ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣೇಶ ಚತುರ್ಥಿಗೆ ಬರಲಿದೆ ಜಿಯೋಫೋನ್ ನೆಕ್ಸ್ಟ್: ಮುಖೇಶ್

|
Google Oneindia Kannada News

ಮುಂಬೈ, ಜೂನ್ 25: ಕೋವಿಡ್ ಸಂಕಷ್ಟದ ನಡುವೆಯೂ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಉತ್ತಮ ನಿರ್ವಹಣೆ ಪ್ರದರ್ಶಿಸಿದ್ದು, ಕಳೆದ ವರ್ಷದಲ್ಲಿ 540,000 ಕೋಟಿ ರೂ.ಗಳ ಒಟ್ಟು ಆದಾಯ ಗಳಿಸಿದೆ. ಬಡ್ಡಿ, ತೆರಿಗೆ, ಡಿಪ್ರಿಸಿಯೇಶನ್ ಹಾಗೂ ಅಮಾರ್ಟೈಸೇಶನ್‌ಗಳ ಮೊದಲಿನ ಆದಾಯವು (EBITDA) ಸುಮಾರು 98,000 ಕೋಟಿ ರೂ.ಗಳಷ್ಟಿದ್ದು, ಈ ಪೈಕಿ ಸುಮಾರು ಅರ್ಧದಷ್ಟು ಗ್ರಾಹಕ ವಹಿವಾಟುಗಳಿಂದಲೇ ಬಂದಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಖೇಶ್ ಅಂಬಾನಿ ತಿಳಿಸಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ ಕಳೆದ ವರ್ಷದಲ್ಲಿ 53,739 ಕೋಟಿ ರೂ.ಗಳ ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದ್ದಾರೆ. ಇದು ಹಿಂದಿನ ವರ್ಷಕ್ಕಿಂತ ಶೇ. 34.8ರಷ್ಟು ಹೆಚ್ಚಾಗಿದೆ.

ಸೌದಿ ಅರಾಮ್‌ಕೋ ಹಾಗೂ ಪಬ್ಲಿಕ್ ಇನ್‌ವೆಸ್ಟ್‌ಮೆಂಟ್ ಫಂಡ್‌ನ ಮುಖ್ಯಸ್ಥ ಯಾಸಿರ್ ಅಲ್-ರುಮಯ್ಯನ್, ಸ್ವತಂತ್ರ ನಿರ್ದೇಶಕರಾಗಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ನಿರ್ದೇಶಕ ಮಂಡಲಿಯನ್ನು ಸೇರಲಿದ್ದಾರೆ ಎಂದು ಮುಖೇಶ್ ಅಂಬಾನಿ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ. ನಿರ್ದೇಶಕ ಮಂಡಲಿಗೆ ಅವರ ಸೇರ್ಪಡೆ, ರಿಲಯನ್ಸ್‌ನ ಅಂತಾರಾಷ್ಟ್ರೀಕರಣದ ಪ್ರಾರಂಭದ ದ್ಯೋತಕವೂ ಆಗಿದೆ ಎಂದು ಅವರು ಹೇಳಿದ್ದಾರೆ.

ಗಣೇಶ ಚತುರ್ಥಿಗೆ 'ಜಿಯೋಫೋನ್ ನೆಕ್ಸ್ಟ್'

ಗಣೇಶ ಚತುರ್ಥಿಗೆ 'ಜಿಯೋಫೋನ್ ನೆಕ್ಸ್ಟ್'


ಅತ್ಯಂತ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಗುಣಮಟ್ಟದ 4G ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಒದಗಿಸುವ ಮೂಲಕ ಭಾರತದಲ್ಲಿ ಡಿಜಿಟಲ್ ಸಂಪರ್ಕ ಕ್ರಾಂತಿಯನ್ನೇ ಉಂಟುಮಾಡಿರುವ ಜಿಯೋ, ಇದೀಗ ಭಾರತವನ್ನು '2G-ಮುಕ್ತ'ವಾಗಿಸುವ ಉದ್ದೇಶದೊಂದಿಗೆ ಕೈಗೆಟುಕುವ ಬೆಲೆಯ 4G ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸುತ್ತಿದೆ. 'ಜಿಯೋಫೋನ್ ನೆಕ್ಸ್ಟ್' ಎಂಬ ಹೆಸರಿನ ಈ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅನ್ನು ಜಿಯೋ ಹಾಗೂ ಗೂಗಲ್ ತಂಡಗಳು ಜಂಟಿಯಾಗಿ ಅಭಿವೃದ್ಧಿಪಡಿಸಿದ್ದು, ಸೆಪ್ಟೆಂಬರ್ 10ರ ಗಣೇಶ ಚತುರ್ಥಿಯ ದಿನದಿಂದ ಅದು ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

