ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪತ್ರಿಕೆ ನಿಲ್ಲಿಸಲಿರುವ ರವಿ ಬೆಳಗೆರೆ ಮುಂದಿನ ನಡೆಗಳೇನು?

|
Google Oneindia Kannada News

"ನಾನು ಪತ್ರಿಕೆ ಆರಂಭಿಸಿದ ದಿನಗಳಲ್ಲಿ ಯಾವ ಬುದ್ಧಿಜೀವಿಗಳೂ ನನ್ನ ಜತೆ ಇರಲಿಲ್ಲ. ಇನ್ನು ಜಾತಿಯಿಂದ ಹೇಳೋದಾದರೆ ಈ ರಾಜ್ಯದಲ್ಲಿ ಪ್ರಬಲವಾಗಿರುವ ಲಿಂಗಾಯತನೂ ಅಲ್ಲ, ಒಕ್ಕಲಿಗನೂ ಅಲ್ಲ. ನಟ್ಟ್ ನಡು ರಸ್ತೆಯಲ್ಲಿ ನಿಂತು ಪತ್ರಿಕೆ ಆರಂಭಿಸಿದೆ" 'ಹಾಯ್ ಬೆಂಗಳೂರ್!' ವಾರಪತ್ರಿಕೆಯ ಆರಂಭದ ದಿನಗಳನ್ನು ಪತ್ರಕರ್ತ ರವಿ ಬೆಳಗೆರೆ ನೆನಪಿಸಿಕೊಂಡರು.

ಒನ್ಇಂಡಿಯಾ ಕನ್ನಡ ನಡೆಸಿದ ಸಂದರ್ಶನದ ಮುಂದುವರಿದ ಭಾಗ ಇದು. ಇದರಲ್ಲಿ ಪತ್ರಿಕೆ ಆರಂಭದ ದಿನದಲ್ಲಿ ನೆರವಾದವರು, ಬೆಳಗೆರೆ ಅವರು ಇಂಥ ಅದ್ಭುತ ಶಾಲೆ ಕಟ್ಟಲು ನೆರವಾದ ಕಾರ್ಯಕ್ರಮ, ಸಂಸ್ಥೆ ಹಾಗೂ ಪ್ರೇರಕ ಶಕ್ತಿ ಇದ್ದಂತಹವರನ್ನು ನೆನಪು ಮಾಡಿಕೊಂಡಿದ್ದಾರೆ.

ಹಾಯ್ ಬೆಂಗಳೂರನ್ನು ಮುಚ್ಚಲಿದ್ದಾರೆ ರವಿ, ಕಾರಣಗಳು 5ಹಾಯ್ ಬೆಂಗಳೂರನ್ನು ಮುಚ್ಚಲಿದ್ದಾರೆ ರವಿ, ಕಾರಣಗಳು 5

"ನನಗೆ ಒಂದು ವಿಚಾರ ಖಾತ್ರಿ ಇತ್ತು. ನನ್ನದೇ ಇತಿಹಾಸವು ಮಾರಾಟ ಆಗುವಂತಹ ಹಾಗೂ ಜನ ಓದುವಂತಹ ಸರಕು ಅನ್ನೋದು ಗೊತ್ತಿತ್ತು. ಅದನ್ನು ಓದುಗರು ತಮ್ಮ ಜೀವನದ ಅನುಭವಗಳ ಜತೆಗೆ ರಿಲೇಟ್ ಮಾಡಿಕೊಳ್ಳುತ್ತಾರೆ. ಇದರಿಂದ ಹಣವೂ ಬರುತ್ತದೆ ಎಂಬುದು ತಿಳಿದಿತ್ತು. ಆದ್ದರಿಂದಲೇ 'ಖಾಸ್ ಬಾತ್' ಅಂಕಣ ಆರಂಭಿಸಿದೆ" ಎಂದರು ರವಿ ಬೆಳಗೆರೆ.

