ಅವಿರತ ಟ್ರಸ್ಟ್ ನಿಂದ ರಕ್ತದಾನಕ್ಕಾಗಿ ಆಂಡ್ರಾಯ್ಡ್ ಅಪ್ಲಿಕೇಷನ್
ಬೆಂಗಳೂರು, ಏಪ್ರಿಲ್ 19: ಬಹುತೇಕ ಸಾಫ್ಟ್ ವೇರ್ ಸಂಸ್ಥೆ ಉದ್ಯೋಗಿಗಳು, ವೈದ್ಯರು ಸೇರಿ ಕಟ್ಟಿರುವ ಸಾಮಾಜಿಕ ಕಳಕಳಿ ಸಂಸ್ಥೆ ಅವಿರತ ಟ್ರಸ್ಟ್ ಈಗ ರಕ್ತದಾನಕ್ಕಾಗಿ ಆಂಡ್ರಾಯ್ಡ್ ಅಪ್ಲಿಕೇಷನ್ ವಿನ್ಯಾಸಗೊಳಿಸಿದೆ. ಈ ಅಪ್ಲಿಕೇಷನ್ ಮೂಲಕ ರಕ್ತದಾನ ಮಾಡುವವರು, ಪಡೆಯುವವರು ವಿವರಗಳನ್ನು ಪಡೆದುಕೊಳ್ಳಬಹುದು.
ಈ ಅಪ್ಲಿಕೇಷನ್ ನಲ್ಲಿ ವಿವಿಧ ಗುಂಪಿಗೆ ಸೇರಿದ ರಕ್ತದಾನಿಗಳ ಡಾಟಾಬೇಸ್ ಇರುತ್ತದೆ. ಅವಿರತದ ಪ್ರಮುಖ ಕಾರ್ಯಕ್ಷೇತ್ರಗಳಲ್ಲಿ "ಆರೋಗ್ಯ"ವು ಕೂಡ ಒಂದು. ಪ್ರತಿ ವರ್ಷ, ಅವಿರತವು ಹಳ್ಳಿಯ ಶಾಲಾ ಮಕ್ಕಳಿಗೆ ಆರೋಗ್ಯ ಶಿಬಿರವನ್ನು ಏರ್ಪಡಿಸುತ್ತ ಬಂದಿದೆ. ಹಾಗೇ ಮುಂದುವರೆಸುತ್ತೆ ಕೂಡ. ಮಕ್ಕಳ ಶೈಕ್ಷಣಿಕ ಕಾಳಜಿಯ ಜೊತೆಗೆ ಅವರ ಆರೋಗ್ಯದ ಬಗ್ಗೆಯೂ ಆಸ್ಥೆ ವಹಿಸುತ್ತಿದೆ. ಈಗ ಒಂದು ಹೆಜ್ಜೆ ಮುಂದಿಡುವ ಪ್ರಯತ್ನ ಎಂದು ಸಂಸ್ಥೆಯ ಅಧ್ಯಕ್ಷ ಕೆ.ಟಿ ಸತೀಶ್ ಗೌಡ ಅವರು ಹೇಳಿದ್ದಾರೆ.
ನಮ್ಮ ಕುಟುಂಬದವರೊ, ಸಂಬಂಧಿಕರೊ, ಸ್ನೇಹಿತರೊ ಅಥವಾ ನೆರೆಹೊರೆಯವರೊ ಅನಾರೋಗ್ಯ ಕಾರಣದಿಂದ ಬಳಲುತಿದ್ದಾಗ ಅವಶ್ಯಕ ರಕ್ತ ಲಭ್ಯವಿಲ್ಲದೆ ಪರಿದಾಡಿದ, ತೊಂದರೆಗೊಳಗಾದ ಸಾಕಷ್ಟು ಉದಾಹರಣೆಗಳು ಕಣ್ಣ ಮುಂದಿವೆ.. ಅನೇಕ ಬ್ಲಡ್ ಬ್ಯಾಂಕ್ ಗಳಿದ್ದೂ, ಸ್ನೇಹಿತ ಹಾಗೂ ಸಂಬಂಧಿಕರ ನೆಟ್ವರ್ಕ್ ಇದ್ದರೂ ರಕ್ತವನ್ನು ಹೊಂದಿಸಲಾಗದ ಘಟನೆಗಳಿವೆ. ಇಂಥ ಪರಿಸ್ಥಿತಿಗಳಿಂದ ಹೊರಬರಲು ಅವಿರತ ಸದಸ್ಯ ಶ್ರೀಕಾಂತ್ ಚಕ್ರವರ್ತಿ ಮೊಬೈಲ್ ಅಪ್ಲಿಕೇಶನ್ ಒಂದನ್ನು ಸಿದ್ಧಪಡಿಸಿದ್ದಾರೆ.
App link:
https://play.google.com/store/apps/details?id=com.phonegap.blooddonor
ರಕ್ತ ದಾನವನ್ನು ಮಾಡಲಿಚ್ಛಿಸುವವರು, ನಮ್ಮ ರಕ್ತದಾನಿಗಳ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಬಯಸುವವರು blooddonor.aviratha@gmail.com ಗೆ ತಮ್ಮ ಹೆಸರು, ವಿಳಾಸ ಮತ್ತು ಫೋನ್ ನಂಬರ್ ವಿವರಗಳನ್ನು ಕಳುಹಿಸಬಹುದು. ಅಗತ್ಯ ಸಮಯದಲ್ಲಿ ನಿಮ್ಮನ್ನು ಸಂಪರ್ಕಿಸುತ್ತೇವೆ.
ಅವಿರತ ಪ್ರತಿಷ್ಠಾನ : ಅವಿರತ-ತಾಯ್ನಾಡು ಹಾಗೂ ಮಾನವೀಯತೆಗಾಗಿ ಸತತವಾಗಿ ದುಡಿಯುವ ಅದಮ್ಯ ಉತ್ಸಾಹದ ಯುವಪಡೆ ಮತ್ತು ಸಾಮಾಜಿಕ ಕಳಕಳಿಯುಳ್ಳ ಉತ್ಸಾಹಿಗಳ ತಂಡ.
ಆವಿರತದಲ್ಲಿ ಸಾಹಿತಿಗಳಿಂದ ಹಿಡಿದು ಸಾಫ್ಟ್ ವೇರ್ ಇಂಜಿನಿಯರ್ಗಳು, ವೈದ್ಯರು, ಬುದ್ಧಿಜೀವಿಗಳು ತತ್ವಜ್ಞಾನಿಗಳು, ತಂತ್ರಜ್ಞರು, ವಿಜ್ಞಾನಿಗಳು, ನಾಗರೀಕರು, ರೈತರು, ಉದ್ಯಮಿಗಳು ಹೀಗೆ ಸಮಾಜದ ಎಲ್ಲ ವರ್ಗದ ಜನರಿಂದ ರೂಪಿತವಾಗಿದೆ. ತಾಯ್ನಾಡನ್ನು ತರ್ಕಬದ್ಧವಾಗಿ, ನ್ಯಾಯಯುತವಾಗಿ ಮುನ್ನಡೆಸಲು ಪಣತೊಟ್ಟಿರುವ ಬದಲಾವಣೆಯ ಹರಿಕಾರರಿದ್ದಾರೆ.