ಮಾತನಾಡಿದ ಗೂಗಲ್ ಸಿಇಒ ಸುಂದರ್ ಪಿಚೈ

ಮಾತನಾಡಿದ ಗೂಗಲ್ ಸಿಇಒ ಸುಂದರ್ ಪಿಚೈ

ವಾಯ್ಸ್ ಅಸಿಸ್ಟೆಂಟ್, ಪರದೆಯ ಮೇಲಿನ ಪಠ್ಯವನ್ನು ಓದಿ ಹೇಳುವ ಸೌಲಭ್ಯ, ಅನುವಾದ ಸೌಲಭ್ಯ, ಆಗ್ಮೆಂಟೆಡ್ ರಿಯಾಲಿಟಿ ಫಿಲ್ಟರ್‌ಗಳಿರುವ ಸ್ಮಾರ್ಟ್ ಕ್ಯಾಮೆರಾ ಸೇರಿದಂತೆ ಈ ಸ್ಮಾರ್ಟ್‌ಫೋನಿನಲ್ಲಿ ಅನೇಕ ವಿಶಿಷ್ಟ ಸೌಲಭ್ಯಗಳಿರಲಿದ್ದು, ಗೂಗಲ್ ಹಾಗೂ ಜಿಯೋ ಆಪ್‌ಗಳಷ್ಟೇ ಅಲ್ಲದೆ ಆಂಡ್ರಾಯ್ಡ್ ಪ್ಲೇ ಸ್ಟೋರ್‌ನಲ್ಲಿರುವ ಆಪ್‌ಗಳನ್ನೂ ಬಳಸುವುದು ಸಾಧ್ಯವಾಗಲಿದೆ. ಇದು ಭಾರತದಲ್ಲಿ ಮಾತ್ರವೇ ಅಲ್ಲದೆ ಇಡೀ ವಿಶ್ವದಲ್ಲೇ ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಆಗಿರಲಿದೆ ಎಂದು ಮುಖೇಶ್ ಅಂಬಾನಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಗೂಗಲ್ ಸಿಇಒ ಸುಂದರ್ ಪಿಚೈ, "ಈ ಸ್ಮಾರ್ಟ್‌ಫೋನ್ ಅನ್ನು ಭಾರತಕ್ಕೆಂದೇ ನಿರ್ಮಿಸಲಾಗಿದ್ದು, ಮೊತ್ತಮೊದಲ ಬಾರಿಗೆ ಅಂತರಜಾಲ ಬಳಸುವ ಲಕ್ಷಾಂತರ ಹೊಸ ಬಳಕೆದಾರರಿಗೆ ಅದು ಹೊಸ ಸಾಧ್ಯತೆಗಳನ್ನು ತೆರೆದಿಡಲಿದೆ" ಎಂದು ಹೇಳಿದ್ದಾರೆ.

2G-ಮುಕ್ತ, 5G-ಯುಕ್ತ ಭಾರತದತ್ತ

2G-ಮುಕ್ತ, 5G-ಯುಕ್ತ ಭಾರತದತ್ತ

ದೇಶೀಯ ನಿರ್ಮಿತ 5G ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಜಿಯೋ ಗಮನಾರ್ಹ ಸಾಧನೆಗಳನ್ನು ಮಾಡಿದ್ದು, ಪರೀಕ್ಷಾರ್ಥ ಚಟುವಟಿಕೆಗಳು ಮುಂದುವರೆದಿವೆ ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ. ಶಿಕ್ಷಣ, ಆರೋಗ್ಯ ರಕ್ಷಣೆ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ 5G ತಂತ್ರಜ್ಞಾನದ ಬಳಕೆಯನ್ನು ಪರೀಕ್ಷಿಸಲಾಗುತ್ತಿದ್ದು, ಭಾರತ ಶೀಘ್ರವೇ '2G-ಮುಕ್ತ'ವಾಗುವುದರ ಜೊತೆಗೆ '5G-ಯುಕ್ತ'ವೂ ಆಗುತ್ತದೆಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ಭಾರತದಾದ್ಯಂತ 5G ಪರಿಚಯಿಸುವುದರ ಜೊತೆಗೆ ನಮ್ಮ ತಂತ್ರಜ್ಞಾನವನ್ನು ಇನ್ನಿತರ ದೇಶಗಳೂ ಬಳಸಲಿವೆ ಎಂದು ಅವರು ಹೇಳಿದ್ದಾರೆ.

