• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

Exclusive: ಕೋವಿಡ್ ಹಾಟ್‌ಸ್ಪಾಟ್‌ ಆಗಲಿದೆಯಾ ವಿಕ್ಟೋರಿಯಾ ಆಸ್ಪತ್ರೆ? ಪ್ರತ್ಯಕ್ಷ ವರದಿ!

|

ಬೆಂಗಳೂರು, ಏ. 08: ಕೊರೊನಾ ವೈರಸ್ ಕೊಟ್ಟಿರುವ ಸಂಕಷ್ಟಕ್ಕೆ ಚೀನಾ, ಅಮೆರಿಕಾ, ಇಟಲಿ, ಸ್ಪೇನ್, ಫ್ರಾನ್ಸ್ ಸೇರಿದಂತೆ ಬಲಿಷ್ಠ ರಾಷ್ಟ್ರಗಳು ನಲುಗಿ ಹೋಗಿವೆ. ಆರಂಭಿಕ ಹಂತದಲ್ಲಿ ನಿರ್ಲಕ್ಷ್ಯ ಮಾಡಿದ್ದು ದೊಡ್ಡ ಪ್ರಮಾಣದಲ್ಲಿ ಪ್ರಾಣ ಹಾನಿಗೆ ಕಾರಣವಾಯಿತು ಎಂದು ಸ್ವತಃ ಆ ದೇಶಗಳನ್ನು ಮುನ್ನಡೆಸುತ್ತಿರುವವರಿಂದ ಸಾಮಾನ್ಯ ನಾಗರಿಕರು ಹೇಳುತ್ತಿದ್ದಾರೆ. ನಾವು ಮಾಡಿದ ತಪ್ಪನ್ನು ನೀವು ಮಾಡಬೇಡಿ ಎಂದು ವಿಡಿಯೊ ಮಾಡಿ ಕಳಿಸಿದ್ದಾರೆ.

ನಮ್ಮ ದೇಶದಲ್ಲಿಯೂ ಕೊರೊನಾ ವೈರಸ್‌ಗೆ ಈಗಾಗಲೇ 150 ಜನರು ಬಲಿಯಾಗಿದ್ದಾರೆ, ಐದೂವರೆ ಸಾವಿರಕ್ಕೂ ಹೆಚ್ಚಿನ ಜನರು ಕೋವಿಡ್ 19 ಸೋಂಕಿಗೆ ತುತ್ತಾಗಿದ್ದಾರೆ. ಒಬ್ಬ ಸೋಂಕಿತ ಕನಿಷ್ಠ 400 ಜನರಿಗೆ ಸೋಂಕುಹರಡುವುದು ಸಾಧ್ಯವೆಂದು ಅಧ್ಯಯನ ವರದಿ ಹೇಳಿದೆ. ಹೀಗಿದ್ದಾಗ್ಯೂ ಕೂಡ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗೆ ಮೀಸಲಾಗಿರುವ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಹೇಗಿದೆ?. "ಒನ್ ಇಂಡಿಯಾ ಕನ್ನಡ' ತಂಡ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು, ಕೊರೊನಾ ಹಾಟ್‌ಸ್ಪಾಟ್‌ ಆಗಿರುವ ವಿಕ್ಟೋರಿಯಾ ಆಸ್ಪತ್ರೆ ಆವರಣದ ತಳಮಟ್ಟದ Exclusive ತನಿಖಾ ವರದಿಯನ್ನು ನಿಮ್ಮ ಮುಂದಿಡುತ್ತಿದೆ!

