ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶತಕೋಟ್ಯಧಿಪತಿ ಬಿ.ಆರ್. ಶೆಟ್ಟಿ ಎಂಬ ಸೂತ್ರ, ಬಾಲಂಗೋಚಿ ಕಳಚಿದ ಗಾಳಿಪಟ

By ಒನ್ಇಂಡಿಯಾ ಡೆಸ್ಕ್
|
Google Oneindia Kannada News

ರೋಲ್ಸ್ ರಾಯ್ಸ್ ಕಾರುಗಳ ಹಿಂಡು, ಖಾಸಗಿ ವಿಮಾನ, ದುಬೈನ ಬುರ್ಜ್ ಖಲೀಫಾದಲ್ಲಿ ಇಡಿಯಾಗಿ ಎರಡು ಅಂತಸ್ತಿನ ಖರೀದಿ... ಉಡುಪಿಯ ಕಾಪುವಿನಿಂದ ಹೊರಟು ದುಬೈನಲ್ಲಿ ಅಗಾಧ ಸಾಮ್ರಾಜ್ಯ ಕಟ್ಟಿದ ಬಾವಗುತ್ತು ರಘುರಾಮ್ ಶೆಟ್ಟಿ ಅಲಿಯಾಸ್ ಬಿ.ಆರ್. ಶೆಟ್ಟಿ ಶ್ರೀಮಂತಿಕೆಗೆ ನೀಡಬಹುದಾದ ಉದಾಹರಣೆ ಅಷ್ಟೇ.

Recommended Video

ಮನೆಯಲ್ಲಿದ್ದುಕೊಂಡೇ ತೇಜಸ್ವಿ ಸೂರ್ಯ ಏನ್ ಮಾಡಿದ್ದಾರೆ ನೋಡಿ

ಆದರೆ, ಆಗಸದಲ್ಲಿ ತೇಲಾಡುತ್ತಿದ್ದ ಗಾಳಿಪಟವೊಂದು ಸೂತ್ರ, ಬಾಲಂಗೋಚಿ ಎರಡೂ ಕಳಚಿಕೊಂಡು ನೆಲಕ್ಕೆ ಬಿದ್ದಂತೆ ಇಂದಿಗೆ ಶೆಟ್ಟರ ಸ್ಥಿತಿ ಆಗಿದೆ.

"ದಿನಕ್ಕೆ ಕನಿಷ್ಠ ಒಂದು ಸಮಸ್ಯೆಯಾದರೂ ಇಲ್ಲದಿದ್ದಲ್ಲಿ ಅದು ನನ್ನ ಪಾಲಿಗೆ ಒಳ್ಳೆ ದಿನವಲ್ಲ. ನಿವಾರಿಸಿಕೊಳ್ಳುವುದಕ್ಕೆ ಅಂತಲೇ ಸಮಸ್ಯೆ ಇರಬೇಕು. ಅದನ್ನು ನಾನು ಪರಿಹರಿಸಿಕೊಂಡಾಗಲೇ ಸಮಾಧಾನ" -ಇದು ಎರಡು ವರ್ಷದ ಹಿಂದೆ ಮಾಧ್ಯಮ ಸಂವಾದದಲ್ಲಿ ಶೆಟ್ಟರು ಹೇಳಿದ್ದ ಮಾತು. ಈಗ ಸಮಸ್ಯೆಗಳು ಯಾವಾಗ ಮುಗಿಯಬಹುದೋ ಗೊತ್ತಿಲ್ಲ. ಆದರೆ ಬಿ.ಆರ್. ಶೆಟ್ಟರ ಸಾಮ್ರಾಜ್ಯ ಮತ್ತು ಅಲ್ಲಿನ ಇಂದಿನ ಸ್ಥಿತಿ ಹೇಳದ ಹೊರತು ಪೂರ್ತಿಯಾಗಿ ಅರ್ಥವಾಗಲ್ಲ.

