ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮಿಶ್ರಿತ ಪೆಟ್ರೋಲ್ ಮೇಲೆ ನ. 1ರಿಂದ ಹೆಚ್ಚುವರಿ ಸುಂಕ; ಏನಿದು ಹೊಸ ವ್ಯವಸ್ಥೆ?

|
Google Oneindia Kannada News

ನವದೆಹಲಿ, ಅಕ್ಟೋಬರ್ 2: ಅಮಿಶ್ರಿತ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 2 ರೂ ಅಬಕಾರಿ ಸುಂಕ ವಿಧಿಸುವ ಕೇಂದ್ರ ಸರಕಾರದ ನಿರ್ಧಾರ ಒಂದು ತಿಂಗಳು ಮುಂದೂಡಲಾಗಿದೆ. ಅಕ್ಟೋಬರ್ 1ರಂದು ಹೆಚ್ಚುವರಿ ಸುಂಕ ಹೇರಿಕೆಯಾಗಬೇಕಿತ್ತು. ಕಾರಣಾಂತರದಿಂದ ಸರಕಾರ ನವೆಂಬರ್ 1ರಿಂದ ಇದು ಅಳವಡಿಕೆಯಾಗಲಿದೆ.

ಪರ್ಯಾಯ ಇಂಧನದ ಬಳಕೆ ಹೆಚ್ಚಿಸುವ ಇರಾದೆಯಿಂದ ಅಮಿಶ್ರಿತ ಪೆಟ್ರೋಲ್ ಮತ್ತು ಡೀಸೆಲ್‌ಗಳಿಗೆ ಹೆಚ್ಚುವರಿ ಅಬಕಾರಿ ಸುಂಕ ವಿಧಿಸಲು ನಿರ್ಧರಿಸಲಾಗಿದೆ. ಈ ವರ್ಷದ ಬಜೆಟ್‌ನಲ್ಲಿ ಹಣಕಾಸು ಸಚಿವರು ಈ ನಿರ್ಧಾರ ತಿಳಿಸಿದ್ದರು. ಅಕ್ಟೋಬರ್ 1ರಿಂದ ಅಮಿಶ್ರಿತ ಪೆಟ್ರೋಲ್‌ಗೆ ಹೆಚ್ಚುವರಿ ತೆರಿಗೆ ವಿಧಿಸಲಾಗುವುದು ಎಂದು ಅವರು ಬಜೆಟ್ ಭಾಷಣದಲ್ಲಿ ಹೇಳಿದ್ದರು.

ಎಲ್‌ಪಿಜಿ ಸಿಲಿಂಡರ್ ದರದಲ್ಲಿ 25 ರೂ. ಕಡಿತಎಲ್‌ಪಿಜಿ ಸಿಲಿಂಡರ್ ದರದಲ್ಲಿ 25 ರೂ. ಕಡಿತ

ಪೆಟ್ರೋಲ್, ಡೀಸೆಲ್, ಗ್ಯಾಸೋಲಿನ್‌ಗಳಿಗೆ ಬಯೋ ಫುಯೆಲ್, ಎಥೆನಾಲ್ ಇತ್ಯಾದಿ ಪರ್ಯಾಯ ಇಂಧನವನ್ನು ಬೆರೆಸಿದ ಪೆಟ್ರೋಲಿಯಂ ಉತ್ಪನ್ನಗಳಿಗೆ ಬ್ಲೆಂಡೆಡ್ ಪೆಟ್ರೋಲ್, ಅಥವಾ ಬ್ಲೆಂಡೆಡ್ ಡೀಸೆಲ್ ಅಥವಾ ಬ್ಲೆಂಡೆಡ್ ಗ್ಯಾಸೊಲಿನ್ ಎನ್ನುತ್ತಾರೆ. ಅನ್‌ಬ್ಲೆಂಡೆಡ್ ಅಥವಾ ಅಮಿಶ್ರಿತ ಪೆಟ್ರೋಲ್‌ನಲ್ಲಿ ಪರ್ಯಾಯ ಇಂಧನದ ಬೆರೆಕೆ ಇರುವುದಿಲ್ಲ. ಪೆಟ್ರೋಲ್ ಬಂಕ್‌ಗಳಲ್ಲಿ ಸದ್ಯ ಸಿಗುವ ಪೆಟ್ರೋಲ್‌ಗಳೆಲ್ಲವೂ ಅನ್‌ಬ್ಲೆಂಡೆಡ್ ಪೆಟ್ರೋಲ್‌ಗಳೇ ಆಗಿವೆ.

