ಕೃಷಿಯ ಭವಿಷ್ಯದ ತಂತ್ರಜ್ಞಾನದ ಹೆಸರು ರೋಬಾಟಿಕ್ಸ್

By: ಪ್ರಭ್ ಪ್ರೀತ್ ಸಿಂಗ್ ಸೂದ್
Subscribe to Oneindia Kannada

ಆಂಧ್ರಪ್ರದೇಶದ ಕುಪ್ಪಂನಲ್ಲಿರುವ ರೈತರಾದ ಮುನಿರತ್ನಂ ಅವರ ಹೊಲದಲ್ಲಿ ಈ ಬಾರಿ ಸಾಮಾನ್ಯಕ್ಕಿಂತಲೂ ಅರ್ಧದಷ್ಟು ಮಾತ್ರವೇ ಇಳುವರಿ ಬಂದಿತ್ತು. ಇವರ ಮೊಬೈಲಿನಲ್ಲಿ ಅಗತ್ಯ ಮಾಹಿತಿಗಳನ್ನು ಕಳುಹಿಸಿದ್ದರೂ ಇದನ್ನು ಉಪೇಕ್ಷಿಸಿದ್ದುದೇ ಅವರಿಗೆ ಮುಳುವಾಯ್ತು. ಆದರೆ ಹಿಂದಿನ ವರ್ಷದಲ್ಲಿ ಇವರಿಗೆ ಲಭ್ಯವಾಗಿದ್ದ ಮಾಹಿತಿಯನ್ನು ಅನುಸರಿಸಿದ್ದ ಕಾರಣ ಉತ್ತಮ ಇಳುವರಿ ಲಭ್ಯವಾಗಿತ್ತು.

ಈ ಮಾಹಿತಿಗಳು ಇವರ ಮೊಬೈಲಿನಲ್ಲಿ ಲಭ್ಯವಾಗಲು ರೋಬಾಟಿಕ್ಸ್ ಎಂಬ ನೂತನ ತಂತ್ರಜ್ಞಾನದ ಬಳಕೆಯೇ ಕಾರಣವಾಗಿದೆ. ಈ ಮಾಹಿತಿಯನ್ನು ಆಧರಿಸಿ ತಮ್ಮ ಹೊಲವನ್ನು ಹಸನುಗೊಳಿಸಿದ್ದ ಕಾರಣ ಮೊದಲ ಬಾರಿಗೆ ಇವರಿಗೆ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗಿತ್ತು. ಈ ತಂತ್ರಜ್ಞಾನದ ಮೂಲಕ ಹಿಂದಿನ ವರ್ಷದ ಬೆಳೆಗಳಲ್ಲಿ ಆದ ತಪ್ಪುಗಳನ್ನು ಸರಿಪಡಿಸಿ, ಈ ಬಾರಿಯ ಬೆಳೆಯಲ್ಲಿ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುವಂತೆ ಮಾಹಿತಿಯನ್ನು ರವಾನಿಸಲಾಗಿತ್ತು.

ಇಂದಿನ ಪರಿಸ್ಥಿತಿಯಲ್ಲಿ ದೇಶದ ಹಲವು ರಾಜ್ಯಗಳ ರೈತರು ಬೆಳೆ ವಿಫಲವಾದ ಕಾರಣದಿಂದ ಸಾಲ ತೀರಿಸಲು ಸಾಧ್ಯವಾಗದೇ ಆತ್ಮಹತ್ಯೆಗೆ ಶರಣಾಗುವುದು, ಹೊಲಗದ್ದೆಗಳನ್ನು ಮಾರಿ ನಗರಕ್ಕೆ ಗುಳೆ ಹೋಗುವುದು ಮೊದಲಾದವುಗಳನ್ನು ಪರಿಗಣಿಸಿದರೆ ಮುನಿರತ್ನಂ ಅದೃಷ್ಟವಂತರು ಎಂದೇ ಹೇಳಬಹುದು. ಬೆಳೆ ವಿಫಲಗೊಳ್ಳಲು ಕೆಲವಾರು ಕಾರಣಗಳಿವೆ. ಸಕಾಲಕ್ಕೆ ಬರದ ಮಳೆ, ತಪ್ಪು ಬೀಜದ ಆಯ್ಕೆ, ಬೆಳೆಯನ್ನು ಬೆಳೆಯುವಲ್ಲಿ ಅನುಸರಿಸಬೇಕಾದ ಸರಿಯಾದ ಕ್ರಮದ ಬಗ್ಗೆ ಮಾಹಿತಿಯ ಕೊರತೆ ಇತ್ಯಾದಿ.[ಕೃಷಿ ಆದಾಯಕ್ಕೆ ತೆರಿಗೆ ಹಾಕುವ ಆಲೋಚನೆ ಇಲ್ಲ: ಅರುಣ್ ಜೇಟ್ಲಿ]