ಗೌರಿ ಲಂಕೇಶ್ ಬಗ್ಗೆ ಮನ ಬಿಚ್ಚಿ ಮಾತನಾಡಿದ ರವಿ ಬೆಳಗೆರೆಗೌರಿ ಲಂಕೇಶ್ ಬಗ್ಗೆ ಮನ ಬಿಚ್ಚಿ ಮಾತನಾಡಿದ ರವಿ ಬೆಳಗೆರೆ

ಇನ್ನು ಮುಂದೆ ಹೇಳಿಕೊಂಡಿದ್ದು ಅವರ ನೆರವಿಗೆ ನಿಂತ, ಹಣಕಾಸಿನ ವ್ಯವಸ್ಥೆ ಮಾಡಿಕೊಟ್ಟವರ ವಿವರಗಳನ್ನು. ಇದರ ಜತೆಗೆ ಭವಿಷ್ಯದ ಯೋಜನೆಗಳನ್ನು ಸಹ ತೆರೆದಿಟ್ಟರು.

ಎಂಟು ಸಾವಿರ ನೀಡಿದ ಲಲಿತಾ

ಎಂಟು ಸಾವಿರ ನೀಡಿದ ಲಲಿತಾ

"ನನ್ನ ಹೆಂಡತಿ ಲಲಿತಾ. ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ಇನ್ನೂರು ರುಪಾಯಿ ಇದ್ದರೂ ಅಷ್ಟಕ್ಕೆ ಮಕ್ಕಳಿಗೆ ಅಂತ ಚಿನ್ನ ತಂದಿಡುತ್ತಿದ್ದಳು. ನಾನು ಪತ್ರಿಕೆ ಆರಂಭಿಸಬೇಕು ಅಂತ ನಿರ್ಧರಿಸಿದಾಗ ಆ ಚಿನ್ನವನ್ನೆಲ್ಲ ಮಾರಿ, ಎಂಟು ಸಾವಿರ ರುಪಾಯಿ ತಂದುಕೊಟ್ಟಳು. ಅವಳಿಗೆ ನಾನು ಅದೆಷ್ಟು ಕೋಟಿ ಕೊಟ್ಟರೂ ಆ ದಿನ ನೀಡಿದ ಹಣಕ್ಕೆ- ಬೆಂಬಲಕ್ಕೆ ಸಮನಾಗುವುದಿಲ್ಲ".

ಅಗ್ನಿ ಶ್ರೀಧರ್ ನೈತಿಕ ಬೆಂಬಲ

ಅಗ್ನಿ ಶ್ರೀಧರ್ ನೈತಿಕ ಬೆಂಬಲ

ಇನ್ನು ಅಗ್ನಿ ಶ್ರೀಧರ್ ಆಗ ನನಗೆ ನೀಡಿದ ನೈತಿಕ ಬೆಂಬಲ, ಬರೀ ನೈತಿಕ ಬೆಂಬಲ ಮಾತ್ರವಲ್ಲ. ಅವನ ಹೆಂಡತಿಗೆ ಹೇಳಿದ್ದ, ರವಿ ಬೆಳಗೆರೆ ಯಾವಾಗ ಬಂದು ಕೇಳಿದರೂ ಅಗತ್ಯವಿರುವ ಹಣ ಕೊಡು ಅಂತ. ಅವರಿಂದ ನಾಲ್ಕು ಸಲ ಹಣ ಸಹಾಯ ಪಡೆದಿದ್ದೆ. ಈಗ ಅಗ್ನಿ ಶ್ರೀಧರ್ ಜತೆ ನಾನು ಮಾತನಾಡ್ತಿಲ್ಲ. ಆದರೆ ಅವನ ಹೆಂಡತಿ ಎದುರಿಗೆ ಸಿಕ್ಕರೆ ಅತ್ತಿಗೆ ಅಂತಲೇ ಕರೆಯುತ್ತೀನಿ.

