ಬಾರ್ ನಲ್ಲಿ ಸಿಕ್ತು ಬೆಂಗಳೂರು ವಿವಿ ಉತ್ತರ ಪತ್ರಿಕೆ
ಬೆಂಗಳೂರು, ಡಿ. 5 : ಬೆಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ. ಪ್ರಾಧ್ಯಾಪಕಿಯರಿಗೆ ಲೈಂಗಿಕ ಕಿರುಕುಳ ಪ್ರಕರಣ ಹಸಿಯಾಗಿರುವಾಗಲೇ ಮಾರತ್ಹಳ್ಳಿಯ ಬಾರ್ನಲ್ಲಿ ವಿವಿಗೆ ಸೇರಿದ ಖಾಲಿ ಉತ್ತರ ಪತ್ರಿಕೆಗಳು ಸಿಕ್ಕಿವೆ.
ಮಾರತ್ಹಳ್ಳಿಯ ತ್ರಿವೇಣಿ ಬಾರ್ನಲ್ಲಿ ಪದವಿ ತರಗತಿಗಳಿಗೆ ನೀಡಬೇಕಿದ್ದ ಉತ್ತರ ಪತ್ರಿಕೆಗಳು ದೊರೆತಿವೆ. ಬಾರ್ಗೆ ಡಿ.2ರಂದು ಬಂದಿದ್ದ ವ್ಯಕ್ತಿಯೊಬ್ಬ ಒಂದಷ್ಟು ಉತ್ತರ ಪತ್ರಿಕೆಗಳನ್ನು ಅಲ್ಲಿಯೇ ಬಿಟ್ಟುಹೋಗಿದ್ದ ಎನ್ನುವುದು ಸಿಸಿ ಕ್ಯಾಮರಾ ಪರಿಶೀಲಿಸಿದಾಗ ತಿಳಿದು ಬಂದಿದೆ.[ಬೆಂಗಳೂರು ವಿವಿ ಪ್ರಾಧ್ಯಾಪಕಿಯರಿಗೆ ಲೈಂಗಿಕ ಕಿರುಕುಳ?]
ಉತ್ತರ ಪತ್ರಿಕೆ ಬಗ್ಗೆ ಮಾಹಿತಿ ಪಡೆದ ಬಾರ್ ಕ್ಯಾಶಿಯರ್ ಎಚ್ಎಎಲ್ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪರಿಶೀಲನೆ ನಡೆಸಿದಾಗ ಇವು ಮಾರತ್ಹಳ್ಳಿಯ ನ್ಯೂಹಾರಿಜನ್ ಕಾಲೇಜಿಗೆ ಸೇರಿದ್ದು ಎಂಬ ಮಾಹಿತಿ ತಿಳಿದು ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿ ಶೈಕ್ಷಣಿಕ ಸಮಿತಿ ರಚಿಸಿ ತನಿಖೆ ನಡೆಸಲಾಗುವುದು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮೌಲ್ಯಮಾಪನ ಕುಲಸಚಿವ ಪ್ರೊ.ಕೆ.ಎನ್.ನಿಂಗೇಗೌಡ ತಿಳಿಸಿದ್ದಾರೆ.[ಯಾರು ಬೇಕಾದರೂ ವಿವಿ ಆವರಣಕ್ಕೆ ನುಗ್ಗುವಂತಿಲ್ಲ]
ವ್ಯಕ್ತಿಯೊಬ್ಬ ಬಾರಿಗೆ ಬರುವ ಸಂದರ್ಭದಲ್ಲಿ ಉತ್ತರ ಪತ್ರಿಕೆಗಳನ್ನು ತಂದಿದ್ದ. ವಾಪಸ್ ಹೋಗುವಾಗ ಪತ್ರಿಕೆಗಳನ್ನು ಕುಳಿತ ಸ್ಥಳದಲ್ಲಿಯೇ ಬಿಟ್ಟು ಹೋಗಿದ್ದಾನೆ. ಇತ್ತ ಕಾಲೇಜಿನ ಆಡಳಿತ ಮಂಡಳಿ ಅಗತ್ಯಕ್ಕಿಂತ ಹೆಚ್ಚಿನ ಉತ್ತರ ಪತ್ರಿಕೆಗಳನ್ನು ಪಡೆದುಕೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಕಾಲೇಜಿಗೆ ಬೇಕಾಗಿದ್ದು 5 ಸಾವಿರ ಉತ್ತರ ಪತ್ರಿಕೆಗಳು ಮಾತ್ರ. ಆದರೆ, ವಿವಿಯಿಂದ ಪಡೆದಿರುವುದು 8 ಸಾವಿರ ಉತ್ತರ ಪತ್ರಿಕೆಗಳು. ಹೆಚ್ಚುವರಿ ಉತ್ತರ ಪತ್ರಿಕೆಗಳ ಬಗ್ಗೆ ಆಡಳಿತ ಮಂಡಳಿ ಸೂಕ್ತ ದಾಖಲೆಗಳನ್ನು ಒದಗಿಸಿಲ್ಲ ಎಂಬುದು ತಿಳಿದು ಬಂದಿದೆ.