ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ನಿಫ್ಟಿ, ಇಂಟರೆಸ್ಟಿಂಗ್ ಮಾಹಿತಿಗಳು!

ಏಪ್ರಿಲ್ 25, 2017ರಂದು ನಿಫ್ಟಿ 50 ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಈ ಸಂದರ್ಭದಲ್ಲಿ ಮಾರುಕಟ್ಟೆ ತಜ್ಞರೂ ಒನ್ ಇಂಡಿಯಾ ಅಂಕಣಕಾರರಾದ ಕೆಜಿ ಕೃಪಾಲ್ ವಿಶ್ಲೇಷಣಾತ್ಮಕ ಲೇಖನವೊಂದನ್ನು ಪ್ರಸ್ತುತಪಡಿಸಿದ್ದಾರೆ

By ಕೆ ಜಿ ಕೃಪಾಲ್
|
Google Oneindia Kannada News

25ನೇ ಏಪ್ರಿಲ್ 2017ರಂದು ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ನ ಹೆಗ್ಗುರುತಾದ ನಿಫ್ಟಿ 50 ಇಂಡೆಕ್ಸ್ 9309 ಪಾಯಿಂಟುಗಳನ್ನು ದಿನದ ಮಧ್ಯಂತರದಲ್ಲಿ ತಲುಪಿ 9306 ಪಾಯಿಂಟುಗಳಲ್ಲಿ ಕೊನೆಗೊಂಡಿತು. ಇದು ದಾಖಲೆಯ ಮಟ್ಟವಾಗಿದ್ದು, ಇಲ್ಲಿಂದ ಪ್ರತಿ ಏರಿಕೆಯು ದಾಖಲೆಯಾಗುತ್ತದೆ.

ಈ ನಿಫ್ಟಿಯಲ್ಲಿ ಎಲ್ಲ ಷೇರುಗಳು ಒಂದೇ ರೀತಿ ಏರಿಕೆ ಕಂಡು, ಈ ಹಂತಕ್ಕೆ ತಲುಪಿದೆಯೇ ಎಂದು ಕೆಲವು ಹೊಸ ಹೂಡಿಕೆದಾರರಲ್ಲಿ ಅನುಮಾನ ಮೂಡಿಸಿರಬಹುದು. ಈ ಭಾವನೆ ಸರಿಯಲ್ಲ. ನಿಫ್ಟಿಯಲ್ಲಿ 50 ಸುಭದ್ರವಾದ, ಸಾಧನೆಯಾಧಾರಿತ, ವಿವಿಧ ವಲಯಗಳ ಕಂಪೆನಿಗಳಿದ್ದು, ಒಂದೊಂದು ಕಂಪೆನಿಯ ಷೇರಿನ ಚಲನೆಯು ಒಂದೊಂದು ರೀತಿ ಇರುತ್ತದೆ.[16 ಸಾವಿರ ಕೋಟಿ ಮೌಲ್ಯದ ಷೇರು ಹಿಂತೆಗೆತಕ್ಕೆ ಟಿಸಿಎಸ್ ಗೆ ಒಪ್ಪಿಗೆ]

ಆದರೆ, ಷೇರುಪೇಟೆಯಲ್ಲಿನ ಪ್ರತಿ ಬದಲಾವಣೆ ದಾಖಲೆಯಾಗುವ ಮಟ್ಟಕ್ಕೆ ನಾವು ತಲುಪಿದ್ದೇವೆ. ಇದಕ್ಕೆ ಪೂರಕವಾಗಿ ಈಗಾಗಲೇ ವಾರ್ಷಿಕ ಫಲಿತಾಂಶ ಪ್ರಕಟಿಸಿರುವ ಕಂಪೆನಿಗಳು ಸಹ ಸಾಕಷ್ಟು ಪ್ರೋತ್ಸಾಹದಾಯಕವಾಗಿರುವುದು ಗಮನಾರ್ಹ ಅಂಶ. ಈಗಿನ ಪೇಟೆಗಳನ್ನು ನಾವು ವಿಶ್ಲೇಷಣೆಗಳಿಂದ ಬೇರ್ಪಡಿಸಿ ವಾಸ್ತವ ಸಂಗತಿಗಳನ್ನಾಧರಿಸಿ ಅಧ್ಯಯನ ನಡೆಸಬೇಕಾಗುತ್ತದೆ.