ಬೆಂಗಳೂರು ವ್ಯಾಪ್ತಿಯಷ್ಟೇ ನನ್ನ ಗುರಿಯಾಗಿತ್ತು

ಬೆಂಗಳೂರು ವ್ಯಾಪ್ತಿಯಷ್ಟೇ ನನ್ನ ಗುರಿಯಾಗಿತ್ತು

ಈಗಲೂ ನಾನು ನೆನಪಿಸಿಕೊಳ್ಳಬೇಕಾದ ವ್ಯಕ್ತಿಗಳೆಂದರೆ ಕೆ.ಶಾಮರಾಯರು, ಸೂ.ರಮಾಕಾಂತ್, ವಿಜಯ ಸಂಕೇಶ್ವರ್ ಹಾಗೂ ಪಾ.ವೆಂ. ಆಚಾರ್ಯ ಅವರನ್ನ. ಅಂದಹಾಗೆ ಪತ್ರಿಕೆ ಆರಂಭವಾದ ನಾಲ್ಕು ವಾರಕ್ಕೇ ಬೆಂಗಳೂರಿನ ಏಜೆಂಟರು ಅರವತ್ತು ಸಾವಿರ ರುಪಾಯಿ ತಂದುಕೊಟ್ಟು ಬಿಟ್ಟರು. ಹಾಯ್ ಬೆಂಗಳೂರ್ ಪತ್ರಿಕೆ ಬೆಂಗಳೂರಿನ ಸರಹದ್ದು ದಾಟುತ್ತದೆ ಎಂಬ ನಂಬಿಕೆ ಹಾಗೂ ಉದ್ದೇಶ ಇರಲಿಲ್ಲ. ಆದರೆ ಪತ್ರಿಕೆ ರಾಜ್ಯದಾದ್ಯಂತ ಬೆಳೆಯಿತು.

ಒಂದು ಲಕ್ಷ ರುಪಾಯಿ ಡೊನೇಷನ್

ಒಂದು ಲಕ್ಷ ರುಪಾಯಿ ಡೊನೇಷನ್

ನನ್ನ ಮಗನಿಗೆ ಎಂಟನೇ ಕ್ಲಾಸಿಗೆ ಸೀಟು ಬೇಕು ಅಂತ ಅರಬಿಂದೋ ಸ್ಕೂಲಿಗೆ ಪ್ರಯತ್ನಿಸಿದೆ. ಆಗ ನನಗೆ ಸಹಾಯಕ್ಕೆ ಬಂದದ್ದು ಚಿತ್ರ ನಟ ರಮೇಶ್ ಅರವಿಂದ್. ಅವರ ಮಗಳ ಜನ್ಮದಿನಕ್ಕೆ ಆ ಶಾಲೆಯ ಆಡಳಿತ ಮಂಡಳಿಯವರೊಬ್ಬರು ಬರ್ತಾರೆ, ನೀವೂ ಬನ್ನಿ ಅಂತ ಮನೆಗೆ ಕರೆದಿದ್ದರು. ಆ ಶಾಲೆಯ ಮುಖ್ಯ ಸ್ಥಾನದಲ್ಲಿದ್ದವರು ಬಂದರು.

ನನ್ನನ್ನು ರಮೇಶ್ ಅವರಿಗೆ ಪರಿಚಯ ಮಾಡಿಕೊಟ್ಟರು. ಆದರೂ ಆ ವ್ಯಕ್ತಿ ಮಾತಿನ ಮಧ್ಯೆಯೇ ಮೂರು ಸಲ ನನ್ನ ಹೆಸರು ಕೇಳಿಬಿಟ್ಟ. ಜತೆಗೆ ಒಂದು ಲಕ್ಷ ರುಪಾಯಿ ಡೊನೇಷನ್ ಕೇಳಿದ. ಆಗಲೇ ನಿರ್ಧರಿಸಿದೆ: ನಾನೊಂದು ಶಾಲೆ ಶುರು ಮಾಡಬೇಕು. ಆ ಕ್ಷಣ ನನ್ನ ಪ್ರಾರ್ಥನಾ ಶಾಲೆಯ ಗುದ್ದಲಿ ಪೂಜೆ ಆದಂತಾಯಿತು.

