''ಯುಎಸ್ ವಿರುದ್ಧ ಚೀನಾದ ವಾಣಿಜ್ಯ ಅಸ್ತ್ರವೇ ಬಿಟ್ ಕಾಯಿನ್''
ನ್ಯೂಯಾರ್ಕ್, ಏಪ್ರಿಲ್ 8: ಡಿಜಿಟಲ್ ಕರೆನ್ಸಿ ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್ ಚೀನಾದ ವಾಣಿಜ್ಯ ಅಸ್ತ್ರ, ಇದು ಯುಎಸ್ ಆರ್ಥಿಕ ಪರಿಸ್ಥಿತಿ ಹದಗೆಡಿಸಲು ಮಾಡಿರುವ ಸಂಚು ಎಂದು ಟೆಕ್ ಹೂಡಿಕೆದಾರ, ಮಾಜಿ ಪೇಪಾಲ್ ಸಿಇಒ, ಹಾಲಿ ಫೇಸ್ಬುಕ್ ಉನ್ನತಾಧಿಕಾರಿ ಪೀಟರ್ ಥಿಯಲ್ ಹೇಳಿದ್ದಾರೆ.
ಕ್ರಿಪ್ಟೋಕರೆನ್ಸಿ ಮೌಲ್ಯ ಏರಿಕೆ, ಬಳಕೆ ಹೆಚ್ಚಾದಂತೆ ಮೊದಲ ಹೊಡೆತ ಯುಎಸ್ ಡಾಲರ್ ಮೇಲಾಗುತ್ತದೆ. ನಾನು ಬಿಟ್ ಕಾಯಿನ್ ಪರ ಇದ್ದೇನೆ ಆದರೆ, ಇದು ಆರ್ಥಿಕ ಅಸ್ತ್ರವಾಗಿ ನುಸುಳುತ್ತಿದೆ ಎಂಬ ಅಭಿಪ್ರಾಯ ಮೂಡುತ್ತಿದೆ ಎಂದಿದ್ದಾರೆ.
ಅತಿ ದೊಡ್ಡ ಟೆಕ್ ಕಂಪನಿಗಳು ಚೀನಾ ಪರ ವಾಲಿವೆ. ಬಿಟ್ ಕಾಯಿನ್ ಸೇರಿದಂತೆ ಕ್ರಿಪ್ಟೋಕರೆನ್ಸಿ ಮೇಲೆ ಹೂಡಿಕೆ ಮಾಡುತ್ತಿರುವುದನ್ನು ಗಮನಿಸಬೇಕಾಗಿದೆ. ಅಮೆರಿಕನ್ ಕಂಪನಿಯಾಗಿ ಉಳಿದಿಲ್ಲ, ಚೀನಾ ವಿರೋಧಿ ಕಂಪನಿಗಳಾಗಿ ಗುರುತಿಸಿಕೊಂಡಿಲ್ಲ ಎಂದು ಪೀಟರ್ ಹೇಳಿದರು.
ಬಿಟ್ ಕಾಯಿನ್, ಇಥೆರಿಯಂ, ಕಾರ್ಡನೋ ಸೇರಿದಂತೆ ಹಲವು ಕರೆನ್ಸಿಗಳು ಭರ್ಜರಿ ಫಲಿತಾಂಶ ನೀಡುತ್ತಿವೆ. ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ಮೌಲ್ಯ $2 ಟ್ರಿಲಿಯನ್ಗೆ ಏರಿಕೆಯಾಗಿದೆ. ಪೇಪಾಲ್ ಸೇರಿದಂತೆ ಪ್ರಮುಖ ಸಂಸ್ಥೆಗಳು ಬಿಟ್ ಕಾಯಿನ್ ವ್ಯಾಲೆಟ್ ಬಳಕೆ ಮಾನ್ಯತೆ ನೀಡಿವೆ. ಆದರೆ, ಈ ನಡುವೆ ಕೆಲ ದಿನಗಳ ಹಿಂದೆ 60 ಸಾವಿರ ಡಾಲರ್ ಗಡಿ ದಾಟಲು ಹೆಣಗಿದ್ದ ಬಿಟ್ ಕಾಯಿನ್ ಮತ್ತೆ ಚೇತರಿಸಿಕೊಳ್ಳುವ ಬಗ್ಗೆ ಹೆಚ್ಚಿನ ನಿರೀಕ್ಷೆ ಇರಲಿಲ್ಲ.
ಆದರೆ, ಎಲ್ಲಾ ಕ್ರಿಪ್ಟೋಕರೆನ್ಸಿಗಳ ಮೌಲ್ಯ 2.02 ಟ್ರಿಲಿಯನ್ ಡಾಲರ್ ದಾಟಿತು. ಕಳೆದ ಒಂದು ವರ್ಷದಲ್ಲಿ, ಬಿಟ್ಕಾಯಿನ್ ಶೇಕಡಾ 103.72ರಷ್ಟು ಲಾಭವನ್ನು ನೀಡಿದೆ. ಬಿಟ್ಕಾಯಿನ್ ಸಾರ್ವಕಾಲಿಕ ಹೆಚ್ಚಿನ ಬೆಲೆ 61,556.59 ಡಾಲರ್ ಆಗಿದ್ದು, ಇನ್ನೂ ಈ ದಾಖಲೆ ಮತ್ತೊಮ್ಮೆ ಮುರಿದಿಲ್ಲ.
ಬಿಟ್ಕಾಯಿನ್: ಇದು ಅತ್ಯಂತ ಜನಪ್ರಿಯ ಕ್ರಿಪ್ಟೋಕರೆನ್ಸಿಯಾಗಿದೆ. ಡಿಜಿಟಲ್ ಕರೆನ್ಸಿಯಾಗಿರುವುದರಿಂದ ಯಾವುದೇ ರೀತಿಯಲ್ಲಿ ಮುದ್ರಣ ರೂಪದಲ್ಲಿ ಸಿಗುವುದಿಲ್ಲ. ರೂಪಾಯಿ, ಡಾಲರ್, ಯುರೋ ಗಳಂತೆ ಭೌತಿಕ ರೂಪದಲ್ಲಿ ಇರುವುದಿಲ್ಲ. ಯಾವುದೇ ದೇಶ, ಭಾಷೆ, ಬ್ಯಾಂಕುಗಳಿಗೆ ಇದು ಸೀಮಿತವಾಗಿಲ್ಲ. ಭಾರತ, ಸೌದಿ ಅರೇಬಿಯಾ, ಅಲ್ಜೀರಿಯಾ, ಬೊಲಿವಿಯಾ ಅನೇಕ ದೇಶಗಳಲ್ಲಿ ನಿಷೇಧವಾಗಿರುವ ಕ್ರಿಪ್ಟೋ ಕರೆನ್ಸಿ ಇತ್ತೀಚೆಗೆ ಭಾರಿ ಬೇಡಿಕೆ ಪಡೆದು ತನ್ನ ಮೌಲ್ಯ ಹೆಚ್ಚಿಸಿಕೊಂಡಿದೆ. ಆದರೆ, ಡಿಜಿಟಲ್ ಆಸ್ತಿ ರೂಪದಲ್ಲಿ ಕ್ರಿಪ್ಟೋ ಕರೆನ್ಸಿ ಬಳಕೆಯಾಗಬಹುದೇ ಹೊರತೂ ಸಾಮಾನ್ಯ ವ್ಯವಹಾರಕ್ಕೆ ಸೂಕ್ತವಲ್ಲ ಎಂದು ತಜ್ಞರು ಕೂಡಾ ಅಭಿಪ್ರಾಯಪಟ್ಟಿದ್ದಾರೆ.