• search
  • Live TV
ಭುವನೇಶ್ವರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೇಶದ ಅತಿ ಜನಪ್ರಿಯ ಸಿಎಂಗೆ 75ನೇ ವರ್ಷದ ಸಂಭ್ರಮ

|

ಭುವನೇಶ್ವರ್, ಅಕ್ಟೋಬರ್ 15: ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಶುಕ್ರವಾರ 75ನೇ ವಯಸ್ಸಿಗೆ ಕಾಲಿರಿಸುತ್ತಿದ್ದಾರೆ. ಕೋವಿಡ್ 19ರ ಕಾರಣದಿಂದ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳದೆ ಇರಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ ಎಂದು ಅವರ ಕಚೇರಿ ತಿಳಿಸಿದೆ.

ಒಡಿಶಾ ಮುಖ್ಯಮಂತ್ರಿಯಾಗಿ ಕಳೆದ ಮಾರ್ಚ್ ತಿಂಗಳಲ್ಲಿ ನವೀನ್ ಪಟ್ನಾಯಕ್ 20 ವರ್ಷಗಳನ್ನು ಪೂರೈಸಿದ್ದಾರೆ. ಅವರು ನಿರ್ಮಿಸಿರುವ ಹಲವು ದಾಖಲೆಗಳಲ್ಲಿ ರಾಜ್ಯದ ಅತ್ಯಂತ ಸುದೀರ್ಘಾವಧಿ ಸೇವೆ ಸಲ್ಲಿಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಯೂ ಒಂದು.

ಕೊವಿಡ್ ನಿರ್ವಹಣೆಗೆ ಒಡಿಶಾದ ಗಂಜಮ್ ಮಾದರಿ: ಆಕ್ಸ್‌ಫರ್ಡ್ ಪ್ರಶಂಸೆ

ನವೀನ್ ಪಟ್ನಾಯಕ್ ತಂದೆ ಬಿಜು ಪಟ್ನಾಯಕ್, ತಮ್ಮ ಕುಟುಂಬದ ಯಾರೊಬ್ಬರೂ ರಾಜಕೀಯ ಪ್ರವೇಶಿಸುವ ಆಲೋಚನೆಯನ್ನು ಕೂಡ ಬೆಂಬಲಿಸಿದವರಲ್ಲ. ಆದರೆ 1997ರಲ್ಲಿ ಬಿಜು ಪಟ್ನಾಯಕ್ ಅವರ ನಿಧನದ ನಂತರ ಆಗಿನ ಜನತಾದಳ ಪಕ್ಷದ ಸಹೋದ್ಯೋಗಿಗಳು ನವೀನ್ ಪಟ್ನಾಯಕ್ ಅವರನ್ನು ತಂದೆಯ ಲೋಕಸಭೆ ಕ್ಷೇತ್ರದ ಉಪ ಚುನಾವಣೆಯ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದರು.

ಜನತಾ ದಳದಿಂದ ಹೊರ ಬಂದ ನವೀನ್ ಪಟ್ನಾಯಕ್, ಬಿಜು ಜನತಾದಳ ಎಂಬ ಪ್ರಾದೇಶಿಕ ಪಕ್ಷ ಕಟ್ಟಿದರು. ಅಲ್ಲಿಂದ ಬಿಜೆಡಿ ಎಲ್ಲ ಸಾರ್ವತ್ರಿಕ ಚುನಾವಣೆಗಳಲ್ಲಿಯೂ ಜಯಗಳಿಸುತ್ತಾ ಬಂದಿದೆ. ಮೊದಲ ಚುನಾವಣಾ ಗೆಲುವನ್ನು ಬಿಜೆಪಿ ಜತೆಗೂಡಿ ಪಡೆದುಕೊಂಡಿತ್ತು. ಆದರೆ 2009ರ ಬಳಿಕ ಎಲ್ಲ ಚುನಾವಣೆಗಳಲ್ಲಿಯೂ ಅದು ಸ್ವಂತ ಬಲದಿಂದ ಗೆಲ್ಲುತ್ತಾ ಬಂದಿದೆ.