ಹಣಕಾಸು ಸಚಿವಾಲಯ ಸೆಪ್ಟೆಂಬರ್ 30ರಂದು ಬಿಡುಗಡೆ ಮಾಡಿರುವ ಅಧಿಸೂಚನೆ ಪ್ರಕಾರ ನವೆಂಬರ್ 1ರಿಂದ ಒಂದು ಲೀಟರ್ ಅನ್‌ಬ್ಲೆಂಡೆಡ್ ಪೆಟ್ರೋಲ್‌ಗೆ 3.40 ರೂ ಅಬಕಾಸು ಸುಂಕ ವಿಧಿಸಲಾಗುತ್ತದೆ. ಅಂದರೆ ಹೆಚ್ಚುವರಿ ಸುಂಕ 2 ರೂ ಆಗುತ್ತದೆ.

"ಎಥೆನಾಲ್ ಅಥವಾ ಮೆಥನಾಲ್ ಜೊತೆ ಮಿಶ್ರಣ ಮಾಡದೇ ರೀಟೇಲ್ ಮಾರಾಟಕ್ಕೆ ಇಡಲಾಗುವ ಪೆಟ್ರೋಲ್‌ಗೆ ಪ್ರತೀ ಲೀಟರ್‌ಗೆ 3.40 ರೂ ಅಬಕಾರಿ ಸುಂಕ ವಿಧಿಸಲಾಗುವುದು. ಇದು ನವೆಂಬರ್ 1, 2022ರಿಂದ ಜಾರಿಯಾಗುತ್ತದೆ. ಸದ್ಯ ಅಮಿಶ್ರಿತ ಪೆಟ್ರೋಲ್ ಮೇಲೆ ಪ್ರತೀ ಲೀಟರ್‌ಗೆ 1.40 ರೂ ಅಬಕಾರಿ ಸುಂಕ ಇದೆ. ಇನ್ನು, ಎಥನಾಲ್ ಬೆರೆಸದ ಬ್ರ್ಯಾಂಡಡ್ ಪೆಟ್ರೋಲ್‌ಗೆ 2.60 ಇರುವ ಅಬಕಾರಿ ಸುಂಕದ ದರ 4.60 ರೂಗೆ ಏರಿಕೆ ಆಗಲಿದೆ," ಎಂದು ಹಣಕಾಸು ಸಚಿವಾಲಯದಿಂದ ಹೊರಡಿಸಲಾದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಡೀಸೆಲ್ ಮೇಲೆ ಹೆಚ್ಚುವರಿ ತೆರಿಗೆ?

ಡೀಸೆಲ್ ಮೇಲೆ ಹೆಚ್ಚುವರಿ ತೆರಿಗೆ?

ವೆಜಿಟಬಲ್ ಆಯಿಲ್ ಅಥವಾ ಸಸ್ಯ ಮೂಲದ ಎಣ್ಣೆಗಳಿಂದ ಆಲ್ಕೈಲ್ ಎಸ್ಟರ್ಸ್ ತಯಾರಿಸಲಾಗುತ್ತದೆ. ಬಯೋ ಡೀಸೆಲ್ ಎಂದರೆ ಇದೇ. ಈ ಬಯೋ ಡೀಸೆಲ್ ಅನ್ನು ಬೆರಕೆ ಮಾಡಿದ ಡೀಸೆಲ್ ಅನ್ನು ಬ್ಲೆಂಡೆಡ್ ಡೀಸೆಲ್ ಎನ್ನುತ್ತಾರೆ. ಆದರೆ, ಬೆರೆಕೆ ಮಾಡದ ಡೀಸೆಲ್ ಮೇಲೆ ಈಗ ಇರುವ 1.80 ರೂ ಅಬಕಾರಿ ಸುಂಕ ದರವನ್ನು 3.80 ರೂಗೆ ಏರಿಸಲಾಗುತ್ತಿದೆ. ಇನ್ನು ಬ್ರ್ಯಾಂಡೆಡ್ ಡೀಸೆಲ್ ಮೇಲಿನ ಅಬಕಾರಿ ಸುಂಕ ದರ 4.20 ರೂ ನಿಂದ 6.20 ರೂಗೆ ಏರುತ್ತಿದೆ.

