ಬೆಂಗಳೂರು: 6 ಕೇಂದ್ರಗಳಲ್ಲಿ ಕೊರೊನಾ ಲಸಿಕೆ ವಿತರಣಾ ಅಭಿಯಾನಕ್ಕೆ ಚಾಲನೆ
ಬೆಂಗಳೂರು,ಜನವರಿ 14: ಬೆಂಗಳೂರಿನ ಆರು ಕೇಂದ್ರಗಳಲ್ಲಿ ಕೊರೊನಾ ಲಸಿಕೆ ವಿತರಣಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
ಈ ಲಸಿಕೆಗಳನ್ನು ದಾಸಪ್ಪ ಆಸ್ಪತ್ರೆಯ ದಾಸ್ತಾನು ಕೇಂದ್ರದಲ್ಲಿ ಸಂಗ್ರಹಿಸಿಡಲಾಗಿದೆ. ಆನಂದರಾವ್ ವೃತ್ತದ ಆರೋಗ್ಯ ಇಲಾಖೆ ದಾಸ್ತಾನು ಕೇಂದ್ರದಲ್ಲಿ ಸಂಗ್ರಹಿಸಿಟ್ಟಿದ್ದ ಲಸಿಕೆಗಳನ್ನು ದಾಸಪ್ಪ ಆಸ್ಪತ್ರೆಯ ದಾಸ್ತಾನು ಕೇಂದ್ರಕ್ಕೆ ಬುಧವಾರ ರವಾನಿಸಲಾಯಿತು. ಆಸ್ಪತ್ರೆಯ ಐಸ್ ಲೈನ್ ರೆಫ್ರಿಜರೇಟರ್‌ಗಳಲ್ಲಿ ಅವುಗಳನ್ನು ಶೇಖರಿಸಿಡಲಾಯಿತು.
ಕೊವಿಡ್ ಲಸಿಕೆ ಅಭಿಯಾನ: ಮೊದಲ ದಿನ 3 ಲಕ್ಷ ಕಾರ್ಯಕರ್ತರಿಗೆ ಲಸಿಕೆ
ಬಿಬಿಎಂಪಿ ವ್ಯಾಪ್ತಿಯ ಆರೋಗ್ಯ ಕಾರ್ಯಕರ್ತರಿಗೆ ನೀಡುವ ಸಲುವಾಗಿ ಸರ್ಕಾರವು ಬಿಬಿಎಂಪಿಗೆ ಮೊದಲ ಹಂತದಲ್ಲಿ 1,05,000 ಕೋವಿಶೀಲ್ಡ್ ಲಸಿಕೆಗಳನ್ನು ಹಂಚಿಕೆ ಮಾಡಿದ್ದು. ಪಾಲಿಕೆ ಆಯುಕ್ತ ಎನ್.ಮಂಜುನಾಥ್ ಪ್ರಸಾದ್, ವಿಶೇಷ ಆಯುಕ್ತ (ಆರೋಗ್ಯ) ರಾಜೇಂದ್ರ ಚೋಳನ್ ಹಾಗೂ ಮುಖ್ಯ ಆರೋಗ್ಯಾಧಿಕಾರಿ (ಸಾರ್ವಜನಿಕ ಆರೋಗ್ಯ) ಡಾ. ವಿಜಯೇಂದ್ರ ಅವರು ಲಸಿಕೆಗಳನ್ನು ಪರಿಶೀಲಿಸಿದರು.
ಪ್ರತಿಯೊಂದು ಕೇಂದ್ರದಲ್ಲಿ ಯಾರಿಗೆ ಲಸಿಕೆ ನೀಡಲಾಗುತ್ತದೆ ಎಂಬುದನ್ನು ಮೊದಲೇ ಪಟ್ಟಿಮಾಡಲಾಗಿದೆ. ಲಸಿಕಾ ಕೇಂದ್ರದಲ್ಲಿ ಕಾಯುವ ಕೊಠಡಿ, ಲಸಿಕೆ ನೀಡುವ ಕೊಠಡಿ ಹಾಗೂ ಪರಿವೀಕ್ಷಣಾ ಕೊಠಡಿಗಳಿರುತ್ತವೆ. ಅಲ್ಲಿಗೆ ವೈ-ಫೈ, ಸೌಲಭ್ಯವನ್ನೂ ಕಲ್ಪಿಸಿದ್ದೇವೆ. ಲಸಿಕೆ ನೀಡುವ ಸಿಬ್ಬಂದಿ ಹಾಗೂ ಸೆಕ್ಟರ್ ಅಧಿಕಾರಿಗಳ ನಿಯೋಜನೆ ಮಾಡಲಾಗಿದೆ ಎಂದರು.