77 ಹರೆಯದ ಉದ್ಯಮಿ ಬಿಆರ್ ಶೆಟ್ಟಿ ಈಗ ಸಾಲು ಸಾಲು ಹೊಡೆತಗಳನ್ನು ಎದುರಿಸುವಂತಾಗಿದೆ. ಬಿಆರ್ ಶೆಟ್ಟಿ ಮತ್ತು ಅವರ ಕುಟುಂಬದವರು ಮತ್ತು ಅವರೊಂದಿಗೆ ಪಾಲುದಾರಿಕೆ ಹೊಂದಿರುವ ಕಂಪೆನಿಗಳ ಬ್ಯಾಂಕ್ ಖಾತೆಗಳನ್ನು ಯುಎಇಯ ಕೇಂದ್ರೀಯ ಬ್ಯಾಂಕ್ (ಸಿಬಿಯುಎಇ) ತಡೆ ಹಿಡಿದಿದೆ. ಶೆಟ್ಟಿ ಅವರಿಗೆ ಸಂಬಂಧಿಸಿದ ಅನೇಕ ಕಂಪೆನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಿದೆ.

1000 ಕೋಟಿ ಬಜೆಟ್ ನ ಸಿನಿಮಾ ನಿರ್ಮಾಣ

1000 ಕೋಟಿ ಬಜೆಟ್ ನ ಸಿನಿಮಾ ನಿರ್ಮಾಣ

ಅಬುಧಾಬಿಯಲ್ಲಿರುವ ಶತಕೋಟ್ಯಧಿಪತಿ, ಎನ್ ಎಂಸಿ ಹೆಲ್ತ್ ನ ಸ್ಥಾಪಕ ಬಿ.ಆರ್. ಶೆಟ್ಟಿ ಅಕ್ಷರಶಃ ಸಂಕಷ್ಟದಲ್ಲಿದ್ದಾರೆ. 2012ರಲ್ಲಿ ಅವರ ಕಂಪೆನಿ ಲಂಡನ್ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ಐಪಿಒ ಆಗಿದ್ದು, ಅದ್ಭುತ ಯಶಸ್ಸು ಕಂಡಿದ್ದು, 11.7 ಕೋಟಿ ಪೌಂಡ್ ಹಣ ಸಂಗ್ರಹಿಸಿದ್ದು ಈಗ ನೆನಪಿಸಿಕೊಳ್ಳಲಷ್ಟೇ ಲಾಯಕ್. 2014ರಲ್ಲಿ 100 ಬಿಲಿಯನ್ ಪೌಂಡ್ ಗೆ ಯು.ಕೆ. ಮೂಲದ ಟ್ರಾವೆಲೆಕ್ಸ್ ಖರೀದಿ ಮಾಡಿದರು. ಆತಿಥ್ಯ, ಶಿಕ್ಷಣ, ಫಾರ್ಮಾ ಎಲ್ಲ ವ್ಯವಹಾರಗಳನ್ನು ಮಾಡುತ್ತಿದ್ದಾರೆ. ಎಲ್ಲವೂ ಚೆನ್ನಾಗಿ ನಡೆಯುತ್ತಿತ್ತು. 2017ರಲ್ಲಿ ಬಿ.ಆರ್. ಶೆಟ್ಟಿ ಭಾರತದಲ್ಲಿ 1000 ಕೋಟಿ ಬಜೆಟ್ ನ ಸಿನಿಮಾ ನಿರ್ಮಾಣ ಮಾಡುವ ಘೋಷಣೆ ಮಾಡಿದರು. ಮಹಾಭಾರತ ಕಾವ್ಯವನ್ನು ತೆರೆಯ ಮೇಲೆ ತರುವ ಸಾಹಸ ಅದಾಗಿತ್ತು. 1970ರ ದಶಕದಲ್ಲಿ ಕರ್ನಾಟಕ ಕರಾವಳಿ ಭಾಗದಿಂದ ಯುಎಇಗೆ ಹೊರಟ ಶೆಟ್ಟರ ಬಳಿ ಇದ್ದದ್ದು 8 ಅಮೆರಿಕನ್ ಡಾಲರ್. 2018ರ ಹೊತ್ತಿಗೆ ಅವರ ಆಸ್ತಿ ಮೌಲ್ಯ 420 ಕೋಟಿ ಅಮೆರಿಕನ್ ಡಾಲರ್ ಎಂದು ಫೋರ್ಬ್ಸ್ ಅಂದಾಜು ಮಾಡಿದೆ. ಎನ್ ಎಂಸಿ ಹೆಲ್ತ್ ನ ಪ್ರಮುಖ ಷೇರುದಾರರಿಗೆ ಇದ್ದವರು ಯುಎಇ ಉಪ ಪ್ರಧಾನಿ ಶೇಖ್ ಮನ್ಸೌರ್ ಜಾಯೇದ್ ಅಲ್ ನಹ್ಯಾನ್. ಅಂದಹಾಗೆ ಶೆಟ್ಟರು ಗಳಿಸಿದ್ದಷ್ಟೇ ಅಲ್ಲ, ತಮ್ಮ ಆಸ್ತಿಯಲ್ಲಿ ಕನಿಷ್ಠ ಅರ್ಧದಷ್ಟನ್ನು ದಾನ ಮಾಡುವುದಾಗಿಯೂ ಘೋಷಣೆ ಮಾಡಿದ್ದರು.

