ಏರ್ಟೆಲ್, ವೊಡಾಫೋನ್ ಬಳಿಕ ಜಿಯೋ ಸರದಿ: ದರ ಹೆಚ್ಚಳ ಮಾಡಲು ಸಿದ್ಧತೆ
ನವದೆಹಲಿ, ನವೆಂಬರ್ 20: ನಷ್ಟ ಸರಿದೂಗಿಸಲು ಮತ್ತು ದೂರಸಂಪರ್ಕ ಕ್ಷೇತ್ರದ ಪೈಪೋಟಿಯಲ್ಲಿ ಉಳಿದುಕೊಳ್ಳಲು ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಸಂಸ್ಥೆಗಳು ಮೊಬೈಲ್ ಫೋನ್ ಸೇವೆಗಳ ಟಾರಿಫ್ ದರವನ್ನು ಹೆಚ್ಚಿಸುವ ಘೋಷಣೆ ಮಾಡಿದ ಬೆನ್ನಲ್ಲೇ ರಿಲಯನ್ಸ್ ಜಿಯೋ ಕೂಡ ಗ್ರಾಹಕರಿಗೆ ಹೊರೆ ಹೆಚ್ಚಿಸಲು ಮುಂದಾಗಿದೆ.
ನಿಯಮಗಳ ಅನುಸಾರವಾಗಿ ಮುಂದಿನ ಕೆಲವು ವಾರಗಳಲ್ಲಿ ಫೋನ್ ಕರೆ ಮತ್ತು ಡಾಟಾ ಬಳಕೆಯ ಮೇಲಿನ ದರವನ್ನು ಹೆಚ್ಚಿಸುವುದು ಅನಿವಾರ್ಯವಾಗಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ನ ದೂರಸಂಪರ್ಕ ಘಟಕ ರಿಲಯನ್ಸ್ ಜಿಯೋ ಸುಳಿವು ನೀಡಿದೆ.
ಗ್ರಾಹಕರಿಗೆ ಶಾಕ್ ನೀಡಿದ ಏರ್ಟೆಲ್, ವೊಡಾಫೋನ್
ಡಿ. 1ರಿಂದ ಅನ್ವಯವಾಗುವಂತೆ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಸಂಸ್ಥೆಗಳು ತಮ್ಮ ಪ್ರೀಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ದರಗಳಲ್ಲಿ ಹೆಚ್ಚಳ ಮಾಡುವುದಾಗಿ ತಿಳಿಸಿದ್ದವು. ಭಾರಿ ನಷ್ಟದಲ್ಲಿರುವ ಸಂಸ್ಥೆಗಳನ್ನು ದೂರಸಂಪರ್ಕ ಕ್ಷೇತ್ರದಲ್ಲಿ ಉಳಿಸಿಕೊಳ್ಳಲು ಮೊಬೈಲ್ ಸೇವೆಗಳ ಮೇಲಿನ ದರದಲ್ಲಿ ತುಸು ಹೆಚ್ಚಳ ಮಾಡಬೇಕಾಗಿದೆ ಎಂದು ಹೇಳಿಕೊಂಡಿವೆ. ಈ ಸಂಸ್ಥೆಗಳು ಸುಮಾರು 74 ಸಾವಿರ ಕೋಟಿ ನಷ್ಟದ ಜತೆಗೆ 80 ಸಾವಿರ ಕೋಟಿಗೂ ಅಧಿಕ ಮೊತ್ತದ ಎಜಿಆರ್ (ಹೊಂದಾಣಿಕೆಯ ಒಟ್ಟು ಆದಾಯ) ಬಾಕಿ ಉಳಿಸಿಕೊಂಡಿದ್ದು, ಅವುಗಳನ್ನು ಶೀಘ್ರವೇ ಸರ್ಕಾರಕ್ಕೆ ಪಾವತಿಸಬೇಕಾಗಿದೆ.

ಟ್ರಾಯ್ ನಿಯಮಕ್ಕೆ ಬದ್ಧ
'ದೂರಸಂಪರ್ಕ ಟಾರಿಫ್ಗಳ ಪರಿಷ್ಕರಣೆಗೆ ಸಮಾಲೋಚನಾ ಪ್ರಕ್ರಿಯೆ ಆರಂಭಿಸಲು ಟ್ರಾಯ್ ಮುಂದಾಗಿದೆ ಎಂಬುದು ನಮಗೆ ತಿಳಿದಿದೆ. ಇತರೆ ಆಪರೇಟರ್ಗಳಂತೆಯೇ ನಾವು ಕೂಡ ಸರ್ಕಾರದ ಜತೆಗೆ ಕೆಲಸ ಮಾಡುತ್ತೇವೆ ಮತ್ತು ಭಾರತೀಯ ಗ್ರಾಹಕರಿಗೆ ಅನುಕೂಲವಾಗುವಂತೆ ಉದ್ದಿಮೆಯನ್ನು ಬಲಪಡಿಸುವ ನಿಯಂತ್ರಣ ನಿಯಮಗಳಿಗೆ ಬದ್ಧರಾಗಿರುತ್ತೇವೆ. ಹೂಡಿಕೆಯನ್ನು ಸುಸ್ಥಿರವಾಗಿರಿಸಲು ಮತ್ತು ಡಿಜಿಟಲ್ ಅಳವಡಿಕೆಯಲ್ಲಿನ ಬೆಳವಣಿಗೆಯನ್ನು ಉತ್ತೇಜಿಸಲು ಹಾಗೂ ಡಾಟಾ ಬಳಕೆಗೆ ಅಡ್ಡಪರಿಣಾಮ ಬೀರದ ರೀತಿಯಲ್ಲಿ ಮುಂದಿನ ಕೆಲವು ವಾರಗಳಲ್ಲಿ ಸೂಕ್ತ ರೀತಿಯಲ್ಲಿ ಟಾರಿಫ್ ಹೆಚ್ಚಳ ಮಾಡಲಾಗುವುದು' ಎಂದು ಜಿಯೋ ಹೇಳಿಕೆಯಲ್ಲಿ ತಿಳಿಸಿದೆ.

