ಪಾರ್ಲೆಯನ್ನೇ ನುಂಗಿದ ಜಿಎಸ್ಟಿ: ಬಿಸ್ಕತ್ಗೆ ಬೇಡಿಕೆ ತೀವ್ರ ಕುಸಿತ
ನವದೆಹಲಿ, ಆಗಸ್ಟ್ 21: ದೇಶದ ಅತಿ ದೊಡ್ಡ ಬಿಸ್ಕತ್ ತಯಾರಕ ಸಂಸ್ಥೆ ಪಾರ್ಲೆ ಪ್ರಾಡಕ್ಟ್ಸ್ ಬೇಡಿಕೆ ಕುಸಿದ ಕಾರಣಕ್ಕೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಪರಿಣಾಮವಾಗಿ ಸಂಸ್ಥೆಯ ಸುಮಾರು 10,000 ನೌಕರರು ಕೆಲಸ ಕಳೆದುಕೊಳ್ಳುವ ಭೀತಿಗೆ ಒಳಗಾಗಿದ್ದಾರೆ.
1929ರಲ್ಲಿ ಪಾರ್ಲೆ ಪ್ರಾಡಕ್ಟ್ಸ್ನಲ್ಲಿ ಸುಮಾರು 1 ಲಕ್ಷದಷ್ಟು ಮಂದಿ ಕೆಲಸ ಮಾಡುತ್ತಿದ್ದಾರೆ. ಪಾರ್ಲೆ ಒಟ್ಟು 125 ಉತ್ಪಾದನಾ ಘಟಕಗಳನ್ನು ಹೊಂದಿದ್ದು, 10 ಕಂಪೆನಿ ಮಾಲೀಕತ್ವದ ಘಟಕಗಳಿವೆ.
2 ದಶಕದಲ್ಲಿಯೇ ವಾಹನ ಉದ್ಯಮಕ್ಕೆ ಭಾರಿ ಸಂಕಷ್ಟ: ಕೆಲಸ ಕಳೆದುಕೊಂಡ 2.30 ಲಕ್ಷ ಮಂದಿ
ಪಾರ್ಲೆ ಬಿಸ್ಕತ್ನ ಮಾರಾಟದಲ್ಲಿ ಗಣನೀಯ ಕುಸಿತವಾಗಿದೆ. ಹೀಗಾಗಿ ಉತ್ಪಾದನೆಯನ್ನು ತಗ್ಗಿಸಲು ಚಿಂತನೆ ನಡೆಸಲಾಗಿದೆ. ಇದರ ಪರಿಣಾಮ 8-10 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುವ ಪ್ರಮೇಯ ಎದುರಾಗಬಹುದು ಎಂದು ಕಂಪೆನಿಯ ಉತ್ಪಾದನೆ ಮತ್ತು ಮಾರಾಟ ವಿಭಾಗದ ಮುಖ್ಯಸ್ಥ ಮಯಂಕ್ ಶಾ ತಿಳಿಸಿದರು.
ಈಗಾಗಲೇ ವಾಹನ ಉದ್ಯಮ ಬೇಡಿಕೆ ಕುಸಿತದಿಂದ ನಷ್ಟಕ್ಕೆ ಒಳಗಾಗಿದ್ದು, ಉದ್ಯೋಗ ಕಡಿತ ಪರ್ವ ಆರಂಭಿಸಿದೆ. ಬಿಸ್ಕತ್ ತಯಾರಕ ಕಂಪೆನಿಗಳು ಕೂಡ ಈ ಸಾಲಿಗೆ ಸೇರಿಕೊಳ್ಳುತ್ತಿವೆ. ಬ್ರಿಟಾನಿಯಾ ಸಹ ತನ್ನ ಬೇಡಿಕೆ ಕಳೆದುಕೊಂಡಿದೆ.

ಪರಿಸ್ಥಿತಿ ತೀರಾ ಶೋಚನೀಯ
'ಪರಿಸ್ಥಿತಿ ತೀರಾ ಶೋಚನೀಯವಾಗಿದೆ. ಸರ್ಕಾರ ಈ ಕೂಡಲೇ ಮಧ್ಯಪ್ರವೇಶ ಮಾಡದೆ ಹೋದರೆ ಉದ್ಯೋಗಿಗಳನ್ನು ವಜಾಗೊಳಿಸಬೇಕಾದ ಅನಿವಾರ್ಯ ಒತ್ತಡಕ್ಕೆ ನಾವು ಸಿಲುಕಬೇಕಾಗುತ್ತದೆ' ಎಂದು ಅವರು ಹೇಳಿದರು.
ಪಾರ್ಲೆ-ಜಿ, ಮೊನ್ಯಾಕೋ ಮತ್ತು ಮಾರಿ ಬ್ರ್ಯಾಂಡ್ ಸೇರಿದಂತೆ ವಿವಿಧ ಬಗೆಯ ಬಿಸ್ಕತ್ಗಳನ್ನು ಪಾರ್ಲೆ ತಯಾರಿಸುತ್ತದೆ. ಕಂಪೆನಿಯು ಪ್ರಸ್ತುತ 1.4 ಶತಕೋಟಿ ಡಾಲರ್ಗೂ ಅಧಿಕ ವಾರ್ಷಿಕ ಆದಾಯ ಹೊಂದಿದೆ. ಆದರೆ, ಈಗ ಈ ಆದಾಯದಲ್ಲಿ ಗಣನೀಯ ಕುಸಿತವಾಗಿದೆ.