ರಾತ್ರೋ ರಾತ್ರಿ ಎಲ್ಲವೂ ಬದಲಾಯಿತು

ರಾತ್ರೋ ರಾತ್ರಿ ಎಲ್ಲವೂ ಬದಲಾಯಿತು

ಈ ಎಲ್ಲ ಕಾರಣದಿಂದಾಗಿಯೇ ಯಾವಾಗಲೇ ಶೆಟ್ಟರು ಸಂದರ್ಶನಕ್ಕೆ ಅಂತ ಕೂತಾಗಲೂ, ಈ ಸಾಮ್ರಾಜ್ಯ ಕುಸಿಯಬಹುದು ಎಂಬ ಸಣ್ಣ ಅನುಮಾನವೂ ಮೂಡುತ್ತಿರಲಿಲ್ಲ. ಆದರೆ ರಾತ್ರೋ ರಾತ್ರಿ ಎಲ್ಲವೂ ಬದಲಾಯಿತು. ಎನ್ ಎಂಸಿ ಹೆಲ್ತ್ ಹಣಕಾಸಿನ ಆರೋಗ್ಯದ ಬಗ್ಗೆ ಬಂದ ವರದಿಯಿಂದ ಲಂಡನ್ ಷೇರುಪೇಟೆಯಲ್ಲಿ ಷೇರುಗಳು ಕುಸಿದುಹೋದವು. ಅಂದಹಾಗೆ ಮಡ್ಡಿ ವಾಟರ್ಸ್ ಎಂಬ ಸಂಸ್ಥೆಯ ಟ್ವೀಟ್ ಅದಾಗಿತ್ತು. ಕಾರ್ಸನ್ ಬ್ಲಾಕ್ ನಡೆಸುವ ವಿವಾದಿತ ಸಂಸ್ಥೆ ಇದು. ಶೆಟ್ಟರು ಆರಂಭಿಸಿದ ಮೊದಲ ಕಂಪೆನಿ ಎನ್ ಎಂಸಿ ಹೆಲ್ತ್. ಲೆಕ್ಕಪತ್ರಗಳಲ್ಲಿ ಸುಳ್ಳು ಮಾಹಿತಿ, ವಂಚನೆ ಆರೋಪಗಳನ್ನು ಎದುರಿಸಬೇಕಾಯಿತು. ಖಾಸಗಿ ಸಂಸ್ಥೆಯೊಂದರ ತನಿಖೆ ಪ್ರಕಾರ, ಕಂಪೆನಿಯ ಸಾಲ 2019ರಲ್ಲಿ 450 ಕೋಟಿ ಅಮೆರಿಕನ್ ಡಾಲರ್ ಇತ್ತು. ಆಡಳಿತ ಮಂಡಳಿಯ ಗಮನಕ್ಕೇ ತರದೆ 10 ಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಚೆಕ್ ವಿತರಿಸಿತ್ತು ಶೆಟ್ಟರಿಗೆ ಸೇರಿದ ಹಣಕಾಸು ಸೇವೆಯ Finablr. ಆ ಎರಡೂ ಕಂಪೆನಿಯ ಮೇಲಧಿಕಾರಿಗಳು ರಾಜೀನಾಮೆ ನೀಡಿದರು ಅಥವಾ ತೆಗೆಯಲಾಯಿತು.

