ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನ್ನಡ ನೆಲದ ಕ್ರಾಂತಿಯ ಕಿಡಿಗಳು: ವಿದುರಾಶ್ವತ್ಥದ ಬಲಿದಾನಿಗಳು

By ಒನ್ ಇಂಡಿಯಾ ಡೆಸ್ಕ್
|
Google Oneindia Kannada News

ಸ್ವಾತಂತ್ರ್ಯ ಸಮರದಲ್ಲಿ ಕರ್ನಾಟಕದಲ್ಲಿನಡೆದ ಅತೀ ಭೀಕರ ಹತ್ಯಾಕಾಂಡಗಳಲ್ಲಿ ಒಂದಾದ ವಿದುರಾಶ್ವತ್ಥದ ಬಲಿದಾನ ಕರ್ನಾಟಕದ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ ಎಂದೂ ಹೆಸರಾಗಿದೆ. ಒಬ್ಬ ಗರ್ಭಿಣಿಯೂ ಸೇರಿದಂತೆ 32 ಜನ ದೇಶಭಕ್ತರು ಬ್ರಿಟಿಷರ ಗುಂಡಿಗೆಬಲಿಯಾಗಿ ಪ್ರಾಣಾರ್ಪಣೆ ಮಾಡಿದ್ದು ಈ ನೆಲದ ಜನರ ಅಪ್ರತಿಮ ದೇಶಭಕ್ತಿಗೆ ಹಾಗೂ ಬ್ರಿಟಿಷ್ ಆಡಳಿತದ ಬರ್ಬರತೆಗೆ ಸಾಕ್ಷಿಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಇತಿಹಾಸ ಪ್ರಸಿದ್ಧ ಕ್ಷೇತ್ರ ವಿದುರಾಶ್ವತ್ಥ ದೇಶದ ಸ್ವಾತಂತ್ರ್ಯ ಹೋರಾಟಗಾರರ ಚಳವಳಿಯ ಕೇಂದ್ರವಾಗಿತ್ತೆಂಬುದು ಗಮನಾರ್ಹ ಸಂಗತಿ.

ಹಳ್ಳಿಯ ಮಹಿಳೆಯರ ಸಂಕಷ್ಟ ದೂರ ಮಾಡಿದ ನಿಜವಾದ ಹೀರೋಹಳ್ಳಿಯ ಮಹಿಳೆಯರ ಸಂಕಷ್ಟ ದೂರ ಮಾಡಿದ ನಿಜವಾದ ಹೀರೋ

ಮಹಾಭಾರತಕಾಲದಲ್ಲಿ ವಿದುರ ನೆಟ್ಟಿದ್ದನೆಂದು ನಂಬಲಾಗುವ ಅಶ್ವತ್ಥ ವೃಕ್ಷ ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಬ್ರಿಟಿಷರ ಪೈಶಾಚಿಕ ದೌರ್ಜನ್ಯಕ್ಕೂ ಸಾಕ್ಷಿಯಾಗಿದ್ದು ದುರಂತದ ಸಂಗತಿ. ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ದೇಶಾದ್ಯಂತ ನಡೆಯುತ್ತಿದ್ದ ಆಂದೋಲನದ ಬಿಸಿ ಕರ್ನಾಟಕಕ್ಕೂ ತಟ್ಟಿತ್ತು.

Vidhurashwatha Massacre: Independence day is a time to remember brave martyrs

1938 ಏಪ್ರಿಲ್ 8ರಿಂದ 10 ರವರೆಗೆ ಬ್ರಿಟಿಷರ ವಿರುದ್ಧ ಪ್ರತಿಭಟಿಸಲು ಕರ್ನಾಟಕದ ದೇಶಾಭಿಮಾನಿಗಳು ಮಂಡ್ಯದ ಶಿವಪುರದಲ್ಲಿ ಧ್ವಜಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದರು. ಶಿವಪುರ ಧ್ವಜ ಸತ್ಯಾಗ್ರಹ ನಾಡಿನ ಹಲವೆಡೆಗಳಲ್ಲಿ ಹೋರಾಟದ ಕಹಳೆ ಮೊಳಗಿಸಿತು. ಇದರಿಂದ ಪ್ರಭಾವಿತರಾದ ಚಿಕ್ಕಬಳ್ಳಾಪುರದ ಸ್ವಾತಂತ್ರ್ಯ ಸೇನಾನಿಗಳು ವಿದುರಾಶ್ವತ್ಥವನ್ನು ಹೋರಾಟಕ್ಕೆ ಕೇಂದ್ರಸ್ಥಾನವನ್ನಾಗಿ ಮಾಡಿಕೊಂಡು ಬ್ರಿಟಿಷರ ವಿರುದ್ಧ ಹೋರಾಟ ಆರಂಭಿಸಿದರು.