ಪಟ್ನಾಯಕ್ ಪ್ರಾಮಾಣಿಕ ಕೆಲಸಗಾರ ಮತ್ತು ಸುಧಾರಕ ಎಂಬ ಖ್ಯಾತಿ ಗಳಿಸಿದ್ದಾರೆ. ಇತರೆ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆ ನಡೆಸಲು ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಅನುಮತಿ ನೀಡುವ ನಿರ್ಣಯವನ್ನು ರಾಜ್ಯ ವಿಧಾನಸಭೆಯಲ್ಲಿ ಫೆಬ್ರವರಿ ತಿಂಗಳಲ್ಲಿ ತೆಗೆದುಕೊಂಡಿದ್ದರು. ಇದರ ಬಳಿಕ 2021ರ ಸಾರ್ವತ್ರಿಕ ಜನಗಣತಿ ವೇಳೆ ಸಾಮಾಜಿಕ ಆರ್ಥಿಕ ಜಾತಿ ಗಣನೆಯನ್ನು ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಪಟ್ನಾಯಕ್ ಸರ್ಕಾರ ಮನವಿ ಮಾಡಿತ್ತು.

ಒಡಿಶಾದಲ್ಲಿ ಸಿಎಂ ಪರಿಹಾರ ನಿಧಿಯಿಂದ ಕೊವಿಡ್19 ನಿರ್ವಹಣೆಗೆ 472 ಕೋಟಿ

ಪಟ್ನಾಯಕ್ ಅವರ ಪ್ರಮುಖ ಸಾಧನೆಗಳಲ್ಲಿ ನಾಗರಿಕ ಕೇಂದ್ರಿತ ಆಡಳಿತ ಒಂದು. ಈ ವಿಚಾರದಲ್ಲಿ ಅವರು 5 ಟಿಗಳ ಮೇಲೆ ಗಮನ ಹರಿಸಿದ್ದರು- ತಂತ್ರಜ್ಞಾನ, ಪಾರದರ್ಶಕತೆ, ತಂಡದ ಕೆಲಸ, ಸಮಯ ಮತ್ತು ಪರಿವರ್ತನೆ ಈ ಐದು ಟಿ ಗಳಾಗಿದ್ದವು. ಈ ಯೋಜನೆಯಡಿ ಜನ ಸಾಮಾನ್ಯರಿಗೆ ಸ್ವತಃ ಮುಖ್ಯಮಂತ್ರಿ ಮತ್ತು ಅವರ ಅಧಿಕಾರಿಗಳು ಫೋನ್ ಮಾಡುತ್ತಾರೆ. ಕರೆಯ ವೇಳೆ ಎಲ್ಲ ಸರ್ಕಾರಿ ಯೋಜನೆಗಳು ಸಮರ್ಪಕವಾಗಿ ತಲುಪುತ್ತಿವೆಯೇ ಎಂದು ಅವರು ಜನಸಾಮಾನ್ಯರನ್ನು ನೇರವಾಗಿ ಕೇಳುತ್ತಾರೆ. ತಮ್ಮ ಖಾಸಗಿ ಕಾರ್ಯದರ್ಶಿ ವಿ.ಕೆ. ಪಾಂಡಿಯನ್ ಅವರನ್ನು ಕಾರ್ಯದರ್ಶಿಯನ್ನಾಗಿ ನೇಮಿಸಿದ್ದಾರೆ. ಅವರು ಸರ್ಕಾರಿ ಯೋಜನೆಗಳು ಸೂಕ್ತವಾಗಿ ಜಾರಿಯಾಗಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ವಿಭಿನ್ನ ಸ್ಥಳಗಳಿಗೆ ಹಠಾತ್ ಭೇಟಿ ನೀಡುತ್ತಾರೆ.

ಮಿ. ಕ್ಲೀನ್ ವರ್ಚಸ್ಸು ಹೊಂದಿರುವ ಪಟ್ನಾಯಕ್, ಭ್ರಷ್ಟಾಚಾರದ ವಿರುದ್ಧದ ಹೋರಾಟದ ಒಲವು ಹೊಂದಿದ್ದಾರೆ. ಅಕ್ರಮ ಆಸ್ತಿ ಪ್ರಕರಣದಲ್ಲಿ ಆಡಳಿತಾರೂಢ ಬಿಜೆಡಿಯ ಮಾಜಿ ಶಾಸಕರನ್ನು ಬಂಧಿಸಲಾಗಿತ್ತು. ಅನೇಕ ಕಳಂಕಿತ ಅಧಿಕಾರಿಗಳು ರಾಜೀನಾಮೆ ನೀಡುವಂತೆ ಮಾಡಿದ್ದಲ್ಲದೆ, ಅವರ ಪಿಂಚಣಿಯನ್ನು ಸ್ಥಗಿತಗೊಳಿಸಿದ್ದಾರೆ.