RobotiX, the farming tool of the future is here

ಈ ಕೊರತೆಯನ್ನು ನೀಗಿಸಲೆಂದೇ ರೋಬಾಟಿಕ್ಸ್ ರೈತರ ನೆರವಿಗೆ ಬರುತ್ತಿದೆ. ಇದು ಬೆಳೆಯನ್ನು ಹೇಗೆ ಬೆಳೆಯಬೇಕು ಎಂಬುದನ್ನು ಹೇಳುವುದು ಮಾತ್ರವಲ್ಲದೇ ಬೆಳೆಯ ಸಮಯದಲ್ಲಿ ಸಾಮಾನ್ಯವಾಗಿ ಎರಗಬಹುದಾದ ಆಪತ್ತುಗಳ ಬಗ್ಗೆ ಮುನ್ಸೂಚನೆ ನೀಡಿ ಇದನ್ನು ಎದುರಿಸುವ ಉಪಾಯಗಳನ್ನೂ ತಿಳಿಸುವ ಮೂಲಕ ಬೆಳೆನಾಶದಿಂದ ರೈತರನ್ನು ರಕ್ಷಿಸುತ್ತದೆ.

ಈ ತಂತ್ರಜ್ಞಾನವನ್ನು eXabit Systems ಎಂಬ ಸಂಸ್ಥೆ ಆವಿಷ್ಕಾರಗೊಳಿಸಿ, ಅಭಿವೃದ್ದಿಪಡಿಸಿದೆ. ಇದರ ಕಾರ್ಯನಿರ್ವಾಹಕ ನಿರ್ದೇಶಕರಾದ ಸತ್ಯಜಿತ್ ಮಹಾಪಾತ್ರ ಅವರ ಪ್ರಕಾರ ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ರೈತರು ವೈಜ್ಞಾನಿಕವಾಗಿ ಸೂಕ್ತವಾದ ಬೆಳೆಯನ್ನು ಲಾಭಕರವಾಗಿ ಬೆಳೆಯಲು ನೆರವಾಗುವುದು ಮಾತ್ರವಲ್ಲ, ಇನ್ನು ಹತ್ತು ವರ್ಷದೊಳಗೆ ಭಾರತವನ್ನು ವಿಶ್ವದ ಆಹಾರದ ಬಟ್ಟಲನ್ನಾಗಿಸುವ ಮಹತ್ವಾಕಾಂಕ್ಷೆಯನ್ನೂ ಈ ಸಂಸ್ಥೆ ಹೊಂದಿದೆ.[ಭಾರತವನ್ನು ಸಾವಯವ ಕೃಷಿ ದೇಶವಾಗಿಸುವುದೇ ನಮ್ಮ ಗುರಿ - ಅನಂತ್ ಕುಮಾರ್]

"ಈ ತಂತ್ರಜ್ಞಾನದ ಮೂಲಕ ಬೆಳೆನಾಶವನ್ನು ತಡೆಯುವುದು ಮಾತ್ರವಲ್ಲ, Precision Farming practice ಎಂಬ ವಿಧಾನವನ್ನು ಅನುಸರಿಸಿ ನಿವ್ವಳ ಬೆಳೆಯ ಪ್ರಮಾಣವನ್ನು ಹೆಚ್ಚಿಸುವುದೂ ಆಗಿದೆ, ಈ ತಂತ್ರಜ್ಞಾನವನ್ನು ಬೆಳೆಯ ಎಂಆರ್ ಐ ಸ್ಕ್ಯಾನ್ ಮೆಷೀನ್ ಎಂದೇ ನಾನು ಕರೆಯುತ್ತೇನೆ" ಎಂದು ಮಹಾಪಾತ್ರ ತಿಳಿಸುತ್ತಾರೆ.

