ವಿಶ್ವಮಾನವ ರೈಲು ರದ್ದು, ಪ್ರಯಾಣಿಕರ ಪರದಾಟ
ಮೈಸೂರು, ಮೇ 04; ಮೈಸೂರು- ಬೆಳಗಾವಿ ನಡುವೆ ಸಂಚರಿಸುವ ವಿಶ್ವ ಮಾನವ ಎಕ್ಸ್ಪ್ರೆಸ್ ರೈಲು ರದ್ದಾಗಿರುವ ಪರಿಣಾಮ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ. ಇದರಿಂದ ಚಾಮುಂಡಿ ಎಕ್ಸ್ಪ್ರೆಸ್ ರೈಲಿನ ಮೇಲೆ ಹೆಚ್ಚಿನ ಒತ್ತಡ ಬಿದ್ದಿದೆ.
ಲೋಂಡಾ-ಬೆಳಗಾವಿ ನಡುವೆ ಒಂದು ತಿಂಗಳಿಂದ ಜೋಡಿ ಹಳಿ ಅಳವಡಿಸುವುದು ಹಾಗೂ ಇಂಟರ್ ಲಾಕಿಂಗ್ ಕೆಲಸ ನಡೆಯುತ್ತಿದೆ. ಈ ಮಾರ್ಗದಲ್ಲಿ ಸಂಚರಿಸುವ ಹಲವು ರೈಲು ಸೇವೆಯನ್ನು ಕೆಲಸ ನಡೆಯುತ್ತಿರುವ ಭಾಗದಲ್ಲಿ ಮಾತ್ರ ಮಾರ್ಗ ಬದಲಿಸಿ ಇನ್ನುಳಿದ ಸೇವೆಯನ್ನು ಎಂದಿನಂತೆ ಮುಂದುವರಿಸಲಾಗಿದೆ.
ಕರ್ನಾಟಕದಲ್ಲಿ ಮೊದಲ ಹೈ ಸ್ಪೀಡ್ ರೈಲು, ಎಲ್ಲಿ ಸಂಚರಿಸಲಿದೆ ಈ ರೈಲು?
ಆದರೆ ವಿಶ್ವ ಮಾನವ ಎಕ್ಸ್ಪ್ರೆಸ್ ರೈಲು ಸೇವೆಯನ್ನು ಸಂಪೂರ್ಣವಾಗಿ ದೀರ್ಘಾವಧಿಯವರೆಗೆ ರದ್ದುಗೊಳಿಸಲಾಗುತ್ತಿದೆ. ನಿತ್ಯವೂ ಸರಕಾರಿ ಕೆಲಸಕ್ಕೆ ಹೋಗುವವರು, ವಿಧಾನಸೌಧ, ಹೈಕೋರ್ಟ್, ಗಾರ್ಮೆಂಟ್ಸ್ಗೆ ಹೋಗುವವರು ಸೇರಿದಂತೆ ನಾನಾ ವರ್ಗದ ಸುಮಾರು 25,000 ಮಂದಿ ಪ್ರಯಾಣಿಕರು ಪ್ರತಿನಿತ್ಯ ಮೈಸೂರು-ಬೆಂಗಳೂರು ನಡುವೆ ಸಂಚರಿಸುತ್ತಾರೆ.
Breaking; ಹುಬ್ಬಳ್ಳಿ-ವಿಜಯವಾಡ ರೈಲು ಆರಂಭ, ವೇಳಾಪಟ್ಟಿ
ಕೋವಿಡ್ನಿಂದಾಗಿ ಕೆಲ ತಿಂಗಳು ರೈಲ್ವೆ ಸೇವೆ ಸ್ಥಗಿತವಾಗಿತ್ತು. ನಂತರ ಕ್ರಮೇಣ ನಿಯಮಾವಳಿಗೆ ಅನುಗುಣವಾಗಿ ಸೇವೆ ಆರಂಭಿಸಲಾಯಿತು. ಈ ಸಂದರ್ಭದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿತ್ತು. ಆದರೆ ಕೋವಿಡ್ ಸಂಪೂರ್ಣ ನಿಯಂತ್ರಣಕ್ಕೆ ಬಂದ ನಂತರ ಇದೀಗ ಎಂದಿನಂತೆ ಹೆಚ್ಚು ಮಂದಿ ಪ್ರಯಾಣಿಕರು ಸಂಚಾರ ಆರಂಭಿಸಿದ್ದಾರೆ.