ಪಟ್ನಾಯಕ್ ಎದುರಿಸಿದ ಪ್ರಮುಖ ಸವಾಲುಗಳಲ್ಲಿ 2000ನೇ ಇಸವಿಯಲ್ಲಿ ಅಧಿಕಾರಕ್ಕೆ ಬಂದಾಗ ಉಂಟಾದ ಸೂಪರ್ ಸೈಕ್ಲೋನ್ ಒಂದು. ಚಂಡಮಾರುತವು ಸಾವಿರಾರು ಜನರ ಜೀವ ತೆಗೆದಿದ್ದಲ್ಲದೆ, ಭಾರಿ ಪ್ರಮಾಣದ ಹಾನಿಗೆ ಕಾರಣವಾಗಿತ್ತು. 2019ರಲ್ಲಿ ಫನಿ ಚಂಡಮಾರುತ ಸೇರಿದಂತೆ ಅನೇಕ ಚಂಡಮಾರುತಗಳು ಒಡಿಶಾಗೆ ಅಪ್ಪಳಿಸಿವೆ. ಆದರೆ ಅಂತಹ ವಿಪತ್ತುಗಳನ್ನು ನಿಭಾಯಿಸಲು ಅಗತ್ಯ ಸಾಮಗ್ರಿಗಳು ಸದಾ ಲಭ್ಯ ಇರುವುವಂತೆ ಪಟ್ನಾಯಕ್ ನೋಡಿಕೊಳ್ಳುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದವರೆಗೂ ವಿವಿಧ ವೇದಿಕೆಗಳು ಅವರ ಈ ಮುನ್ನೆಚ್ಚರಿಕೆಯನ್ನು ಶ್ಲಾಘಿಸಿವೆ.

ಪಟ್ನಾಯಕ್ ಗರಿಷ್ಠ ಪ್ರಮಾಣದ ಸಾಮಾಜಿಕ ಕಲ್ಯಾಣ ಕ್ರಮಗಳನ್ನು ತೆಗೆದುಕೊಂಡ ಮುಖ್ಯಮಂತ್ರಿಗಳಲ್ಲಿ ಒಬ್ಬರು. ಕೇಂದ್ರದಲ್ಲಿನ ಪಿಎಂ ಕಿಸಾನ್ ಯೋಜನೆಗೆ ಸಮನಾದ ಕಾಲಿಯಾ ಯೋಜನೆಯನ್ನುರಾಜ್ಯದಲ್ಲಿ ಪರಿಚಯಿಸಿದ್ದರು. ಬಡವರಿಗೆ ಕೇವಲ 1 ರೂ.ಗೆ ಒಂದು ಕೆಜಿ ಅಕ್ಕಿ ನೀಡುವ ಯೋಜನೆ ಪರಿಚಯಿಸಿದ್ದರು.

ಜಪಾನ್ ಒಡಿಶಾದಲ್ಲಿ ಹೂಡಿಕೆಯ ಅವಕಾಶಗಳನ್ನು ನೋಡುತ್ತಿದೆ. ಅದಕ್ಕಾಗಿ ಇತ್ತೀಚೆಗೆ ಜಪಾನ್ ರಾಯಭಾರಿ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ಪಟ್ನಾಯಕ್‌ ಅವರನ್ನು ಭೇಟಿ ಮಾಡಿದ್ದರು. ರಾಷ್ಟ್ರೀಯ ಬೆಳವಣಿಗೆಗೆ ಹೋಲಿಸಿದರೆ ಒಡಿಶಾದ ಆರ್ಥಿಕತೆಯು ನಿರಂತರವಾಗಿ ಮೇಲ್ಮುಖವಾಗಿ ಬೆಳೆಯುತ್ತಿದೆ. ರಾಷ್ಟ್ರೀಯ ಸರಾಸರಿ ಶೇ 6.9ರಷ್ಟಿದ್ದರೆ, ಒಡಿಶಾದ ಸರಾಸರಿ ಬೆಳವಣಿಗೆ ಶೇ 8ರಷ್ಟಿದೆ. ಜಾಗತಿಕ ಮತ್ತು ರಾಷ್ಟ್ರೀಯ ಆರ್ಥಿಕತೆಯಲ್ಲಿನ ನಿಧಾನಗತಿ ನಡುವೆಯೂ ಒಡಿಶಾ ಆರ್ಥಿಕತೆ ಶೇ 6.16ರ ಸರಾಸರಿಯಲ್ಲಿ ಸಾಗುವ ನಿರೀಕ್ಷೆಯಿದೆ.

