ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯುತ್ ವಾಹನ (ಇವಿ) ಚಾರ್ಜಿಂಗ್ ಮೂಲಸೌಕರ್ಯಕ್ಕೆ ಮಾರ್ಗದರ್ಶನ ನೀಡಲು ಕೈಪಿಡಿ ಬಿಡುಗಡೆ ಮಾಡಿದ ನೀತಿ ಆಯೋಗ

|
Google Oneindia Kannada News

ವಿದ್ಯುತ್ ವಾಹನಗಳಿಗೆ (ಇವಿ) ಚಾರ್ಜಿಂಗ್ ಜಾಲವನ್ನು ಸ್ಥಾಪಿಸುವ ನಿಟ್ಟಿನಲ್ಲಿ ನೀತಿಗಳು ಮತ್ತು ನಿಯಮಗಳನ್ನು ರೂಪಿಸಲು ರಾಜ್ಯ ಸರಕಾರಗಳು ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಮಾರ್ಗದರ್ಶನ ನೀಡಲು ನೀತಿ ಆಯೋಗವು ಇಂದು ಕೈಪಿಡಿಯನ್ನು ಬಿಡುಗಡೆ ಮಾಡಿದೆ. ಚಾರ್ಜಿಂಗ್ ಮೂಲಸೌಕರ್ಯವನ್ನು ಹೆಚ್ಚಿಸುವುದು ಹಾಗೂ ದೇಶದಲ್ಲಿ ವಿದ್ಯುತ್ ಚಾಲಿತ ಸಾರಿಗೆ ವ್ಯವಸ್ಥೆಯತ್ತ ತ್ವರಿತ ಪರಿವರ್ತನೆಗೆ ಅನುಕೂಲ ಮಾಡಿಕೊಡುವುದು ಇದರ ಉದ್ದೇಶವಾಗಿದೆ.

ʻವಿದ್ಯುತ್ ವಾಹನ ಚಾರ್ಜಿಂಗ್ ಮೂಲಸೌಕರ್ಯ ಅನುಷ್ಠಾನಕ್ಕಾಗಿ ಕೈಪಿಡಿʼಯನ್ನು ನೀತಿ ಆಯೋಗ, ಇಂಧನ ಸಚಿವಾಲಯ (ಎಂಒಪಿ), ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್‌ಟಿ), ಬ್ಯೂರೋ ಆಫ್ ಎನರ್ಜಿ ಎಫಿಶಿಯೆನ್ಸಿ (ಬಿಇಇ) ಮತ್ತು ʻವರ್ಲ್ಡ್‌ ರಿಸೋರ್ಸ್‌ ಇನ್‌ಸ್ಟಿಟ್ಯೂಟ್‌ (ಡಬ್ಲ್ಯುಆರ್‌ಐ) ಇಂಡಿಯಾʼ ಜಂಟಿಯಾಗಿ ಅಭಿವೃದ್ಧಿಪಡಿಸಿವೆ.

ʻಇ.ವಿʼ ಚಾರ್ಜಿಂಗ್ ಮೂಲಸೌಕರ್ಯದ ಯೋಜನೆ, ದೃಢೀಕರಣ ಮತ್ತು ಕಾರ್ಯಾನುಷ್ಠಾನದಲ್ಲಿ ತೊಡಗಿರುವ ಪ್ರಾಧಿಕಾರಗಳು ಮತ್ತು ಇತರ ಮಧ್ಯಸ್ಥಗಾರರು ಅನುಸರಿಸಬಹುದಾದ ವ್ಯವಸ್ಥಿತ ಹಾಗೂ ಸಮಗ್ರ ಕಾರ್ಯವಿಧಾನಗಳನ್ನು ಈ ಕೈ ಪಿಡಿಯು ಒಳಗೊಂಡಿದೆ. ʻಇವಿʼ ಚಾರ್ಜಿಂಗ್‌ ಜಾಲ ಸ್ಥಾಪನೆಗೆ ಅಗತ್ಯವಿರುವ ತಾಂತ್ರಿಕ ಮತ್ತು ನಿಯಂತ್ರಣ ಚೌಕಟ್ಟುಗಳು ಹಾಗೂ ಆಡಳಿತ ರಚನೆಗಳ ಅವಲೋಕನವನ್ನು ಇದು ಒದಗಿಸುತ್ತದೆ. ಇದು ಈ ವಲಯದ ಬೆಳವಣಿಗೆಯ ಸ್ವರೂಪವನ್ನು ಪರಿಗಣನೆಗೆ ತೆಗೆದುಕೊಂಡು, ಪ್ರಸ್ತುತ ಚಾರ್ಜಿಂಗ್‌ ಮೂಲಸೌಕರ್ಯ ಅಭಿವೃದ್ಧಿಯ ಅಗತ್ಯಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ.

