ಕ್ರಿಪ್ಟೋ ಬಲೂನು ಠುಸ್; ಕೋಟಿಕೋಟಿ ಕಳೆದುಕೊಂಡ ಜನರು
ನವದೆಹಲಿ, ಮೇ 12: ಈಗಿನ ಕರೆನ್ಸಿ ಹಣಕಾಸು ವ್ಯವಸ್ಥೆಯ ಬದಲಾಗಿ ಬಹಳ ಸಮರ್ಪಕವಾದ ಮತ್ತು ನೈಜವಾದ ಹಣಕಾಸು ವ್ಯವಸ್ಥೆ ರೂಪಿಸುವುದಾಗಿ ಪ್ರಚಾರ ಪಡೆದುಕೊಳ್ಳುವ ಕ್ರಿಪ್ಟೋಕರೆನ್ಸಿ (Cryptocurrency) ಒಂದೆರಡು ವರ್ಷಗಳಿಂದ ಉಬ್ಬುತ್ತಲೇ ಹೋಗಿತ್ತು. ಆದರೆ ಈಗ ಅದು ಗಾಳಿ ತುಂಬಿಸಲಾದ ಬಲೂನಾ ಎಂದು ಅನುಮಾನ ಹುಟ್ಟಿಸುವಂತೆ ಕ್ರಿಪ್ಟೋಕರೆನ್ಸಿ ಎಂಬ ಬಬಲ್ ಒಡೆದುಹೋಗುತ್ತಿದೆ. ಎಂದೋ ಖರೀದಿಸಿದ್ದ ಕ್ರಿಪ್ಟೋಕರೆನ್ಸಿ ಮೂಲಕ ಲಕ್ಷಲಕ್ಷ ಕೋಟಿ ಒಡೆಯರಾಗಿ ಹೋಗಿದ್ದ ಜನರು ಈಗ ಎಲ್ಲವನ್ನೂ ಕಳೆದುಕೊಳ್ಳುತ್ತಾ ಹೋಗುತ್ತಿದ್ದಾರೆ. ಬಿಟ್‌ಕಾಯಿನ್, ಈಥರ್ ಸೇರಿದಂತೆ ಬಹುತೇಕ ಎಲ್ಲಾ ಕ್ರಿಪ್ಟೋಕರೆನ್ಸಿಗಳು ಮೌಲ್ಯ ಕಳೆದುಕೊಳ್ಳುತ್ತಿವೆ.
ಕ್ರಿಕ್ಟೋಕರೆನ್ಸಿ ಕುಸಿತದಿಂದ ಹೆಚ್ಚು ಆಘಾತ ಅನುಭವಿಸಿರುವುದು ಕ್ರಿಪ್ಟೋಕರೆನ್ಸಿ ಎಕ್ಸ್‌ಚೇಂಜ್‌ಗಳ ಮುಖ್ಯಸ್ಥರುಗಳೇ. ಬಿಟ್ ಕಾಯಿನ್ ಇತ್ಯಾದಿ ಕ್ರಿಪ್ಟೋಕರೆನ್ಸಿಗಳ ಟ್ರೇಡಿಂಗ್ ನಡೆಯುವುದು ಇಂಥ ಎಕ್ಸ್‌ಚೇಂಜ್‌ಗಳಲ್ಲೇ. ಅಮೆರಿಕದ ಅತಿದೊಡ್ಡ ಕ್ರಿಪ್ಟೋಕರೆನ್ಸಿ ಎಕ್ಸ್‌ಚೇಂಜ್ ಕಂಪನಿ ಎನಿಸಿದ ಕಾಯಿನ್‌ಬೇಸ್‌ನ ಮಾರುಕಟ್ಟೆ ಮೌಲ್ಯ ಪ್ರಪಾತಕ್ಕೆ ಧುಮುಕುತ್ತಿದೆ. ಈ ಕಂಪನಿಯ ಸಂಸ್ಥಾಪಕ ಬ್ರಿಯಾನ್ ಆರ್ಮ್‌ಸ್ಟ್ರಾಂಗ್ ನಾಲ್ಕೈದು ತಿಂಗಳ ಹಿಂದಷ್ಟೇ 13.7 ಬಿಲಿಯನ್ ಡಾಲರ್ (ಒಂದು ಲಕ್ಷಕೋಟಿ ರೂಪಾಯಿ) ಮೌಲ್ಯದ ಆಸ್ತಿಗೆ ಒಡೆಯರಾಗಿದ್ದರು. ಈಗ ಕ್ರಿಪ್ಟೋ ಬಲೂನು ಠುಸ್ ಆಗುತ್ತಾ ಹೋದಂತೆ ಅವರ ಆಸ್ತಿ ಮೌಲ್ಯ ಕೇವಲ 17 ಸಾವಿರ ಕೋಟಿ ರೂಪಾಯಿಗೆ ಇಳಿದುಹೋಗಿದೆ. ಅಮೆರಿಕದ ಷೇರುಪೇಟೆಯಲ್ಲಿ ಕಾಯಿನ್‌ಬೇಸ್ ಕಂಪನಿಯ ಷೇರುಮೌಲ್ಯ ಶೇ. 84ರಷ್ಟು ಬಿದ್ದುಹೋಗಿದೆ.
ಗ್ಯಾಲಕ್ಸಿ ಡಿಜಿಟಲ್ ಎಂಬ ಕ್ರಿಪ್ಟೋ ಮರ್ಚೆಂಟ್ ಬ್ಯಾಂಕ್‌ನ ಸಿಇಒ ಮೈಖೇಲ್ ನೊವಾಗ್ರಾಟ್ಜ್ ಆಸ್ತಿ ಕೂಡ 66 ಸಾವಿರ ಕೋಟಿ ರೂ ನಿಂದ 19 ಸಾವಿರ ಕೋಟಿ ರೂಗೆ ಕರಗಿದೆ.
ಆ್ಯಪಲ್ ಮೀರಿಸಿ ಮೋಸ್ಟ್ ವ್ಯಾಲುವಬಲ್ ಕಂಪನಿ ಎನಿಸಿದೆ ಸೌದಿ ಅರಾಮ್ಕೋ
ಬೈನಾನ್ಸ್ ಎಂಬ ಕ್ರಿಪ್ಟೋ ಟ್ರೇಡಿಂಗ್ ಕಂಪನಿಯ ಸಿಇಒ ಚಾಂಗ್‌ಪೆಂಗ್ ಝಾವೋ ಅವರಂತೂ ಅತಿಹೆಚ್ಚು ಕಳೆದುಕೊಂಡಿದ್ದಾರೆ. ಜನವರಿ ತಿಂಗಳಲ್ಲಿ ಇವರ ಕ್ರಿಪ್ಟೋ ಆಸ್ತಿ ಮೌಲ್ಯ 96 ಬಿಲಿಯನ್ ಡಾಲರ್ (7.4 ಲಕ್ಷಕೋಟಿ ರೂ) ಇತ್ತು. ಈಗ ಅದು ಕೇವಲ 90 ಸಾವಿರ ಕೋಟಿ ರೂಪಾಯಿಗೆ ಕರಗಿಹೋಗಿದೆ.
ಕ್ರಿಪ್ಟೋಕರೆನ್ಸಿಗಳ ಪೈಕಿ ಅತಿ ಹೆಚ್ಚು ಚಲಾವಣೆಯಲ್ಲಿರುವುದು ಬಿಟ್‌ಕಾಯಿನ್, ಈಥರ್ ಮೊದಲಾದವು. ಇವುಗಳ ಬೆಲೆ ಶೇ. 50ರಷ್ಟು ಇಳಿದುಹೋಗಿವೆ. ಹೀಗಾಗಿ, ಕ್ರಿಕ್ಟೋ ಉನ್ಮಾದದ ವೇಳೆ ಅದನ್ನು ಖರೀದಿಸಿದವರೆಲ್ಲಾ ಈಗ ಪರಿತಪಿಸತೊಡಗಿದ್ದಾರೆ.

