ಸಾಲಗಾರ ಮಲ್ಯಗೆ ಶುಭಸುದ್ದಿ ಕೊಟ್ಟ ಲಂಡನ್ ಹೈಕೋರ್ಟ್

ಲಂಡನ್, ಫೆಬ್ರವರಿ 14: 'ಕಿಂಗ್ ಆಫ್ ಗುಡ್ ಟೈಮ್ಸ್' ಉದ್ಯಮಿ, ಮಹಾನ್ ಸಾಲಗಾರ ವಿಜಯ್ ಮಲ್ಯ ಅವರಿಗೆ ಲಂಡನ್ ಹೈಕೋರ್ಟ್ ಶುಭಸುದ್ದಿ ಕೊಟ್ಟಿದೆ.
ಭಾರತದಲ್ಲಿರುವ ಎಸ್ ಬಿಐ ಸೇರಿದಂತೆ ಅನೇಕ ಬ್ಯಾಂಕ್ ಗಳಿಂದ ಸುಮಾರು 9,800 ಕೋಟಿ ರುಗಳಿಗೂ ಅಧಿಕ ಸಾಲ ಮಾಡಿದ್ದರೂ ಲಂಡನ್ನಿಗೆ ಹಾರಿರುವ ಮಲ್ಯ ಅವರು ಐಷಾರಾಮಿ ಜೀವನ ಸಾಗಿಸುತ್ತಿದ್ದಾರೆ. ಇತ್ತೀಚೆಗೆ ಸಿಂಗಪುರ ಬಿಒಸಿ ವಿರುದ್ಧ ಕೇಸು ಸೋತಿದ್ದರಿಂದ ಕಿಂಗ್ ಫಿಷರ್ ಏರ್ ಲೈನ್ಸ್ ನಿಂದ 577 ಕೋಟಿ ರು ದಂಡ ಕೂಡಾ ಕಟ್ಟಬೇಕಿದೆ.
ಮಲ್ಯ ಅವರಿಗೆ ವಾರಕ್ಕೆ 5,000 ಪೌಂಡ್ (ಸುಮಾರು 4.5 ಲಕ್ಷ ರೂಪಾಯಿ) ಖರ್ಚು ಭತ್ಯೆ ಸಿಗುತ್ತಿತ್ತು. ಇನ್ಮುಂದೆ 18,325 ಪೌಂಡ್ (16 ಲಕ್ಷ ರೂಪಾಯಿ ) ವೆಚ್ಚ ಮಾಡಲು ಹೈಕೋರ್ಟ್ ಅನುಮತಿ ನೀಡಿದೆ.
ಮಲ್ಯರ ಜೀವನ ಶೈಲಿ ಹಾಗೂ ಕಾನೂನು ಹೋರಾಟದ ಖರ್ಚು ವೆಚ್ಚಗಳ ಲೆಕ್ಕಾಚಾರದ ನಂತರ ಮಲ್ಯ ಅವರ ಖರ್ಚು ಭತ್ಯೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಕೋರ್ಟ್ ಹೇಳಿದೆ. ಭಾರತೀಯನೊಬ್ಬನ ಸರಾಸರಿ ವಾರ್ಷಿಕ ಖರ್ಚು ವೆಚ್ಚ ಸುಮಾರು 1.07 ಲಕ್ಷ ರು ನಷ್ಟಿದೆ.
ಗಡಿಪಾರು ಸಂಬಂಧ ಪ್ರಕರಣದ ವಿಚಾರಣೆಯೂ ಎದುರಿಸುತ್ತಿರುವ ಮಲ್ಯ ಅವರನ್ನು ಕಳೆದ ಏಪ್ರಿಲ್ ನಲ್ಲಿ ಬಂಧಿಸಲಾಗಿತ್ತು. ಆದರೆ, ಕೆಲ ಕ್ಷಣಗಳಲ್ಲೇ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದರು.