ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲಾಕ್ಷೇತ್ರದಲ್ಲಿ ಪುಷ್ಪ ಸಿಂಧೂರಿ-ವಜ್ರಮಹೋತ್ಸವದ ಪ್ರದರ್ಶನ

By ರಮೇಶ್ ಬೇಗಾರ್ ಶೃಂಗೇರಿ
|
Google Oneindia Kannada News

ಬೆಂಗಳೂರು, ಜುಲೈ 26:ಮಣೂರು ಮಯ್ಯ ಯಕ್ಷಕಲಾ ಪ್ರತಿಷ್ಠಾನದ ಸಂಸ್ಥಾಪಕರಾದ ಶ್ರೀ ಮಣೂರು ವಾಸುದೇವ ಮಯ್ಯರ ರಚನೆಯ ಎರಡನೆಯ ಯಕ್ಷಗಾನ ಪ್ರಸಂಗ 'ಪುಷ್ಪ ಸಿಂಧೂರಿ' ವಜ್ರ ಮಹೋತ್ಸವ ಸಂಭ್ರಮದಲ್ಲಿದೆ.

'ಪುಷ್ಪ ಸಿಂಧೂರಿ' ಪ್ರಸಂಗ ಹೋದಡೆಯೆಲ್ಲಾ ಜಯಭೇರಿ ಬಾರಿಸಿ ಇದೀಗ ವಜ್ರಮಹೋತ್ಸವದ ಪ್ರದರ್ಶನ ಬೆಂಗಳೂರಿನಲ್ಲಿ (75ನೇ ಅದ್ಧೂರಿ ಪ್ರದರ್ಶನ) ಜುಲೈ 29ರ ಶನಿವಾರ ರಾತ್ರಿ ರವೀಂದ್ರ ಕಲಾಕ್ಷೇತ್ರದಲ್ಲಿ ಪೆರ್ಡೂರು ಮೇಳ ತಂಡದಿಂದ ರಂಗದಲ್ಲಿ ಮೂಡಿಬರಲಿದೆ.

ಬೆಂಗಳೂರಿನ ಮಣೂರು ಮಯ್ಯ ಯಕ್ಷಕಲಾ ಪ್ರತಿಷ್ಠಾನವು ಇತ್ತೀಚಿನ ವರ್ಷಗಳಲ್ಲಿ ಯಕ್ಷಗಾನ ವಲಯದಲ್ಲೊಂದು ಸಂಚಲನೆಯ ಹೆಸರು. ತನ್ನ ವೈವಿಧ್ಯತೆ, ಕಲಾತ್ಮಕತೆ, ಸೃಜನಶೀಲತೆ ಮತ್ತು ಅದ್ಧೂರಿತನವನ್ನೊಳಗೊಂಡು ಯಕ್ಷಗಾನದ ಸಮಸ್ತ ಶೈಲಿಗಳಲ್ಲೂ ಕಾರ್ಯ ನಿರ್ವಹಿಸುವ ಅಪರೂಪದ ಸಂಸ್ಥೆಯೂ ಹೌದು.

ಎಲ್ಲಿ: ರವೀಂದ್ರ ಕಲಾಕ್ಷೇತ್ರ, ಜೆ ಸಿ ರಸ್ತೆ, ಬೆಂಗಳೂರು.
ಯಾವಾಗ: -ಜುಲೈ 29, ಶನಿವಾರ ರಾತ್ರಿ 10ರಿಂದ,
ಸಂಪರ್ಕ-ಮಹೇಶ ಹೆಗಡೆ-97314 69502, ಸಂತೋಷ್ ಕುಮಾರ್-90367 41626, ಅನಿಲ್ ಚಿನ್ನು-91644 52888

ಪೌರಾಣಿಕ, ಸಾಮಾಜಿಕ ಪ್ರಕಾರಗಳಲ್ಲಿ ಸಮಾನ ಪ್ರಯೋಗಶೀಲತೆಗೆ ಸದಾ ಒತ್ತು ನೀಡುತ್ತಾ ಯಕ್ಷರಸಿಕರ ಪಾಲಿಗೆ ಆಕ್ಷರಶಃ ರಸದೌತಣ ನೀಡುತ್ತಿರುವ ಈ ಸಂಸ್ಥೆಯ ಹಿಂದಿರುವುದು ಮಣೂರು ವಾಸುದೇವ ಮಯ್ಯ ಎಂಬ ಅಪ್ಪಟ ಯಕ್ಷಾಭಿಮಾನಿ.