Exclusive: ಕರ್ನಾಟಕ ಕೊರೊನಾ ಹಾಟ್‌ಸ್ಪಾಟ್‌ನ ಪ್ರತ್ಯಕ್ಷ ವರದಿ; ವಿವರಗಳು ಗಂಭೀರ

ಕೊರೊನಾ ವೈರಸ್ ಹಾಟ್‌ಸ್ಪಾಟ್‌ ಆದ ವಿಕ್ಟೋರಿಯಾ ಆಸ್ಪತ್ರೆ

ಕೊರೊನಾ ವೈರಸ್ ಹಾಟ್‌ಸ್ಪಾಟ್‌ ಆದ ವಿಕ್ಟೋರಿಯಾ ಆಸ್ಪತ್ರೆ

ಕೊರೊನಾ ವೈರಸ್ ಹರಡದಂತೆ ತಡೆಯಲು ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್‌ಡೌನ್ ಜಾರಿಗೆ ತರುವ ಮೊದಲೇ, ರಾಜ್ಯ ಸರ್ಕಾರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯನ್ನು ಕೊರೊನಾ ವೈರಸ್ ಸೋಂಕಿತರ ಚಿಕಿತ್ಸಗೆ ಸಿದ್ಧಪಡಿಸಿತ್ತು. 1700 ಹಾಸಿಗೆಗಳ ಆಸ್ಪತ್ರೆಯನ್ನು ವಿಶೇಷವಾಗಿ ಕೋವಿಡ್ 19 ಸೋಂಕಿತರ ಚಿಕಿತ್ಸೆಗೆಂದು ಮೀಸಲು ಇಡಲಾಯ್ತು. ಮಾರ್ಚ್‌ 22 ರಂದು ವಿಕ್ಟೋರಿಯಾ ಆಸ್ಪತ್ರೆಯನ್ನು ಕೊರೊನಾ ವೈರಸ್ ಸೋಂಕಿತರ ಚಿಕಿತ್ಸೆಗೆ ಸಿದ್ಧಪಡಿಸಿತ್ತು. 500 ಹಾಸಿಗೆಗಳ ಐಸೊಲೆಶನ್ ವಾರ್ಡ್, ತಲಾ 50 ಐಸಿಯು ಹಾಗೂ ವೆಂಟಿಲೇಟರ್‌ ಸೌಲಭ್ಯವನ್ನು ಸಿದ್ಧಪಡಿಸಲಾಗಿತ್ತು. ಆದರೆ ಎರಡು ವಾರಗಳ ನಂತರ ಚಿತ್ರಣ ಬದಲಾಗಿದೆ.

ಅಪ್ಪಿತಪ್ಪಿಯೂ ಕಂಡು ಬರಲಿಲ್ಲ ಸಾಮಾಜಿಕ ಅಂತರ

ಅಪ್ಪಿತಪ್ಪಿಯೂ ಕಂಡು ಬರಲಿಲ್ಲ ಸಾಮಾಜಿಕ ಅಂತರ

ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದರಿಂದ ಮಾತ್ರ ಕೊರೊನಾ ವೈರಸ್‌ ಹರಡದಂತೆ ತಡೆಯಬಹುದು. ಹೀಗಾಗಿಯೇ ಕೇಂದ್ರ ಸರ್ಕಾರ ಇಡೀ ದೇಶದಲ್ಲಿ ಲಾಕ್‌ಡೌನ್ ಜಾರಿಗೆ ತಂದಿದೆ. ಆದರೆ ಕೊರೊನಾ ವೈರಸ್‌ ಚಿಕಿತ್ಸೆಗೆಂದು ಮೀಸಲಿರುವ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಹಳಷ್ಟು ಸಿಬ್ಬಂದಿಗೆ ಅರಿವಿಲ್ಲ ಅಥವಾ ಮನಸ್ಸಿಲ್ಲ. ಆತಂತಕ್ಕೆ ಪುಷ್ಟಿಕೊಡುವಂತಹ ಸಾಕ್ಷಿಗಳು ಒನ್ ಇಂಡಿಯಾಕ್ಕೆ ಲಭ್ಯವಾಗಿವೆ. ಶಂಕಿತ ಹಾಗೂ ಸೋಂಕಿತರನ್ನು ಕರೆದುಕೊಂಡು ಬರುವ ಅಂಬುಲೆನ್ಸ್ ಸಿಬ್ಬಂದಿ, ಐಸೋಲೇಶನ್ ವಾರ್ಡ್‌ಗೆ ಭದ್ರತೆ ಕೊಡುವ ಭದ್ರತಾ, ಹೋಮ್‌ಗಾರ್ಡ್ಸ್ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಪಾಲನೆ ಮಾಡುತ್ತಿಲ್ಲ. ಇದು ನಮ್ಮ ರಿಯಾಲಿಟಿ ಚೆಕ್ ನಲ್ಲಿ ಸೆರೆಯಾಗಿದೆ.

