ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್ ಗೊಣಗಾಟಕ್ಕೆ ಸರ್ಕಾರ ಗೋಣು ಆಡಿಸಬೇಕೇ?

By ಶ್ರೀಧರ್ ಕೆದಿಲಾಯ, ಉಡುಪಿ
|
Google Oneindia Kannada News

ಮೂಲ ಸೌಕರ್ಯ ಕೊರತೆ ನೆಪವೊಡ್ಡಿ ಇನ್ಫೋಸಿಸ್ ಸಂಸ್ಥೆ ಮತ್ತೊಮ್ಮೆ ಕರ್ನಾಟಕ ಸರ್ಕಾರಕ್ಕೆ ಬೆದರಿಕೆ ಒಡ್ಡಿದೆ. ದೇವನಹಳ್ಳಿ ಸಮೀಪದ ಐಟಿ ಪಾರ್ಕಿನಲ್ಲಿ ಕಾಲಿಡಲು ಆಗುವುದಿಲ್ಲ. ಒಳ್ಳೆ ಸೌಕರ್ಯ ಒದಗಿಸಿದರೆ ನಾವು ಇಲ್ಲೇ ಇರುತ್ತೇವೆ ಇಲ್ಲದಿದ್ದರೆ ಬೇರೆ ರಾಜ್ಯದಲ್ಲಿ ನಮ್ಮ ಕೇಂದ್ರ ಸ್ಥಾಪಿಸುತ್ತೇವೆ ಎಂಬರ್ಥದಲ್ಲಿ ಸಾಫ್ಟ್ ವೇರ್ ಅಧಿಕಾರಿಗಳು ಗೊಣಗಿದ್ದಾರೆ. ಇದಕ್ಕೆ ಮಾನ್ಯ ಐಟಿ ಸಚಿವ 'ಎಸ್ಸಾರ್' ಪಾಟೀಲರು ದಯವಿಟ್ಟು ಇಲ್ಲೇ ಇರಿ ಎಂದು ದುಂಬಾಲು ಬಿದ್ದಿದ್ದಾರೆ. [ಇನ್ಫೋಸಿಸ್ ಸಿಕ್ಕಾ ಸಿಕ್ಕಾಪಟ್ಟೆ ಸಂಬಳ ಏರಿಸ್ತಾರಪ್ಪ!]

ಇದೀಗ ಬಂದ ಸುದ್ದಿ ಪ್ರಕಾರ, ಇನ್ಫೋಸಿಸ್ ಸಂಸ್ಥೆ ಬೆಂಗಳೂರು ಬಿಟ್ಟು ಹೊರಕ್ಕೆ ಹೋಗುವುದಿಲ್ಲವಂತೆ. ದೇವನಹಳ್ಳಿ ಯೋಜನೆಯನ್ನು ಸದ್ಯಕ್ಕೆ ಎಲೆಕ್ಟ್ರಾನಿಕ್ ಸಿಟಿಗೆ ಶಿಫ್ಟ್ ಮಾಡುತ್ತೇವೆ. ನಂತರ ರಾಜ್ಯ ಬೇರೆ ಕಡೆ ಸ್ಥಾಪಿಸುತ್ತೇವೆ ಎಂದು ಉಪಾಧ್ಯಕ್ಷ ರಾಮದಾಸ್ ಕಾಮತ್ ಖಾಸಗಿ ಸುದ್ದಿ ವಾಹಿನಿಗೆ ಪ್ರತಿಕ್ರಿಯಿಸಿದ್ದಾರೆ. ಈ ಬೆಳವಣಿಗೆ ಹಾಗಿರಲಿ ಇನ್ಫೋಸಿಸ್, ಸರ್ಕಾರದ ಧೋರಣೆ ಬಗ್ಗೆ ವಿವರಣೆ ಮುಂದಿದೆ ಓದಿ...[ದೇಣಿಗೆ ನೀಡಿದ ಐಟಿ ದಿಗ್ಗಜ ಇನ್ಪೋಸಿಸ್]

