• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮುತ್ತು ಕೊಟ್ರೆ ಏನಾಗ್ತದೆ? ಕಿಸ್ ಅಂದ್ರೆ ಏನು?

By Prasad
|

ಬೆಂಗಳೂರು, ನ. 22 : ಕಾರ್ತೀಕ ಮಾಸದ ಕಡೆಯ ದಿನಗಳಲ್ಲಿ ಬೆಂಗಳೂರಿನಲ್ಲಿ ಏನು ಚಳಿ ಅಂತೀರಿ? ಬೆಳಗಿನ ವಾಕಿಂಗ್ ಹೋಗೋರು ಮಂಕಿ ಕ್ಯಾಪ್ ಹಾಕ್ಕೊಂಡು ದುರುದುರು ನಡೆಯುತ್ತಿದ್ದರೆ, ರಸ್ತೆಬದಿಯಲ್ಲಿ 'ನಾಗರಿಕ'ರು ಬಿಸಾಕಿದ್ದ ಕಸದಲ್ಲಿ ಏನಾದರೂ ಸಿಗುತ್ತೇನೋ ಅಂತ ಅರಸುತ್ತಿದ್ದ ಕಚ್ಚಾಡುವ ಬೀದಿ ನಾಯಿಗಳ ಸರಸ ಮತ್ತೊಂದೆಡೆ!

ಇಂಥ ಸಂದರ್ಭದಲ್ಲಿ 'ಪ್ರಗತಿಪರರು' ಎಂದು ಹೇಳಿಕೊಳ್ಳುವ ಮುಕ್ತವಾದಿಗಳ 'ಕಿಸ್ ಆಫ್ ಲವ್' ಪ್ರೊಟೆಸ್ಟ್ ಬೆಂಗಳೂರಿನಲ್ಲಿ ಭಾರೀ ಕಾವೇರಿಸಿದೆ. ಚಳಿಗೆ ಗಂಡ-ಹೆಂಡತಿಯಾಗಲಿ, ಪ್ರೇಮಿಗಳಾಗಲಿ ಮನೆಯೊಳಗೆ ಏನು ಮಾಡುತ್ತಾರೋ ಅದನ್ನು ಬೀದಿಯಲ್ಲಿ ಬಂದು ಮಾಡಿದರೆ ತಪ್ಪೇನು? ಅಂದ್ರೆ ಬೀದಿಗೆ ಬಂದು ಕಿಸ್ ಮಾಡಿದರೆ ತಪ್ಪೇನು? ಎಂದು ಪ್ರಶ್ನೆ ಹಾಕಿದ್ದಾರೆ.

ಹೇಹೇಹೇಹೇ ಅದ್ಹೆಂಗಾಗತ್ತೆ? ನಮ್ಮದು ಭಾರತೀಯ ಸಂಸ್ಕೃತಿ, ಪಬ್ಲಿಕ್ ಆಗಿ ತುಟಿಗೆ ತುಟಿಯೊತ್ತುವುದು ನಮ್ಮ ಕಲ್ಚರೇ ಅಲ್ಲ, ಇವತ್ತು ಮುತ್ತು ಕೊಡ್ತೀವಂತಾರೆ, ನಾಳೆ ಇನ್ನೇನೋ ಪಬ್ಲಿಕ್ಕಲ್ಲಿ ಮಾಡ್ತೀವಂತ ಹೇಳ್ತಾರೆ, ಮೊದ್ಲೇ ಸಿಕ್ಕಾಪಟ್ಟೆ ಅತ್ಯಾಚಾರಗಳಾಗ್ತಿದ್ದಾವೆ, ಇದಕ್ಕೆಲ್ಲ ಸುತಾರಾಂ ಅವಕಾಶ ನೀಡಬಾರದು ಎಂದು ಕಿಸ್ ಆಫ್ ಲವ್ ವಿರೋಧಿಗಳು ಕಣ್ಣಲ್ಲಿ ಕೆಂಡ ಕಾರುತ್ತಿದ್ದಾರೆ. [ಕಿಸ್ ಆಫ್ ಕಿಲೋ ಗಟ್ಟಲೇ ಬ್ಯಾಕ್ಟೀರಿಯಾ...]

ಈ ನಡುವೆ, ಪ್ರತಿಭಟನೆ ಮಾಡುವುದರಲ್ಲಿ ನಿಸ್ಸೀಮರಾಗಿರುವ, ಕನ್ನಡದ ಕಟ್ಟಾಳು ವಾಟಾಳ್ ನಾಗರಾಜ್ ಸಾಹೇಬರು, ಸಂಸ್ಕೃತಿ ಸಂಪ್ರದಾಯ ಅತ್ಲಾಗೆ ಬಿಟ್ಟಾಕಿ, ಮುತ್ತು ಕೊಟ್ರೆ ಏನಾಗ್ತದೆ? ಕಿಸ್ ಅಂದ್ರೆ ಏನು? ಯಾರಿಗೆ ಯಾರು ಮುತ್ತಿಡ್ತಾರೆ? ನಾನಂತೂ ನೋಡೋದಕ್ಕೆ ಹೋಗೇಹೋಗ್ತೀನಿ ಅಂತ ಬಾಯಿಯಲ್ಲೇ ತಮ್ಮಟೆ ಬಾರಿಸಿ ಮತ್ತಷ್ಟು ರೋಚಕತೆ ಮೂಡಿಸಿದ್ದಾರೆ.