ರೋಬಾಟಿಕ್ಸ್: ಇದರ ಕಾರ್ಯವಿಧಾನ ಹೇಗೆ?

ಇದೊಂದು ಸುಮಾರು ಎರಡು ಕೇಜಿ ತೂಗುವ, ಸೂರ್ಯಕಿರಣಗಳಿಂದ ಶಕ್ತಿ ಪಡೆಯುವ ಹಾಗೂ ಸುಮಾರು ನಲವತ್ತು ಸೆಂ.ಮೀ ಎತ್ತರವಿರುವ ಉಪಕರಣವಾಗಿದ್ದು, ಇದರಲ್ಲಿರುವ ಸೆನ್ಸಾರ್ ಗಳು ಬೆಳೆಯ ಅರೋಗ್ಯ, ಮಣ್ಣಿನ ತಾಪಮಾನ, ಮಣ್ಣಿನಲ್ಲಿರುವ ಆರ್ದ್ರತೆ ಅಥವಾ ನೀರಿನ ಪಸೆಯ ಪ್ರಮಾಣ ಹಾಗೂ ವಾತಾವರಣದ ತಾಪಮಾನ, ಆರ್ದ್ರತೆ ಇತ್ಯಾದಿಗಳ ಬಗ್ಗೆ ಸೂಕ್ಷ್ಮವಾಗಿ ಅವಲೋಕಿಸಿ, ಮಾಹಿತಿಯನ್ನು ಸಂಗ್ರಹಿಸುತ್ತದೆ.

RobotiX, the farming tool of the future is here

ಈ ಮಾಹಿತಿಗಳನ್ನು ಆಧರಿಸಿ ಈ ಬೆಳೆಯ ಮಾಲಿಕರಿಗೆ ಹಾಗೂ ಸಂಸ್ಥೆಯ ಮಾಲೀಕರಿಗೆ ಆಂಡ್ರಾಯ್ಡ್ ಉಪಕರಣಗಳ ಮೂಲಕ ಒಟ್ಟು ಐದು ಭಾಷೆಗಳಲ್ಲಿ (ತೆಲುಗು, ಕನ್ನಡ, ತಮಿಳು, ಹಿಂದಿ ಮತ್ತು ಇಂಗ್ಲಿಷ್) ಅಗತ್ಯವಾದ ಮಾಹಿತಿಯನ್ನು ರವಾನಿಸುತ್ತದೆ. ಈ ಮಾಹಿತಿಗಳನ್ನು ಪಡೆದುಕೊಳ್ಳುವ ಮೂಲಕ ರೈತರಿಗೆ ಬೆಳೆಗೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ. ಉದಾಹರಣೆಗೆ ನೀರು ಕಡಿಮೆಯಾದರೆ ನೀರು ಹಾಯಿಸಲು, ನೀರು ಹೆಚ್ಚಾದರೆ ನಿಲ್ಲಿಸಲು ಇತ್ಯಾದಿ.

ಆದರೆ, ಈ ತಂತ್ರಜ್ಞಾನದ ಬಳಕೆಯಿಂದ ತಾಂತ್ರಿಕ ವಿವರಗಳು ಲಭ್ಯವಾಗುತ್ತವೆಯೇ ಹೊರತು ಇದೇ ಪರಿಪೂರ್ಣವಲ್ಲ, ಏಕೆಂದರೆ ರೈತರು ಇದಕ್ಕೂ ಹೊರತಾದ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಮಹಾಪಾತ್ರ ಅಭಿಪ್ರಾಯಪಡುತ್ತಾರೆ.[ಕೃಷಿಕರ ಸಮಸ್ಯೆ ನಿವಾರಣೆಗೆ ಫೇಸ್ ಬುಕ್ ನಲ್ಲಿ ಸೂಪರ್ ಸಲಹೆ..]