ಅಂದರೆ, ಅಮಿಶ್ರಿತ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಬೀಳುವ ಹೆಚ್ಚುವರಿ ಅಬಕಾರಿ ಸುಂಕ 2 ರೂ ಆಗುತ್ತದೆ. ಇದು ನವೆಂಬರ್ 1ರಿಂದ ಚಾಲನೆಗೆ ತರಲಿದೆ.

ಅಕ್ಟೋಬರ್ 1ರಂದು ಪ್ರಮುಖ ನಗರದಲ್ಲಿ ಪೆಟ್ರೋಲ್-ಡೀಸೆಲ್ ದರ ಎಷ್ಟಿದೆ?ಅಕ್ಟೋಬರ್ 1ರಂದು ಪ್ರಮುಖ ನಗರದಲ್ಲಿ ಪೆಟ್ರೋಲ್-ಡೀಸೆಲ್ ದರ ಎಷ್ಟಿದೆ?

ಎಥನಾಲ್ ತಯಾರಿಕೆ ಹೇಗೆ?

ಎಥನಾಲ್ ತಯಾರಿಕೆ ಹೇಗೆ?

ನಾವು ತಿನ್ನಲು ಬಳಕೆ ಮಾಡದ ಎಣ್ಣಬೀಜ ಅಥವಾ ಆಯಿಲ್‌ಸೀಡ್‌ಗಳಿಂದ ಬಯೋ ಡೀಸೆಲ್ ಅನ್ನು ತಯಾರಿಸಲಾಗುತ್ತದೆ. ಆದರೆ, ನಾವು ತಿನ್ನುವ ಆದರೆ ತ್ಯಾಜ್ಯವಾಗಿ ಬಿಸಾಡುವ ಆಹಾರ ಬೀಜ, ಕಬ್ಬು ತ್ಯಾಜ್ಯ ಇತ್ಯಾದಿಯಿಂದ ಎಥನಾಲ್ ತಯಾರಿಸಲಾಗುತ್ತದೆ.ಈ ಎಥನಾಲ್ ಅನ್ನು ಸದ್ಯಕ್ಕೆ ಗ್ಯಾಸೋಲಿನ್‌ಗೆ ಬೆರೆಸಲಾಗುತ್ತಿದೆ. ಸರಕಾರದ ಮಾನದಂಡದಂತೆ ಗ್ಯಾಸೋಲಿನ್‌ಗೆ ಶೇ. 10ರಷ್ಟು ಎಥನಾಲ್ ಬೆರೆಸಲಾಗುತ್ತಿದೆ.

ಪರ್ಯಾಯ ಇಂಧನದ ಬೆರಕೆ ಯಾಕೆ?

ಪರ್ಯಾಯ ಇಂಧನದ ಬೆರಕೆ ಯಾಕೆ?

ಭಾರತ ಅತಿ ಹೆಚ್ಚು ಆಮದು ಮಾಡಿಕೊಳ್ಳುವ ವಸ್ತುಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳು ಪ್ರಮುಖ. ಆಮದು ವಸ್ತುಗಳು ಆರ್ಥಿಕತೆಗೆ ಹೊರೆಯೇ. ರೂಪಾಯಿ ಮೌಲ್ಯ ಕುಸಿತದಿಂದ ಹಿಡಿದು ಹಣದುಬ್ಬರದವರೆಗೂ ಪೆಟ್ರೋಲ್ ಆಮದು ಪರಿಣಾಮ ಬೀರುತ್ತದೆ. ಈ ಪೆಟ್ರೋಲ್ ಆಮದನ್ನು ಕಡಿಮೆಗೊಳಿಸಲು ಸರಕಾರ ಹಲವು ಮಾರ್ಗೋಪಾಯಗಳನ್ನು ಅನುಸರಿಸುತ್ತಿದೆ. ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜಿಸುತ್ತಿದೆ. ಅಲ್ಲಿಯವರೆಗೆ ಪೆಟ್ರೋಲ್ ಆಮದನ್ನು ಕಡಿಮೆಗೊಳಿಸಲು ಪರ್ಯಾಯ ಇಂಧನಗಳ ಬಳಕೆಗೂ ಉತ್ತೇಜಿಸಲು ಸರಕಾರ ನಿರ್ಧರಿಸಿದೆ.