ವಿಶೇಷ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ 30 ಸೋಂಕಿತರು

ವಿಶೇಷ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ 30 ಸೋಂಕಿತರು

ಈಗ ಒಟ್ಟು 30 ರೋಗಿಗಳಿಗೆ ವಿಶೇಷ ಚಿಕಿತ್ಸೆ ನೀಡುತ್ತಿರುವ ಟ್ರಾಮ ಸೆಂಟರ್‌ ಕಟ್ಟಡದ ನಾಲ್ಕನೇ ಮಹಡಿಯ ಎದುರಿಗಿನ ಚಿತ್ರಣ ದಂಗು ಬಡಿಸುವಂತಿದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಇಬ್ಬರು ಸಚಿವರುಗಳು, ಅವರ ಪ್ರವಾಸಗಳು, ಸಿಎಂ ಯಡಿಯೂರಪ್ಪ ಅವರೇ ಖುದ್ದಾಗಿ ಮೇಲ್ವಿಚಾರಣೆ ಕೈಗೊಂಡಿರುವ ಸಮಯದಲ್ಲಿ ದೀಪದ ಕೆಳಗಿನ ಕತ್ತಲೆ ಆತಂಕ ಮೂಡಿಸುವಂತಿವೆ. ವಿಶೇಷ ವಾರ್ಡ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ಆಗಾಗ ವಾರ್ಡ್‌ನಿಂದ ಹೊರಗೆ ಬಂದು ನಿಲ್ಲುತ್ತಾರೆ. ಮಾತುಕತೆ ನಡೆಸುತ್ತಾರೆ. ಜೊತೆಗೆ ಹೊರಗಿನ ಭದ್ರತಾ ಸಿಬ್ಬಂದಿ ಜೊತೆಯೂ ದಿನಕ್ಕೆ ಹಲವು ಬಾರಿ ನೇರವಾಗಿ ಮಾತನಾಡುತ್ತಾರೆ. ಅವರು ಹಾಕಿಕೊಂಡಿರುವ ಮಾಸ್ಕ್‌, ಬಟ್ಟೆಯನ್ನು ಪ್ರತಿದಿನ ಬದಲಾಯಿಸಬೇಕು. ಹಾಗೆ ಭದ್ರತಾ ಸಿಬ್ಬಂದಿ ಸಾಮಾನ್ಯ ಡ್ರೆಸ್‌ನಲ್ಲಿಯೆ ವಾರ್ಡ್‌ನಲ್ಲಿಯ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸುವುದು ಸಾಮಾನ್ಯ.

