ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಂಗಲೋಕದ ಹಿರಿಯಣ್ಣ: ಮಾಸ್ಟರ್ ಹಿರಣ್ಣಯ್ಯ

By ರಾಘವೇಂದ್ರ ಅಡಿಗ
|
Google Oneindia Kannada News

ಕರ್ನಾಟಕ ಕಂಡ ಅದ್ಭುತ ಕಲಾವಿದ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ. ಇದೇ ಶನಿವಾರ (ಫೆಬ್ರವರಿ 15) ಹಿರಣ್ಣಯ್ಯನವರ 80 ನೇ ಹುಟ್ಟಿದ ಹಬ್ಬ. ಮತ್ತು ಹಿರಣ್ಣಯ್ಯನವರ ಕಂಪನಿಯಿಂದ ಮೂಡಿಬಂದು ದಾಖಲೆ ಬರೆದ ನಾಟಕ "ಲಂಚಾವತಾರ" ಕ್ಕೆ 50 ವರ್ಷಗಳ ಸಂಭ್ರಮ. ಇದೆಲ್ಲದರ ಹಿನ್ನೆಲೆಯಲ್ಲಿ ರಂಗದ ಮೇಲಿನ ಮಾಸ್ಟರ್ ಹಿರ(ಅ)ಣ್ಣಯ್ಯನವರ ಜೀವನದ ಮೇಲೊಂದು ಹೊರಳು ನೋಟ ಇಲ್ಲಿದೆ.

ಕರ್ನಾಟಕ ಕಂಡ ಅದ್ಭುತ ಕಲಾವಿದ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ. ಇದೇ ಶನಿವಾರ (ಫೆ. 15) ಹಿರಣ್ಣಯ್ಯನವರ 80 ನೇ ಹುಟ್ಟಿದ ಹಬ್ಬ. ಮತ್ತು ಹಿರಣ್ಣಯ್ಯನವರ ಕಂಪನಿಯಿಂದ ಮೂಡಿಬಂದು ದಾಖಲೆ ಬರೆದ ನಾಟಕ "ಲಂಚಾವತಾರ" ಕ್ಕೆ 50 ವರ್ಷಗಳ ಸಂಭ್ರಮ. ಇದೆಲ್ಲದರ ಹಿನ್ನೆಲೆಯಲ್ಲಿ ರಂಗದ ಮೇಲಿನ ಮಾಸ್ಟರ್ ಹಿರ(ಅ)ಣ್ಣಯ್ಯನವರ ಜೀವನದಮೇಲೊಂದು ಹೊರಳು ನೋಟ ಇಲ್ಲಿದೆ.

ಹೌದು ಸ್ನೇಹಿತರೆ, ಹಿರಣ್ಣಯ್ಯನವರ ಬದುಕೇ ಒಂದು ಸಾಹಸಗಾಥೆ. ಇಂದಿನ ಯುವ ಕಲಾವಿದರಿಗೆ ಸ್ಪೂರ್ತಿಯಾಗಬಹುದಾದ ಸಾಕಷ್ಟು ಸಂಗತಿಗಳು, ಘಟನೆಗಳಿಂದ ಕೂಡಿದ ಅವರ ಬದುಕಿನ ಪುಟ ಪುಟಗಳೂ ರೋಚಕ! ಹಿರಣ್ಣಯ್ಯನವರೊಬ್ಬ ಹುಟ್ಟು ಕಲಾವಿದರಾಗಿದ್ದು ಅವರು ಬೆಳೆದು ಬಂದ ಪರಿಸರ, ನಡೆಸಿದ ಹೋರಾಟ, ಅವರಲ್ಲಿದ್ದ ನಿಷ್ಟೆ, ತಪಸ್ಸು, ಅವರು ಮಾಡಿದ ತ್ಯಾಗ ಅದರಿಂದ ಅವರು ಏರಿದಂತ ಎತ್ತರವಿದೆಯಲ್ಲ ಅದು ನಿಜಕ್ಕೂ ಅದ್ಭುತವಾದುದು. [ಮಾಸ್ಟರ್ ಹಿರಣ್ಣಯ್ಯ ಸಂದರ್ಶನ]