ಈ ಸಮಸ್ಯೆಗಳನ್ನು ಪರಿಗಣಿಸಿದ ಸಂಸ್ಥೆ ಆಟೋಮೇಶನ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಚಿಂತನೆ ನಡೆಸಿದ್ದು, ಈ ಮೂಲಕ ರೈತ ಕೈಗೊಳ್ಳಬೇಕಾದ ಕ್ರಮಗಳನ್ನು ಸ್ವಯಂಚಾಲಿತವಾಗಿ ಕೈಗೊಳ್ಳುವಂತೆ ಮಾಡಲಾಗಿದೆ. ಈ ಮೂಲಕ ಅಗತ್ಯವಿದ್ದಾಗ ನೀರು ಹಾಯಿಸುವುದು, ಗೊಬ್ಬರ ಒದಗಿಸುವುದು, ಗಾಳಿಯಲ್ಲಿ ಆರ್ದ್ರತೆಯಾಗುವಂತೆ ಮಾಡುವುದು ಅಲ್ಲದೇ ಈ ಕೆಲಸಗಳನ್ನು ಮೊಬೈಲ್ ಮೂಲಕ ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ ನಿಯಂತ್ರಿಸಲು ಸಾಧ್ಯವಾಗುತ್ತದೆ.

ಆಟೋಮೇಶನ್ ತಂತ್ರಜ್ಞಾನದ ಮೂಲಕ ಉಪಕರಣಕ್ಕೆ ಅಳವಡಿಸಿರುವ ನೀರಿನ ಕವಾಟಗಳನ್ನು ಸಕಾಲಕ್ಕೆ ತೆರೆದು ನೀರು ಹರಿಸುವಂತೆ ಮಾಡುವುದು, ಒಂದು ವೇಳೆ ಮುಚ್ಚಿದ ಛಾವಣಿಯ ಹೊಲವಾದರೆ ಅಗತ್ಯವಿರುವ ಫ್ಯಾನುಗಳಿಗೆ ಚಾಲನೆ ನೀಡುವುದು ಇತ್ಯಾದಿಗಳನ್ನು ನಡೆಸಲು ಸಾಧ್ಯವಾಗುತ್ತದೆ ಎಂದು eXabit Systems ಸಂಸ್ಥೆಯ ಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಪ್ರಶಾಂತ್ ಸಾಹೂ ತಿಳಿಸುತ್ತಾರೆ.

ಈ ಉಪಕರಣ ಕೇವಲ ಹೊಲಕ್ಕೆ ಅಗತ್ಯವಿರುವ ಮಾಹಿತಿಗಳನ್ನು ನೀಡುವುದಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಬದಲಿಗೆ ರೈತರಿಗೆ ಪ್ರಸ್ತುತ ಪರಿಸರದ ಮತ್ತು ಮಣ್ಣಿನ ಪರಿಸ್ಥಿತಿಯಲ್ಲಿ ಯಾವ ಬೆಳೆಯನ್ನು ಆಯ್ದುಕೊಳ್ಳಬೇಕು, ಈ ನೆಲಕ್ಕೆ ಯಾವ ಬೆಳೆ ಅತಿ ಹೆಚ್ಚು ಸೂಕ್ತ, ಒಂದು ವೇಳೆ ಸರಿಯಾದ ಮಾಹಿತಿಯನ್ನು ಪಡೆದು ಸೂಕ್ತ ವಿಧಾನಗಳನ್ನು ಅನುಸರಿಸಿದರೆ ಎಷ್ಟು ಉತ್ಪತ್ತಿ ಬರಬಹುದು ಎಂಬೆಲ್ಲಾ ಮಹತ್ವದ ಮಾಹಿತಿಗಳನ್ನು ನೀಡುತ್ತದೆ.