ಜೈವಿಕ ಇಂಧನ ಇತ್ಯಾದಿ ಪರ್ಯಾಯ ಇಂಧನಗಳನ್ನು ಮಾಮೂಲಿಯ ಪೆಟ್ರೋಲ್ ಮತ್ತು ಡೀಸೆಲ್‌ಗೆ ಬೆರೆಸುವುದು ಸರಕಾರದ ಉದ್ದೇಶ. ಇದರಿಂದ ತೈಲ ಆಮದು ಬಹಳಷ್ಟು ತಗ್ಗುತ್ತದೆ. ಸದ್ಯಕ್ಕೆ ಶೇ. 10ರಷ್ಟು ಪರ್ಯಾಯ ಇಂಧನವನ್ನು ಬೆರೆಸುವ ಗುರಿ ಇಡಲಾಗಿದೆ. ಮುಂದಿನ ದಿನಗಳಲ್ಲಿ ಈ ಬೆರೆಕೆ ಪ್ರಮಾಣ ಶೇ. 20ಕ್ಕೆ ಹೆಚ್ಚಿಸುವ ನಿರೀಕ್ಷೆ ಇದೆ.

ಹೆಚ್ಚುವರಿ ತೆರಿಗೆ ಯಾಕೆ?

ಹೆಚ್ಚುವರಿ ತೆರಿಗೆ ಯಾಕೆ?

ಅಮಿಶ್ರಿತ ಪೆಟ್ರೋಲಿಯಂ ಉತ್ಪನ್ನಗಳಿಗೆ ಹೆಚ್ಚುವರಿ ತೆರಿಗೆ ವಿಧಿಸುವುದರಿಂದ ಪರ್ಯಾಯ ಇಂಧನಗಳ ಬಳಕೆಗೆ ಪರೋಕ್ಷವಾಗಿ ಉತ್ತೇಜನ ಸಿಗುವ ನಿರೀಕ್ಷೆ ಇದೆ. ತೈಲ ಮಾರಾಟ ಸಂಸ್ಥೆಗಳು ದೇಶೀಯವಾಗಿ ತಯಾರಿಸಲಾಗುವ ಎಥನಾಲ್ ಇತ್ಯಾದಿ ಪರ್ಯಾಯ ಇಂಧನಗಳನ್ನು ಖರೀದಿಸಿ ಅದನ್ನು ಪೆಟ್ರೋಲಿಯಂ ಉತ್ಪನ್ನಗಳಿಗೆ ಬೆರೆಸಿ ಮಾರಾಟ ಮಾಡಲು ಹೆಚ್ಚು ಒತ್ತುಕೊಡಬಹುದು ಎಂದು ಭಾವಿಸಲಾಗದೆ.

ಆದರೆ, ದುರದೃಷ್ಟಕ್ಕೆ ದೇಶಾದ್ಯಂತ ಸಮರ್ಪಕವಾಗಿ ಲಭ್ಯವಾಗುವಷ್ಟ ಪ್ರಮಾಣದಲ್ಲಿ ಬಯೋಡೀಸೆಲ್ ಉತ್ಪಾದಿಸಲು ಭಾರತದಲ್ಲಿ ಸೌಕರ್ಯ ವ್ಯವಸ್ಥೆ ಇಲ್ಲ. ಇದು ಆಗದೇ ಬಯೋಡೀಸೆಲ್ ಮಿಶ್ರಿತ ಡೀಸೆಲ್ ಎಲ್ಲೆಡೆಯೂ ಲಭ್ಯ ಆಗುವುದಿಲ್ಲ. ಅಂತಿಮವಾಗಿ, ಜನಸಾಮಾನ್ಯರು ಹೆಚ್ಚುವರಿ ತೆರಿಗೆಯ ಹೊರೆ ಹೊರಬೇಕಾಗುತ್ತದೆ.

(ಒನ್ಇಂಡಿಯಾ ಸುದ್ದಿ)

English summary
Central government has deferred the levy of additional excise duty on unblended petrol and diesel to November 1st. Decision to rise taxes on them is intended to reduce the import volume of oil.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X