ಎಲಾ ಇಸ್ಕಿ, ಇವರೇನು, ಪ್ರತಿಭಟನೆ ಮಾಡುವುದು ಬಿಟ್ಟು ಯುವಕ ಯುವತಿಯರು ಓಪನ್ ಆಗಿ ಕಿಸ್ ಮಾಡುವುದನ್ನು ನೋಡಲು ಹೋಗುತ್ತಿದ್ದೇನೆ ಎನ್ನುತ್ತಿದ್ದಾರಲ್ಲಾ ಅಂತ ಹಲವರು ಅಚ್ಚರಿಪಟ್ಟರೂ, ಮುತ್ತಿಡುವುದಕ್ಕೂ ಕನ್ನಡಕ್ಕೂ ಎಲ್ಲಿಂದೆಲ್ಲಿಯ ಸಂಬಂಧವೂ ಇಲ್ಲದ್ದರಿಂದ ವಾಟಾಳ್ ನಾಗರಾಜ್ ಅವರ ಹೇಳಿಕೆಯಲ್ಲಿ ಅಂತಹ ಅಚ್ಚರಿಯೇನೂ ಇಲ್ಲ. [ಮುತ್ತಿನ ಪ್ರತಿಭಟನೆ ವಿರುದ್ಧ ಒನಕೆ ಚಳವಳಿ]

ಇಂಥದೊಂದು ವಿದ್ಯಮಾನ ಬೆಂಗಳೂರಿನಲ್ಲಿ ಮೊದಲ ಬಾರಿಗೆ ನಡೆಯುತ್ತಿರುವುದರಿಂದ, ಇದರಲ್ಲಿ ವಿಪರೀತ ಕುತೂಹಲ ಇಟ್ಟುಕೊಂಡವರು, ಅದನ್ನು ವಿರೋಧಿಸುವವರು, 'ಮಚ್ಚಾ, ಕಿಸ್ ಮಾಡ್ತವ್ರಂತೆ ನೋಡ್ಕೊಂಡ್ ಬರೋಣ ಬರ್ಲಾ' ಅಂತ ಪಡ್ಡೆಗಳು ಜಮಾಯಿಸಿದರೂ ಅಚ್ಚರಿಯಿಲ್ಲ. ಒಟ್ಟಿನಲ್ಲಿ ಇಷ್ಟವಿದೆಯೋ ಇಲ್ಲವೋ ಇವರನ್ನೆಲ್ಲ ಹದ್ದುಬಸ್ತಿನಲ್ಲಿ ಇಡಲು ಹೆಣಗುವುದು ಪೊಲೀಸರ ಕರ್ಮ.

ಅದ್ಹೆಂಗೆ ಕಿಸ್ ಆಫ್ ಲವ್ ಡೇ ಮಾಡ್ತಾರೆ ಅಂತ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತೋಳೇರಿಸಿದ್ದಾರೆ. ಇಂಥ ಕಿಸ್ಸಿಂಗನ್ನೆಲ್ಲ ಸಿನೆಮಾಗಳಲ್ಲಿ ಸಾಕಷ್ಟು ಕಂಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ನೋ ಅಂತ ಹೇಳಿದ್ದಾರೆ. ಮುಕ್ತವಾಗಿ ಮುತ್ತು ನೀಡುವುದು ಕ್ರಿಶ್ಚಿಯನ್ ಸಂಸ್ಕೃತಿ ಅಂತ ಸ್ವಾಮೀಜಿಯೊಬ್ಬರು ಗೃಹ ಸಚಿವರ ಮೇಲೆ ವಾಗ್ಬಾಣ ಎಸೆದಿದ್ದಾರೆ. [ಪ್ರಣವಾನಂದಶ್ರೀ ಎಚ್ಚರಿಕೆ]

ಇಷ್ಟರಲ್ಲಿ, ಇದೀಗ ತಿಳಿದುಬಂದಿರುವ ಸಂಗತಿಯೇನೆಂದರೆ, ಕಿಸ್ ಆಫ್ ಲವ್ ಗೆ ಅನುಮತಿ ನೀಡಬೇಕೋ ಬೇಡವೋ ಎಂಬ ಕುರಿತು ಪೊಲೀಸ್ ವರಿಷ್ಠಾಧಿಕಾರಿಯೇ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಗೃಹ ಸಚಿವ ಕೆಜೆ ಜಾರ್ಜ್ ಅವರು ಕೈತೊಳೆದುಕೊಂಡಿದ್ದಾರೆ. ಜಾರ್ಜ್ ಸಾಹೇಬರು ಜಾಣತನದಿಂದ ಚೆಂಡನ್ನು ಪೊಲೀಸ್ ಕಚೇರಿಯ ಅಂಗಳಕ್ಕೆ ತಳ್ಳಿಬಿಟ್ಟಿದ್ದಾರೆ. ಅಂದ ಹಾಗೆ, ಪೊಲೀಸ್ ಇಲಾಖೆ ಗೃಹ ಸಚಿವರ ಹಿಡಿತದಲ್ಲಿಯೇ ಇರುವುದಲ್ಲವಾ? ಸೋ....

ಅಂದ ಹಾಗೆ, ಮುತ್ತಿನ ಉಗಮಸ್ಥಾನ (ದೇಶ) ಯಾವುದು ನಿಮಗೇನಾದರೂ ಗೊತ್ತಾ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
What will happen if one kisses the other, who kisses who, veteran politician Vatal Nagaraj wants to see. Protesters who are protesting against Kiss of Love have rolled their sleeves against the organizers. Who will have the upper hand?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more