಷಿತ ಮಟ್ಟದಲ್ಲಿ ಸಾಗುವುದು ಅನುಮಾನ ಇದೆ. ವಿಶ್ವಬ್ಯಾಂಕ್ ತನ್ನ ಮೂಲ ಅಂದಾಜನ್ನು ಎರಡು ಬಾರಿ ಪರಿಷ್ಕರಿಸಲು ಇದೇ ಕಾರಣವಾಗಿದೆ.

ಹಣದುಬ್ಬರ ವಿರುದ್ಧ ಬಡಿದಾಟ; ಜಾಗತಿಕವಾಗಿ ಪರಿಸ್ಥಿತಿ ಹೇಗಿದೆ?ಹಣದುಬ್ಬರ ವಿರುದ್ಧ ಬಡಿದಾಟ; ಜಾಗತಿಕವಾಗಿ ಪರಿಸ್ಥಿತಿ ಹೇಗಿದೆ?

ಭಾರತದ ಜಿಡಿಪಿ 2020-22ರ ಹಣಕಾಸು ವರ್ಷದಲ್ಲಿ ಶೇ. 8.7ರಷ್ಟು ವೃದ್ಧಿ ಕಂಡಿತ್ತು. ಈ ಹಣಕಾಸು ವರ್ಷದಲ್ಲೂ ಶೇ. 8.7ರಷ್ಟು ಜಿಡಿಪಿ ವೃದ್ಧಿ ಆಗಬಹುದು ಎಂದು ವಿಶ್ವಬ್ಯಾಂಕ್ ಮೊದಲಿಗೆ ಅಂದಾಜು ಮಾಡಿತು. ನಂತರ ಏಪ್ರಿಲ್ ತಿಂಗಳಲ್ಲಿ ಆ ದರವನ್ನು ಶೇ 8ಕ್ಕೆ ಇಳಿಸಿತು. ಈಗ ಎರಡನೇ ಬಾರಿಯೂ ಬದಲಾವಣೆ ಮಾಡಿ ಶೇ 7.5ಕ್ಕೆ ಅದನ್ನು ತಗ್ಗಿಸಿದೆ.

World Bank Downs Its GDP Growth Estimate for India to 7.5 pc

ಹಣದುಬ್ಬರ ಹೆಚ್ಚುತ್ತಿರುವುದು, ಸರಬರಾಜು ಸರಪಳಿ ವ್ಯವಸ್ಥೆ ದುರ್ಬಲಗೊಂಡಿರುವುದು, ವಿಶ್ವ ರಾಜಕೀಯ ಸಮಸ್ಯೆಗಳು ಭಾರತದ ಆರ್ಥಿಕ ವೃದ್ಧಿಗೆ ಅಡಚಣೆ ಆಗಿವೆ ಎಂಬುದು ವಿಶ್ವಬ್ಯಾಂಕ್ ಅನಿಸಿಕೆ. ಹಾಗೆಯೇ, ಖಾಸಗಿ ವಲಯದಿಂದ ಆಗುತ್ತಿರುವ ಹೂಡಿಕೆಗಳು ಮತ್ತು ಸರಕಾರ ಭಾರತದಲ್ಲಿ ಉದ್ಯಮ ವಾತಾವರಣಕ್ಕೆ ಪೂರಕವಾದ ಸುಧಾರಣೆಗಳನ್ನು ಕೈಗೊಂಡಿರುವುದರಿಂದ ಆರ್ಥಿಕತೆಯ ವೇಗ ತೀರಾ ಕುಸಿತಕ್ಕೆ ಒಳಗಾಗುವುದಿಲ್ಲ ಎಂಬ ಆಶಯ ಇದೆ.

ಅಮೆರಿಕವೇ ಅತಿಹೆಚ್ಚು ಸಾಲಗಾರ; ಭಾರತ, ರಷ್ಯಾ ಸೇರಿ ಪ್ರಮುಖ ದೇಶಗಳ ಸಾಲ ಎಷ್ಟೆಷ್ಟು?ಅಮೆರಿಕವೇ ಅತಿಹೆಚ್ಚು ಸಾಲಗಾರ; ಭಾರತ, ರಷ್ಯಾ ಸೇರಿ ಪ್ರಮುಖ ದೇಶಗಳ ಸಾಲ ಎಷ್ಟೆಷ್ಟು?

2022ರ ಕ್ಯಾಲೆಂಡರ್ ವರ್ಷದ ಮೊದಲಾರ್ಧದಲ್ಲಿ ಕೋವಿಡ್ ಪ್ರಕರಣಗಳ ಏರಿಕೆಯು ಆರ್ಥಿಕತೆಯ ವೇಗವನ್ನು ಇಳಿಸಿದೆ. ಉಕ್ರೇನ್ ಯುದ್ಧದಿಂದಾಗಿ ಸರಬರಾಜು ಸರಪಳಿ ವ್ಯವಸ್ಥೆಗೆ ಪೆಟ್ಟುಬಿದ್ದಿದೆ. ಹಾಗೂ ಹೀಗೂ ಚೇತರಿಸಿಕೊಳ್ಳಬಹುದು ಎಂದುಕೊಳ್ಳುವಾಗ ಹಣದುಬ್ಬರ ಎಂಬ ಸಮಸ್ಯೆ ಆರ್ಥಿಕತೆಯ ಮುನ್ನಡೆಗೆ ಅಡ್ಡಗಾಲಾಗಿ ನಿಂತಿದೆ ಎಂಬುದು ವಿಶ್ವಬ್ಯಾಂಕ್ ಸಿದ್ಧಪಡಿಸಿರುವ ವರದಿಯಲ್ಲಿ ವ್ಯಕ್ತವಾಗಿರುವ ಸಂಗತಿಯಾಗಿದೆ.

