ಪುರಿ ಜಗನ್ನಾಥ ಮಂದಿರದ ಬಳಿ ಜಿಪಿಆರ್ಎಸ್; ರಾಜಕೀಯ ವಿವಾದ
ಭುಬನೇಶ್ವರ್, ಮೇ 22: ಒಡಿಶಾದ ಪುರಿಯಲ್ಲಿರುವ ಐತಿಹಾಸಿಕ ಶ್ರೀ ಜಗನ್ನಾಥ ಮಂದಿರದ ಸೌಂದರ್ಯೀಕರಣಕ್ಕಾಗಿ ನಡೆಸಲಾಗುತ್ತಿರುವ ಯೋಜನೆ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. 800 ಕೋಟಿ ರೂ ಮೊತ್ತದ ಶ್ರೀ ಮಂದಿರ್ ಪರಿಕ್ರಮ ಯೋಜನೆ (ಎಸ್ಎಂಪಿಪಿ) ಕಾಮಗಾರಿ ಶುರು ಮಾಡಿ ಹಲವು ತಿಂಗಳ ಬಳಿಕ ಇದೀಗ ಜಿಪಿಆರ್ಎಸ್ ಸರ್ವೇಕ್ಷಣೆ ನಡೆಸಲಾಗುತ್ತಿದೆ. ದೇವಸ್ಥಾನದ ಸುತ್ತಮುತ್ತಲ ಪ್ರದೇಶದ ನೆಲದ ಕೆಳಗೆ ಯಾವುದಾದರೂ ಪುರಾತತ್ವ ವಸ್ತು, ಆಸ್ತಿಗಳು ಇವೆಯಾ ಎಂಬುದನ್ನು ಪರಿಶೀಲಿಸುವ ಜಿಪಿಆರ್ಎಸ್ ಕಾರ್ಯವನ್ನು ಶನಿವಾರ ರಾತ್ರಿ ಆರಂಭಿಸಲಾಗಿರುವುದು ತಿಳಿದುಬಂದಿದೆ.
ಶ್ರೀ ಮಂದಿರ ಪರಿಕ್ರಮ ಯೋಜನೆಯ ಜಾರಿ ಹೊಣೆ ಹೊತ್ತಿರುವ ಒಡಿಶಾ ಬ್ರಿಡ್ಜ್ ಕನ್ಸ್ಟ್ರಕ್ಷನ್ಸ್ ಕಾರ್ಪೊರೇಶನ್ (ಒಬಿಸಿಸಿ) ಸಂಸ್ಥೆ ಗಾಂಧಿನಗರ ಐಐಟಿಯ ತಜ್ಞರ ನೆರವು ಪಡೆಯುತ್ತಿದೆ. ಜಿಪಿಆರ್ಎಸ್ ಕಾರ್ಯಕ್ಕಾಗಿ ಜಿಯೋಕಾರ್ಟ್ ರಡಾರ್ ಟೆಕ್ನಾಲಜಿ ಎಂಬ ಸಂಸ್ಥೆಯನ್ನು ಐಐಟಿ ಜೋಡಿಸಿಕೊಂಡಿದೆ.
Fact check: ಗಾಳಿಗೆ ಹಾರಿದ ಕ್ಯಾಂಟೀನ್ ಉಪಕರಣಗಳ ವಿಡಿಯೋ ತಪ್ಪಾಗಿ ಗ್ರಹಿಕೆ
ಏನಿದು ಜಿಪಿಆರ್ಎಸ್?