ಪಾಕ್ ವೆಬ್ ಸೈಟ್ ಹ್ಯಾಕ್: ಭಾರತದ ಧ್ವಜ, ರಾಷ್ಟ್ರಗೀತೆ ಡಿಸ್ ಪ್ಲೇ !ಪಾಕ್ ವೆಬ್ ಸೈಟ್ ಹ್ಯಾಕ್: ಭಾರತದ ಧ್ವಜ, ರಾಷ್ಟ್ರಗೀತೆ ಡಿಸ್ ಪ್ಲೇ !

1938 ಏಪ್ರಿಲ್ 25 ರಂದು ವಿದುರಾಶ್ವತ್ಥದಲ್ಲಿ ಧ್ವಜ ಸತ್ಯಾಗ್ರಹ ಮಾಡುವ ನಿರ್ಧಾರ ಕೈಗೊಂಡರು. ಇದರ ಸುಳಿವನ್ನರಿತ ಕೋಲಾರ ಜಿಲ್ಲಾ ಮ್ಯಾಜಿಸ್ಟ್ರೇಟ್ ತಾಲೂಕಿನಾದ್ಯಂತ 144 ವಿಧಿ ಹೊರಡಿಸಿ ಸಭೆ ಸಮಾರಂಭಗಳನ್ನು ನಡೆಸದಂತೆ ಸೂಚಿಸಿದರು. ಅದನ್ನು ಧಿಕ್ಕರಿಸಿ ಹೋರಾಟ ಮುಂದುವರಿದಾಗ ಪೊಲೀಸರು ಹಲವು ನಾಯಕರನ್ನು ಬಂಧಿಸಿದರು. ಈ ಸಂಗತಿ ಅವಿಭಜಿತ ಕೋಲಾರಜಿಲ್ಲೆಯಾದ್ಯಂತ ಒಂದೇ ದಿನದಲ್ಲಿ ವ್ಯಾಪಿಸಿ ಸ್ವಾತಂತ್ರ್ಯ ಸೇನಾನಿಗಳು, ದೇಶಾಭಿಮಾನಿ ಕಾರ್ಯಕರ್ತರು ಭಾರಿ ಸಂಖ್ಯೆಯಲ್ಲಿ ಏಪ್ರಿಲ್ 25 ರಂದು ವಿದುರಾಶ್ವತ್ಥದಲ್ಲಿ ಜಮಾವಣೆಗೊಂಡರು.

ಬ್ರಿಟಿಷರ ದೌರ್ಜನ್ಯದ ವಿರುದ್ಧ ಸಿಡಿದೆದ್ದ ಜನತೆ ಭಾರತ್ ಮಾತಾಕಿ ಜೈ ಎಂದು ಘೋಷಿಸುತ್ತ ಮುಂದಡಿಯಿಡುತ್ತಿದ್ದಂತೆ ಪೊಲೀಸರು ಲಾಠಿ ಪ್ರಹಾರ ಪ್ರಾರಂಭಿಸಿ ಅದನ್ನು ಪ್ರತಿಭಟಿಸಿದ ದೇಶಭಕ್ತ ಹೋರಾಟಗಾರರ ಮೇಲೆ ಏಕಾಏಕಿ ಬಂದೂಕಿನಿಂದ ಗುಂಡಿನ ಸುರಿಮಳೆಗೈಯಲು ಪ್ರಾರಂಭಿಸಿದರು. ಓಡಿಹೋಗುತ್ತಿದ್ದವರ ಮೇಲೆ ಕೂಡಾ ಗುಂಡು ಹಾರಿಸಲಾಯಿತು.