ಸುಮಾರು 1.4 ಲಕ್ಷ ಉದ್ಯೋಗಿಗಳನ್ನು ಹೊಂದಿರುವ ಬೆಂಗಳೂರು ಮೂಲದ ದೇಶದ ಎರಡನೇ ಅತಿದೊಡ್ಡ ಸಂಸ್ಥೆ ಇನ್ಫೋಸಿಸ್ ಅಸಮಾಧಾನ ಸಹಜವಾದದ್ದೆ. ಆದರೆ, ಸರ್ಕಾರ ಕೊಟ್ಟಿರುವ ಜಾಗದ ಬಗ್ಗೆ ಅಪಸ್ವರ ಎತ್ತುತ್ತಿರುವುದು ಇದೇ ಮೊದಲಲ್ಲ. ದೇವೇಗೌಡರ ಕಾಲದಿಂದಲೂ ಇದೇ ರೀತಿ ರಾಗ ಹಾಡಿಕೊಂಡೇ ತೆರಿಗೆ ವಿನಾಯಿತಿ ಪಡೆದುಕೊಂಡು ಐಟಿ ಅಭಿವೃದ್ಧಿ ಮಾಡುವ ನೆಪದಲ್ಲಿ ತನ್ನ ಜೋಳಿಗೆ ತುಂಬಿಸಿಕೊಳ್ಳುತ್ತಿದೆ. ಈಗ ಇನ್ಫೋಸಿಸ್ ವಾರ್ಷಿಕವಾಗಿ ಸುಮಾರು 8 ಬಿಲಿಯನ್ ಆದಾಯವನ್ನು ಹೊಂದಿದೆ.

ನಾಲ್ಕು ವರ್ಷದ ಹಿಂದೆ ಸಿಕ್ಕಿದ್ದ ಭೂಮಿ

ನಾಲ್ಕು ವರ್ಷದ ಹಿಂದೆ ಸಿಕ್ಕಿದ್ದ ಭೂಮಿ

ಜೂನ್ 2010ರಲ್ಲಿ ಕೆಐಎಡಿಬಿಯಿಂದ ಎಕರೆಗೆ 1.8 ಕೋಟಿ ರು ನಂತೆ 100 ಎಕರೆ ಪಡೆದುಕೊಂಡಿರುವ ಇನ್ಫೋಸಿಸ್ ನಾಲ್ಕು ವರ್ಷಗಳ ನಂತರ ಮೂಲ ಸೌಕರ್ಯದ ಬಗ್ಗೆ ಸೊಲ್ಲೆತ್ತುತ್ತಿರುವುದೇಕೆ? 100 ಎಕರೆ ಜೊತೆಗೆ 60 ಎಕರೆ ಹೊಂದಿಕೊಂಡಿರುವ ಭೂಮಿಯಲ್ಲಿ ಏನು ಸ್ಥಾಪನೆಯಾಗಲಿದೆ? ಐಟಿ ಕಂಪನಿಗೆ ಮೂಲ ಸೌಕರ್ಯ ಒದಗಿಸಿಕೊಳ್ಳುವುದು ಅಷ್ಟು ಕಷ್ಟವೇ? ಹೇಗಿದ್ದರೂ ಸರ್ಕಾರಿ ಹಾಗೂ ಸಾರ್ವಜನಿಕ ಸಹಭಾಗಿತ್ವದ ಪಿಪಿಪಿ ಯೋಜನೆಗಳಿವೆ.

ಅದರಲ್ಲಿ ಹೂಡಿಕೆ ಮಾಡಿ ಮೂಲ ಸೌಕರ್ಯ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲವೇ? ಜನಪಯೋಗಿ ಯೋಜನೆಗೆ ಕೈ ಜೋಡಿಸಲು ಸಾಧ್ಯವಿಲ್ಲವೇ?
ಇನ್ಫೋಸಿಸ್ ಬೇಡಿಕೆಗಳೇನು?

ಇನ್ಫೋಸಿಸ್ ಬೇಡಿಕೆಗಳೇನು?

ನಗರದಿಂದ ಸುಮಾರು ದೂರದಲ್ಲಿರುವ ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣದ ಬಳಿ 1000 ಎಕರೆ ವಿಸ್ತೀರ್ಣದ ಭೂಮಿಯಲ್ಲಿ ತಲೆ ಎತ್ತಲಿರುವ ಐಟಿ ಪಾರ್ಕಿಗೆ ಹೋಗಿ ಬರಲು ನಾಲ್ಕು ಲೇನ್ ರಸ್ತೆ ಬೇಕಿದೆ. ಕುಡಿಯುವ ನೀರು, ಎಕ್ಸ್ ಪ್ರೆಸ್ ವೇ ಇತ್ಯಾದಿ ಬೇಡಿಕೆ ಸಲ್ಲಿಸಿದೆ. ಬೇಡಿಕೆಗಳು ಈಡೇರದಿದ್ದರೆ ಜಮೀನು ಖರೀದಿಗಾಗಿ ನೀಡಿರುವ ಠೇವಣಿ ಹಣ ವಾಪಸ್ ಮಾಡುವಂತೆ ಇನ್ಫೋಸಿಸ್ ಕೆಐಎಡಿಬಿಗೆ ಪತ್ರ ಬರೆದಿದೆ.