ಅಷ್ಟೇ ಅಲ್ಲ, ಕೃಷಿ ತಜ್ಞರೊಂದಿಗೆ ನೇರವಾಗಿ ಸಮಾಲೋಚಿಸಿ, ಅವರ ಅಮೂಲ್ಯ ಸಲಹೆ ಪಡೆಯಲೂ ಸಾಧ್ಯವಾಗುವಂತೆ ಮಾಡಲಾಗಿದೆ.[ವಿಜಯಪುರದ ಜವಾರಿ ಕನ್ನಡಿಗನ ಮೆಚ್ಚುವಂತ ಸಾಧನೆ]

RobotiX, the farming tool of the future is here

ಈ ತಂಡದ ಬೆಳವಣಿಗೆಯ ಪ್ರಸ್ತುತ ಸ್ಥಿತಿ ಹೀಗಿದೆ:
eXabit ಸಂಸ್ಥೆಯ ತಂಡಕ್ಕೆ ಇವೆಲ್ಲಾ ಸಾಧಿಸುವುದು ಸುಲಭದ ಕಾರ್ಯವಾಗಿರಲಿಲ್ಲ. ಅದರಲ್ಲೂ ಈ ಸಂಸ್ಥೆ ಈಗ ತಾನೇ ಕಾಲೇಜಿನ ವ್ಯಾಸಾಂಗ ಮುಗಿಸಿಬಂದ ನಾಲ್ವರು ಸ್ನೇಹಿತರಾದ ಅಮೂಲ್ಯ ಮಿಶ್ರಾ, ಅವಿನಾಶ್ ಅಗ್ರವಾಲ್, ಮಹಾಪಾತ್ರ ಹಾಗೂ ಸಾಹೂ ಅವರಿಂದ ಪ್ರಾರಂಭಿಸಲ್ಪಟ್ಟಿದ್ದು ಎಲ್ಲರಿಗೂ ಇದು ಮೊದಲ ಅನುಭವವಾಗಿದೆ.

ಕಾಲೇಜಿನ ಬಳಿಕ ತಮ್ಮದೇ ಆದ ಏನಾದರೊಂದನ್ನು ಸ್ಥಾಪಿಸಬೇಕೆಂದು ಇವರ ಬಯಕೆಯಾಗಿದ್ದರೂ ಕಾಲೇಜಿನ ಬಳಿಕ ಇವರೆಲ್ಲರೂ ಕಾರಣಾಂತರಗಳಿಂದ ಭಿನ್ನ ದಾರಿ ಹಿಡಿದು ಬೇರೆ ಬೇರೆ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಕೆಲಸ ಪ್ರಾರಂಭಿಸಿದ್ದರು. ಆದರೆ ನಮ್ಮ ಮನಗಳಲ್ಲಿ ನಮ್ಮ ಮೂಲ ಯೋಜನೆ ಸದಾ ಇರುತ್ತಿತ್ತು ಎಂದು ಸಾಹೂ ತಿಳಿಸುತ್ತಾರೆ.

2013ರಲ್ಲಿ ಇವರು ಮತ್ತೊಮ್ಮೆ ಒಂದಾಗಿ ತಮ್ಮ ಮೂಲ ಯೋಜನೆಗೆ ಚಾಲನೆ ನೀಡಿದರು. 2014ರ ಸೆಪ್ಟೆಂಬರ್ ನಲ್ಲಿ ಇವರು ತಮ್ಮದೇ ಸಂಸ್ಥೆಯಾದ eXabit ಅನ್ನು ಸ್ಥಾಪಿಸಿದರು. ಕಳೆದ ವರ್ಷ ಇವರು ಬೆಳೆ ಬೆಳೆದ ಬಳಿಕ ಕೈಗೊಳ್ಳಬೇಕಾದ ಸೇವೆಗಳನ್ನು ನೀಡಿದ್ದರು.2015 ರ ಅಕ್ಟೋಬರ್ ನಲ್ಲಿ RobotiX ತಂತ್ರಜ್ಞಾನದ ಕರಡುಯಂತ್ರ ಪ್ರಾರಂಭ ಕಂಡಿತು. ಪೂರ್ಣಪ್ರಮಾಣದ ಕಾರ್ಯನಿರ್ವಹಿಸುವ ಯಂತ್ರದ ಮಾರಾಟ ಕಳೆದ ವರ್ಷದ ಜುಲೈನಿಂದ ಪ್ರಾರಂಭವಾಯಿತು.[ಬೆಂಗಳೂರಿನ ಕಸದಿಂದ ರೈತರ ಮನೆಗೆ ಸಾವಯವ ಗೊಬ್ಬರ: ಕೃಷ್ಣಬೈರೇಗೌಡ]