'ಇಂದ್ರನಾಗ'ದಲ್ಲಿ ಸ್ಥಳ ಪುರಾಣ

'ಇಂದ್ರನಾಗ'ದಲ್ಲಿ ಸ್ಥಳ ಪುರಾಣ

'ಇಂದ್ರನಾಗ'ದಲ್ಲಿ ಸ್ಥಳ ಪುರಾಣ ವೊಂದರ ಆಧಾರ ಪಡೆದು ರಚಿಸಿದ ಕಥೆಯಲ್ಲಿ ಹಲವು ಪರಂಪರಾಗತ ರಂಗ ಪ್ರಕ್ರಿಯೆ (ಉದಾ: ರಾಕ್ಷಸ ಪಾತ್ರಗಳ ತೆರೆ ಒಡ್ಡೋಲಗ, ಗುಹನಕುಣಿ, ಕಿರಾತ ನೃತ್ಯ) ಯನ್ನು ಅಳವಡಿಸಿದ್ದ ವಾಸುದೇವ ಮಯ್ಯರು 'ಪುಷ್ಪ ಸಿಂಧೂರಿ'ಯಲ್ಲಿ ಒಂದು ತಾತ್ವಿಕ ಸಂಘರ್ಷವನ್ನು ಹೇಳಿದ್ದಾರೆ. ಇಲ್ಲಿ ಹೆಣ್ಣಿನ ಎರಡು ಮುಖಗಳನ್ನು ತಿಳಿಸುವ ಯತ್ನದ ಜೊತೆಗೆ ಆಕೆಯ ಶ್ರೇಷ್ಠತೆಯನ್ನು ಎತ್ತಿಹಿಡಿವ ಕಥಾ ವಸ್ತುವನ್ನು ಕೈಗೆತ್ತಿಕೊಂಡಿದ್ದಾರೆ. ನಳದಮಯಂತಿ ಮಾದರಿಯ ಬಾಹುಕನ ಪಾತ್ರವೊಂದನ್ನು ಮತ್ತೆ ಮಯ್ಯ ರಂಗದ ಮೇಲೆ ತಂದಿದ್ದಾರೆ.

ಸಾಮಾಜಿಕ ಪ್ರಸಂಗ

ಸಾಮಾಜಿಕ ಪ್ರಸಂಗ

ಯುವ ಜನತೆಗೆ ಆಕರ್ಷಣೀಯವಾಗುವ ಮತ್ತು ಕಲಾವಿದರ ನಾಟ್ಯಕ್ಕೆ ಅವಕಾಶವಾಗುವ ಶೃಂಗಾರರಸವು ಕಥಾ ಭಾಗದ ಸ್ಥಾಯಿಯಾಗಿ ಆವರಿಸಿಕೊಂಡಿದೆ. ಸಾಮಾಜಿಕ ಪ್ರಸಂಗಗಳ ಮೂಲದ್ರವ್ಯವಾದ ಹಾಸ್ಯರಸವು ಕಥೆಗೆ ಪೂರಕವಾಗಿ ಪ್ರಸಂಗದುದ್ದಕ್ಕೂ ಪ್ರವಹಿಸಲಿದೆ. ನಡುವೆ ಬ್ರಹ್ಮಕಪಾಲದ ಮಾದರಿಯಲ್ಲಿ ತಾತ್ವಿಕ ಜಿಜ್ಞಾಸೆಯ ಅನಾವರಣಗೊಳ್ಳಲಿದೆ.

ಪುಷ್ಪಸಿಂಧೂರಿ

ಇಂಥ ಹದಭರಿತ ಕಥಾ ವಸ್ತುವಿಗೆ ತಕ್ಕ ಪದ್ಯಗಳನ್ನು ಯುವ ಕವಿ ಪ್ರಸಾದ ಮೊಗೆಬೆಟ್ಟು ಬರೆದಿದ್ದಾರೆ. ಅನುಭವಿ ರಂಗನಿರ್ದೇಶಕ ರಮೇಶ್ ಬೇಗಾರ್ ರಂಗರೂಪಾಂತರಗೈದಿದ್ದಾರೆ. ಹೆಸರಾಂತ ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್ಯರ ರಂಗ ನಿರ್ದೇಶನವನ್ನು 'ಪುಷ್ಪಸಿಂಧೂರಿ' ಒಳಗೊಂಡಿದೆ.