ಈ ಟಿವಿಯನ್ನು ಸ್ಮರಿಸಬೇಕು

ಈ ಟಿವಿಯನ್ನು ಸ್ಮರಿಸಬೇಕು

ಪ್ರಾರ್ಥನಾ ಶಾಲೆಯ ನಿರ್ಮಾಣ, ಹಾಯ್ ಬೆಂಗಳೂರು- ಓ ಮನಸೇ ಪತ್ರಿಕೆ, ಈ ಟಿವಿಗಾಗಿ ರಾತ್ರಿ ಕಾರ್ಯಕ್ರಮ ಆ ವೇಳೆ ದಿನಕ್ಕೆ ಹದಿನೆಂಟು ತಾಸು ದುಡಿದಿದ್ದೇನೆ. ಈ ಟಿವಿಯವರು ನನಗೆ ಕೋಟಿಗಟ್ಟಲೆ ಹಣ ನೀಡಿದ್ದಾರೆ. ಅದರಿಂದ ನನ್ನ ಪ್ರಾರ್ಥನಾ ಶಾಲೆಯ ನಿರ್ಮಾಣಕ್ಕೆ ಸಹಾಯವಾಯಿತು. ನಾನು ಈ ಟಿವಿ ಸಂಸ್ಥೆಯನ್ನು ಸದಾ ಸ್ಮರಿಸಬೇಕು. 350 ಮಕ್ಕಳಿಂದ ಆರಂಭವಾದ ಪ್ರಾರ್ಥನಾ ಶಾಲೆಯಲ್ಲಿ ಈಗ 8000 ಮಕ್ಕಳಿದ್ದಾರೆ.

ಬಾಲಗಂಗಾಧರ ನಾಥ ಸ್ವಾಮೀಜಿ ಆರೋಗ್ಯ ವಿಚಾರಿಸಿದರು

ಬಾಲಗಂಗಾಧರ ನಾಥ ಸ್ವಾಮೀಜಿ ಆರೋಗ್ಯ ವಿಚಾರಿಸಿದರು

ನಾನು ಬೇರಿಯಾಟ್ರಿಕ್ ಸರ್ಜರಿ (ತೂಕ ಇಳಿಸಿಕೊಳ್ಳಲು ಶಸ್ತ್ರ ಚಿಕಿತ್ಸೆ) ಮಾಡಿಸಿದ್ದು ಬಿಜಿಎಸ್ ಆಸ್ಪತ್ರೆಯಲ್ಲಿ. ಆಗ ಸ್ವತಃ ಬಾಲಗಂಗಾಧರನಾಥ ಸ್ವಾಮೀಜಿ ಬಂದು ನನ್ನ ಆರೋಗ್ಯ ವಿಚಾರಿಸಿದರು. ಆಗ ನನಗೆ ಅವರ ಒಳ್ಳೆತನಕ್ಕೆ ಅಚ್ಚರಿಯಾಯಿತು. ಏಕೆಂದರೆ ನನ್ನ ಪತ್ರಿಕೆಯಲ್ಲಿ ಅವರ ವಿರುದ್ಧ ಬರೆದಿದ್ದೆ. ನಾನು ಉಳಿಸಿಕೊಂಡ ಸಾಮಾಜಿಕ ಗೌರವ ಹಾಗೂ ಅವರ ಒಳ್ಳೆತನ ಎರಡೂ ನನ್ನನ್ನು ಭಾವುಕನನ್ನಾಗಿಸಿತು.

ದೇವೇಗೌಡರ ಮಹಾನ್ ವ್ಯಕ್ತಿತ್ವ

ದೇವೇಗೌಡರ ಮಹಾನ್ ವ್ಯಕ್ತಿತ್ವ

ಇನ್ನು ದೇವೇಗೌಡರು ಪ್ರಧಾನಿಯಾಗಿದ್ದಾಗ ಪೆಟ್ರೋಲ್ ಬೆಲೆ ಜಾಸ್ತಿಯಾದಾಗ "ಇಟ್ಯಲ್ಲೋ ಗೌಡ ಪೆಟ್ರೋಲ್ ಗೆ ಬೆಂಕಿ" ಅಂತ ಹೆಡ್ಡಿಂಗ್ ಕೊಟ್ಟು ಸುದ್ದಿ ಮಾಡಿದೆ. ಆಟೋದವರು ಅದನ್ನೇ ಸ್ಲೋಗನ್ ಮಾಡಿಕೊಂಡು ಪ್ರತಿಭಟನೆಗಳನ್ನು ಮಾಡಿದರು. ಇನ್ನು ಮುಖ್ಯಮಂತ್ರಿ ಐ ಲವ್ ಯೂ ಸಿನಿಮಾ ಮಾಡೋವಾಗ ನನ್ನ ವಿರುದ್ಧ ಗೌಡರು ಹತ್ತು ಕೋಟಿಗೆ ಕೇಸು ಹಾಕಿದ್ದನ್ನು ಆ ಮೇಲೆ ಅವರಾಗಿಯೇ ವಾಪಸ್ ತೆಗೆದುಕೊಂಡರು.