ಒಡಿಶಾವು ಹೂಡಿಕೆಗೆ ಪೂರಕವಾದ ಸ್ಥಳವಾಗಿ ಬೆಳೆದಿದೆ. 2019ರ ಸಿಎಂಐಇ ಡೇಟಾ ಪ್ರಕಾರ ದೇಶದ ಒಟ್ಟಾರೆ ಹೂಡಿಕೆಯಲ್ಲಿ ಶೇ 18ರಷ್ಟು ಒಡಿಶಾಕ್ಕೆ ಸಿಗುತ್ತಿದೆ. 2020-21ನೇ ಸಾಲಿನಲ್ಲಿ ರಾಜ್ಯವು ಶೇ -7.5ರ ಸರಾಸರಿಯಲ್ಲಿ ಬೆಳೆವಣಿಗೆಯಾಗುವ ನಿರೀಕ್ಷೆಯಿದೆ ಎಂದು ರಾಜ್ಯ ಹಣಕಾಸು ಸಚಿವ ನಿರಂಜನ್ ಪೂಜಾರಿ ಹೇಳಿದ್ದಾರೆ. ಕೃಷಿ ಕ್ಷೇತ್ರವು ಶೇ 4.5ರ ಸರಾಸರಿಯಲ್ಲಿ ಬೆಳೆದಿದ್ದರೆ, ರಾಷ್ಟ್ರಮಟ್ಟದಲ್ಲಿ ಇದು ಶೇ 3.1ರಷ್ಟಿದೆ. ಇಷ್ಟೇ ಅಲ್ಲ, ಕೇಂದ್ರ ಸರ್ಕಾರವು ಸತತ ಐದು ಬಾರಿ ಒಡಿಶಾಕ್ಕೆ ಕೃಷಿ ಕರ್ಮಣ್ ಪ್ರಶಸ್ತಿ ನೀಡಿದೆ.

ನಾಲ್ಕು ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಿದ್ದು, ಇನ್ನೂ ಏಳು ಕಾಲೇಜುಗಳು ನಿರ್ಮಾಣವಾಗುತ್ತಿವೆ. ಏಮ್ಸ್‌ನ ಮೊದಲ ಆಸ್ಪತ್ರೆಗಳಲ್ಲಿ ಒಂದು ಭುವನೇಶ್ವರದಲ್ಲಿ ನಿರ್ಮಾಣವಾಗಿದೆ. ಗ್ರಾಮೀಣ ಬಡವರಿಗಾಗಿ ಮುಂದಿನ ನಾಲ್ಕು ವರ್ಷಗಳಲ್ಲಿ 20 ಲಕ್ಷ ಕಾಂಕ್ರೀಟ್ ಮನೆಗಳ ನಿರ್ಮಾಣ ಮಾಡುವುದಾಗಿ ಪಟ್ನಾಯಕ್ ಮಾರ್ಚ್‌ನಲ್ಲಿ ಘೋಷಿಸಿದ್ದರು. ಈಗಾಗಲೇ 25 ಲಕ್ಷ ಫಲಾನುಭವಿಗಳಿಗೆ ಮನೆಗಳನ್ನು ಕಟ್ಟಿಕೊಡಲಾಗಿದೆ.

ಕೋವಿಡ್ ವಿರುದ್ಧ ನವೀನ್ ಪಟ್ನಾಯಕ್ ಸರ್ಕಾರದ ಹೋರಾಟವನ್ನು ಸ್ವತಃ ವಿಶ್ವ ಆರೋಗ್ಯ ಸಂಸ್ಥೆ ಪ್ರಶಂಸಿಸಿದೆ. ಮಾರ್ಚ್ 15ರಂದು ರಾಜ್ಯದಲ್ಲಿ ಮೊದಲ ಪ್ರಕರಣ ದಾಖಲಾದಾಗ ರಾಜ್ಯ ನಿಯಂತ್ರಣ ಕೇಂದ್ರಗಳನ್ನು ಚಾಲ್ತಿಗೆ ತರಲಾಗಿತ್ತು. ಜನರಿಗೆ ಜಾಗೃತಿ ಮೂಡಿಸುವ, ಸೂಕ್ತ ಸೌಲಭ್ಯಗಳನ್ನು ಒದಗಿಸುವ ಕ್ರಮಗಳನ್ನು ಕೈಗೊಂಡಿದ್ದರು.

ಪ್ರಧಾನಿ ನರೇಂದ್ರ ಮೋದಿ ಜನಪ್ರಿಯ ಪ್ರಧಾನಿಗಳಲ್ಲಿ ಮುಂಚೂಣಿಯಲ್ಲಿದ್ದರೂ, ಅತ್ಯಂತ ಜನಪ್ರಿಯ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ನವೀನ್ ಪಟ್ನಾಯಕ್ ಮೊದಲ ಸ್ಥಾನದಲ್ಲಿದ್ದಾರೆ ಎಂದು ಸಿ ವೋಟರ್ ಸಮೀಕ್ಷೆ ಹೇಳಿದೆ.

English summary
Odisha Chief Minister Naveen Patnaik, founder of BJD turns 75 on Friday. Here is his some commendable works to be remembered.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X