ಸರ್ಕಾರ ನಮ್ಮ ಬಗ್ಗೆ ಗಮನ ಹರಿಸುತ್ತಿಲ್ಲ

ಸರ್ಕಾರ ನಮ್ಮ ಬಗ್ಗೆ ಗಮನ ಹರಿಸುತ್ತಿಲ್ಲ

ಇನ್ಫೋಸಿಸ್ ಎಲೆಕ್ಟ್ರಾನಿಕ್ ಸಿಟಿಗೆ ಮೊದಮೊದಲು ಕಾಲಿಟ್ಟಾಗ ಇದ್ದ ಪರಿಸ್ಥಿತಿಗಿಂತ ದೇವನಹಳ್ಳಿಯ ಉದ್ದೇಶಿತ ಐಟಿ ಪಾರ್ಕ್ ಜಾಗ ಉತ್ತಮವಾಗೇ ಇದೆ.

ಅದರೆ, ರಸ್ತೆ ಇಲ್ಲ, ನೀರಿಲ್ಲ, ಸರ್ಕಾರ ನಮ್ಮ ಬಗ್ಗೆ ಗಮನ ಹರಿಸುತ್ತಿಲ್ಲ. ಮೂಲ ಸೌಕರ್ಯ ಒದಗಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಇನ್ಫೋಸಿಸ್ ನ ಕಾರ್ಯಕಾರಿ ಉಪಾಧ್ಯಕ್ಷ ರಾಮದಾಸ್ ಕಾಮತ್ ಪ್ರತಿಕ್ರಿಯಿಸಿದ್ದಾರೆ.

ಸರ್ಕಾರ ಮುಂದೇನು ಮಾಡಲಿದೆ?

ಸರ್ಕಾರ ಮುಂದೇನು ಮಾಡಲಿದೆ?

ಪರರಾಜ್ಯದತ್ತ ಮುಖ ಮಾಡಿರುವ ಇನ್ಫೋಸಿಸ್ ತಡೆಯಲು ಐಟಿ ಸಚಿವ ಎಸ್.ಆರ್.ಪಾಟೀಲ್ ನೇತೃತ್ವದಲ್ಲಿ ನವೆಂಬರ್ 6ರಂದು ತುರ್ತು ಸಭೆ ನಡೆಸಲಾಗುತ್ತದೆ. 'ಇನ್ಫೋಸಿಸ್ ಬೇಡಿಕೆ ಈಡೇರಿಸುತ್ತೇವೆ. ಯಾವುದೇ ಕಾರಣಕ್ಕೂ ರಾಜ್ಯದಿಂದ ಹೊರ ಹೋಗಲು ಬಿಡುವುದಿಲ್ಲ. ದೇವನಹಳ್ಳಿಯಲ್ಲೇ ಸಾಫ್ಟ್ ವೇರ್ ಅಭಿವೃದ್ಧಿ ಕೇಂದ್ರ ಸ್ಥಾಪನೆಯಾಗಲಿದೆ. ಮೂಲಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪಾಟೀಲರು ಹೇಳಿದ್ದಾರೆ.

ರತ್ನಪ್ರಭಾ ಅವರ ಹೇಳಿಕೆ

ರತ್ನಪ್ರಭಾ ಅವರ ಹೇಳಿಕೆ

ವಾಣಿಜ್ಯ ಮತ್ತು ಕೈಗಾರಿಕಾ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ನಾವು ರೀಫಂಡ್ ಬಗ್ಗೆ ಚಿಂತಿಸುತ್ತಿಲ್ಲ. ಹೂಡಿಕೆದಾರರ ಜೊತೆ ಮಾತುಕತೆ ನಡೆಸಿ ಶೀಘ್ರದಲ್ಲೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದಿದ್ದಾರೆ.

ಈಗ ಕರ್ನಾಟಕದಲ್ಲೇ ಉಳಿಯುವ ಮಾತನಾಡಿರುವ ಇನ್ಫೋಸಿಸ್ ಗಾಗಿ ಹೊಸ ಜಾಗ ಹುಡುಕಾಟ ಮಾಡುವಂತೆ ಆಯುಕ್ತರಿಗೆ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರು ಸೂಚಿಸಬಹುದಾಗಿದೆ. ಈ ಎಲ್ಲಾ ಮಾಹಿತಿ ಐಟಿ ಸಚಿವ ಪಾಟೀಲರು ಹಾಗೂ ನಂತರ ಸಿಎಂ ಸಿದ್ದರಾಮಯ್ಯ ಅವರಿಗೆ ತಲುಪಲಿದೆ.