ಪ್ರತಿಯೊಂದು ಘಟನೆಯನ್ನು ಜೀರ್ಣಿಸಿಕೊಂಡು ಷೇರಿನ ಬೆಲೆ ಬಿಂಬಿತವಾಗುತ್ತದೆ. ಹಾಗಾಗಿ ಅಗ್ರಮಾನ್ಯ ಕಂಪೆನಿಗಳು ಷೇರುಪೇಟೆಯ ಚಟುವಟಿಕೆ ನಂತರದಲ್ಲಿ ತಮ್ಮ ಫಲಿತಾಂಶ, ಕಾರ್ಪೊರೇಟ್ ಫಲಗಳನ್ನು ಪ್ರಕಟಿಸುತ್ತವೆ. ಪೇಟೆಯ ಚಟುವಟಿಕೆ ನಡೆಯುತ್ತಿರುವಾಗ ಪ್ರಕಟಿಸಿದಲ್ಲಿ ಷೇರಿನ ಬೆಲೆ ಗೊತ್ತು- ಗುರಿ ಇಲ್ಲದ ರೀತಿ ಏರಿಳಿತಗಳನ್ನು ಪ್ರದರ್ಶಿಸುತ್ತವೆ.[ಐಬಿ ರಿಯಲ್ ಎಸ್ಟೇಟ್ ಒಂದೇ ದಿನ ಶೇ 40ರಷ್ಟು ಏರಿಕೆ-ಇನ್ ಸೈಡ್ ಸ್ಟೋರಿ]

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಭರ್ಜರಿ ಲಾಭ

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಭರ್ಜರಿ ಲಾಭ

ಕಳೆದ ಒಂದು ವರ್ಷದಲ್ಲಿ ನಿಫ್ಟಿ ಸರ್ವಕಾಲೀನ ಗರಿಷ್ಠ ಮಟ್ಟಕ್ಕೆ ತಲುಪಿದ ಈ ಸಂದರ್ಭದಲ್ಲಿ ಅತಿ ಹೆಚ್ಚಿನ ಏರಿಕೆಯನ್ನು ಕಂಡಿರುವ ಕಂಪೆನಿ ಎಂದರೆ ಸಾರ್ವಜನಿಕ ತೈಲ ಕಂಪೆನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್. ಈ ಕಂಪೆನಿಯ ಷೇರು ಈ ವರ್ಷ 196ರ ಸಮೀಪದಿಂದ 439ರ ಗರಿಷ್ಠ ತಲುಪಿದೆ. ಈ ಕಂಪೆನಿ ಅಕ್ಟೊಬರ್ 2016ರಲ್ಲಿ ಪ್ರತಿ ಒಂದು ಷೇರಿಗೆ ಒಂದರಂತೆ ಬೋನಸ್ ನೀಡಿತು. ಬೋನಸ್ ಷೇರಿನ ಅಂಶವನ್ನು ಗಣನೆಗೆ ತೆಗೆದುಕೊಂಡ ನಂತರ ಶೇ 100 ಹೆಚ್ಚಿನ ಲಾಭವನ್ನು ವರ್ಷದ ಕನಿಷ್ಠ ಮಟ್ಟದಿಂದ ಗಳಿಸಿ ಕೊಟ್ಟಿದೆ. ಕೇವಲ ಷೇರಿನ ಬೆಲೆ ಏರಿಕೆಯಲ್ಲದೆ ಷೇರುದಾರರಿಗೆ ಪ್ರತಿ ಷೇರಿಗೆ 18ರಂತೆ ಡಿವಿಡೆಂಡ್ ಸಹ ಬೋನಸ್ ಷೇರಿನ ನಂತರ ವಿತರಿಸಿದೆ.