ಹೊಡೆತ ಕೊಟ್ಟ ಜಿಎಸ್ಟಿ
'ನಮ್ಮಲ್ಲಿ ವಿವಿಧ ಬಗೆಯ ಬಿಸ್ಕತ್ ಉತ್ಪನ್ನಗಳಿವೆ. ಹೆಚ್ಚಿನವು ಕೆಳ ಹಾಗೂ ಮಧ್ಯಮ ಆದಾಯವುಳ್ಳ ಗ್ರಾಹಕರನ್ನು ಗುರಿಯನ್ನಾಗಿರಿಸಿಕೊಂಡಿದೆ. ಇವರೇ ನಮ್ಮ ಪ್ರಮುಖ ಗ್ರಾಹಕರು. ಆದರೆ, 2017ರಲ್ಲಿ ಸರಕು ಮತ್ತು ಸೇವಾ ತೆರಿಗೆ ಜಾರಿಗೆ ಬಂದ ನಂತರ ಬಹು ಪ್ರಸಿದ್ಧ ಪಾರ್ಲೆ-ಜಿ ಸೇರಿದಂತೆ ಕಂಪೆನಿಯ ಇತರೆ ಬ್ರ್ಯಾಂಡ್ ಬಿಸ್ಕತ್ಗಳ ಬೇಡಿಕೆ ಕುಸಿತ ಕಂಡಿದೆ. 5 ರೂ ಮತ್ತು 7 ಸೆಂಟ್ಸ್ ಬಿಸ್ಕತ್ ಪೊಟ್ಟಣಗಳ ಮೇಲೆ ಅಧಿಕ ಜಿಎಸ್ಟಿ ವಿಧಿಸಿರುವುದು ಈ ಬೇಡಿಕೆ ಕುಸಿತಕ್ಕೆ ಕಾರಣ ಎಂದು ಅವರು ವಿವರಿಸಿದರು.

ಗ್ರಾಮೀಣ ಭಾಗದಲ್ಲಿ ತಗ್ಗಿದ ಬೇಡಿಕೆ
ಈ ಕುಸಿತಕ್ಕೆ ಗ್ರಾಮೀಣ ಪ್ರದೇಶದಲ್ಲಿ ಬೇಡಿಕೆ ಕಡಿಮೆಯಾಗಿರುವುದು ಕಾರಣ ಎಂದು ಶಾ ತಿಳಿಸಿದರು. ಪಾರ್ಲೆಯ ಒಟ್ಟು ಆದಾಯದ ಅರ್ಧದಷ್ಟು ಭಾಗವು ಗ್ರಾಮೀಣ ಪ್ರದೇಶಗಳ ಗ್ರಾಹಕರಿಂದ ಬರುತ್ತದೆ. ತೆರಿಗೆ ಹೆಚ್ಚಳದಿಂದಾಗಿ ಹೊರೆ ತಗ್ಗಿಸಲು ಪೊಟ್ಟಣದ ಒಳಗಿನ ಬಿಸ್ಕತ್ಗಳ ಸಂಖ್ಯೆ ಕಡಿಮೆ ಮಾಡುವುದು ಅನಿವಾರ್ಯವಾಗಿತ್ತು. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಬೇಡಿಕೆ ಇಳಿಯಿತು. 'ಗ್ರಾಮೀಣ ಪ್ರದೇಶಗಳ ಜನರು ಬೆಲೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ನಿರ್ದಿಷ್ಟ ದರಕ್ಕೆ ಎಷ್ಟು ಬಿಸ್ಕತ್ ಸಿಗುತ್ತದೆ ಎಂಬುದನ್ನು ಪರಿಗಣಿಸುತ್ತಾರೆ' ಎಂದು ಹೇಳಿದರು.

ಅತಿ ದೊಡ್ಡ ಮಾರಾಟ ಬ್ರ್ಯಾಂಡ್
ಮುಂಬೈನಲ್ಲಿ ಕೇಂದ್ರ ಕಚೇರಿ ಹೊಂದಿರುವ ಕಂಪೆನಿ ಪಾರ್ಲೆ ಗ್ಲುಕೋ ಎಂಬ ಹೆಸರಿನ ಬಿಸ್ಕತ್ನಿಂದ ಜನಪ್ರಿಯವಾಗಿತ್ತು. ಬಳಿಕ ಅದಕ್ಕೆ ಪಾರ್ಲೆ-ಜಿ ಎಂದು ಮರುನಾಮಕರಣ ಮಾಡಲಾಗಿತ್ತು. 1980ರ ದಶಕದಿಂದ ಪಾರ್ಲೆ ಮನೆಮಾತಾಗಿದೆ. 2003ರಲ್ಲಿ ಪಾರ್ಲೆ-ಜಿ ಜಗತ್ತಿನ ಅತಿ ದೊಡ್ಡ ಮಾರಾಟ ಬಿಸ್ಕತ್ ಬ್ರ್ಯಾಂಡ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.