ಬ್ರಹ್ಮೂರು ಶಂಕರ ಭಟ್ ಮತ್ತು ಸುರೇಶ ಕಾರವಾರರ ಸಾಥ್, ಮದ್ದಳೆಯಲ್ಲಿ ಸುನಿಲ್ ಭಂಡಾರಿ ಕಡತೋಕ, ಭಾಸ್ಕರ ಭಂಡಾರಿ ಭಟ್ಕಳ, ಚಂಡೆಯಲ್ಲಿ ಜನಾರ್ಧನ ಆಚಾರ್ಯ ಹಳ್ಳಾಡಿ, ಪ್ರಸನ್ನ ಭಟ್ ಹೆಗ್ಗಾರ್, ಸುಜನ್ ಕುಮಾರ್ ಹಾಲಾಡಿಯವರು ಸಹಕರಿಸಲಿದ್ದಾರೆ.

ಯಕ್ಷಾಭಿಮಾನಿಗಳನ್ನು ರಂಜಿಸಲಿದ್ದಾರೆ.

'ಪುಷ್ಪ ಸಿಂಧೂರಿ'ಯಾಗಿ ಯಲಗುಪ್ಪ ಸುಬ್ರಮಣ್ಯ ಹೆಗಡೆಯವರ ಮನೋಜ್ಞ ಅಭಿನಯ ಈ ಪ್ರದರ್ಶನದಲ್ಲಿರುವುದು ಒಂದು ವಿಶೇಷ. ಪುರುಷ ಪಾತ್ರದಲ್ಲಿ ಥಂಡಿಮನೆ ಶ್ರೀಪಾದ ಭಟ್, ಉದಯ ಹೆಗಡೆ ಕಡಬಾಳ, ವಿಶ್ವನಾಥ ಆಚಾರ್ಯ ತೊಂಬಟ್ಟು, ಪ್ರಕಾಶ ಮೊಗವೀರ ಕಿರಾಡಿ, ಮಾಗೋಡು ಅಣ್ಣಪ್ಪ ಗೌಡ, ಗಣಪತಿ ಬೈಲಗದ್ದೆ, ಪ್ರಣವ್ ಭಟ್ ಸಿದ್ಧಾಪುರ, ರಮೇಶ ಸೀತೂರು, ಕೆಕ್ಕಾರು ಆನಂದ ಭಟ್, ಆದಿತ್ಯ ಹೆಗಡೆ, ವಿಜಯ ಮುದ್ದುಮನೆ ಮತ್ತು ದ್ವಿತೇಶ್ ಕಾಮತ್, ಸ್ತ್ರೀ ಪಾತ್ರದಲ್ಲಿ ಸಂಜೀವ ಶೆಟ್ಟಿ ಹೆನ್ನಾಬೈಲು, ವಿಜಯ ಗಾಣಿಗ ಬೀಜಮಕ್ಕಿ ಮತ್ತು ಉಮೇಶ ತೋಟಾಡಿ ಶಂಕರನಾರಾಯಣ, ಹಾಸ್ಯದಲ್ಲಿ ರವೀಂದ್ರ ದೇವಾಡಿಗ ಕಮಲಶಿಲೆ ಮತ್ತು ಪುರಂದರ ಮೂಡ್ಕಣಿ ಯಕ್ಷಾಭಿಮಾನಿಗಳನ್ನು ರಂಜಿಸಲಿದ್ದಾರೆ.

English summary
Yakshagana ‘Pushpa Sindhuri’ turned 75. Yakshagana by Sri Perduru Yakshagana Mela & Guest Artists, Written by Sri Manooru Vasudeva Mayya, Lyrics by Sri Prasad Mogebettu, Organized by 'Manooru Mayya Yakshakala Pratishthana' will be held at Ravindra Kalakshetra, J.C Road, Bengaluru on July 29,2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X