ನಾಡಿನ ಅದೆಷ್ಟೋ ರಾಜಕಾರಣಿಗಳು ಅಧಿಕಾರಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದ ಇವರ ನಾಟಕಗಳನ್ನು ನಿಲ್ಲಿಸುವ ಸಲುವಾಗಿ ನ್ಯಾಯಾಲಯದ ಮೆಟ್ಟಿಲನ್ನೂ ಹತ್ತಿ ಸೋತಿರುವುದಿದೆ ಎಂದರೆ ಆಶ್ಚರ್ಯವಾಗಬಹುದು. ಹಿರಣ್ಣಯ್ಯನವರಲ್ಲಿದ್ದ ಸಾಮಾಜಿಕ ಕಳಕಳಿ, ನಿರ್ದಾಕ್ಷಿಣ್ಯ ಮನೋಧರ್ಮದಿಂದ ಅಂದಿನಿಂದ ಇಂದಿನವರೆಗೂ ಅವರು ಜನಮಾನಸದಲ್ಲಿ ಚಿರಸ್ಮರಣೀಯರಾಗಿದ್ದಾರೆ. ಇವರಿಂದ ರಚನೆಯಾದ ನಾಟಕಗಳೊಂದೊಂದೂ ನೂತನ ದಾಖಲೆಯನ್ನೆ ನಿರ್ಮಾಣ ಮಾಡಿದವು.

Thespian Master Hirannaiah

"ಲಂಚಾವತಾರ", ನಡುಬೀದಿ ನಾರಾಯಣಾ", "ಕಪಿಮುಷ್ಟಿ", "ಭ್ರಷ್ಟಾಚಾರ", "ಕಲ್ಕ್ಯಾವತಾರ", "ಮುಖ್ಯಮಂತ್ರಿ", ಮುಂತಾದವೆಲ್ಲವೂ ಜನರನ್ನು ಅಯಸ್ಕಾಂತದಂತೆ ತನ್ನತ್ತ ಸೆಳೆದುದಲ್ಲದೆ ನಾಡಿನಾದ್ಯಂತದ ಜನರನ್ನು ತಲುಪಿ ಅವರೆಲ್ಲರ ಮನದಲ್ಲಿ ಎಂಎಂದೂ ಮಾಸದ ನೆನಪುಗಳನ್ನು ಉಳಿಸಿದವು. ಅದರಲ್ಲಿಯೂ "ಲಂಚಾವತಾರ" ನಾಟಕವೊಂದೇ ಹತ್ತು ಸಾವಿರಕ್ಕೂ ಹೆಚ್ಚಿನ ಪ್ರದರ್ಶನವನ್ನು ಕಂಡು ಇಂದಿಗೂ ಯಶಸ್ವಿಯಾಗಿ ಮುಂದುವರಿಯುತ್ತಿರುವುದು ಅವರ ನಾಟಕದ ಜನಪ್ರಿಯತೆಗೊಂದು ನಿದರ್ಶನ.

ಕಲ್ಚರ್ಡ್ ಕಮಿಡಿಯನ್ ಕೂಸು : ಇಂಥ ನಟ ರತ್ನಾಕರ ಮಾಸ್ಟರ್ ಹಿರಣ್ಣಯ್ಯನವರು ಜನಿಸಿದ್ದು 1934 ಫೆಬ್ರವರಿ 15 ರಂದು ಮೈಸೂರಿನಲ್ಲಿ. ಇವರ ತಂದೆ ಕಲ್ಚರ್ಡ್ ಕಮಿಡಿಯನ್ ಕೆ. ಹಿರಣ್ಣಯ್ಯ, ತಾಯಿ ಶಾರದಮ್ಮ. ಇಂಟರ್ ಮೀಡಿಯಟ್ ವ್ಯಾಸಂಗ ಮುಗಿಸಿದ ಬಳಿಕ ತಂದೆಯವರೊಡನೆ ಕೂಡಿಕೊಂಡು ಅವರಿಂದಲೇ ರಂಗ ಶಿಕ್ಷಣವನ್ನು ಪಡೆದರು.

