ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೆಪಿ ನಗರದಲ್ಲಿ ಈವಯ್ಯ ಮಾಡುತ್ತಿರುವುದಾದರೂ ಏನು?

By Prasad
|
Google Oneindia Kannada News

ಬೆಂಗಳೂರು, ಜೂ. 05 : ಈ ಚಿತ್ರದಲ್ಲಿರುವ ವ್ಯಕ್ತಿಯನ್ನು ತದೇಕಚಿತ್ತದಿಂದ ನೋಡಿ. ಎಣ್ಣೆ ಕಂಡಿರದ ಕೆದರಿದ ಕೂದಲು, ಬ್ಲೇಡ್ ಸೋಕದ ಕುರುಚಲು ಗಡ್ಡ, ಶೇವಿಂಗ್ ಮಾಡಿ ಅದೆಷ್ಟು ದಿನವಾಯಿತೋ? ನೀರು ಕಂಡೇ ಇರದ ಪ್ಯಾಂಟು, ಧೂಳಿನಿಂದ ಮುಳುಗಿರುವ ಫುಲ್ ಸ್ವೆಟರು, ಅದರ ಮೇಲೊಂದು ಜಾಕೆಟ್ಟು!

ಜೊತೆಯಲ್ಲೊಂದು ಚೀಲ, ಅದರಲ್ಲೊಂದಿಷ್ಟು ಕಟ್ಟಿಗೆ ತುಂಡುಗಳು. ಇವನನ್ನು ಏನಂತ ಕರೀತೀರಿ? ಆತ ಏನು ವೃತ್ತಿ ಮಾಡಿಕೊಂಡಿದ್ದಿರಬಹುದು? ಭಿಕ್ಷುಕನಾ, ಹುಚ್ಚನಾ? ಆತನ ರೂಪ ಹೇಗೇ ಇರಲಿ. ಜೆಪಿ ನಗರದ ಬಡಾವಣೆಯೊಂದರಲ್ಲಿ ರಸ್ತೆಬದಿಯಲ್ಲಿ ಕುಳಿತು ಆತ ಏನು ಮಾಡುತ್ತಿದ್ದಾನೆಂದು ನೋಡಿ.

What this person is searching for in Bengaluru

ಜೂನ್ 5ರ ಬೆಳ್ಳಂಬೆಳಿಗ್ಗೆ ಏನು ಮಂಜು ಅಂತೀರಿ? ಹಿಂದಿನ ದಿನದ ಮಳೆಯ ಪ್ರಭಾವವೋ ಏನೋ, ಚಳಿಗಾಲದ ದಿನದಂತೆ ಎಲ್ಲೆಲ್ಲೂ ಮಂಜು ಕವಿದುಕೊಂಡಿತ್ತು. ಅಂಥದ್ದರಲ್ಲಿ ಬೆಚ್ಚಗಿನ ಬಟ್ಟೆ ಹಾಕಿಕೊಂಡಿದ್ದ ಐವತ್ತರ ಆಸುಪಾಸಿನ ಈ ಮನುಷ್ಯ ನೆಲವನ್ನು ಬರಿಗೈಯಿಂದ ಒಂದೇಸವನೆ ಅಗಿಯುತ್ತಿದ್ದ.

ಅಲ್ಲೇನಾದರೂ ನಿಧಿ ಹೂತಿಟ್ಟಿದ್ದನಾ? ವಿಶ್ವ ಪರಿಸರ ದಿನಾಚರಣೆಯಾದ್ದರಿಂದ ಗಿಡ ನೆಡಲು ನೆಲವನ್ನು ಅಗಿಯುತ್ತಿದ್ದನಾ? ಅಥವಾ ಬೇಸಿಗೆಯಾದ್ದರಿಂದ ಬೀದಿಬದಿಯ ನಲ್ಲಿಗಳೆಲ್ಲ ಸುಯ್ ಅಂತ ಸದ್ದು ಮಾಡುತ್ತಿರುವುದರಿಂದ, ನಾಲ್ಕಾರು ಹನಿ ನೀರಾದರೂ ಸಿಕ್ಕೀತೆಂದು ವರತಿ ತೋಡುತ್ತಿದ್ದನಾ?