ಆಸ್ಪತ್ರೆ ಆವರಣದಲ್ಲಿರುವ ಫುಡ್ ಪ್ಯಾಲೇಸ್‌ನಲ್ಲಿ ಸಮಾಜಿಕ ಅಂತರವಿಲ್ಲ

ಆಸ್ಪತ್ರೆ ಆವರಣದಲ್ಲಿರುವ ಫುಡ್ ಪ್ಯಾಲೇಸ್‌ನಲ್ಲಿ ಸಮಾಜಿಕ ಅಂತರವಿಲ್ಲ

ಶಂಕಿತರು ಅಥವಾ ಸೋಂಕಿತರನ್ನು ಆಸ್ಪತ್ರೆಗೆ ಕರೆದುಕೊಂಡುವ ಬರುವ ಅಂಬುಲೆನ್ಸ್ ಡ್ರೈವರ್, ಸಿಬ್ಬಂದಿ ರೋಗಿಗಳನ್ನು ಇಳಿಸಿದ ತಕ್ಷಣ ಆಸ್ಪತ್ರೆ ಎದುರಿನ ಫುಡ್‌ಕೋರ್ಟ್‌ಗೆ ಟೀ ಕುಡಿಯಲು ಹೋಗುತ್ತಾರೆ. ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದಿಲ್ಲ. ಜೊತೆಗೆ ಸೋಂಕಿತ ವಾರ್ಡ್ ರಕ್ಷಣಾ ಸಿಬ್ಬಂದಿ ಕೂಡ ಆಗಾಗ ಆಸ್ಪತ್ರೆಯಿಂದ ಹೊರಗಡೆ ಬರುತ್ತಾರೆ. ಇದರಿಂದಾಗಿ ಫುಡ್‌ ಪ್ಯಾಲೆಸ್ ಸಿಬ್ಬಂದಿ ಕೂಡ ಆತಂಕದಲ್ಲಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯ ಬಳಿಯೆ ವಾಣಿ ವಿಲಾಸ ಆಸ್ಪತ್ರೆ, ಪಿಎಂಎಸ್‌ಎಸ್‌ವೈ ಆಸ್ಪತ್ರೆಯಿದೆ, ಅಲ್ಲಿಯವರೂ ಕೂಡ ಬಂದು ಹೋಗುತ್ತಾರೆ. ಯಾರಿಗೂ ಕೂಡ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತ ಪ್ರಕರಣಗಳು ಇರುವ ಅರಿವು ಇದ್ದಂತಿಲ್ಲ. ವಿಕ್ಟೋರಿಯಾ ಆಸ್ಪತ್ರೆಯ ಯಾವುದೇ ಆಡಳಿತಾಧಿಕಾರಿಗಳು ಸೂಕ್ತ ಭದ್ರತೆ ಕೊಟ್ಟಿಲ್ಲ ಎಂಬುದು ನೇರವಾಗಿಯೆ ಕಾಣುತ್ತಿದೆ.

ಇಡೀ ದೇಶದಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್ ಆಸ್ಪತ್ರೆ ಸಮೀಪ ಇಲ್ಲ

ಇಡೀ ದೇಶದಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್ ಆಸ್ಪತ್ರೆ ಸಮೀಪ ಇಲ್ಲ

ಇಡೀ ವಿಕ್ಟೋರಿಯಾ ಆಸ್ಪತ್ರೆಯನ್ನು ಕೊರೊನಾ ವೈರಸ್ ಸೋಂಕಿತರ ಚಿಕಿತ್ಸೆಗೆ ವಶಪಡಿಸಿಕೊಳ್ಳಲಾಗಿದೆ. ಆದರೆ ಸೂಕ್ತ ಪೊಲೀಸ್ ಬಂದೋಬಸ್ತ್‌ನ್ನು ಮಾತ್ರ ಕೊಡಲಾಗಿಲ್ಲ. ಖಾಸಗಿ ಭದ್ರತಾ ಸಿಬ್ಬಂದಿ ತಮಗೆ ಅನುಕೂಲವಾದಂತೆ ವರ್ತನೆ ಮಾಡುತ್ತಾರೆ. ಅವರಿಗೆ ಕೊರೊನಾ ವೈರಸ್‌ ಸೋಂಕಿನ ತೀವ್ರತೆಯೆ ಅರಿವು ಇದ್ದಂತಿಲ್ಲ. ಇನ್ನು ಅದೇ ಭದ್ರತಾ ಸಿಬ್ಬಂದಿ ಗುಂಪುಗುಂಪಾಗಿ ಜನರನ್ನು ಸೇರಿಸಿಕೊಂಡು ಟೀ ಕುಡಿಯುತ್ತಾ ನಿಲ್ಲುತ್ತಾರೆ. ಇಡೀ ದೇಶಾದ್ಯಂತ ಸೆಕ್ಷನ್ 144ರಡಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ವಿಕ್ಟೋರಿಯಾ ಆಸ್ಪತ್ರೆ ಸಮೀಪ ಮಾತ್ರ ದೇಶದಲ್ಲಿ ಲಾಕ್‌ಡೌನ್ ಇದೆಯಾ ಎಂಬ ಗೊಂದಲ ಬರುವಂತೆ ಜನರು ಅಡ್ಡಾಡುತ್ತ ಇರುತ್ತಾರೆ.