ಹಿರಣ್ಣಯ್ಯನವರು ತಾವು ಬಾಳಿನುದ್ದಕ್ಕೂ ಸಾಕಶ್ಟು ನೋವುಂಡವರು. ತಾವು ನೊಂದರೂ ಜನರನ್ನು ನಗಿಸುತ್ತಲೇ ಬಂದ ಅವರ ಆತ್ಮಬಲವನ್ನು ಮೆಚ್ಚುವಂತಹುದು. ಅವರ ಬಾಳಿನಲ್ಲಿ ನಡೆದ ಅದೆಷ್ಟೋ ಕಹಿ ಪ್ರಸಂಗಗಳನ್ನು ಅವರು ಯಾರೊದನೆಯೂ ಹಂಚಿಕೊಂಡಿಲ್ಲವಾದರೂ ತಮ್ಮ ತಂದೆಯವರ ಸಾವಿನ ಸಂದರ್ಭವನ್ನು ಮಾತ್ರ ಅವರೇ ಒಂದೆಡೆ ಹೀಗೆ ಹೇಳಿಕೊಂಡಿದ್ದಾರೆ-

'ಮಡಿಕೇರಿಯಲ್ಲಿ ಕ್ಯಾಂಪ್‌. ನನ್ನ ತಂದೆಯವರು ಜೊತೆಗಿದ್ದರು. ಅವರ ಆರೋಗ್ಯ ತೀರ ಹದೆಗೆಟ್ಟಿತ್ತು. ಮನೆಯಲ್ಲಿ ಮಲಗಿದ್ದರು. ಮಡಿಕೇರಿಯಲ್ಲಿ ಮಕಮಲ್‌ ಟೋಪಿ ನಾಟಕವಾಡುತ್ತಿದ್ದೆ. ನಾಣಿ ಪಾತ್ರದಲ್ಲಿ ಜನರನ್ನು ನಗಿಸುತ್ತಿದ್ದೆ. ಇನ್ನೂ ಎರಡು ಸೀನ್‌ ಇತ್ತು. ಆವಾಗ ಮನೆಯಿಂದ ಹಿರಣ್ಣಯ್ಯನವರು ತೀರಿಕೊಂಡರು ಎಂಬ ಸುದ್ಧಿ ಬಂತು. ಏನ್‌ ಮಾಡಲಿ, ನನ್ನ ಪಾತ್ರ ರೆಡಿಯಾಗಿದೆ. ಸೀನ್‌ಗೆ ಹೋಗಬೇಕು. ಮನಸ್ಸಿನಲ್ಲಿ ನೋವು. ಏನೂ ತೋಚಲಿಲ್ಲ. ಎರಡು ನಿಮಿಷ ಕಣ್ಣುಮುಚ್ಚಿ ‘ಲಕ್ಷ್ಮೀ ನರಸಿಂಹಾ' ಎಂದು ದೇವರಿಗೆ ಕೈ ಮುಗಿದೆ. ಸ್ಟೇಜಿನ ಮೇಲೆ ಹೋಗಿ ಡೈಲಾಗ್‌ ಶುರು ಮಾಡಿದೆ. ಸಭೆಯಲ್ಲಿ ತುಂಬಿದ್ದ ಜನರೆಲ್ಲಾ ಎದ್ದು ‘ಹಿರಣ್ಣಯ್ಯನವರೇ ನೀವು ಹೋಗಿ' ಎಂದರು. ಮನೆಯ ಹತ್ತಿರ ಹೋದೆ. ನನ್ನ ತಂದೆಯ ಹೆಣ ಎತ್ತಲು ನನ್ನ ಕೈಯಲ್ಲಿ ಹಣವಿರಲಿಲ್ಲ. ಅಂದು ನೂರ ಐವತ್ತು ರೂ ಕಲೆಕ್ಷನ್‌ ಆಗಿತ್ತು. ನನ್ನ ಗ್ರಹಚಾರಕ್ಕೆ ಗಲ್ಲಾಪೆಟ್ಟಿಗೆ ಒಡೆದು ಅದನ್ನೂ ಯಾರೋ ಪುಣ್ಯಾತ್ಮ ಕದ್ದೊಯ್ದಿದ್ದ. ಕೈಯಲ್ಲಿ ಬಿಡಿಗಾಸಿಲ್ಲ.