ಗ್ರಾಹಕರಿಗೆ ಉತ್ತಮ ಸೇವೆ
'ಸುಸ್ಥಿರ ವಲಯಕ್ಕಾಗಿ ಜಿಯೋ ಹೊಂದಿರುವ ಬದ್ಧತೆಯನ್ನು ಖಾತರಿಪಡಿಸುವುದರ ಜತೆಗೆ, ಜಿಯೋ ಎಂದಿಗೂ ಮಾರುಕಟ್ಟೆ ಸ್ಥಳದಲ್ಲಿ ಗುಣಮಟ್ಟ ಮತ್ತು ಸೇವೆಗಳ ಆಧಾರದಲ್ಲಿ ಸ್ಪರ್ಧಿಸುತ್ತದೆ. ಗ್ರಾಹಕ ಪರ ಸಂಸ್ಥೆಯಾಗಿ ನಮ್ಮ ಗ್ರಾಹಕರಿಗೆ ಎಂದಿಗೂ ಅತ್ಯುತ್ತಮ ಸೇವೆಯನ್ನು ಒದಗಿಸುತ್ತೇವೆ' ಎಂದು ಜಿಯೋ ತಿಳಿಸಿದೆ.
92,000 ಕೋಟಿ ರೂ ಪಾವತಿಸಿ: ಏರ್ಟೆಲ್, ವೊಡಾಫೋನ್ಗೆ ಸುಪ್ರೀಂಕೋರ್ಟ್ ಸೂಚನೆ

ದರ ಹೆಚ್ಚಳ ಎಷ್ಟೆಂದು ತಿಳಿದಿಲ್ಲ
'ಜಿಯೋ ಪ್ರತಿಯೊಂದಕ್ಕೂ ಗ್ರಾಹಕನನ್ನೇ ಕೇಂದ್ರವಾಗಿಟ್ಟುಕೊಳ್ಳಲಿದೆ ಮತ್ತು ಗ್ರಾಹಕರು ಅದರ ಪ್ರಯೋಜನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆದುಕೊಳ್ಳುವುದನ್ನು ಮುಂದುವರಿಸುತ್ತಾರೆ ಎಂಬ ಭರವಸೆ ಹೊಂದಿದೆ. ಜಗತ್ತಿನ ಅತ್ಯಂತ ದೊಡ್ಡ ಡಾಟಾ ಮಾರುಕಟ್ಟೆಯಾಗಿರುವ ಭಾರತದಲ್ಲಿ ತನ್ನ ಜಾಗತಿಕ ನಾಯಕತ್ವವನ್ನು ಸ್ಥಿರವಾಗಿ ಉಳಿಸಿಕೊಳ್ಳಲು ನೆರವಾಗಲು ಜಿಯೋ ಬದ್ಧವಾಗಿದೆ' ಎಂದು ಹೇಳಿದೆ. ಆದರೆ ಜಿಯೋ ತನ್ನ ಟಾರಿಫ್ ದರದಲ್ಲಿ ಎಷ್ಟು ಹೆಚ್ಚಳವಾಗಲಿದೆ ಎಂಬುದನ್ನು ತಿಳಿಸಿಲ್ಲ.

ಪ್ರತಿ ನಿಮಿಷಕ್ಕೆ ಆರು ಪೈಸೆ
ರಿಚಾರ್ಜ್ ಮಾಡಿಸುವ ಗ್ರಾಹಕರಿಗೆ ಕರೆ ಮತ್ತು ಡಾಟಾ ಸೇವೆಗಳಿಗೆ ಹೆಚ್ಚುವರಿ ಕಡಿತವಿಲ್ಲದೆ ಸೌಲಭ್ಯ ನೀಡುತ್ತಿದ್ದ ಜಿಯೋ, ತನ್ನ ಗ್ರಾಹಕರಿಗೆ ಅಕ್ಟೋಬರ್ನಲ್ಲಿ ಹೊಸ ದರ ವಿಧಿಸಿತ್ತು. ಜಿಯೋ ಹೊರತುಪಡಿಸಿ ಇತರೆ ನೆಟ್ವರ್ಕ್ ಬಳಕೆದಾರರಿಗೆ ಕರೆ ಮಾಡಿದರೆ ನಿಮಿಷಕ್ಕೆ ಆರು ಪೈಸೆ ದರ ವಿಧಿಸುವ ನಿರ್ಧಾರ ತೆಗೆದುಕೊಂಡಿತ್ತು. ಈ ಪ್ರತಿ ನಿಮಿಷದ ಆರುಪೈಸೆಯನ್ನು ಬಳಸಿದಂತೆ ಅಷ್ಟೇ ಮೊತ್ತದ ಡಾಟಾ ಸೇವೆಯನ್ನು ಉಚಿತವಾಗಿ ನೀಡಲು ಆರಂಭಿಸಿತ್ತು.
ವಾಯ್ಸ್ ಕಾಲ್ ಗೆ ದರ ನಿಗದಿ #BoycottJio ಟ್ವಿಟ್ಟರಲ್ಲಿ ಟ್ರೆಂಡಿಂಗ್!