ಶಿವಮೊಗ್ಗ-ರಾಣೆಬೆನ್ನೂರು ರೈಲು ಮಾರ್ಗ ಶೇ 60ರಷ್ಟು ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣ

ಮೈಸೂರಿನಿಂದಲೇ ಏಕೆ ರೈಲು ರದ್ದು?
ರೈಲ್ವೆ ಇಲಾಖೆ ದೂರದ ಬೆಳಗಾವಿಯಲ್ಲಿ ದುರಸ್ತಿ ಕೆಲಸ ನಡೆಯುತ್ತಿದೆ ಎಂಬ ನೆಪ ಮುಂದಿಟ್ಟುಕೊಂಡು ಮೈಸೂರಿನಿಂದಲೇ ವಿಶ್ವಮಾನವ ರೈಲು ಸೇವೆ ಸ್ಥಗಿತಗೊಳಿಸಿರುವುದು ಸರಿಯಲ್ಲ ಎನ್ನುತ್ತಾರೆ ಪ್ರಯಾಣಿಕರು. ಕಳೆದ ಒಂದು ತಿಂಗಳಲ್ಲಿ ಒಮ್ಮೆ 7, ಮತ್ತೊಮ್ಮೆ 8 ದಿನ ಸೇರಿದಂತೆ ಒಟ್ಟು 14 ದಿನ ರೈಲು ಸೇವೆ ರದ್ದಾಗಿತ್ತು. ಈಗ ಮತ್ತೆ 13 ದಿನ ಸೇವೆಯನ್ನು ರದ್ದುಗೊಳಿಸಲಾಗಿದೆ. ಇದರಿಂದ ನಿತ್ಯವೂ ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಪರಿಣಾಮ ಚಾಮುಂಡಿ ಎಕ್ಸ್ಪ್ರೆಸ್ ಮೇಲೆ ಒತ್ತಡ ಹೆಚ್ಚಾಗಿದೆ.

ಬದಲಿ ವ್ಯವಸ್ಥೆಯನ್ನು ಮಾಡಲು ಆಗ್ರಹ
ರೈಲು ಸಂಪೂರ್ಣ ರದ್ದುಗೊಳಿಸುವ ಬದಲು ಯಶವಂತಪುರ, ತುಮಕೂರು, ಹುಬ್ಬಳ್ಳಿ , ಹರಿಹರದ ಅಮರಾವತಿವರೆಗೂ ಸೇವೆ ನೀಡಬಹುದು. ಕಡೇ ಪಕ್ಷ ಒತ್ತಡ ಹೆಚ್ಚಾಗಿರುವ ಮೈಸೂರು-ಬೆಂಗಳೂರು ನಡುವೆಯಾದರೂ ಸೇವೆಯನ್ನು ಮುಂದುವರಿಸಬೇಕೆಂಬುದು ಪ್ರಯಾಣಿಕರ ಒತ್ತಾಯವಾಗಿದೆ. ದೀರ್ಘಾವಧಿಯವರೆಗೆ ವಿಶ್ವ ಮಾನವ ಎಕ್ಸ್ಪ್ರೆಸ್ ರೈಲು ಸೇವೆ ರದ್ದಾಗುತ್ತಿರುವುದರಿಂದ ಚಾಮುಂಡಿ ಎಕ್ಸ್ಪ್ರೆಸ್ ಮೇಲೆ ಪ್ರಯಾಣಿಕರ ಒತ್ತಡ ಹೆಚ್ಚಾಗಿದೆ. ಈ ಒತ್ತಡ ಕಡಿಮೆ ಮಾಡಲಿ ಎಂದು ಜನರು ಆಗ್ರಹಿಸಿದ್ದಾರೆ.