ರಾತ್ರಿ ಹನ್ನೊಂದು ಗಂಟೆಗೆ ನಮ್ಮ ತಂದೆಯವರು ಸತ್ತಿದ್ದು. ನಾನು ಏನೂ ತೋಚದೆ ಕೂತೇ ಇದ್ದೆ. ನಮ್ಮ ಮನೆಯ ಎದುರಿಗೆ ಗಣೇಶ್‌ ಸಾವ್ಕಾರ್‌ ಎಂಬುವರಿದ್ದರು. ಅವರು ಬೆಳಿಗ್ಗೆ ಆರು ಗಂಟೆಗೆ ಏನ್‌ ಹಿರಣ್ಣಯ್ಯನವರೇ ಬಾಗಿಲು ಹಾರೆ ಹೊಡೆದಿದೆ ಎನ್ನುತ್ತಾ ಬಂದರು. ನಾನು, ಸಾರ್‌ ದುಡ್ದಿಲ್ಲ-ನಮ್ಮ ತಂದೆಯ ಹೆಣ ಎತ್ತೋಕೆ ಎಂದು ಅತ್ತೆ. ತಕ್ಷಣ ಹಿಂದು ಮುಂದು ನೋಡದೆ ಎಷ್ಟು ಬೇಕಾಗಿತ್ತು ಎಂದು ಕೇಳಿ ನೂರು ರೂ ತಂದುಕೊಟ್ಟರು. ನನ್ನ ತಂದೆಯ ಹೆಣ ಎತ್ತಲು ಏರ್ಪಾಡು ಮಾಡಿದರು. ಅಂದು ಮಡಿಕೇರಿಯ ಜನ ನನ್ನ ಬೆನ್ನೆಲುಬಾಗಿ ನಿಂತರು'' (ಈ ಘಟನೆ ನಡೆದದ್ದು 1953 ಮಾರ್ಚ್ 21 ರಂದು)

ಆದರೆ ಸ್ವಭಾವತಃ ಹೋರಾಟಗಾರರಾಗಿದ್ದ ಹಿರಣ್ಣಯ್ಯ ಎಂಥ ಸಮಯದಲ್ಲಿಯೂ ಎದೆಗುಂದದೆ ತಂದೆಯವರ ಸಾವಿನ ಬಳಿಕ ತಂದೆಯವರ ಕನಸಿನ ಕೂಸು ‘ಕೆ. ಹಿರಣ್ಣಯ್ಯ ಮಿತ್ರ ಮಂಡಳಿ' ಯನ್ನು ತಾವೇ ವಹಿಸಿಕೊಂಡು ನಟ, ನಿರ್ದೇಶಕ, ಮಾಲೀಕ, ನಾಟಕಕಾರರಾಗಿ ತಮ್ಮ ಇಡೀ ಜೀವನವನ್ನೆ ರಂಗಭೂಮಿಯ ಸೇವೆಗಾಗಿ, ಸಮಾಜದ ಒಳಿತಿಗಾಗಿ ಮುಡುಪಾಗಿಟ್ಟು ತಂದೆಗೆ ತಕ್ಕ ಮಗನೆಂಬ ಕೀರ್ತಿಗೆ ಭಾಜನರಾಗಿ ಬದುಕುತ್ತಿದ್ದಾರೆ.ಇಂದು ತಮ್ಮ ಈ ಎಂಭತ್ತರ ಪ್ರಾಯದಲ್ಲಿಯೂ ಅದೇ ಸಿಡಿಗುಂಡಿನ ಮಾತುಗಾರನಾಗಿ, ಸಾಮಾಜಿಕ ಕಳಕಳಿಯನ್ನು ಮೆರೆಯುತ್ತಿರುವ ಹಿರಣ್ಣಯ್ಯನವರ ಅದ್ಭುತ ವ್ಯಕ್ತಿತ್ವಕ್ಕೆ ಯಾರಾದರೂ ತಲೆದೂಗಲೇ ಬೇಕು.