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಚುರುಕಾದ ಏರಿಕೆ

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಚುರುಕಾದ ಏರಿಕೆ

ಇದೇ ವಲಯದ, ನಿಫ್ಟಿ ಭಾಗವಾದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಸಹ ಚುರುಕಾದ ಏರಿಕೆ ಪ್ರದರ್ಶಿಸಿ, ನಿಫ್ಟಿಯ ಏರಿಕೆಗೆ ಪೂರಕವಾಗಿದೆ. ಈ ಷೇರು 440ರ ಕನಿಷ್ಠ ಮಟ್ಟದಿಂದ 741 ರುಪಾಯಿರವರೆಗೂ ಏರಿಕೆ ಕಂಡಿದೆ. ಕಳೆದ ಜುಲೈ ತಿಂಗಳಲ್ಲಿ 1:1ರಂತೆ ಬೋನಸ್ ಷೇರು ಸಹ ವಿತರಿಸಿದೆ, ಬೋನಸ್ ಷೇರಿನ ಅಂಶದ ಪರಿಗಣನೆಯ ನಂತರ ಶೇ 51ರಷ್ಟು ಏರಿಕೆಯಿಂದ ಹೂಡಿಕೆದಾರರನ್ನು ತೃಪ್ತಿಪಡಿಸಿದೆ. ಜೊತೆಗೆ ಪ್ರತಿ ಷೇರಿಗೆ 31.50 ರುಪಾಯಿ ಡಿವಿಡೆಂಡ್ ಸಹ ವಿತರಿಸಿದೆ.

ಪ್ರತಿ ತ್ರೈಮಾಸಿಕದ ಫಲಿತಾಂಶದ ವೇಳೆಯೂ ಡಿವಿಡೆಂಡ್

ಪ್ರತಿ ತ್ರೈಮಾಸಿಕದ ಫಲಿತಾಂಶದ ವೇಳೆಯೂ ಡಿವಿಡೆಂಡ್

ಹೌಸಿಂಗ್ ವಲಯದ ಇಂಡಿಯಾ ಬುಲ್ ಹೌಸಿಂಗ್ ಫೈನಾನ್ಸ್ ಲಿ ಕಂಪೆನಿ ಸಹ ಶೇ 53ರಷ್ಟು ಏರಿಕೆ ಕಂಡುಕೊಂಡಿದೆ. ಅಂದರೆ 613ರ ಸಮೀಪದಿಂದ 1040ರವರೆಗೂ ಜಿಗಿತವನ್ನು ಈ ವರ್ಷ ಕಂಡಿರುವ ಈ ಕಂಪೆನಿಯ ವಿಶೇಷವೆಂದರೆ ರೂ.2ರ ಮುಖಬೆಲೆಯ ಷೇರಿಗೆ ಪ್ರತಿ ತ್ರೈಮಾಸಿಕದ ಫಲಿತಾಂಶದ ಸಮಯದಲ್ಲೂ ರೂ.9ರಂತೆ ಡಿವಿಡೆಂಡ್ ನೀಡಿದೆ. ಅದೇ ವಲಯದ ಎಚ್ ಡಿಎಫ್ ಸಿ ಷೇರಿನ ಬೆಲೆಯೂ ಶೇ 38ರಷ್ಟು ಏರಿಕೆ ಕಂಡಿದೆ.

ಜೈ ಮಾರುತಿ ಸಿಕ್ಸ್ ಥೌಸಂಡ್

ಜೈ ಮಾರುತಿ ಸಿಕ್ಸ್ ಥೌಸಂಡ್

ಲೋಹ ವಲಯದ ಹಿಂಡಾಲ್ಕೋ ಕಂಪನಿಯು ಒಂದು ವರ್ಷದಲ್ಲಿ ರೂ.83ರ ಸಮೀಪದಿಂದ ರೂ.202ರವರೆಗೂ ಜಿಗಿತ ಕಂಡು, ಶೇ 94ರಷ್ಟು ಏರಿಕೆಯಿಂದ ಉತ್ತಮ ಲಾಭವನ್ನು ಹೂಡಿಕೆದಾರರಿಗೆ ಗಳಿಸಿಕೊಟ್ಟಿದೆ. ಕಾರು ಉತ್ಪಾದಕ ಕಂಪೆನಿ ಮಾರುತಿ ಸುಜುಕಿ ಶೇ 69ಕ್ಕೂ ಹೆಚ್ಚಿನ ಏರಿಕೆ ಪ್ರದರ್ಶಿಸಿದೆ. ಅಂದರೆ ರೂ. 3692 ರಿಂದ ರೂ.6359ರವರೆಗೂ ಏರಿಕೆ ಕಂಡು, ನಿಫ್ಟಿ ಏರಿಕೆಗೆ ತನ್ನ ಕೊಡುಗೆಯನ್ನು ನೀಡಿದೆ.