52 ಸಾವಿರ ಕೋಟಿ ರುಪಾಯಿಗೂ ಹೆಚ್ಚು ಸಾಲ

52 ಸಾವಿರ ಕೋಟಿ ರುಪಾಯಿಗೂ ಹೆಚ್ಚು ಸಾಲ

ಎರಡೂ ಕಂಪೆನಿಗಳ ಷೇರು ವ್ಯವಹಾರಗಳನ್ನು ಲಂಡನ್ ಸ್ಟಾಕ್ ಎಕ್ಸ್ ಚೇಂಜ್ ನಿಂದ ಅಮಾನತು ಮಾಡಲಾಯಿತು. ಎನ್ ಎಂಸಿ ಹೆಲ್ತ್ ನಿರ್ವಹಣೆಗೆ ಆಡಳಿತ ನೇಮಕ ಮಾಡಲಾಯಿತು. ಫೇಬ್ರವರಿಯಲ್ಲಿ ನಿರ್ದೇಶಕ ಹಾಗೂ ಜಂಟಿ ಅಧಿಕಾರೇತರ ಅಧ್ಯಕ್ಷ ಹುದ್ದೆಯಿಂದ ಶೆಟ್ಟಿ ಕೆಳಗೆ ಇಳಿದರು. ಅಬುಧಾಬಿಯಲ್ಲಿ ವಂಚನೆ, ನಕಲಿ ಸಹಿ ಮಾಡಿದ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ ಬಿ.ಆರ್.ಶೆಟ್ಟಿ. ಹಾಗಿದ್ದರೆ ಎನ್ ಎಂಸಿ ಸಾಲ ಎಷ್ಟಿದೆ ಗೊತ್ತಾ? ಅಬುಧಾಬಿ ಕಮರ್ಷಿಯಲ್ ಬ್ಯಾಂಕ್ ಗೆ 96.3 ಕೋಟಿ USD, ದುಬೈ ಇಸ್ಲಾಮಿಕ್ ಬ್ಯಾಂಕ್ ಗೆ 54.1 ಕೋಟಿ USD, ಅಬುಧಾಬಿ ಇಸ್ಲಾಮಿಕ್ ಬ್ಯಾಂಕ್ ಗೆ 32.5 ಕೋಟಿ USD, ಸ್ಟ್ಯಾಂಡರ್ಡ್ ಚಾರ್ಟರ್ಡ್ ಗೆ 25 ಕೋಟಿ USD, ಬಾರ್ಕ್ಲೇಸ್ ಗೆ 14.6 ಕೋಟಿ USD ಸಾಲವನ್ನು ಬಾಕಿ ಉಳಿಸಿಕೊಳ್ಳಲಾಗಿದೆ. 221 ಕೋಟಿ USDಗೂ ಹೆಚ್ಚು ಸಾಲ ಇದೆ. ಭಾರತದ ರುಪಾಯಿಗಳಲ್ಲಿ 16,800 ಕೋಟಿಗೂ ಹೆಚ್ಚು. ವರದಿಯೊಂದರ ಪ್ರಕಾರ, 80 ಹಣಕಾಸು ಸಂಸ್ಥೆಗಳಿಗೆ ಎನ್ ಎಂಸಿ ಹೆಲ್ತ್ ಸಾಲ ಮರುಪಾವತಿಸಬೇಕಿದೆ. ಈ ಮೇಲಿನ ಲೆಕ್ಕ ಅತಿ ಹೆಚ್ಚು ಸಾಲ ನೀಡಿದ ಸಂಸ್ಥೆಗಳದಷ್ಟೇ. ಕಂಪೆನಿಗೆ ಇರುವ ಸಾಲ 660 ಕೋಟಿ USD ಎಂದು ಲಂಡನ್ ಸ್ಟಾಕ್ ಎಕ್ಸ್ ಚೇಂಜ್ ಗೆ ಮಾಹಿತಿ ನೀಡಲಾಗಿದೆ. ಅದರ ಲೆಕ್ಕ ನೀಡುವುದಾದರೆ 52 ಸಾವಿರ ಕೋಟಿ ರುಪಾಯಿಗೂ ಹೆಚ್ಚು.

ಸಮಸ್ಯೆ ಇರಬೇಕೆನ್ನುವ ಶೆಟ್ಟರು ಪರಿಹಾರ ಕಂಡುಕೊಳ್ಳಬಹುದಾ?

ಸಮಸ್ಯೆ ಇರಬೇಕೆನ್ನುವ ಶೆಟ್ಟರು ಪರಿಹಾರ ಕಂಡುಕೊಳ್ಳಬಹುದಾ?