ಸಾಮಾಜಿಕ ಕಳಕಳಿಯ ನಾಟಕ: ಇನ್ನು ಹಿರಣ್ಣಯ್ಯನವರು ಕನ್ನಡಿಗರೆಲ್ಲರಿಗೂ ಏಕಿಷ್ಟು ಹತ್ತಿರವಾಗುತ್ತಾರೆ. ಏಕಿಷ್ಟು ಪ್ರಿಯರಾಗುತ್ತಾರೆ ಎಂದು ನೋಡುವುದಾದರೆ ಇವರ ನಾಟಕದಲ್ಲಿ ಆಡುವ ಸಂಭಾಷಣೆಗಳಾಲ್ಲಿ ಸತ್ಯವಿರುತ್ತದೆ. ನಾಟಕವೆಂದರೆ ಅದಕ್ಕೊಂದು ಚೌಕಟ್ಟಿರುತ್ತದೆ, ಂತಹುದೇ ಸಂಭಾಷಣೆ, ಇದೇ ದೃಷ್ಯವೆಂಬುದು ನಿರ್ಧಾರವಾಗಿ ಬಿಟ್ಟಿರುತ್ತದೆ. ಆದರೆ ಹಿರಣ್ಣಯ್ಯನವರ ನಾಟಕಗಳಲ್ಲಿ ಹಾಗಿಲ್ಲ. ಅವರ ನಾಟಕದ ಸಂಭಾಷಣೆ ದಿನ ದಿನಕ್ಕೂ ಬದಲಾಗುತ್ತಿರುತ್ತದೆ! ಆಯಾ ಪ್ರದೇಶದಲ್ಲಿ, ಆಯಾ ಸಮಯಕ್ಕೆ ಸರಿಯಾದ ಸಂಭಾಷಣೆಯನ್ನು ಅವರ ನಾಟಕ ಅಳವಡಿಸಿಕೊಳ್ಳುತ್ತದೆ. ಇನ್ನು "ಲಂಚಾವತಾರ", "ಭ್ರಷ್ಟಾಚಾರ" ದಂತಹಾ ಸಾಮಾಜಿಕ ಕಳಕಳಿಯ ನಾಟಕಗಳನ್ನು ಮಾಡಿ ರಾಜಕಾರಣಿ, ಅಧಿಕಾರಿಗಳಿಗೆ ಮುಲಾಜಿಲ್ಲದೆ ಬೈಯ್ಯುವ ಅವರ ದಾಷ್ಟ್ಯ ಎಂಥವರಿಗೂ ಬೆರಗು ಹುಟ್ಟಿಸುವಂತಹುದು.