What this person is searching for in Bengaluru

ಜೆಪಿ ನಗರದಲ್ಲಿ ಜನಸಾಮಾನ್ಯರು ಹನಿನೀರಿಗಾಗಿ ಪರದಾಡುತ್ತಿರುವುದಂತೂ ಸತ್ಯ. ಹಲವಾರು ಅಪಾರ್ಟ್ಮೆಂಟುಗಳಲ್ಲಿ ಕಾವೇರಿ ನೀರು, ಬೋರ್ವೆಲ್ಲು ಬತ್ತಿ, ಟ್ಯಾಂಕರುಗಳು ಪೂರೈಸುವ ನೀರನ್ನೇ ಜನರು ನಂಬಿಕೊಂಡಿದ್ದಾರೆ. ಇದನ್ನು ಟ್ಯಾಂಕರ್ ವ್ಯಾಪಾರ ಅನ್ನುವುದಕ್ಕಿಂತ ಟ್ಯಾಂಕರ್ ಮಾಫಿಯಾ ಅನ್ನುವುದೇ ಲೇಸೆಂದು ಮೊನ್ನೆ ಸ್ನೇಹಿತರೊಬ್ಬರು ಗೊಣಗುತ್ತಿದ್ದರು. ಇಲ್ಲಿ ಸಿಗಬೇಕಾದ ನೀರು ಇನ್ನೆಲ್ಲೋ ಹೆಚ್ಚಿನ ಬೆಲೆಗೆ ಬಿಕರಿಯಾಗುತ್ತಿದೆ, ಟ್ಯಾಂಕರ್ ಮಾಫಿಯಾ ನಡೆಸುತ್ತಿರುವವರು ಲಕ್ಷಾಧಿಪತಿಗಳಾಗಿದ್ದಾರೆ ಎನ್ನುವುದು ಅವರ ದೂರು.

ಬೇಸಿಗೆ ಮುಗಿಯುತ್ತಾ ಬಂದು ಮಳೆಗಾಲ ಸನ್ನಿಹಿತವಾಗಿರುವಾಗ ಬೆಂಗಳೂರಿನ ಬದುಕು ಚಿತ್ರಾನ್ನವಾಗಿದೆ. ಬಿಬಿಎಂಪಿ ಚುನಾವಣೆ ಬರುತ್ತಿರುವುದರಿಂದ ಅಲ್ಲಲ್ಲಿ ರಸ್ತೆಗಳು ಡಾಂಬರು ಕಾಣುತ್ತಿದ್ದರೂ, ನೀರಿನ ಪೈಪು ಅಳವಡಿಸಲೆಂದೋ ಮತ್ತಾವುದಕ್ಕೋ ಅಗಿದ ನೆಲ ಹಾಗೇ ಉಳಿದುಕೊಂಡಿವೆ. ಸಣ್ಣ ಮಳೆಯಾದರೂ ನೆಲ ಕೊಚ್ಚೆ, ಕಸ ವಿಲೇವಾರಿ ಹಳ್ಳ ಹಿಡಿದಿದ್ದರಿಂದ ರಸ್ತೆಗಳೆಲ್ಲ ತಿಪ್ಪೆ. ಬಿಬಿಎಂಪಿ ಅಧಿಕಾರಿಗಳು, ಕಾರ್ಪೊರೇಟರುಗಳು, ಶಾಸಕರು ಅದ್ಯಾವ ಧ್ಯಾನದಲ್ಲಿ ಮುಳುಗಿದ್ದಾರೋ?