ಈ ದುರ್ಘಟನೆಯಲ್ಲಿ ಇಡಗೂರುಭೀಮಯ್ಯ, ಚೌಳೂರು ನರಸಪ್ಪ, ಗಜ್ಜನ್ನಗಾರಿ ನರಸಪ್ಪ, ಹನುಮಂತಪ್ಪ, ಕಾರಗೊಂಡಹಳ್ಳಿ ಮಲ್ಲಯ್ಯ, ನಾಮಾ ಅಶ್ವತ್ಥನಾರಾಯಣಶೆಟ್ಟಿ, ವೆಂಕಟಗಿರಿಯಪ್ಪ, ನರಸಪ್ಪ, ಮರಳೂರು ಗೌರಮ್ಮ ಸೇರಿದಂತೆ ಮೂವತ್ತೆರಡು ದೇಶಭಕ್ತರು ಸ್ಥಳದಲ್ಲೇ ಪ್ರಾಣತೆತ್ತರೆ ನೂರಾರು ಜನರು ಗಾಯಗೊಂಡರು.

ಪಂಜಾಬಿನ ಅಮೃತಸರದ ಜಲಿಯನ್ ವಾಲಾ ಭಾಗ್ ನಲ್ಲಿ ಜನರಲ್ ಡಯರ್ ನ ಕ್ರೌರ್ಯಕ್ಕೆ ಸಾವಿರಾರು ಜನ ಹತರಾದಂತೆ ಕರ್ನಾಟಕದ ವಿದುರಾಶ್ವತ್ಥ ದಲ್ಲಿ ನಡೆದ ಈ ಹತ್ಯಾಕಾಂಡ ಕೂಡಾ ಬ್ರಿಟಿಷರ ಬರ್ಬರತೆಗೆ, ಅಮಾನವೀಯ, ಪೈಶಾಚಿಕ ದೌರ್ಜನ್ಯಕ್ಕೆ ಉದಾಹರಣೆಯಾಗಿದೆ. ದೇಶಭಕ್ತರನ್ನು ಅಮಾನುಷವಾಗಿ ಗುಂಡು ಹೊಡೆದು ಬರ್ಬರವಾಗಿ ಕೊಂದು ಹಾಕಿದ ಈ ಹತ್ಯಾಕಾಂಡ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು.

ಗಾಂಧೀಜಿ, ಸರ್ದಾರ್ ಪಟೇಲ್, ಆಚಾರ್ಯ ಕೃಪಲಾನಿ ಮುಂತಾದ ನಾಯಕರು ಇಲ್ಲಿಗೆ ಭೇಟಿ ನೀಡಿ ಹುತಾತ್ಮರಿಗೆ ಶೃದ್ಧಾಂಜಲಿ ಅರ್ಪಿಸಿದ್ದರು. ಸ್ವಾತಂತ್ರ್ಯಾ ನಂತರ ದೇಶಭಕ್ತರು ಬ್ರಿಟಿಷರ ಗುಂಡಿಗೆಪ್ರಾಣತೆತ್ತ ಸ್ಥಳದಲ್ಲಿ ಸ್ಮಾರಕ ಹಾಗೂ ವೀರಸೌಧ ವನ್ನು ನಿರ್ಮಿಸಿ ಗೌರವಸಮರ್ಪಿಸಲಾಗಿದೆ.

ವಿದುರಾಶ್ವತ್ಥದಿಂದ ಸುಮಾರು 5-6 ಕಿಲೋಮೀಟರ್ ದೂರದ ನಾಗಸಂದ್ರದಲ್ಲಿ ಅಲ್ಲಿನ ದೇಶಪ್ರೇಮಿಗಳು, ರೈತಾಪಿ ವರ್ಗದವರು ಭಾರತಮಾತಾ ದೇವಸ್ಥಾನವನ್ನು ಕಟ್ಟಿದ್ದಾರೆ. ಪ್ರತಿ ಆಗಸ್ಟ್ 15 ರಂದು ಅಲ್ಲಿ ವಿಶೇಷ ಪೂಜೋತ್ಸವಗಳು, ಹುತಾತ್ಮರ ಸ್ಮರಣೆಯ ಕಾರ್ಯಕ್ರಮಗಳು ಜರುಗುತ್ತವೆ. ಕನ್ನಡ ನೆಲದಲ್ಲಿ ಭಾರತ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಆ ಎಲ್ಲಾ ಹುತಾತ್ಮರಿಗೆ ಗೌರವ ನಮನ. (ಕೃಪೆ: ದೇಶಾಭಿಮಾನಿ ಬ್ಲಾಗ್ http://bharatapremi.blogspot.in/)

English summary
India is celebrating it's 71st independence day on August 15th. Here is a story on martyrs from Karnataka's Vidhurashwatha of Chikkaballapur district, who lost their lives in freedom strugle on 1938, April 25th by Britishers. This tragedy is called as Vidhurashwatha Massacre, also known as Jallianwala Bagh massacre of South India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X