ನಟನಾ ಕಲಾಚತುರ : ಹಿರಣ್ಣಯ್ಯನವರಂಥ ನಟ ರತ್ನಾಕರರಿಗೆ ಅವರ ಸಾಧನೆ, ಪರಿಶ್ರಮಕ್ಕೆ ಮೆಚ್ಚುಗೆಯಾಗಿ ಅನೇಕ ಗೌರವ ಪುರಸ್ಕಾರಗಳು ದೊರೆತಿವೆ. 1962 ರಲ್ಲಿ ಅಂದಿನ ಮೈಸೂರು ಮಹಾರಜರಾಗಿದ್ದ ಜಯಚಾಮರಾಜ ಒಡೆಯರ್ ಸಮ್ಮುಖದಲ್ಲಿ 14 ನಾಟಕಗಳನ್ನಾಡಿ ಅವರಿಂದ ಮೈಸೂರು ದಸರಾ ದರ್ಬಾರಿನಲ್ಲಿ ನವರತ್ನ ಖಚಿತವಾದ ಗಂಡಭೇರುಂಡ ಪದಕ ಸಹಿತವಾದ ಬಂಗಾರದ ಸರ ಮತ್ತು "ನಟನಾ ಕಲಾಚತುರ" ಎಂಬ ಬಿರುದು ಪಡೆದರು.

Thespian Master Hirannaiah

1984 ರಲ್ಲಿ ಉತ್ತರ ಅಮೇರಿಕಾದಲ್ಲಿ ಜರುಗಿದ ‘ತ್ರಿವೇಣಿ ಕನ್ನಡ ಕಾನ್ಫರೆನ್ಸ್' ಅಧ್ಯಕ್ಷರಾಗಿದ್ದ ಹಿರಣ್ಣಯ್ಯನವರು ಅಲ್ಲಿನ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ನಾಟಕ ಹಾಗೂ ಉಪನ್ಯಾಸಗಳನ್ನು ನೀಡಿ ಅಲ್ಲಿನವರಿಂದ ಪ್ರಶಸ್ತಿ, ಪ್ರಶಂಸೆಗಳನ್ನು ಗಳಿಸಿದ್ದಾರೆ. ಅಲ್ಲದೆ ಆಸ್ಟ್ರೇಲಿಯಾ, ಸಿಂಗಾಪುರ್, ನ್ಯೂಜಿಲ್ಯಾಂಡ್, ಇಂಗ್ಲೆಂಡ್ ನಂತಹಾ ದೇಶಗಳನ್ನೆಲ್ಲಾ ಸುತ್ತಿ ಅಲ್ಲಿ ನಾಟಕ ಉಪನ್ಯಾಸಗಳಿಂದ ಅಲ್ಲಿನ ಜನತೆಯ ಮನಸೂರೆಗೊಂಡಿದ್ದಾರೆ.

‘ನತ ರತ್ನಾಕರ', ‘ಕಲಾ ಗಜಸಿಂಹ', ‘ಅಭಿನಯ ಸರ್ವಜ್ಞ', ಮುಂತಾದ ಬಿರುದುಗಳಿಗೆ ಭಾಜನರಾಗಿರುವ ಹಿರಣ್ಣಯ್ಯನವರಿಗೆ 1984 ರಲ್ಲಿ ಕರ್ನಾಟಕ ರಾಜ್ಯದ ರಾಜ್ಯ ಸರ್ಕಾರದ ಪ್ರಶಸ್ತಿ, 1988 ರಲ್ಲಿ ಕರ್ನಾಟಕ ನಾಟಕ ಅಕಾಡಮಿಯ ‘ರಂಗಭೂಮಿ ಪ್ರಶಸ್ತಿ'ಗಳು ಲಭಿಸಿವೆ. ಅಲ್ಲದೆ 1991 ರಲ್ಲಿ ಮಂಡ್ಯದ ‘ಶ್ರೀ ಶಂಕರಗೌಡ ಪ್ರತಿಷ್ಠಾನ ಪ್ರಶಸ್ತಿ', 1994 ರಲ್ಲಿ ರಾಜ್ಯ ಸರ್ಕಾರದ ಅತ್ಯುನ್ನತ ಪ್ರಶಸ್ತಿಯಾದ ‘ಗುಬ್ಬಿ ವೀರಣ್ಣ ಪ್ರಶಸ್ತಿ'ಯನ್ನು ತಮ್ಮದಾಗಿಸಿಕೊಂಡ ಕೀರ್ತಿ ಇವರದು. 1999 ರಲ್ಲಿ ‘ನವರತ್ನರಾಮ್ ಪ್ರಶಸ್ತಿ', 2002 ರಲ್ಲಿ ‘ವಿದ್ಯಾರತ್ನ ಪ್ರಶಸ್ತಿ'ಯೂ ಇವರ ಪಾಲಗಿರುವುದು ಇವರ ಅಗಾಧ ಕಲಾ ಪ್ರೌಢಿಮೆಗೆ ನಿದರ್ಶನ.