ಬೆಂಗಳೂರಿಗೆ ಬಂದ ಚಂದ್ರಬಾಬು ನಾಯ್ಡು

ಬೆಂಗಳೂರಿಗೆ ಬಂದ ಚಂದ್ರಬಾಬು ನಾಯ್ಡು

ಭಾರಿ ಆಮಿಷವೊಡ್ಡಿ ದೊಡ್ಡ ದೊಡ್ಡ ಕಂಪನಿಗಳನ್ನು ತಮ್ಮ ರಾಜ್ಯಕ್ಕೆ ಸೆಳೆಯುವಲ್ಲಿ ಚಾಣಕ್ಷ ಎನಿಸಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಬೆಂಗಳೂರಿಗೆ ಆಗಮಿಸಿರುವ ಸಂದರ್ಭದಲ್ಲೇ ಇನ್ಫೋಸಿಸ್ ತಗಾದೆ ಎತ್ತಿರುವುದು ಗಮನಾರ್ಹ.

ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದ ಉದ್ಯಮಿಗಳನ್ನು ತಮ್ಮ ರಾಜ್ಯಕ್ಕೆ ಕರೆದೊಯ್ಯಲು ನಾಯ್ಡು ಅವರು ಬಂದಿದ್ದಾರೆ ಎಂಬುದು ಲೋಕಕ್ಕೆ ಗೊತ್ತಿದೆ. ರೋಡ್ ಶೋ ಮೂಲಕ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ನಾಯ್ಡು ಆಗಮನವಾಗಿದೆ. ಇತ್ತೀಚೆಗೆ ಹರ್ಯಾಣ, ಗುಜರಾತ್ ಸರ್ಕಾರ ಕೂಡಾ ನಮ್ಮ ಬೆಂಗಳೂರಿನ ಐಟಿ ಕಂಪನಿಗಳಿಗೆ ಗಾಳ ಹಾಕಿ ಹೋಗಿವೆ.

ಚಂದ್ರಬಾಬು ನಾಯ್ಡು ಅವರು ನಮ್ಮ ಸಿಎಂ ಸಿದ್ದರಾಮಯ್ಯ ಅವರ ಜೊತೆ ಉ.ಕು.ಸಾಂ ಎಂದು ಮಾತನಾಡಲು ನ.10ರಂದು ಮತ್ತೊಮ್ಮೆ ಕಾಲಿಡಲಿದ್ದಾರೆ. ಆಗ ತುಂಗಭದ್ರಾ, ಕೃಷ್ಣಾ ನೀರು ಹಂಚಿಕೆ ಬಗ್ಗೆ ಚರ್ಚಿಸಲಿದ್ದಾರೆ.

ಉದ್ಯೋಗ ಖಾತ್ರಿ?

ಉದ್ಯೋಗ ಖಾತ್ರಿ?

ಇನ್ಫೋಸಿಸ್ ರಾಗಕ್ಕೆ ತಕ್ಕಂತೆ ತಾಳ ಹಾಕುವ ನಮ್ಮ ಸರ್ಕಾರಕ್ಕೆ ಶಕ್ತಿ ಸಾಮರ್ಥ್ಯಗಳಿದ್ದರೆ, ಉದ್ಯೋಗ ಖಾತ್ರಿ ಯೋಜನೆ ಅಥವಾ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಜಾರಿಗೊಳಿಸಲಿ. ಇನ್ಫೋಸಿಸ್ ನಲ್ಲಿ ಕನ್ನಡಿಗರಿಗೆ ಎಷ್ಟರಮಟ್ಟಿಗೆ ಉದ್ಯೋಗ ಸಿಕ್ಕಿದೆ. ಸಿಗುತ್ತಿದೆ ಎಂಬುದರ ಬಗ್ಗೆ ಹೆಚ್ಚಿನ ವಿವರಣೆ ಬೇಕಿಲ್ಲ. ಇದು ವ್ಯಾಪಾರ, ವ್ಯವಹಾರ ಎಂದ ಮೇಲೆ ಪ್ರತಿಭಾವಂತರೇ ಬೇಕಾದರೆ ಅದು ಇಲ್ಲಿಯವರೇ ಯಾಕಾಗಬಾರದು? ಇಲ್ಲಿನ ಸೌಕರ್ಯ ಬಳಸಿಕೊಳ್ಳುವ ಸಂಸ್ಥೆ ಸ್ಥಳೀಯರಿಗೆ ಉದ್ಯೋಗ ಕೊಡದಿದ್ದ ಮೇಲೆ ಅವರಿಗೆ ಮಣೆ ಹಾಕುವುದೇಕೆ?

English summary
India's second largest software services firm Infosys has pulled out of the proposed software development centre project to be set up near Bengaluru citing lack of infrastructure. Why should Karnataka Government plead IT giant to stay questions citizen journalist Sridhar Kedilaya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X