ಬ್ಯಾಂಕಿಂಗ್ ವಲಯದಲ್ಲಿ ಬಂಪರ್

ಬ್ಯಾಂಕಿಂಗ್ ವಲಯದಲ್ಲಿ ಬಂಪರ್

ಬ್ಯಾಂಕಿಂಗ್ ವಲಯದ ಎಚ್ ಡಿಎಫ್ ಸಿ ಬ್ಯಾಂಕ್ ಶೇ 40, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ 48, ಇಂಡಸ್ ಇಂಡ್ ಬ್ಯಾಂಕ್ ಶೇ 48, ಎಸ್ ಬ್ಯಾಂಕ್ ಶೇ 77ರ ಜಿಗಿತದಿಂದ ಮಿಂಚಿದರೆ, ಅದೇ ವಲಯದ ಐಸಿಐಸಿಐ ಬ್ಯಾಂಕ್ ಕೇವಲ ಶೇ 7ರಷ್ಟು, ಬ್ಯಾಂಕ್ ಆಫ್ ಬರೋಡ ಶೇ 15ರಷ್ಟು ಮಾತ್ರ ಏರಿಕೆ ಕಂಡಿವೆ.

ಜಿಯೋ ಜಿಂಗಾಲಾಲಾ

ಜಿಯೋ ಜಿಂಗಾಲಾಲಾ

ಜಿಯೋ ನೆಟ್ ವರ್ಕ್ ಮೂಲಕ ರಾಷ್ಟ್ರವ್ಯಾಪಿಯಾಗಲು ಪ್ರಯತ್ನಿಸುತ್ತಿರುವ ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿಯ ಷೇರಿನ ಬೆಲೆಯು ಕಳೆದ ಒಂಬತ್ತು ವರ್ಷಗಳಲ್ಲಿ ಅತ್ಯಂತ ಗರಿಷ್ಠ ದರ ರೂ.1467 ತಲುಪಿ, ನಿಫ್ಟಿ ಏರಿಕೆಗೆ ಗಮನಾರ್ಹ ಕೊಡುಗೆ ನೀಡಿದೆ. ಉಳಿದಂತೆ ಲಾರ್ಸನ್ ಅಂಡ್ ಟೋಬ್ರೋ ಶೇ 37, ಟಾಟಾ ಸ್ಟೀಲ್ ಶೇ 30, ಏಷಿಯನ್ ಪೇಂಟ್ಸ್ ಶೇ 26 ರಷ್ಟು ಏರಿಕೆ ಕಂಡುಕೊಂಡಿವೆ.

ಎಲ್ಲ ಷೇರುಗಳು ಏರಿವೆ ಎಂಬ ಭ್ರಮೆ ಬೇಡ

ಎಲ್ಲ ಷೇರುಗಳು ಏರಿವೆ ಎಂಬ ಭ್ರಮೆ ಬೇಡ

ಈ ಏರಿಕೆ ಗಮನಿಸಿ ಇಂಡೆಕ್ಸ್ ನ ಎಲ್ಲಾ ಕಂಪೆನಿಗಳು ಏರಿಕೆ ಕಾಣುತ್ತವೆ ಎಂಬ ಭ್ರಮೆ ಬೇಡ. ಪ್ರಮುಖ ಕಂಪನಿಗಳಾದ ಸನ್ ಫಾರ್ಮಾ, ಅರಬಿಂದೋ ಫಾರ್ಮಾ, ಲುಪಿನ್, ಡಾ ರೆಡ್ಡಿಸ್ ಲ್ಯಾಬ್, ಟಿಸಿಎಸ್, ಇನ್ಫೋಸಿಸ್, ವಿಪ್ರೋ ಷೇರುಗಳು ನಿಫ್ಟಿಯ ಏರಿಕೆಗೆ ಬ್ರೇಕ್ ಹಾಕಿ ಋಣಾತ್ಮಕತೆಯನ್ನು ಪ್ರದರ್ಶಿಸಿವೆ.

ಒಂದೇ ಕಂಪೆನಿಯ ಷೇರು ವಹಿವಾಟು ಹೆಚ್ಚಿರಬಹುದು

ಒಂದೇ ಕಂಪೆನಿಯ ಷೇರು ವಹಿವಾಟು ಹೆಚ್ಚಿರಬಹುದು

ಕೆಲವು ಬಾರಿ ಕೇಂದ್ರೀಕೃತ ಚಟುವಟಿಕೆಯು ಸಹ ಇಂಡೆಕ್ಸ್ ಗಳನ್ನೂ ಆಡಿಸುತ್ತವೆ. ಉದಾಹರಣೆಗೆ ಏಪ್ರಿಲ್ 25ರಂದು ನಡೆದ ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ನ ವಹಿವಾಟು ರೂ 10,425 ಕೋಟಿಯಲ್ಲಿ ರೂ.1,212 ಕೋಟಿಯಷ್ಟು ಕೊಡುಗೆ ರಿಲಯನ್ಸ್ ಇಂಡಸ್ಟ್ರೀಸ್ ನಿಂದ ಬಂದಿದೆ. ನಿಫ್ಟಿಯಲ್ಲಿರುವ ಮತ್ತೊಂದು ಕಂpeನಿ ಟಾಟಾ ಪವರ್ ಕೇವಲ ರೂ.38 ಕೋಟಿಯಷ್ಟಿದೆ.