ಇದೆಲ್ಲದರ ಜತೆಯಲ್ಲಿ ಇಲ್ಲಿ ಪ್ರಸ್ತಾಪಿಸಲೇ ಬೇಕಾದ ಹಿರಣ್ಣಯ್ಯನವರ ವ್ಯಕ್ತಿತ್ವದ ಇನ್ನೊಂದು ಮುಖವೆಂದರೆ ಅವರ ದಾನಶೀಲತೆ. 1962 ರಲ್ಲಿ ನಡೆದ ಭಾರತ- ಚೀನಾ ಯುದ್ಧದ ಸಮಯದಲ್ಲಿ ತಮ್ಮ ತೂಕದಷ್ಟು ಬೆಳ್ಳಿಯನ್ನು ಪ್ರಧಾನಿ ನೆಹರೂ ರವರ ರಕ್ಷಣಾ ನಿಧಿಗೆ ನೀಡಿ ತಮ್ಮ ರಾಷ್ಟ್ರ ಪ್ರೇಮವನ್ನು ಮೆರೆದವರು ಹಿರಣ್ಣಯ್ಯ. ಅಲ್ಲದೆ ರೋಟರಿ, ಲಯನ್ಸ್ ಕ್ಲಬ್ ಗಳಂತಹಾ ಸಂಘಟನೆಗಳಿಗೆ, ಶಾಲಾ ಕಟ್ಟಡಗಳಿಗೆ, ಪೋಲೀಸ್ ಕ್ಷೇಮ ನಿಧಿ, ಮುಖ್ಯಮಂತ್ರಿಗಳ ಬರ ಪರಿಹಾರ ನಿಧಿ ಸಹಾಯಾರ್ಥದ ಪ್ರದರ್ಶನಗಳ ಮುಖೇನ ಅಗಣಿತ ಧನ ಸಂಗ್ರಹಕ್ಕೆ ಕಾರಣರಾದವರು ಮಾಸ್ಟರ್ ಹಿರಣ್ಣಯ್ಯ

ಖ್ಯಾತ ಅಂಕಣಕಾರ ಮಣಿಕಾಂತ್ ರವರು ಹೇಳುವಂತೆ- 'ಸರ್‌, ವಿಶ್ವ ಇರುವಷ್ಟೂ ದಿನ ರಂಗಭೂಮಿ ಇರುತ್ತದೆ. ರಂಗಭೂಮಿ ಇರುವಷ್ಟೂ ದಿನ ನೀವು ನಮ್ಮೊಂದಿಗಿರುತ್ತೀರಿ- ಎಚ್ಚರದ ದನಿಯಾಗಿ! ಸಾಕಲ್ಲವೇ? ... ಮುಂದೆ, ನೂರು ವರ್ಷದ ಸಂಭ್ರಮ ನಿಮ್ಮದಾಗಲಿ... ಮತ್ತೆ ಆಗ ನಾಲ್ಕು ಮಾತು ಬರೆವ ಸರದಿ ನನ್ನದಾಗಲಿ.'

English summary
Birthday wishes to Thespian Master Hirannaiah: Master Hirannaiah, producer, director, hero and above all, the improviser of the play, has a simple reason for its longevity. Master turns 80 today(Feb.15). Here is the article to wish him Happy Birthday by his fan Raghavendra Adiga
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X