ಬಜೆಟ್ 2021: ಹೀಗಾದ್ರೆ, ಚಿನ್ನ, ಬೆಳ್ಳಿ ಬೆಲೆ ತಗ್ಗಲಿದೆ!
ನವದೆಹಲಿ, ಜನವರಿ 28: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಮಂಡಿಸಲಿರುವ ಕೇಂದ್ರ ಬಜೆಟ್ ಕುರಿತು ಈಗಾಗಲೇ ವಿವಿಧ ಕ್ಷೇತ್ರಗಳಿಗೆ ಆಗುವ ಲಾಭಗಳ ಬಗ್ಗೆ ಅಂದಾಜು ಮಾಡಲಾಗುತ್ತಿದೆ. ಆಭರಣ ಉದ್ಯಮವು ಮುಂಬರುವ ಬಜೆಟ್ನಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದೆ. ಆಭರಣ ಉದ್ಯಮದ ನಿರ್ದಿಷ್ಟ ಬೇಡಿಕೆಯನ್ನು ಪೂರೈಸಿದರೆ, ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುವವರೂ ಸಹ ಇದರ ಲಾಭ ಪಡೆಯುತ್ತಾರೆ.
ಜೆಮ್ ಮತ್ತು ಜ್ಯುವೆಲ್ಲರಿ ಇಂಡಸ್ಟ್ರೀಸ್ ಮುಂಬರುವ ಕೇಂದ್ರ ಬಜೆಟ್ 2021-22ರಲ್ಲಿ ಮೋದಿ ಸರ್ಕಾರದಿಂದ ಹೆಚ್ಚಿನ ಭರವಸೆ ಹೊಂದಿದೆ. ಕೇಂದ್ರ ಸರ್ಕಾರವು ಚಿನ್ನದ ಮೇಲಿನ ಕಸ್ಟಮ್ಸ್ ಸುಂಕವನ್ನು ಕಡಿಮೆ ಮಾಡುವುದು, ಮೂಲದಲ್ಲಿ ಸಂಗ್ರಹಿಸಿದ ತೆರಿಗೆಯನ್ನು ಹಿಂಪಡೆಯುವುದು, ನಯಗೊಳಿಸಿದ ಅಮೂಲ್ಯ ಮತ್ತು ಅರೆ-ಅಮೂಲ್ಯ ರತ್ನಗಳ ಮೇಲಿನ ಆಮದು ಸುಂಕವನ್ನು ಕಡಿತಗೊಳಿಸಬೇಕೆಂದು ಉದ್ಯಮವು ಬಯಸಿದೆ.
ಚಿನ್ನದ ಬೆಲೆ ಮತ್ತಷ್ಟು ಇಳಿಕೆ: ಜನವರಿ 28ರ ಬೆಲೆ ಹೀಗಿದೆ
ಅಖಿಲ ಭಾರತ ರತ್ನ ಮತ್ತು ಆಭರಣ ದೇಶೀಯ ಮಂಡಳಿಯ (ಜಿಜೆಸಿ) ಅಧ್ಯಕ್ಷರಾದ ಆಶಿಶ್ ಪೇಥೆ ಪ್ರಕಾರ, ಆಭರಣ ವ್ಯವಹಾರದ ಮೇಲೆ ಹೆಚ್ಚಿನ ಆಮದು ಸುಂಕದಿಂದಾಗಿ ಆಗಿರುವ ಋಣಾತ್ಮಕ ಪರಿಣಾಮವನ್ನು ಸರ್ಕಾರ ನಿರ್ಣಯಿಸಬೇಕು. ಸುಂಕ ಹೆಚ್ಚಳದಿಂದ ಆಗಿರುವ ದುಷ್ಪರಿಣಾಮವನ್ನು ಸರ್ಕಾರ ನಿರ್ಣಯಿಸಬೇಕು ಮತ್ತು ಕಸ್ಟಮ್ಸ್ ಸುಂಕವನ್ನು ಪ್ರಸ್ತುತ ಶೇಕಡಾ 12.5 ರಿಂದ ಶೇ. 4 ಕ್ಕೆ ಇಳಿಸಲು ಸೂಚಿಸಿದೆ. ಹೀಗಾದಲ್ಲಿ ಚಿನ್ನ ಮತ್ತು ಬೆಳ್ಳಿ ಅಗ್ಗವಾಗಬಹುದು.
ತೆರಿಗೆ ದರವನ್ನು ಕಡಿಮೆ ಮಾಡದಿದ್ದರೆ, ಅದು ಕಳ್ಳಸಾಗಣೆಯನ್ನು ಉತ್ತೇಜಿಸುತ್ತದೆ ಮತ್ತು ಅಸಂಘಟಿತ ವ್ಯಾಪಾರ ಮಾಡಲು ಜನರನ್ನು ಪ್ರೋತ್ಸಾಹಿಸುತ್ತದೆ. 2019 ರ ಬಜೆಟ್ನಲ್ಲಿ ಸರ್ಕಾರವು ಚಿನ್ನದ ಮೇಲಿನ ಸುಂಕವನ್ನು ಹೆಚ್ಚಿಸಿದೆ . ಚಿನ್ನದ ಮೇಲಿನ ಆಮದು ಸುಂಕವನ್ನು ಶೇ 12.5 ಕ್ಕೆ ಸರ್ಕಾರ ಹೆಚ್ಚಿಸಿತ್ತು. ಚಿನ್ನದ ಮೇಲೆ ಮೂರು ಪ್ರತಿಶತದಷ್ಟು ಜಿಎಸ್ಟಿ ಇದ್ದು, ಒಟ್ಟು ಸುಂಕವನ್ನು 15.5 ಕ್ಕೆ ತರುತ್ತದೆ. ಇದು ಕಳ್ಳಸಾಗಣೆ ಮತ್ತು ತೆರಿಗೆ ತಪ್ಪಿಸುವಿಕೆಯು ಕಾರಣವಾಗಬಹುದು.
ಇದರ ಜೊತೆಗೆ ಕೊರೊನಾ ಸಾಂಕ್ರಾಮಿಕದಿಂದಾಗಿ ಆಭರಣ ಉದ್ಯಮವೂ ಭಾರಿ ಹಿನ್ನಡೆ ಅನುಭವಿಸಿದೆ. 2020ರಲ್ಲಿ ಕಳೆದ 11 ವರ್ಷಗಳಲ್ಲೇ ಕಾಣದ ಚಿನ್ನದ ಬೇಡಿಕೆ ಕುಸಿತಗೊಂಡಿದೆ. ಹೀಗಾಗಿ ಆಭರಣ ವಿಭಾಗಕ್ಕೆ ಹೊಸ ತೆರಿಗೆಯನ್ನು ಪರಿಚಯಿಸದೆ, ಸುಂಕವನ್ನು ತಗ್ಗಿಸಬಹುದೆಂದು ನಿರೀಕ್ಷಿಸಲಾಗಿದೆ.