ಬಯೋಕಾನ್ ಬದಲಾವಣೆ

ಬಯೋಕಾನ್ ಬದಲಾವಣೆ

ಪೇಟೆಯು ಬೆಂಬಲಿಸಿದರೆ ಷೇರಿನ ಬೆಲೆಗಳು ಹೇಗೆ ಜಿಗಿಯುತ್ತವೆ ಎಂಬುದಕ್ಕೆ ಏಪ್ರಿಲ್ 25ರಂದು ಬಯೋಕಾನ್ ಷೇರಿನ ಜಿಗಿತ ಉತ್ತಮ ಉದಾಹರಣೆ. ಸೋಮವಾರ ಷೇರಿನ ಬೆಲೆಯು ರೂ.1060ರಲ್ಲಿ ನೀರಸವಾಗಿತ್ತು. ಮಂಗಳವಾರದ ಆರಂಭದಲ್ಲಿ ಕಂಪೆನಿಯ ಬೋರ್ಡ್ 27ರಂದು ಬೋನಸ್ ಷೇರು ಪರಿಶೀಲಿಸಲಿದೆ ಎಂಬ ಅಂಶ ಹೊರಬಿದ್ದ ಕಾರಣ ಷೇರಿನ ಬೆಲೆಯಲ್ಲಿ ಮಿಂಚು ಸಂಚರಿಸುವಂತೆ ಮಾಡಿತು. ಷೇರಿನ ಬೆಲೆಯು ರೂ.1,188ರವರೆಗೂ ಜಿಗಿಯುವಂತೆ ಮಾಡಿ, ಅಂತಿಮವಾಗಿ ರೂ 1,152ರ ಸಮೀಪ ಕೊನೆಗೊಂಡಿತು. ಇದು ವಾರ್ಷಿಕ ಗರಿಷ್ಠವಾದರೆ, ಸರಿಯಾಗಿ ಒಂದು ವರ್ಷದ ಹಿಂದೆ ಅಂದರೆ 2016ರ ಏಪ್ರಿಲ್ 25ರಂದು ಷೇರಿನ ಬೆಲೆ ರೂ 550.85 ರಲ್ಲಿ ಇದ್ದದ್ದು ವಾರ್ಷಿಕ ಕನಿಷ್ಠವಾಗಿತ್ತು.

ಚರಿತ್ರೆಯ ಪಾಠ ಕಲಿಯಬೇಕು

ಚರಿತ್ರೆಯ ಪಾಠ ಕಲಿಯಬೇಕು

ಪೇಟೆಯ ಒಳಗೆ ಹರಿದುಬರುತ್ತಿರುವ ಹಣವು ಷೇರಿನ ಬೆಲೆಗಳನ್ನು ಹೆಚ್ಚು ಏರಿಳಿತ ಮಾಡುತ್ತಿದೆ. ಏರಿಕೆ ಸಂದರ್ಭದಲ್ಲಿ ಮಣ್ಣಿಗೂ ಬಂಗಾರದ ಬೆಲೆಯಿರುತ್ತದೆ, ಈ ಸಂದರ್ಭದಲ್ಲಿ ಅತಿ ಹೆಚ್ಚಿನ ಎಚ್ಚರಿಕೆ ಅಗತ್ಯ. ಪೇಟೆ ಇಳಿಕೆಯತ್ತ ತಿರುಗಿದರೆ ಬಂಗಾರವನ್ನು ಮಣ್ಣಿನ ಬೆಲೆಯಲ್ಲಿ ಮಾರಾಟ ಮಾಡಬೇಕಾಗಬಹುದು ಎಂದು ಹಿಂದಿನ ಚರಿತ್ರೆ ಹೇಳುತ್ತದೆ.

English summary
Nifty all time high, crosses 9300 points on April 25th 2017. Here is an analysis of stock market by Oneindia columnist and stock broker KG Krupal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X