ಏನಿದು ಕ್ರಿಪ್ಟೋಕರೆನ್ಸಿ?
ಇದು ವಿವಿಧ ದೇಶಗಳಲ್ಲಿ ಬಳಸಲಾಗುವ ನಾಣ್ಯ ಇತ್ಯಾದಿ ಭೌತಿಕ ಕರೆನ್ಸಿಯ ಬದಲು ಡಿಜಿಟಲ್ ಕರೆನ್ಸಿಯಾಗಿದೆ. ಮಾಮೂಲಿಯ ಹಣಕಾಸು ವ್ಯವಸ್ಥೆಯಲ್ಲಿ ಒಂದು ಸರಕಾರದ ಕಟ್ಟುಪಾಡುಗಳು ನಿಯಂತ್ರಣ ಹೊಂದಿರುತ್ತವೆ. ಆದರೆ, ಡಿಜಿಟಲ್ ಕರೆನ್ಸಿಯಲ್ಲಿ ಅಂಥ ಕಟ್ಟುಪಾಡುಗಳು ಇರುವುದಿಲ್ಲ. ಇದು ಕ್ರಿಪ್ಟೋಗ್ರಫಿ ಎಂಬ ತಂತ್ರಜ್ಞಾನದ ನೆರವಿನಿಂದ ವಿಕೇಂದ್ರಿತ ವಹಿವಾಟು ವ್ಯವಸ್ಥೆ ಹೊಂದಿರುತ್ತದೆ. ಇದರಲ್ಲಿ ನಡೆಸಲಾಗುವ ವಹಿವಾಟು ರಹಸ್ಯವಾಗಿರುತ್ತದೆಯಾದರೂ ನಕಲಿ ವಹಿವಾಟು ನಡೆಸುವ ಆಸ್ಪದ ಇರುವುದಿಲ್ಲ. ಕಂಪ್ಯೂಟರ್ ನೆಟ್ವರ್ಕ್ ಮೂಲಕ ಇದು ಕೆಲಸ ಮಾಡುತ್ತದೆ. ಒಬ್ಬ ಕ್ರಿಪ್ಟೋ ಕಾಯನ್ ಮಾಲೀಕನ ದಾಖಲೆಗಳು ಒಂದು ಡಿಜಿಟಲ್ ಲೆಡ್ಜರ್‌ನಲ್ಲಿ ಸಂಗ್ರಹವಾಗಿರುತ್ತದೆ. ಇದರ ವಹಿವಾಟು ಬ್ಲಾ್‌ಚೈನ್ ಆಗಿ ನಡೆಯುತ್ತದೆ. ಮಾಮೂಲಿಯ ಕರೆನ್ಸಿ ಹಣಕಾಸುವ ವ್ಯವಸ್ಥೆಯಲ್ಲಿ ಒಂದು ದೇಶದಿಂದ ಇನ್ನೊಂದು ದೇಶದ ಮಧ್ಯೆ ವಹಿವಾಟು ನಡೆಯಬೇಕೆಂದರೆ ಕರೆನ್ಸಿ ಎಕ್ಸ್‌ಚೇಂಜ್ ಇರುತ್ತದೆ. ಕ್ರಿಪ್ಟೋದಲ್ಲಿ ಅಂಥದ್ದು ಇರುವುದಿಲ್ಲ. ವಿಶ್ವದ ಯಾವ ಮೂಲೆಯಿಂದ ಇನ್ಯಾವ ಮೂಲೆಗೆ ಬೇಕಾದರೂ ದೇಶ ದೇಶಗಳ ಮಧ್ಯೆ ಕರೆನ್ಸಿ ಎಕ್ಸ್‌ಜೇಂಜ್ ಇಲ್ಲದೇ ಒಂದೇ ತೆರನಾಗಿರುತ್ತದೆ.
(ಒನ್ಇಂಡಿಯಾ ಸುದ್ದಿ)