ಆಸ್ಪತ್ರೆ ಎದುರೆ ಧೂಮಪಾನ, ಮಾಸ್ಕ್ ಇಲ್ಲದೆ ಜನರ ಓಡಾಟ

ಆಸ್ಪತ್ರೆ ಎದುರೆ ಧೂಮಪಾನ, ಮಾಸ್ಕ್ ಇಲ್ಲದೆ ಜನರ ಓಡಾಟ

ಇನ್ನು ಆಸ್ಪತ್ರೆ ಎದುರೇ ವ್ಯಕ್ತಿಯೊಬ್ಬರು ರಾಜಾರೋಷವಾಗಿ ಧೂಮಪಾನ ಮಾಡುತ್ತಾ ಕುಳಿತಿದ್ದು ಕೂಡ ಒನ್ಇಂಡಿಯಾ ತಂಡದ ಗಮನಕ್ಕೆ ಬಂದಿದೆ. ಇಡೀ ದೇಶಾದ್ಯಂತ ಅಗತ್ಯ ವಸ್ತುಗಳು ಸಿಗುತ್ತಿಲ್ಲ. ಆದರೆ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಅದ್ಹೇಗೆ ಧೂಮಪಾನಕ್ಕೆ ಅವಕಾಶವಿದೆ ಎಂಬುದನ್ನು ಸಂಬಂಧಿಸಿದ ಆರೋಗ್ಯ ಇಲಾಖೆ ಹೇಳಬೇಕು. ಒಟ್ಟಾರೆ ಕೊರೊನಾ ವೈರಸ್ ಬಗೆಗೆ ಅಸಡ್ಡೆಯೊ? ಅಥವಾ ತಿಳಿವಳಿಕೆ ಕೊರತೆಯೊ ವಿಕ್ಟೊರಿಯಾ ಆಸ್ಪತ್ರೆ ಆಡಳಿತ ಮಂಡಳಿ ತೀರಾ ಹಗುರವಾಗಿ ಕೋವಿಡ್-19 ರೋಗವನ್ನು ಪರಿಗಣಿಸಿದಂತಿದೆ. ಈಗಲಾದರೂ ಸಿಎಂ ಯಡಿಯೂರಪ್ಪ, ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ವಿಕ್ಟೋರಿಯಾ ಆಸ್ಪತ್ರೆ ಕರ್ಮಕಾಂಡದ ಬಗ್ಗೆ ಗಮನ ಹರಿಸಬೇಕು. ರೋಗ ತಡೆಯಲು ಸಿದ್ಧವಾಗಿರುವ ಆಸ್ಪತ್ರೆಯೆ ವೈರಸ್‌ ಹರಡಲು ಹಾಟ್‌ಸ್ಪಾಟ್‌ ಆಗುವ ಮೊದಲು ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ. ಸೂಕ್ತ ಸುರಕ್ಷತೆಯನ್ನು ಆಸ್ಪತ್ರೆಗೆ ಹಾಗೂ ಸುತ್ತಲಿನ ಜನರಿಗೆ ಒದಗಿಸಬೇಕಿದೆ.

English summary
Victoria Hospital is a hotspot for spreading the virus in Benagluru. The lack of any safety measures was revealed in the One India Investigation Report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more