World Bank Downs Its GDP Growth Estimate for India to 7.5 pc

ಬೇರೆ ಸಂಸ್ಥೆಗಳು ಮಾಡಿರುವ ಅಂದಾಜು:
ವಿಶ್ವಬ್ಯಾಂಕ್ ಮಾತ್ರವಲ್ಲ ಇನ್ನೂ ಅನೇಕ ಗ್ಲೋಬಲ್ ರೇಟಿಂಗ್ ಸಂಸ್ಥೆಗಳೂ ಕೂಡ ಭಾರತದ ಆರ್ಥಿಕ ಬೆಳವಣಿಗೆಯ ವೇಗ ನಿರೀಕ್ಷಿತ ಮಟ್ಟದಲ್ಲಿ ಇಲ್ಲದೇ ಇರಬಹುದು ಎಂದು ಅಭಿಪ್ರಾಯಪಟ್ಟಿವೆ. ಮೂಡೀಸ್ ಸಂಸ್ಥೆ ಈ ಕ್ಯಾಲೆಂಡರ್ ವರ್ಷದಲ್ಲಿ ಭಾರತದ ಜಿಡಿಪಿ ಶೇ. 9.1ರಷ್ಟು ಇರಬಹುದು ಎಂದು ಅಂದಾಜು ಮಾಡಿತ್ತು. ಆದರೆ, ಕಳೆದ ತಿಂಗಳು ಅದು ತನ್ನ ಅಂದಾಜಿನಲ್ಲಿ ಬದಲಾವಣೆ ಮಾಡಿದ್ದು ಪ್ರಗತಿ ದರವನ್ನು ಶೇ. 8.8ಕ್ಕೆ ಇಳಿಸಿದೆ.

ಎಸ್ ಅಂಡ್ ಪಿ ಸಂಸ್ಥೆ ಕೂಡ 2022-23ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ವೃದ್ಧಿ ದರ ಶೇ. 7.8 ಇರಬಹುದು ಎಂದು ಅಂದಾಜು ಮಾಡಿತ್ತು. ಈಗ ಅದನ್ನು ಶೇ. 7.3ಕ್ಕೆ ತಗ್ಗಿಸಿದೆ.

ಫಿಚ್ ಸಂಸ್ಥೆ ಬರೋಬ್ಬರಿ ಶೇ. 10.3ರಷ್ಟು ಜಿಡಿಪಿ ಬೆಳವಣಿಗೆ ಆಗಬಹುದು ಎಂದು ಅಂದಾಜು ಮಾಡಿತ್ತಾದರೂ ಮಾರ್ಚ್ ತಿಂಗಳಲ್ಲಿ ಅದನ್ನು ಶೇ. 8.5ಕ್ಕೆ ಇಳಿಸಿದೆ. ಐಎಂಎಫ್ ಶೇ. 9ರಿಂದ ಶೇ. 8.2ಕ್ಕೆ, ಎಡಿಬಿ ಶೇ. 7.5ಕ್ಕೆ ಜಿಡಿಪಿ ವೃದ್ಧಿ ದರ ಸಾಧ್ಯತೆಯನ್ನು ಉಳಿಸಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಏಪ್ರಿಲ್ ತಿಂಗಳಲ್ಲಿ ಮಾಡಿದ ಅಂದಾಜು ಪ್ರಕಾರ ಭಾರತದ ಜಿಡಿಪಿ ವೃದ್ಧಿ ಶೇ. 7.8ರ ಬದಲು ಶೇ. 7.2ರ ದರದಲ್ಲಿ ಆಗಬಹುದು ಎನ್ನಲಾಗಿದೆ.

ಭಾರತ ಮಾತ್ರವಲ್ಲ ವಿಶ್ವದ ಬಹುತೇಕ ಆರ್ಥಿಕತೆಗಳು ಈ ವರ್ಷ ಬಹಳ ನಿಧಾನಗತಿಯ ಬೆಳವಣಿಗೆ ಕಾಣುವುದು ನಿಶ್ಚಿತವಾಗಿದೆ. ಜಾಗತಿಕ ಸರಾಸರಿ ಅಭಿವೃದ್ಧಿ 2021ರಲ್ಲಿ ಶೇ. 5.7 ಇತ್ತು. ಈ ವರ್ಷ ಅದು 2.9ಕ್ಕೆ ಇಳಿಕೆ ಕಾಣಬಹುದು ಎಂದು ಅಂದಾಜು ಮಾಡಲಾಗಿದೆ.

(ಒನ್ಇಂಡಿಯಾ ಸುದ್ದಿ)

English summary
The World Bank has cut India's economic growth forecast for fiscal year 2022-23 to 7.5 per cent. It has cited rising inflation, supply chain disruptions and geopolitical tensions as reasons behind slowing of economy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X