ಬೆಂಗಳೂರು-ಮೈಸೂರು ನಡುವೆ ಸಂಚಾರ
ವಿಶ್ವಮಾನವ ಎಕ್ಸ್ಪ್ರೆಸ್ ಮುಂಜಾನೆ 5.50ಕ್ಕೆ ಮೈಸೂರಿನಿಂದ ಹೊರಡುತ್ತದೆ. ಅದೇ ರೀತಿ ಬೆಂಗಳೂರು ಕಡೆಯಿಂದ ಸಂಜೆ 5.45ಕ್ಕೆ ಹೊರಟು ಮೈಸೂರಿಗೆ 8.15ಕ್ಕೆ ತಲುಪುತ್ತದೆ. ಈ ಸೇವೆ ರದ್ದಾಗಿರುವುದರಿಂದ ಈಗ ಮೊದಲಿನಿಂದಲೂ ಬೆಳಗ್ಗೆ 6.45ಕ್ಕೆ ಮೈಸೂರಿನಿಂದ ಹೊರಡುವ ಹಾಗೂ ಅದೇ ರೀತಿ ಬೆಂಗಳೂರು ಕಡೆಯಿಂದ ಮೈಸೂರಿಗೆ 6.15ಕ್ಕೆ ಹೊರಡುವ ಚಾಮುಂಡಿ ಎಕ್ಸ್ಪ್ರೆಸ್ ಮೇಲೆ ಒತ್ತಡ ಹೆಚ್ಚಾಗಿದೆ.
ಈ ರೀತಿ ಒಂದೇ ರೈಲಿನ ಮೇಲೆ ಒತ್ತಡ ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ವಿಶ್ವಮಾನವ ಎಕ್ಸ್ಪ್ರೆಸ್ ಸೇವೆ ಆರಂಭಿಸಲಾಗಿತ್ತು. ಇದರಿಂದ ಬೆಳಗಿನಿಂದ ಸಂಜೆವರೆಗೂ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡು ನಂತರ ಮತ್ತೆ ಮೈಸೂರು ಹಾಗೂ ಸುತ್ತಲ ಭಾಗಕ್ಕೆ ಹಿಂತಿರುಗುವವರಿಗೆ ಹೆಚ್ಚು ಅನುಕೂಲವಾಗಿತ್ತು.

ರೈಲು ನಿಲ್ಲಿಸಲು ಅವಕಾಶವಿಲ್ಲ
"ವಿಶ್ವ ಮಾನವ ಎಕ್ಸ್ಪ್ರೆಸ್ ರೈಲುಗಾಡಿ ಸೇವೆಯನ್ನು ಮೈಸೂರು-ಬೆಂಗಳೂರು ನಡುವೆ ನೀಡಲು ಬೆಂಗಳೂರು ನಿಲ್ದಾಣದಲ್ಲಿ ರೈಲುಗಾಡಿ ನಿಲ್ಲಲು ಸ್ಥಳಾವಕಾಶದ ಕೊರತೆ ಇದೆ. ಮುಂದುವರೆದು ಬೇರೆ ನಿಲ್ದಾಣದಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಲು ಬೆಂಗಳೂರು-ಹುಬ್ಬಳ್ಳಿ ನಡುವೆ ಜೋಡಿ ಹಳಿ ನಿರ್ಮಾಣ ಕಾಮಗಾರಿ ನಿರಂತರವಾಗಿ ನಡೆಯುತ್ತಿದೆ. ಹೀಗಾಗಿ ದೀರ್ಘಾವಧಿವರೆಗೆ ರದ್ದು ಮಾಡಬೇಕಾಗಿದೆ" ಎಂದು ಮೈಸೂರು ವಿಭಾಗದ ಸೀನಿಯರ್ ಡಿವಿಜನಲ್ ಕಮರ್ಷಿಯಲ್ ಮ್ಯಾನೇಜರ್ ಮಂಜುನಾಥ ಕನಮಡಿ ತಿಳಿಸಿದ್ದಾರೆ.