NITI Aayog Releases Handbook to Guide EV Charging Infrastructure in India

ವಿದ್ಯುತ್ ಚಾಲಿತ ಸಾರಿಗೆ ವ್ಯವಸ್ಥೆಯತ್ತ ಪರಿವರ್ತನೆಯು ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟದಲ್ಲಿ ಜಾಗತಿಕ ಕಾರ್ಯತಂತ್ರವಾಗಿದೆ. ಇದರ ವಿಚಾರವಾಗಿ ಭಾರತವು ಮಹತ್ವಾಕಾಂಕ್ಷೆಯ ಆಶಯಗಳನ್ನು ವ್ಯಕ್ತಪಡಿಸಿದೆ. "ಇವಿ ಚಾರ್ಜಿಂಗ್ ಜಾಲವನ್ನು ಅನುಷ್ಠಾನಗೊಳಿಸುವಲ್ಲಿ ವಿವಿಧ ಸ್ಥಳೀಯ ಪ್ರಾಧಿಕಾರಗಳು ಎದುರಿಸುತ್ತಿರುವ ಸಾಮಾನ್ಯ ಸವಾಲುಗಳನ್ನು ಈ ಕೈಪಿಡಿ ಪರಿಹರಿಸುತ್ತದೆ. ಇದು ರಾಜ್ಯಗಳು ಹಾಗೂ ಸ್ಥಳೀಯ ಸಂಸ್ಥೆಗಳ ನಡುವೆ ಉತ್ತಮ ಕಾರ್ಯವಿಧಾನಗಳ ವಿನಿಮಯಕ್ಕೆ ಆರಂಭಿಕ ಬಿಂದುವಾಗಿ ಕೆಲಸ ಮಾಡುತ್ತದೆ," ಎಂದು ನೀತಿ ಆಯೋಗದ ಉಪಾಧ್ಯಕ್ಷ ಡಾ. ರಾಜೀವ್ ಕುಮಾರ್‌ ಹೇಳಿದರು.

"ಭಾರತದಲ್ಲಿ ಇ.ವಿ ಪರಿಸರ ವ್ಯವಸ್ಥೆ ವೇಗವಾಗಿ ವಿಕಸನಗೊಳ್ಳುತ್ತಿದ್ದು, ಹಲವು ಸಂಸ್ಥೆಗಳು ಚಾರ್ಜಿಂಗ್ ಮೂಲಸೌಕರ್ಯ ಮಾರುಕಟ್ಟೆಯನ್ನು ಪ್ರವೇಶಿಸುತ್ತಿವೆ. ಈ ಕೈಪಿಡಿಯು ದೃಢವಾದ ಮತ್ತು ಸುಲಭಲಭ್ಯ ಇವಿ ಚಾರ್ಜಿಂಗ್ ಜಾಲವನ್ನು ಸ್ಥಾಪಿಸುವಲ್ಲಿ ಜೊತೆಯಾಗಿ ಕೆಲಸ ಮಾಡಲು ಸಾರ್ವಜನಿಕ ಮತ್ತು ಖಾಸಗಿ ಪಾಲುದಾರರಿಗೆ ಸಮಗ್ರ ಆಡಳಿತ ನೀತಿಯನ್ನು ಒದಗಿಸುತ್ತದೆ," ಎಂದು ನೀತಿ ಆಯೋಗದ ಸಿಇಒ ಶ್ರೀ ಅಮಿತಾಬ್ ಕಾಂತ್ ಹೇಳಿದರು.

