ವಿಧಾನಸೌಧದಲ್ಲಿಯೇ ಮಳೆಗಾಲದ ಅಧಿವೇಶನ: ಮಾಧುಸ್ವಾಮಿ
ಬೆಂಗಳೂರು, ಆ. 24: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ವಿಧಾನ ಮಂಡಳ ಅಧಿವೇಶನ ಎಲ್ಲಿ ನಡೆಸಬೇಕು ಎಂಬ ಗೊಂದಲಕ್ಕೆ ತೆರೆಬಿದ್ದಿದೆ. ವಿಧಾನಸೌಧದಲ್ಲೇ ಮಳೆಗಾಲದ ಅಧಿವೇಶನ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿಕೆ ಕೊಟ್ಟಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ವಿಧಾನಸಭೆ ಕಾರ್ಯದರ್ಶಿ ಕೆ.ಎಂ. ವಿಶಾಲಕ್ಷಿ ಸದನವನ್ನು ವೀಕ್ಷಣೆ ಮಾಡಿದ್ದಾರೆ. ಜೊತೆಗೆ ವಿಧಾನಸೌಧದಲ್ಲೇ ಸದನ ನಡೆಸಲು ಸ್ಪೀಕರ್ ತೀರ್ಮಾನ ಮಾಡಿದ್ದಾರೆ ಎಂದರು.
ಸ್ಪೀಕರ್ ಕಾಗೇರಿ ಅವರ ತೀರ್ಮಾನಕ್ಕೆ ನಾವು ಸಮ್ಮತಿ ನೀಡಿದ್ದೇವೆ. ವಿಧಾನಸಭೆ ಕಲಾಪ ನಡೆಯುವ ಸಭಾಂಗಣದಲ್ಲಿ ಸದಸ್ಯರು ಕೂಡುವ ಎರಡು ಆಸನಗಳ ಮಧ್ಯೆ ಗಾಜಿನ ಪರದೆ ಹಾಕಲಾಗುತ್ತದೆ. ಈ ಬಾರಿ ಅಧಿವೇಶನಕ್ಕೆ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದೆ. ಅಧಿವೇಶನ ಪ್ರವೇಶಕ್ಕೆ ಸಾರ್ವಜನಿಕರಿಗೆ ಪಾಸ್ ನೀಡುವುದಿಲ್ಲ. ಪತ್ರಕರ್ತರಿಗೂ ಎರಡು ಗ್ಯಾಲರಿ ಮಾಡಲು ತೀರ್ಮಾನ ಮಾಡಲಾಗಿದೆ.
ಈ ಬಾರಿ ವಿಧಾನಸಭೆ ಅಧಿವೇಶನ ವಿಧಾನಸೌಧದಿಂದ ಹೊರಗೆ?
ಎಲ್ಲ ಸದಸ್ಯರಿಗೆ ಫೇಸ್ ಶೀಲ್ಡ್, ಮಾಸ್ಕ್ ಕೊಡಲಾಗುವುದು. ಉನ್ನತ ಅಧಿಕಾರಿಗಳಿಗೆ, ಇಲಾಖೆಗಳ ಪ್ರಧಾನ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳಿಗೆ ಮಾತ್ರ ಸದನಕ್ಕೆ ಪ್ರವೇಶ ಕೊಡಲಾಗುವುದು. ಒಂದು ಇಲಾಖೆಗೆ ಒಬ್ಬ ಅಧಿಕಾರಿ ಮಾತ್ರ ಬರಬೇಕು. ಸಚಿವರ ಜೊತೆ ಅವರ ಆಪ್ತ ಕಾರ್ಯದರ್ಶಿಗೆ ಮಾತ್ರ ಅವಕಾಶ. 70 ವರ್ಷ ಮೇಲ್ಪಟ್ಟ ಸದಸ್ಯರಿಗೆ ವಿನಾಯಿತಿ ಕೊಡುವ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.