ಬಜೆಟ್ 2022: ದ್ವಿಚಕ್ರ ವಾಹನ, ಸೆಕೆಂಡ್ಹ್ಯಾಂಡ್ ಕಾರುಗಳ ಮೇಲಿನ ಜಿಎಸ್ಟಿ ಕಡಿತವಾಗುತ್ತಾ?
ನವದೆಹಲಿ, ಜನವರಿ 18: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ತಮ್ಮ ನಾಲ್ಕನೇ ಬಜೆಟ್ ಅನ್ನು ಮಂಡಿಸಲು ಸಿದ್ಧರಾಗಿದ್ದಾರೆ. ಅದಕ್ಕೆ ಇನ್ನು ಕೆಲವೇ ವಾರಗಳು ಇದೆ. ಈ ನಡುವೆ 2022 ರ ಬಜೆಟ್ನಲ್ಲಿ ಏನೆಲ್ಲಾ ಘೋಷಣೆ ಆಗಬಹುದು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಹಲವಾರು ವಲಯಗಳು ತಮ್ಮದೇ ಆದ ನಿರೀಕ್ಷೆಯನ್ನು ಹೊಂದಿದೆ. ಈ ಮಧ್ಯೆ ದ್ವಿಚಕ್ರ ವಾಹನ, ಸೆಕೆಂಡ್ಹ್ಯಾಂಡ್ ಕಾರುಗಳ ಮೇಲಿನ ಜಿಎಸ್ಟಿ ಕಡಿತ ಮಾಡುವ ಪ್ರಸ್ತಾಪವನ್ನು ಸರ್ಕಾರದ ಮುಂದೆ ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ (ಎಫ್ಎಡಿಎ) ಇಟ್ಟಿದೆ.
ದೇಶದಾದ್ಯಂತ ಆಟೋಮೊಬೈಲ್ ಡೀಲರ್ಗಳು ಮತ್ತು ಚಿಲ್ಲರೆ ವ್ಯಾಪಾರಿಗಳನ್ನು ಪ್ರತಿನಿಧಿಸುವ ಉನ್ನತ ಸಂಸ್ಥೆಯಾದ ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ (ಎಫ್ಎಡಿಎ) ಮುಂಬರುವ ಕೇಂದ್ರ ಬಜೆಟ್ನಲ್ಲಿ ಆಟೋಮೋಟಿವ್ ಉದ್ಯಮಕ್ಕೆ ಸಹಾಯ ಮಾಡಲು ತನ್ನ ಶಿಫಾರಸುಗಳನ್ನು ಸರ್ಕಾರಕ್ಕೆ ನೀಡಿದೆ. ಸರ್ಕಾರ ಈ ಪ್ರಸ್ತಾಪವನ್ನು ಪರಿಗಣಿಸಿದರೆ ದ್ವಿಚಕ್ರ ವಾಹನ, ಸೆಕೆಂಡ್ಹ್ಯಾಂಡ್ ಕಾರುಗಳ ಮೇಲಿನ ಜಿಎಸ್ಟಿ ಕಡಿತವಾಗುವ ನಿರೀಕ್ಷೆ ಇದೆ.
ಬಜೆಟ್ 2022: ವಿದೇಶದಲ್ಲಿರುವ ಭಾರತೀಯರ ನಿರೀಕ್ಷೆಗಳು ಏನು?
ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ ಸರ್ಕಾರದ ಮುಂದೆ ತಾನು ಇರಿಸಿರುವ ಶಿಫಾರಸುಗಳನ್ನು ಎರಡು ಭಾಗಗಳಾಗಿ ವಿಂಗಡಿಸಿದೆ. ವಾಹನಗಳ ಬೇಡಿಕೆಯನ್ನು ಹೆಚ್ಚಿಸಲು ಒಂದು ಭಾಗದ ಶಿಫಾರಸುಗಳು ಹಾಗೂ ಇನ್ನೊಂದು ನೇರವಾಗಿ ವಿತರಕರಿಗೆ ಸಹಾಯ ಮಾಡಲು ಶಿಫಾರಸುಗಳು ಆಗಿದೆ. ಇನ್ನು ಈ ಬಗ್ಗೆ ಹೇಳಿಕೆ ಮೂಲಕ ಮಾಹಿತಿ ನೀಡಿದ ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ , "ಫೆಬ್ರವರಿ ಮೊದಲಲ್ಲಿ ನಡೆಯುವ ಬಜೆಟ್ನಲ್ಲಿ ಈ ಶಿಫಾರಸುಗಳನ್ನು ಪರಿಗಣನೆಗೆ ತೆಗೆದುಕೊಂಡರೆ ಆಟೋ ಚಿಲ್ಲರೆ ವ್ಯಾಪಾರವನ್ನು ಪುನಶ್ಚೇತನಗೊಳಿಸಬಹುದು, ಇದು ವಲಯ ಮತ್ತು ಇಡೀ ಆಟೋಮೊಬೈಲ್ ಉದ್ಯಮವನ್ನು ಮರಳಿ ಟ್ರ್ಯಾಕ್ಗೆ ತರಲಿದೆ. ಒಟ್ಟಾರೆ ಆರ್ಥಿಕ ಬೆಳವಣಿಗೆಯು ಕೂಡಾ ಆಗಲಿದೆ," ಎಂದು ಉಲ್ಲೇಖ ಮಾಡಿದೆ.
ತನ್ನ ಶಿಫಾರಸುಗಳಲ್ಲಿ, ಭಾರತದಲ್ಲಿ ದ್ವಿಚಕ್ರ ವಾಹನಗಳ ಮೇಲಿನ ಜಿಎಸ್ಟಿ ದರವನ್ನು ನಿಯಂತ್ರಿಸಬೇಕು ಮತ್ತು ಅವು ಐಷಾರಾಮಿ ವಸ್ತುಗಳಲ್ಲದ ಕಾರಣ 18 ಪ್ರತಿಶತಕ್ಕೆ ಇಳಿಸಬೇಕು ಎಂದು ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ (ಎಫ್ಎಡಿಎ) ಹೇಳಿದೆ. ಹೆಚ್ಚುವರಿಯಾಗಿ, ವೈಯಕ್ತಿಕ ತೆರಿಗೆದಾರರು ವಾಹನದ ಬಗ್ಗೆ ಲೆಕ್ಕ ಹಾಕಲು ಸಾಧ್ಯವಾಗುತ್ತದೆ ಎಂದು ಕೂಡಾ ಸಂಸ್ಥೆಯು ಉಲ್ಲೇಖಿಸಿದೆ. ಈ ಕ್ರಮದಿಂದಾಗಿ ಜನರಿಗೆ ಅಧಿಕ ಪ್ರಯೋಜನ ಉಂಟಾಗಲಿದೆ. ಇದರಿಂದಾಗಿ ಬೇಡಿಕೆಗಳು ಕೂಡಾ ಅಧಿಕವಾಗಲಿದೆ ಎಂದಿರುವ ಸಂಘವು ಜಿಎಸ್ಟಿ ಎಷ್ಟು ಇಳಿಕೆ ಮಾಡಬೇಕು ಎಂದು ಶಿಪಾರಸ್ಸು ಕೂಡಾ ಮಾಡಿದೆ.
ಬಜೆಟ್ 2022; ರಿಯಲ್ ಎಸ್ಟೇಟ್ ವಲಯದ ನಿರೀಕ್ಷೆಗಳು
ಬಳಸಿದ ಕಾರುಗಳ ಮೇಲಿನ ಜಿಎಸ್ಟಿ ದರವನ್ನು ಕಾರಿನ ಗಾತ್ರಕ್ಕೆ ಅನುಗುಣವಾಗಿ 12 ಮತ್ತು 18 ಪ್ರತಿಶತದಿಂದ 5 ಪ್ರತಿಶತಕ್ಕೆ ಇಳಿಕೆ ಮಾಡಲು ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ (ಎಫ್ಎಡಿಎ) ಶಿಫಾರಸು ಮಾಡಿದ್ದು, ಇದರಿಂದಾಗಿ ಆಟೋಮೋಟಿವ್ ಉದ್ಯಮಕ್ಕೆ ಸಹಾಯವಾಗಲಿದೆ ಎಂದು ಹೇಳಿದೆ. (ಒನ್ಇಂಡಿಯಾ ಸುದ್ದಿ)