ಯಂತ್ರವನ್ನು ಪ್ರಾರಂಭಿಸಿಯೇನೋ ಆಯಿತು, ಆದರೆ ಇದು ಸರಿಯಾಗಿ ಕೆಲಸ ಮಾಡುತ್ತದೆಯೋ ಇಲ್ಲವೋ ಎಂದು ಪರಿಶೀಲಿಸಬೇಕಲ್ಲ? ಇದಕ್ಕಾಗಿ ಸ್ನೇಹಿತರ, ಸಹೃದಯಿಗಳ ನೆರವನ್ನು ಕೋರಲಾಯಿತು. ಸಂಸ್ಥೆಯನ್ನು ಹುಟ್ಟುಹಾಕಲು ಹಣಕಾಸಿನ ವ್ಯವಸ್ಥೆಯನ್ನೂ ಕುಟುಂಬದವರು ಹಾಗೂ ಸ್ನೇಹಿತರು ಒದಗಿಸಿದರು.

ಆದರೆ ಈ ಯಂತ್ರದ ಕಾರ್ಯನಿರ್ವಹಣೆಯನ್ನು ಕಂಡುಕೊಂಡ ರೈತರು ಈಗಾಗಲೇ ತಮಗೂ ಬೇಕೆಂದು ಮುಗಿಬಿದ್ದಿದ್ದಾರೆ. ಈಗಾಗಲೇ ನಲವತ್ತಕ್ಕೂ ಹೆಚ್ಚು ಗ್ರಾಹಕರು ಈ ಯಂತ್ರ ತಮಗೂ ಬೇಕೆಂದು ಬೇಡಿಕೆ ಸಲ್ಲಿಸಿದ್ದಾರೆ. ಮುಂದಿನ ಬೇಡಿಕೆ ಪರಿಗಣಿಸಿ ಪ್ರಥಮ ಬ್ಯಾಚ್ ನಲ್ಲಿ ಇನ್ನೂರು ಯಂತ್ರಗಳ ನಿರ್ಮಾಣ ಪ್ರಾರಂಭಗೊಂಡಿದೆ.

ಅಂತಿಮ ಸವಾಲು:
ಆದರೆ ಮಹಾಪಾತ್ರರ ಪ್ರಕಾರ ಇದು ಅಂತಿಮ ಗೆಲುವಲ್ಲ, ಪ್ರಾರಂಭ ಮಾತ್ರ. ಪ್ರಸ್ತುತ ಈ ಯಂತ್ರವನ್ನು ಇನ್ನಷ್ಟು ಸಬಲ ಹಾಗೂ ಉತೃಷ್ಟತೆಯನ್ನು ಪಡೆಯಲು ವಿನ್ಯಾಸವನ್ನು ಮೇಲ್ದರ್ಜೆಗೇರಿಸುವುದಾಗಿದೆ.