77 ವರ್ಷದ ಬಿ.ಆರ್. ಶೆಟ್ಟಿ ಅದ್ಯಾವ ಪರಿಯ ಸಮಸ್ಯೆಯಲ್ಲಿ ಸಿಲುಕಿದ್ದಾರೆಂದರೆ ಮುಂದೆ ಏನಾಗಬಹುದು ಎಂದು ಸಣ್ಣ ಅಂದಾಜು ಕೂಡ ಮಾಡಲಾಗದಷ್ಟು ಭೀಕರವಾಗಿದೆ ಪರಿಸ್ಥಿತಿ. ನಾಲ್ಕು ದಶಕಗಳ ಕಾಲ ಕಟ್ಟಿದ ಸಾಮ್ರಾಜ್ಯ ನೆಲಕ್ಕೆ ಬಿದ್ದಿದೆ. ಫೆಬ್ರವರಿಯಲ್ಲಿ ಭಾರತಕ್ಕೆ ಬಂದಿದ್ದ ಅವರು, ಸದ್ಯದಲ್ಲೇ ಒಳ್ಲೆ ಸುದ್ದಿ ನೀಡುತ್ತೇನೆ ಎಂದಿದ್ದರು. ಇಂದಿನ ಸ್ಥಿತಿ ಬಗ್ಗೆ ತಿಳಿಯುವ ಸಲುವಾಗಿ ತಾನಾಗಿಯೇ ತನಿಖಾ ಸಂಸ್ಥೆ ನೇಮಿಸಿದ್ದಾಗಿ ತಿಳಿಸಿದ್ದರು. ಶೀಘ್ರದಲ್ಲೇ ಸತ್ಯವನ್ನು ಬಯಲಿಗೆ ಇಡುವುದಾಗಿ ಹೇಳಿದ್ದರು. ಅಂದ ಹಾಗೆ ತಮ್ಮ ಹಣ, ಬ್ಯಾಗ್ ಕಳೆದುಕೊಂಡು, ಅರೇಬಿಕ್ ಬಾರದೆ ಕೆಲಸ ಸಿಗದೆ ಯುಎಇಯಲ್ಲಿ ಪರದಾಡಿದ್ದ ಯುವಕ ಔಷದಗಳ ಮಾರಾಟ ಆರಂಭಿಸಿದ್ದರು. ಆ ದೇಶಕ್ಕೆ ಮೊದಲ ಹೊರದೇಶದ ಮೆಡಿಕಲ್ ರೆಪ್ರಸಂಟೇಟಿವ್ ಬಿ.ಆರ್. ಶೆಟ್ಟಿ. ಆ ಕಷ್ಟದ ದಿನಗಳಲ್ಲಿ ಔಷಧ ಮಾರುತ್ತಿದ್ದ ಬ್ಯಾಗ್ ಅನ್ನು ಇವತ್ತಿಗೂ ಶೆಟ್ಟರು ನೆನಪಿಗಾಗಿ ಇಟ್ಟುಕೊಂಡಿದ್ದಾರಂತೆ. ಆದರೆ 1975ರಲ್ಲಿ ಎರಡು ಕೋಣೆಯಲ್ಲಿ ಕ್ಲಿನಿಕ್ ಹಾಗೂ ಫಾರ್ಮಸಿ ಆರಂಭಿಸಿದ ಅವರು, ಮುಂದೆ 45 ಆಸ್ಪತ್ರೆ ಸ್ಥಾಪಿಸಿ, 2000 ವೈದ್ಯರನ್ನು ನೇಮಿಸಿಕೊಳ್ಳುವ ಮಟ್ಟಕ್ಕೆ ಬೆಳೆದರು. ಆದರೆ ಜೀವನದ ಸಂಧ್ಯಾ ಕಾಲದಲ್ಲಿ ಸಮಸ್ಯೆಗಳ ಮೂಟೆ ಮೂಟೆ ಅವರ ಮೈ ಮೇಲೆ ಬಿದ್ದಿದೆ. ಶೆಟ್ಟರು ಪರಿಹಾರ ಕಂಡುಕೊಳ್ಳಬಹುದಾ? ಗೊತ್ತಿಲ್ಲ.

English summary
Bavaguthu Raghuram Shetty is an Indian-born former billionaire businessman, and the founder of a number of companies based in the United Arab Emirates. Here is the rise and fall story of a billionaire. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X