ಯಾಕೆ ಹೀಗೆ ಬರಿತೀಯಾ ಅಥವಾ ಬರೀಬೇಡ ಅಂತ ಒಂದು ದಿನಕ್ಕೂ ನನಗೆ ಫೋನ್ ಮಾಡಿ ಕೂಡ ಹೇಳಿಲ್ಲ, ಹೇಳಿಸಿಲ್ಲ. ದೇವೇಗೌಡರನ್ನು ಅವರ ರಾಜಕಾರಣ ಅಥವಾ ಬುದ್ಧಿಮತ್ತೆ ಕಾರಣಕ್ಕೆ ಅಳೆಯೋದು ತಪ್ಪು. ಅವೆಲ್ಲವನ್ನೂ ಮೀರಿದ ಮಹಾನ್ ವ್ಯಕ್ತಿತ್ವ ಅವರದು.

ಚೇತನಾಳಿಂದ ಪತ್ರಿಕೋದ್ಯಮ ಕಾಲೇಜು

ಚೇತನಾಳಿಂದ ಪತ್ರಿಕೋದ್ಯಮ ಕಾಲೇಜು

ನನ್ನ ನಂತರ ಪತ್ರಿಕೋದ್ಯಮ ಮುಂದುವರಿಸಿಕೊಂಡು ಹೋಗುವ ಸಾಮರ್ಥ್ಯ ಇದ್ದರೆ ಅದು ಹಿರಿಯ ಮಗಳು ಚೇತನಾಗೆ. ಅವಳಿಗೀಗ ಚಿಕ್ಕ ವಯಸ್ಸಿನ ಮಕ್ಕಳು. ಇನ್ನು ಎರಡು ವರ್ಷದಲ್ಲಿ ಜರ್ನಲಿಸಂ ಕಾಲೇಜು ಮಾಡುವ ಆಲೋಚನೆ ಇದೆ. ಅದಕ್ಕೆ ಚೇತನಾಳೇ ಮುಖ್ಯಸ್ಥೆ ಆಗ್ತಾಳೆ. ಸದ್ಯಕ್ಕೆ ಎರಡೆಕರೆ ಜಾಗ ತೆಗೆದುಕೊಂಡಿದ್ದೀವಿ. ಅಲ್ಲಿಗೆ ಪ್ರಾರ್ಥನಾ ಶಾಲೆಯನ್ನು ಸ್ಥಳಾಂತರ ಮಾಡ್ತೀವಿ. ಇಲ್ಲಿ ನರ್ಸರಿ ಹಾಗೂ ಒಂದನೇ ಕ್ಲಾಸ್ ಮಾತ್ರ ಇರುತ್ತದೆ.

ಆಗ ನಮ್ಮದೇ ಸ್ವಂತ ಕಟ್ಟಡಗಳು ಸಿಗುತ್ತವೆ. ಅಲ್ಲಿ ಪತ್ರಿಕೋದ್ಯಮ ಕಾಲೇಜು ಆರಂಭಿಸುವ ಉದ್ದೇಶ ಇದೆ. ಅದರಲ್ಲೂ ಗ್ರಾಮೀಣ ಪತ್ರಿಕೋದ್ಯಮವನ್ನು ಕಲಿಸಬೇಕು ಎಂಬುದು ನನ್ನ ಉದ್ದೇಶ. ಎರಡನೇ ಮಗಳು ಓ ಮನಸೇ ಮುಂದುವರಿಸಿಕೊಂಡು ಹೋಗಲು ಬರುತ್ತಾಳೆ. ಕರ್ಣ ಹಾಗೂ ಸೊಸೆ ಲಕ್ಷ್ಮಿ ಶಾಲೆ ನೋಡಿಕೊಳ್ತಾರೆ. ಮನೆಯ ಉಳಿದ ಸದಸ್ಯರಿಗೆ ಕಚೇರಿಗೆ ಪ್ರವೇಶ ನಿಷಿದ್ಧ.

English summary
Journalist Ravi Belagere shares his future plan with 'Oneindia Kannada', he speaks about dream projects, after Hai Bangalore weekly close down.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X