ಗ್ರೌಂಡ್ ಪೆನಿಟ್ರೇಟಿಂಗ್ ರಾಡಾರ್ ಸರ್ವೆ (Ground Penetrating Radar Survey) ಇದು. ಅಂದರೆ, ಭೂಮಿಯ ಒಳಗೆ ರಾಡಾರ್ ಸಿಗ್ನಲ್ ಬಿಟ್ಟು ಪುರಾತತ್ವ ವಸ್ತುಗಳ ಇರುವಿಕೆ ಇದೆಯಾ ಎಂದು ಪರಿಶೀಲಿಸುವ ವ್ಯವಸ್ಥೆ ಇದು. ಪ್ರಮುಖ ಕಾಮಗಾರಿಗಳು ನಡೆಯುವ ಮುನ್ನ ಜಿಪಿಆರ್ಎಸ್ ಸರ್ವೇಕ್ಷಣೆ ನಡೆಸುವ ಕ್ರಮ ಇದೆ. ಒಂದು ವೇಳೆ ಭೂಗರ್ಭದಲ್ಲಿ ಯಾವುದಾದರೂ ಪುರಾತನ ಕುರುಹುಗಳು, ಸಾಕ್ಷ್ಯಗಳು ಹುದುಗಿ ಹೋಗಿದ್ದರೆ ಪತ್ತೆಯಾಗಲೆಂದು ಇದನ್ನು ನಡೆಸಲಾಗುತ್ತದೆ. ಜಿಪಿಆರ್ಎಸ್ನಲ್ಲಿ ಐತಿಹಾಸಿಕ ಕುರುಹು ಪತ್ತೆಯಾದರೆ ಉತ್ಖನನ ನಡೆಸುವ ಕಾರ್ಯಕ್ಕೆ ಮುಂದಾಗಬಹುದು. ಹಾಗೆಯೇ, ಯಾವುದೇ ಉತ್ಖನನ ಕಾರ್ಯಕ್ಕೂ ಮುನ್ನ ಜಿಪಿಆರ್ಎಸ್ ಸರ್ವೇಕ್ಷಣೆಯನ್ನ ಮಾಡಲಾಗುತ್ತದೆ. ಪುರಿ ಜಗನ್ನಾಥ ಮಂದಿರದ ಸೌಂದರ್ಯೀಕರಣ ಯೋಜನೆಗೆ ಮುನ್ನ ಜಿಪಿಆರ್ಎಸ್ ನಡೆಸಬೇಕಿತ್ತು. ಅದು ಆಗಿಲ್ಲ ಎಂಬುದು ಸದ್ಯದ ವಿವಾದ.
ಒಡಿಶಾ ಹೈಕೋರ್ಟ್ನಲ್ಲಿ ಎಸ್ಎಂಪಿಪಿ ಯೋಜನೆ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದ್ದು ಅದರ ವಿಚಾರಣೆ ನಡೆಯುತ್ತಿದೆ. ಈ ವೇಳೆ, ಪುರಿ ಜಗನ್ನಾಥ ದೇವಸ್ಥಾನದ ಬಳಿ ಕಾಮಗಾರಿ ನಡೆಯುತ್ತಿರುವ ಸ್ಥಳದ ನೆಲದ ಕೆಳಗೆ ಪುರಾತತ್ವ ಮತ್ತು ಐತಿಹಾಸಿಕ ಮಹತ್ವದ ವಸ್ತುಗಳು ಇವೆಯಾ ಎಂದು ಖಚಿತಪಡಿಸಿಕೊಳ್ಳಲು ಯಾವ ಜಿಪಿಆರ್ಎಸ್ ನಡೆದಿಲ್ಲ ಎಂದು ಕೋರ್ಟ್ ಮುಂದೆ ಭಾರತದ ಪುರಾತತ್ವ ಇಲಾಖೆ ಮಾಹಿತಿ ನೀಡಿತ್ತು.
ಜಿಪಿಆರ್ಎಸ್ ನಡೆಸದೆಯೇ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ. ಕೆಲ ಸ್ಥಳಗಳಲ್ಲಿ ಕೆಲ ಮಹತ್ವದ ವಸ್ತುಗಳು ಸಿಕ್ಕಿವೆ. ಹಲವು ಸ್ಥಳಗಳಲ್ಲಿ ಐತಿಹಾಸಿಕ ಕುರುಹುಗಳು ಕಾಮಗಾರಿಯ ನಿರ್ಲಕ್ಷ್ಯತೆಯಿಂದಾಗಿ ಹಾಳಾಗಿರುವುದು ಕಂಡುಬಂದಿದೆ. ನೆಲ ಅಗಿಯುವಾಗ ಮಣ್ಣನ್ನು ಹೊರತೆಗೆಯುವ ಸರಿಯಾದ ವಿಧಾನ ಹಾಗು ನೆಲದೊಳಗೆ ಏನಾದರೂ ಕುರುಹು ಇದ್ದರೆ ಪತ್ತೆ ಮಾಡುವ ಕ್ರಮದ ಬಗ್ಗೆ ಒಬಿಸಿಸಿ ಸಂಸ್ಥೆಗೆ ಗೊತ್ತಿಲ್ಲ ಎಂದು ಎಎಸ್ಐ ತನ್ನ ವರದಿಯಲ್ಲಿ ದೂರಿದೆ.

