ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಖ್ಯಾತ ಸಮಾಜಶಾಸ್ತ್ರಜ್ಞ ಡಾ.ಎಚ್ ಎಂ ಮರುಳಸಿದ್ದಯ್ಯ ವಿಧಿವಶ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 27 : ಹೆಸರಾಂತ ಸಮಾಜಶಾಸ್ತ್ರಜ್ಞ ಮತ್ತು ಕನ್ನಡಪರ ಚಿಂತಕ ಡಾ.ಎಚ್ ಎಂ ಮರುಳಸಿದ್ದಯ್ಯ (87) ಅವರು ಶನಿವಾರ ಇಲ್ಲಿನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ಅವರು ಪತ್ನಿ, ಇಬ್ಬರು ಪುತ್ರರು ಮತ್ತು ಅಪಾರ ಶಿಷ್ಯವೃಂದವನ್ನು ಅಗಲಿದ್ದಾರೆ.

ವಯೋಸಹಜ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಇತ್ತೀಚೆಗೆ ಉಸಿರಾಟದ ತೊಂದರೆಯನ್ನು ಅನುಭವಿಸುತ್ತಿದ್ದಲ್ಲದೆ, ನ್ಯುಮೋನಿಯಾದಿಂದಲೂ ಬಳಲುತ್ತಿದ್ದರು. ಕರ್ನಾಟಕ ವೃತ್ತಿಶೀಲ ಸಮಾಜ ಕಾರ್ಯಕರ್ತರ ಸಂಘದಿಂದ ಮಹನೀಯರಿಗೆ 'ಸಮಾಜಕಾರ್ಯ ರತ್ನ' ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

1931ರ ಜುಲೈ 29ರಂದು ಕೂಡ್ಲಿಗಿ ತಾಲೂಕಿನ ಹಿರೇಕುಂಬಳಗುಂಟೆಯಲ್ಲಿ ಜನಿಸಿದ ಮರುಳಸಿದ್ದಯ್ಯನವರು, ನಂತರ ಮದರಾಸು ವಿವಿ, ಧಾರವಾಡದ ಕರ್ನಾಟಕ ವಿವಿ ಮತ್ತು ಬೆಂಗಳೂರು ವಿ.ವಿ.ಗಳಲ್ಲಿ ದಶಕಗಳ ಕಾಲ ಸಮಾಜಶಾಸ್ತ್ರ ಮತ್ತು ಸಮಾಜಕಾರ್ಯ ಶಾಸ್ತ್ರಗಳನ್ನು ಬೋಧಿಸಿದ್ದರು.

Social science teacher Prof HM Marulasiddaiah is no more

ಇವೆರಡೂ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮರುಳಸಿದ್ದಯ್ಯನವರು 30ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ, ದೇಶದ ಅಗ್ರಗಣ್ಯ ಸಮಾಜಶಾಸ್ತ್ರಜ್ಞರಲ್ಲಿ ಒಬ್ಬರೆನಿಸಿಕೊಂಡಿದ್ದರು. ಸಮಾಜಕಾರ್ಯ ವಿಶ್ವಕೋಶ'ದ ಸಂಪಾದನೆ, ಕೆದರಿದ ಕೆಂಡ' ಕಾದಂಬರಿ, ಓಲ್ಡ್ ಪೀಪಲ್ ಆಫ್ ಮಾಗುಂಟೆ' ಮುಂತಾದವು ಇವರ ಗಮನಾರ್ಹ ಕೃತಿಗಳಲ್ಲಿ ಸೇರಿವೆ. ಇದರ ಜತೆಗೆ, ಸಮಾಜಶಾಸ್ತ್ರಕ್ಕೆ ಸಂಬಂಧಿಸಿದ ಹಲವು ಆಚಾರ್ಯ ಕೃತಿಗಳನ್ನು ಕೂಡ ಮರುಳಸಿದ್ದಯ್ಯನವರು ಕನ್ನಡಕ್ಕೆ ಅನುವಾದಿಸಿದ್ದರು.

ಕನ್ನಡಪರ ಕೆಲಸಗಳಲ್ಲೂ ಸಕ್ರಿಯರಾಗಿದ್ದ ಇವರು ಸಾಹಿತಿಗಳ ಮತ್ತು ಕಲಾವಿದರ ಬಳಗದ ಪ್ರಧಾನ ಸಂಚಾಲಕರಾಗಿದ್ದರು. ಅಲ್ಲದೆ ಕನ್ನಡ ಶಕ್ತಿ ಕೇಂದ್ರ, ಶರಣ ಸಾಹಿತ್ಯ ಪರಿಷತ್, ಕನ್ನಡ ಗೆಳೆಯರ ಬಳಗ ಮುಂತಾದ ಸಂಘಟನೆಗಳಲ್ಲಿ ಅವರು ಉನ್ನತ ಮಟ್ಟದ ಪದಾಧಿಕಾರಿಯಾಗಿ ದುಡಿದಿದ್ದರು.

ಬೆಂಗಳೂರಿನ ಹೊರವಲಯದಲ್ಲಿ ಬುಡಬುಡಿಕೆ ಜನಾಂಗದವರ ಪುನರ್ವಸತಿಗಾಗಿ ಹೋರಾಡಿ, ಅದರಲ್ಲಿ ಗೆದ್ದಿದ್ದು ಮರುಳಸಿದ್ದಯ್ಯನವರ ಹೆಗ್ಗಳಿಕೆಯಾಗಿದೆ. ಅಲ್ಲದೆ, ತಮ್ಮ ಹುಟ್ಟೂರಿನ ಮಕ್ಕಳ ಶಿಕ್ಷಣಕ್ಕೆ ಅವರು ಅಪಾರ ಪ್ರಮಾಣದ ದೇಣಿಗೆಯನ್ನು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಮರುಳಸಿದ್ದಯ್ಯನವರ ಅಂತ್ಯಕ್ರಿಯೆಯು ನಾಳೆ (ಅ. 28, ಭಾನುವಾರ) ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಚಾಮರಾಜಪೇಟೆಯ ವೀರಶೈವರ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಅವರ ಕುಟುಂಬ ವರ್ಗ ತಿಳಿಸಿದೆ.

English summary
Prof HM Marulasiddaiah (87), Retired Professor of Social Work, Bangalore University, is no more. The well known social science teacher from Kudligi also taught in Karnataka University, Madras University. He has written more than 30 books on social work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X