ಇವಿ ಚಾರ್ಜಿಂಗ್ ಡಿಸ್ಕಾಂಗಳ ಪಾಲಿಗೆ ಹೊಸ ಸ್ವರೂಪದ ವಿದ್ಯುತ್ ಬೇಡಿಕೆ ತಂದೊಡ್ಡಿದೆ. ಚಾರ್ಜಿಂಗ್ ಸೌಲಭ್ಯಗಳಿಗೆ ತಡೆರಹಿತ ವಿದ್ಯುತ್ ಪೂರೈಕೆ ಸಂಪರ್ಕಗಳನ್ನು ಒದಗಿಸುವಲ್ಲಿ ಮತ್ತು ವಿದ್ಯುತ್ ವಿತರಣಾ ಜಾಲವು ಈ ವಲಯದ ಬೇಡಿಕೆಯನ್ನು ಪೂರೈಸಲು ಅಗತ್ಯ ಸಾಮರ್ಥ್ಯವನ್ನು ಹೊಂದಿದೆಯೇ ಎಂದು ಖಾತರಿಪಡಿಸಿಕೊಳ್ಳುವಲ್ಲಿ ಡಿಸ್ಕಾಂಗಳ ಪಾತ್ರ ಮಹತ್ವದ್ದಾಗಿದೆ.

"ಇಂಧನ ಸಚಿವಾಲಯ ಮತ್ತು ಭಾರತದಲ್ಲಿ ವಿದ್ಯತ್‌ ವಾಹನಗಳಿಗೆ ಚಾರ್ಜಿಂಗ್ ಮೂಲಸೌಕರ್ಯವನ್ನು ಸ್ಥಾಪಿಸಲು ಕೇಂದ್ರ ನೋಡಲ್ ಏಜೆನ್ಸಿಯಾಗಿರುವ ʻಇಂಧನ ದಕ್ಷತೆಯ ಬ್ಯೂರೋʼ (ಬಿಇಇ) ಇವೆರಡೂ ಸಹ ಮೂಲಸೌಕರ್ಯ ಅನುಷ್ಠಾನಕ್ಕೆ ಇರುವ ಅಡೆತಡೆಗಳನ್ನು ನಿವಾರಿಸಲು ಡಿಸ್ಕಾಂಗಳು ಹಾಗೂ ರಾಜ್ಯ ಏಜೆನ್ಸಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿವೆ. ಈ ಕಾರ್ಯದಲ್ಲೂ ಈ ಕೈಪಿಡಿಯು ಹೆಚ್ಚು ಸಹಾಯಕವಾಗಲಿದೆ. ದೇಶದ ಇಂಧನ ಮಿಶ್ರಣದಲ್ಲಿ ನವೀಕರಿಸಬಹುದಾದಂಥವುಗಳ ಪಾಲು ತ್ವರಿತವಾಗಿ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ವಿದ್ಯುತ್‌ ಚಾಲಿತ ವಾಹನಗಳತ್ತ ಪರಿವರ್ತನೆಯಿಂದ ಬರುವ ಪ್ರಯೋಜನಗಳು ಮುಂಬರುವ ವರ್ಷಗಳಲ್ಲಿ ಹೆಚ್ಚು ಮಹತ್ವಪೂರ್ಣವಾಗುವ ನಿರೀಕ್ಷೆಯಿದೆ," ಎಂದು ವಿದ್ಯುತ್ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಲೋಕ್ ಕುಮಾರ್‌ ಹೇಳಿದರು.