"ನಿಜವಾದ ಸವಾಲು ಇರುವುದು ಈ ಯಂತ್ರದ ಶಕ್ತಿಗಿಂತಲೂ ಭಾರತದ ರೈತರಲ್ಲಿ ಮನೆ ಮಾಡಿರುವ ನಂಬಿಕೆಗಳನ್ನು ಬದಲಿಸುವುದಾಗಿದೆ. ಇವರಲ್ಲಿ ಹೆಚ್ಚಿನವರು ಇನ್ನೂ ಸಾಂಪ್ರಾದಾಯಿಕ ವಿಧಾನಗಳಿಗೆ ಜೋತು ಬಿದ್ದಿದ್ದು, ಬದಲಾವಣೆಯನ್ನು ಸುಲಭವಾಗಿ ಸ್ವೀಕರಿಸಲು ಹಿಂದೇಟು ಹಾಕುವುದೇ ದೊಡ್ಡ ಸಮಸ್ಯೆಯಾಗಿದೆ" ಎಂದು ಮಹಾಪಾತ್ರ ವಿವರಿಸುತ್ತಾರೆ.

"ರೈತರು ಪ್ರಸ್ತುತ ಎದುರಿಸುತ್ತಿರುವ ಬಹುತೇಕ ಎಲ್ಲಾ ಸಮಸ್ಯೆಗಳಿಗೆ ರೋಬಾಟಿಕ್ಸ್ ಬಳಿ ಉತ್ತರವಿದೆ. ಆದರೆ ನಿಜವಾದ ಸವಾಲು ಇರುವುದು ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ರೈತರ ಒಲವು ಪಡೆಯುವುದಾಗಿದೆ. ಇವರು ಯಾವಾಗ ತಮ್ಮ ಶತಮಾನಗಳ ಕುರುಡು ನಂಬಿಕೆಯನ್ನು ಬಿಟ್ಟು ವೈಜ್ಞಾನಿಕ ಬಳಕೆಗೆ ಒಲವು ತೋರುತ್ತಾರೋ, ಆಗಲೇ ಸಂಸ್ಥೆಯ ನಿಜವಾದ ವಿಜಯವಾಗುತ್ತದೆ" ಎಂದು ಅವರು ತಿಳಿಸುತ್ತಾರೆ.

ಒಂದು ವೇಳೆ ಈ ತಂತ್ರಜ್ಞಾನದ ಬಳಕೆ ನಿಜವಾಗಿಯೂ ಎಲ್ಲೆಡೆ ಅನುಷ್ಠಾನಕ್ಕೆ ಬಂದರೆ ಮುನಿರತ್ನಂರಂತಹ ಲಕ್ಷಾಂತರ ರೈತರ ಪಾಲಿಗೆ ಆಪದ್ಬಾಂಧವನಾಗಲಿದೆ. ಒಂದು ವೇಳೆ ಮುನಿರತ್ನಂ ತನಗೆ ಲಭ್ಯವಾಗಿದ್ದ ಮಾಹಿತಿಯ ಪ್ರಕಾರ ಕೊಂಚವೇ ಎಚ್ಚರ ವಹಿಸಿ ಸೂಕ್ತ ಕ್ರಮ ಕೈಗೊಂಡಿದ್ದಿದ್ದರೆ ಇಂದು ಈ ನಷ್ಟ ಅನುಭವಿಸಬೇಕಾಗಿರಲಿಲ್ಲ.

ಇದು ಈಗ ಮುನಿರತ್ನಂರಿಗೆ ಅರ್ಥವಾಗಿದೆ. ಈ ತಂತ್ರಜ್ಞಾನ ಶೀಘ್ರವೇ ಎಲ್ಲರಿಗೂ ತಲುಪುವಂತಾಗಿ ಇದರ ಉಪಯೋಗದಿಂದ ರೈತರ ಆತ್ಮಹತ್ಯೆ, ಸಾಲ ಮೊದಲಾದವು ಇಲ್ಲವಾಗಲಿ ಎಂಬುದೇ ನಮ್ಮೆಲ್ಲರ ಹಾರೈಕೆಯಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Satyajeet Mahapatra, one of the founders and the CEO of eXabit Systems, the company that invented RobotiX, believes that not only can such problems be easily solved, but scientific farming can also lead to India becoming the food bowl of the world in a decade's time.
Please Wait while comments are loading...