ರಾಜಕೀಯ ಜಟಾಪಟಿ:
ಎರಡ್ಮೂರು ದಿನಗಳ ಹಿಂದಷ್ಟೇ ಪುರಿ ಕ್ಷೇತ್ರದ ಸಂಸದ ಪಿನಾಕಿ ಮಿಶ್ರಾ ಈ ಬಗ್ಗೆ ಮಾತನಾಡಿ, ಜಿಪಿಆರ್ಎಸ್ ನಡೆಸದೆಯೇ ಕಾಮಗಾರಿ ಆರಂಭಿಸಿರುವ ಆರೋಪವನ್ನು ತಳ್ಳಿಹಾಕಿದ್ದರು. ಪುರಿ ಜಗನ್ನಾಥ ದೇವಸ್ಥಾನದ ಅಭಿವೃದ್ಧಿ, ಸಂರಕ್ಷಣಾ ಕೆಲಸಕ್ಕೆ ಅಡ್ಡಿಯಾಗಿರುವ ಈ ಜನರು ಇತಿಹಾಸ ಪುಟದಲ್ಲಿ ಉಳಿದುಹೋಗುತ್ತಾರೆ ಎಂದು ಬಿಜೆಪಿಗರನ್ನು ಅವರು ತರಾಟೆಗೆ ತೆಗೆದುಕೊಂಡಿದ್ದರು.
ಜಗಳ ಬಿಡಿಸಲು ಬಂದು ಜಗಳಕ್ಕೆ ನಿಂತ ಫುಡ್ ಡೆಲಿವರಿ ಬಾಯ್
ಒಡಿಶಾದ ಆಡಳಿತಾರೂಢ ಬಿಜು ಜನತಾ ದಳ ಪಕ್ಷ ಕೂಡ ಜಿಪಿಆರ್ಎಸ್ ನಡೆಸಿ ವರದಿ ಸಲ್ಲಿಕೆಯಾದ ಮೇಲೆಯೇ ಕಾಮಗಾರಿ ಆರಂಭಿಸಲಾಗಿದೆ ಎಂಬ ವಿಚಾರವನ್ನು ತಿಳಿಸಿತ್ತು. ಆದರೆ, ಈಗ ರಾತ್ರೋರಾತ್ರಿ ಗಡಿಬಿಡಿಯಲ್ಲಿ ಜಿಪಿಆರ್ಎಸ್ ನಡೆಸಲಾಗಿದೆ ಎಂದು ಬಿಜೆಪಿ ವಕ್ತಾರ ಸಂಬೀತ್ ಪಾತ್ರ ಹೇಳುತ್ತಾರೆ.
"ಸರಕಾರ ಮೊದಲು ಜಿಪಿಆರ್ಎಸ್ ನಡೆಸಿ, ಬಳಿಕ ಮಣ್ಣು ಅಗೆಯುವ ಕೆಲಸ ಆರಂಭಿಸಬೇಕಿತ್ತು. ಅದರ ಬದಲು ಮೊದಲು ಮಣ್ಣು ಅಗೆದು ಆ ನಂತರ ಜಿಪಿಆರ್ಎಸ್ ನಡೆಸಲಾಗಿದೆ. ಇದು ಅವೈಜ್ಞಾನಿಕವಾಗಿ ನಡೆದಿರುವ ಸಂರಕ್ಣಣಾ ಕಾರ್ಯ" ಎಂದು ಬಿಜೆಪಿ ವಕ್ತಾರ ಆರೋಪಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