ಪಳೆಯುಳಿಕೆ ಇಂಧನ ಚಾಲಿತ ವಾಹನಗಳಂತಲ್ಲದೆ, ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜಿಂಗ್ ಪಾಯಿಂಟ್‌ಗಳು ಲಭ್ಯವಿರುವುದಾದರೆ ಯಾವುದೇ ಸ್ಥಳದಲ್ಲಿ ಚಾರ್ಜ್ ಮಾಡಬಹುದು. ಇದಕ್ಕಾಗಿ ಇವಿ ಚಾರ್ಜಿಂಗ್ ಜಾಲಗಳನ್ನು ಯೋಜಿಸಲು ಒಂದು ವಿಶಿಷ್ಟ ಕಾರ್ಯವಿಧಾನ ಅನುಸರಿಸಬೇಕಾದ ಅಗತ್ಯವಿದೆ - ರಾತ್ರಿ ಅಥವಾ ಹಗಲಿನಲ್ಲಿ ಅವುಗಳನ್ನು ನಿಲ್ಲಿಸಿದಾಗ ಅಲ್ಲೇ ಚಾರ್ಜ್ ಮಾಡಲು ಅನುವಾಗುವಂತಿರಬೇಕು. ಸ್ಥಳೀಯ ಪ್ರಾಧಿಕಾರಗಳು ಅಗತ್ಯವಿರುವ ಸಾರ್ವಜನಿಕ ಚಾರ್ಜಿಂಗ್ ಮೂಲಸೌಕರ್ಯದ ಪ್ರಮಾಣಕ್ಕೆ ಸಂಬಂಧಿಸಿದಂತೆ ಗುರಿಗಳನ್ನು ನಿಗದಿಪಡಿಸಬೇಕು ಮತ್ತು ಯೋಜನಾ ಪ್ರಕ್ರಿಯೆಗಳಲ್ಲಿ ಈ ಗುರಿಗಳನ್ನು ಪರಿಗಣಿಸಲಾಗಿದೆಯೇ ಎಂದು ಖಾತರಿಪಡಿಸಿಕೊಳ್ಳಬೇಕು.

"ಇವಿ ಚಾರ್ಜಿಂಗ್ ಮೂಲಸೌಕರ್ಯವನ್ನು ತಮ್ಮ ಸಾರಿಗೆ ಮತ್ತು ನಗರ ಯೋಜನಾ ಚೌಕಟ್ಟಿನೊಳಗೆ ಸಂಯೋಜಿಸುವಲ್ಲಿ ಯೋಜನಾ ಪ್ರಾಧಿಕಾರಗಳ ನಿರ್ಣಾಯಕ ಪಾತ್ರವನ್ನು ಕೈಪಿಡಿ ಎತ್ತಿ ಹಿಡಿಯುತ್ತದೆ. ಹೆಚ್ಚಿನ ರಾಜ್ಯಗಳು ಮತ್ತು ನಗರಗಳು ಚಾರ್ಜಿಂಗ್‌ ಮೂಲಸೌಕರ್ಯ ಅನುಷ್ಠಾನದ ಅಗತ್ಯಗಳನ್ನು ಪರಿಗಣಿಸಲು ಆರಂಭಿಸಿರುವ ಹಿನ್ನೆಲೆಯಲ್ಲಿ ಚಾರ್ಜಿಂಗ್ ಜಾಲ ಸ್ಥಾಪನೆ ಕುರಿತಾಗಿ ಸ್ಥಳೀಯ ಯೋಜನೆಯನ್ನು ಬೆಂಬಲಿಸಲು ಈ ಕೈಪಿಡಿಯು ಸಮಯೋಚಿತ ಸಂಪನ್ಮೂಲವಾಗಿದೆ," ಎಂದು ʻಡಬ್ಲ್ಯುಆರ್‌ಐʼ ಇಂಡಿಯಾದ ಸಿಇಒ ಡಾ. ಒ ಪಿ ಅಗರ್ವಾಲ್‌ ಹೇಳಿದರು.