ದೇಶದೆಲ್ಲೆಡೆ 5G ಅನುಷ್ಠಾನಕ್ಕಾಗಿ ಜಿಯೋ ಹಾಗೂ ಗೂಗಲ್ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಜಿಯೋದ 5G ಜಾಲ ಹಾಗೂ ಸೇವೆಗಳು ಗೂಗಲ್ ಕ್ಲೌಡ್ ವೇದಿಕೆಯನ್ನು ಬಳಸಿಕೊಳ್ಳಲಿವೆ. ಈ ಒಪ್ಪಂದದ ಅಂಗವಾಗಿ ರಿಲಯನ್ಸ್‌ನ ರೀಟೇಲ್ ವಹಿವಾಟು ಗೂಗಲ್ ಕ್ಲೌಡ್‌ ಅನ್ನು ವ್ಯಾಪಕವಾಗಿ ಬಳಸಲಿದೆ.

ಫೇಸ್‌ಬುಕ್, ಮೈಕ್ರೋಸಾಫ್ಟ್‌ ರಿಲಯನ್ಸ್ ಸಹಭಾಗಿತ್ವ

ಫೇಸ್‌ಬುಕ್, ಮೈಕ್ರೋಸಾಫ್ಟ್‌ ರಿಲಯನ್ಸ್ ಸಹಭಾಗಿತ್ವ

ಗೂಗಲ್ ಮಾತ್ರವೇ ಅಲ್ಲದೆ ಫೇಸ್‌ಬುಕ್ ಹಾಗೂ ಮೈಕ್ರೋಸಾಫ್ಟ್‌ ಸಂಸ್ಥೆಗಳ ಜೊತೆಗೂ ರಿಲಯನ್ಸ್ ಸಹಭಾಗಿತ್ವ ಮುಂದುವರೆದಿದೆ. ಜಿಯೋಮಾರ್ಟ್ ಸೇವೆಗಳನ್ನು ವಾಟ್ಸ್‌ಆಪ್ ಮೂಲಕ ಒದಗಿಸುವ ಪ್ರಯೋಗ ಮುಂದುವರೆದಿದ್ದು, ಇದಕ್ಕೆ ಜಿಯೋಮಾರ್ಟ್ ಹಾಗೂ ವಾಟ್ಸ್‌ಆಪ್ ಎರಡೂ ಸೌಲಭ್ಯಗಳ ಗ್ರಾಹಕರಿಂದ ದೊರೆತಿರುವ ಆರಂಭಿಕ ಪ್ರತಿಕ್ರಿಯೆ ಉತ್ತಮವಾಗಿದೆಯೆಂದು ಮುಖೇಶ್ ಅಂಬಾನಿ ತಿಳಿಸಿದ್ದಾರೆ. ಜಾಮನಗರ ಹಾಗೂ ನಾಗಪುರಗಳಲ್ಲಿ ಮೈಕ್ರೋಸಾಫ್ಟ್ ಸಹಯೋಗದೊಂದಿಗೆ ಎರಡು ಜಿಯೋ-ಅಜ಼್ಯೂರ್ ಕ್ಲೌಡ್ ಡೇಟಾ ಸೆಂಟರುಗಳನ್ನು ಕಾರ್ಯರಂಭಗೊಳಿಸಿರುವುದಾಗಿಯೂ ಅವರು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಜಿಯೋಫೈಬರ್ ಕುರಿತು ಮಾತನಾಡಿದ ಮುಖೇಶ್ ಅಂಬಾನಿ, ಕಳೆದ ಒಂದು ವರ್ಷದಲ್ಲಿ ಅದು ಇಪ್ಪತ್ತು ಲಕ್ಷಕ್ಕೂ ಹೆಚ್ಚಿನ ಹೊಸ ತಾಣಗಳಲ್ಲಿ ಲಭ್ಯವಾಗಿದೆ ಎಂದು ತಿಳಿಸಿದ್ದಾರೆ. ಒಟ್ಟಾರೆ ಮೂವತ್ತು ಲಕ್ಷಕ್ಕೂ ಹೆಚ್ಚಿನ ಬಳಕೆದಾರರೊಂದಿಗೆ, ಜಿಯೋಫೈಬರ್ ಭಾರತದ ಅತಿದೊಡ್ಡ ಹಾಗೂ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಫಿಕ್ಸೆಡ್ ಬ್ರಾಡ್‌ಬ್ಯಾಂಡ್ ಸೇವಾದಾರ ಸಂಸ್ಥೆಯಾಗಿ ರೂಪುಗೊಂಡಿದೆ ಎಂದು ಅವರು ಹೇಳಿದ್ದಾರೆ.

English summary
JioPhone Next will be available in the market from the auspicious date of Ganesh Chaturthi, 10TH SEPTEMBER, this year- said Mukesh Ambani in Chairman's Statement at 44th RIL AGM
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X