What this person is searching for in Bengaluru

ಬನಶಂಕರಿ 1ನೇ ಹಂತ, 2ನೇ ಬ್ಲಾಕ್, ಅಶೋಕನಗರ, ವಾರ್ಡ್ ಸಂಖ್ಯೆ 164ರ ಈ ರಸ್ತೆಯನ್ನೊಮ್ಮೆ ನೋಡಿರಿ. ನೀವೆಲ್ಲೇ ಇದ್ದರೂ ಕರ್ಚೀಫು ಸಹಜವಾಗಿ ನಿಮ್ಮ ಮೂಗಿಗೆ ಬರುತ್ತದೆ. ಇನ್ನು ಆ ರಸ್ತೆಯಲ್ಲಿ ಹೋಗುತ್ತಿದ್ದರಂತೂ 1 ಕಿ.ಮೀ. ದೂರದಲ್ಲಿರುವಾಗಲೇ ಪಾದಚಾರಿ ರಸ್ತೆಯನ್ನು ಆಕ್ರಮಿಸಿಕೊಂಡಿರುವ ಹಸುಗಳ ಉಚ್ಚೆಯ ವಾಸನೆ ಮೂಗಿಗೆ ರಾಚುತ್ತದೆ. ಇನ್ನೊಂದು ಕಿ.ಮೀ. ಮುಂದೆ ಸಾಗಿದರೂ ಆ ವಾಸನೆಯಿಂದ ನಿಮಗೆ ಮುಕ್ತಿ ಸಿಗುವುದಿಲ್ಲ. ರವಿ ಸುಬ್ರಮಣ್ಯ ಅವರೇ ಎಲ್ಲಿದ್ದೀರಿ? ಯಾವ ಧ್ಯಾನದಲ್ಲಿದ್ದೀರಿ?

ಹೋಗಲಿ, ನಮ್ಮ ಕಾರ್ಪೊರೇಟರುಗಳು, ಶಾಸಕರು, ಮಿನಿಸ್ಟರುಗಳು, ಐಟಿ ಉದ್ಯಮಿಗಳು, ಪೊಲೀಸ್ ಆಫೀಸರುಗಳು ಎಲ್ಲಿದ್ದಾರೆ? ಇವರಿಗೆಲ್ಲ ಇವತ್ತು ವಿಶ್ವ ಪರಿಸರ ದಿನಾಚರಣೆ ಅಂತೇನಾದರೂ ಗೊತ್ತಾ? ಅಥವಾ ಅದನ್ನೆಲ್ಲ ಪರಿಸರವಾದಿಗಳಿಗೆ ಮಾತ್ರ ಬಿಟ್ಟುಬಿಟ್ಟಿದ್ದಾರಾ? ಒಂದಾನೊಂದು ಕಾಲದಲ್ಲಿ ಇದ್ದ ಮರಗಳೆಲ್ಲ ಫ್ಪೈಓವರುಗಳಿಗೆ ದಾರಿಮಾಡಿಕೊಟ್ಟಿವೆ, ಕೆರೆಗಳಲ್ಲೆಲ್ಲ ಭಾರೀ ಕುಳಗಳ ಅಪಾರ್ಟ್ಮೆಂಟುಗಳು ಆಕ್ರಮಿಸಿಕೊಂಡಿವೆ. ಎತ್ತ ಸಾಗುತ್ತಿದೆ ನಮ್ಮ ಬೆಂಗಳೂರು? [ನೆಲ ಕೆತ್ತುತ್ತಿದ್ದವನ ಚಿತ್ರ ಕಳಿಸಿದ್ದು ಶಿನೋದ್ ಏಡಕ್ಕಾಡ್, ಬೆಂಗಳೂರು]

English summary
Can you make out what this person, with torn pant dirty sweater, doing in JP Nagar in Bengaluru? He was digging the road side footpath. What was he searching for? Treasure or to plant tree on World Environment Day? Picture of garbage dumping gives another kind of story. Where our Bangalore is heading?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X