ಸಾರ್ವಜನಿಕ ಅಥವಾ ಖಾಸಗಿ ಚಾರ್ಜಿಂಗ್ ಪಾಯಿಂಟ್‌ಗಳ ಸದೃಢ ಹಾಗೂ ವ್ಯಾಪಕ ಜಾಲ ನಿರ್ಮಾಣವು ಇವಿ ಪರಿವರ್ತನೆಯನ್ನು ಬೆಂಬಲಿಸಲು ನಿರ್ಣಾಯಕವಾಗಿದೆ. "ಭಾರತದಲ್ಲಿ ಇವಿ ಪರಿಸರ ವ್ಯವಸ್ಥೆಯ ಅಗತ್ಯಗಳಿಗೆ ಅನುಗುಣವಾಗಿರುವ, ವೆಚ್ಚ-ಪರಿಣಾಮಕಾರಿ ಚಾರ್ಜಿಂಗ್ ಜಾಲ ಅಗತ್ಯವಾಗಿದೆ. ಈ ಬೇಡಿಕೆಗೆ ಬೆಂಬಲಿಸುವ ನಿಟ್ಟಿನಲ್ಲಿ, ಇವಿ ಚಾರ್ಜಿಂಗ್‌ಗಾಗಿ ಭಾರತೀಯ ಮಾನದಂಡಗಳು ಮತ್ತು ಮೂಲಮಾದರಿಗಳ ಅಭಿವೃದ್ಧಿಗೆ ʻಡಿಎಸ್‌ಟಿʼ ಮುಂದಾಳತ್ವ ವಹಿಸುತ್ತಿದೆ. ಈ ಕೈಪಿಡಿಯಲ್ಲಿ ವ್ಯಾಖ್ಯಾನಿಸಲಾದ ಅಗ್ಗದ ಇವಿ ಚಾರ್ಜ್ ಪಾಯಿಂಟ್‌ಗಳ ಯೋಜನಾ ಮಾದರಿಯು ಮುಂದೆ ಈ ವಲಯದಲ್ಲಿ ಬರುವಂತಹ ಮಾನದಂಡಗಳೊಂದಿಗೆ ಉತ್ತಮವಾಗಿ ಹೊಂದಿಕೊಳ್ಳುತ್ತದೆ. ಜೊತೆಗೆ ಚಾರ್ಜಿಂಗ್ ಮೂಲಸೌಕರ್ಯದ ತ್ವರಿತ ವಿಸ್ತರಣೆಗೂ ಬೆಂಬಲಿಸಬಹುದು," ಎಂದು ಡಿಎಸ್‌ಟಿ ಕಾರ್ಯದರ್ಶಿ ಡಾ. ಅಶುತೋಷ್ ಶರ್ಮಾ ಹೇಳಿದರು.

ಪ್ರತಿ 3 ‍X 3 ಗ್ರಿಡ್‌ಗೆ ಕನಿಷ್ಠ ಒಂದು ಚಾರ್ಜಿಂಗ್ ಕೇಂದ್ರವನ್ನು ಹೊಂದುವ ಅಥವಾ ಹೆದ್ದಾರಿಯಲ್ಲಿ ಪ್ರತಿ 25 ಕಿ.ಮೀ.ಗೆ ಒಂದು ಚಾರ್ಜಿಂಗ್ ಕೇಂದ್ರವನ್ನು ಹೊಂದುವ ರಾಷ್ಟ್ರೀಯ ಗುರಿಯನ್ನು ಇಂಧನ ಸಚಿವಾಲಯವು ಹೊಂದಿದೆ. ಆದಾಗ್ಯೂ ಸ್ಥಳೀಯ ಗುರಿಗಳ ನಿಗದಿ ಮತ್ತು ಯೋಜನೆಯನ್ನು ನಗರ ಸ್ಥಳೀಯ ಸಂಸ್ಥೆಗಳು ಅಥವಾ ರಾಜ್ಯದ ನೋಡಲ್ ಏಜೆನ್ಸಿಗಳಿಗೆ ಬಿಡಲಾಗಿದೆ. ಪ್ರಾಥಮಿಕವಾಗಿ ನಗರಪಾಲಿಕೆಗಳು ಮತ್ತು ಡಿಸ್ಕಾಂಗಳಂತಹ ಯೋಜನಾ ಅನುಷ್ಠಾನ ಸಂಸ್ಥೆಗಳನ್ನು ಉದ್ದೇಶಿಸಿ ಈ ಕೈಪಿಡಿಯನ್ನು ತಯಾರಿಸಲಾಗಿದ್ದರೂ ಚಾರ್ಜಿಂಗ್ ಮೂಲಸೌಕರ್ಯವನ್ನು ಸ್ಥಾಪಿಸುವ ಪ್ರಕ್ರಿಯೆಯನ್ನು ಮತ್ತಷ್ಟು ಸುಲಭಗೊಳಿಸುವ ನಿಯಂತ್ರಣ ಕ್ರಮಗಳನ್ನು ಇದು ಎತ್ತಿ ಹಿಡಿಯುತ್ತದೆ.

ಈ ಕೈಪಿಡಿಗೆ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮತ್ತು ಬೃಹತ್ ಕೈಗಾರಿಕಾ ಇಲಾಖೆಗಳಿಂದ ಬೆಂಬಲ ದೊರೆತಿದೆ.

English summary
NITI Aayog today released a handbook to guide state governments and local bodies to frame policies and norms towards setting up charging networks for electric vehicles (EV).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X