ಎರಡು ರೆಫ್ರಿಜರೇಟರ್‌ಗಳಲ್ಲಿ ಕೊವಿಶೀಲ್ಡ್ ಲಸಿಕೆ ಸಂಗ್ರಹ
ಅಲ್ಲದೆ ಕೊವಿಶೀಲ್ಡ್ ಲಸಿಕೆಯನ್ನು ಎರಡು ರೆಫ್ರಿಜರೇಟರ್‌ಗಳಲ್ಲಿ ಸಂಗ್ರಹಿಸಿಡಲಾಗಿದೆ. ಪಾಲಿಕೆ ವ್ಯಾಪ್ತಿಯ 148 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಕೋಲ್ಡ್ ಚೈನ್ ಪಾಯಿಂಟ್‌ಗಳನ್ನಾಗಿ ಗುರುತಿಸಲಾಗಿದೆ. ಲಸಿಕೆ ನೀಡುವ ಮುನ್ನಾದಿನ ಅಗತ್ಯವಿರುವಷ್ಟು ಸಂಖ್ಯೆಯ ಲಸಿಕೆಗಳನ್ನು ವಾಹನದ ಮೂಲಕ ಕೋಲ್ಡ್ ಚೈನ್ ಪಾಯಿಂಟ್‌ಗಳಿಗೆ ಕಳುಹಿಸಲಾಗುತ್ತದೆ.

ಮೊದಲ ಸುತ್ತಿನಲ್ಲಿ 1.70 ಲಕ್ಷ ಫಲಾನುಭವಿಗಳು
ಈ ವೇಳೆ ಮಾತನಾಡಿದ ಅವರು, ‘ಮೊದಲನೇ ಕಂತಿನಲ್ಲಿ ಲಸಿಕೆ ನೀಡಲು 1.70 ಲಕ್ಷ ಫಲಾನುಭವಿಗಳನ್ನು ಗುರುತಿಸಿದ್ದೇವೆ. ಸರ್ಕಾರ ಸದ್ಯಕ್ಕೆ 1.05 ಲಕ್ಷ ಕೋವಿಶೀಲ್ಡ್ ಲಸಿಕೆಗಳನ್ನು ಮಾತ್ರ ನಮಗೆ ಹಸ್ತಾಂತರಿಸಿದೆ. ಉಳಿದ ಲಸಿಕೆಗಳನ್ನು ಮುಂದಿನ ಕಂತಿನಲ್ಲಿ ನೀಡಲಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇದೇ 16ರಂದು ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತದೆ. ಮೊದಲ ಹಂತದಲ್ಲಿ 760 ಕಡೆ ಲಸಿಕಾ ಕೇಂದ್ರಗಳನ್ನು ಗುರುತಿಸಿದ್ದೇವೆ.

ಎಲ್ಲೆಲ್ಲಿ ಲಸಿಕೆ ಲಭ್ಯ
ಅವುಗಳಲ್ಲಿ ವಿಕ್ಟೋರಿಯಾ ಆಸ್ಪತ್ರೆ, ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆ, ಸಿ.ವಿ.ರಾಮನ್ ನಗರದ ಸರ್ಕಾರಿ ಆಸ್ಪತ್ರೆ, ಜಯನಗರದ ಸರ್ಕಾರಿ ಆಸ್ಪತ್ರೆ, ಸೆಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಆಸ್ಪತ್ರೆ ಹಾಗೂ ಮಲ್ಲಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿ ಒಟ್ಟು ಆರು ಕೇಂದ್ರಗಳಲ್ಲಿ ಮಾತ್ರ ಇದೇ 16ರಿಂದ ಲಸಿಕೆ ನೀಡಲಾಗುತ್ತದೆ. ಉಳಿದ ಕೇಂದ್ರದಲ್ಲಿ ಕೇಂದ್ರ ಸರ್ಕಾರದ ಸೂಚನೆ ಬಂದ ಬಳಿಕ ಲಸಿಕೆ ನೀಡಲು ಶುರು ಮಾಡುತ್ತೇವೆ ಎಂದರು.

ಲಸಿಕೆ ವಿತರಿಸುವ ಅವಧಿ
‘ಪ್ರತಿಯೊಂದು ಲಸಿಕಾ ಕೇಂದ್ರದಲ್ಲಿ ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಲಸಿಕೆ ನೀಡಲಾಗುತ್ತದೆ. ಪ್ರತಿ ಕೇಂದ್ರದಲ್ಲಿಯೂ ನಿತ್ಯ ತಲಾ 100 ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತದೆ. ಲಸಿಕೆ ಪಡೆಯಲು ಗೊತ್ತುಪಡಿಸಲಾದ ಆರೋಗ್ಯ ಕಾರ್ಯಕರ್ತರಿಗೆ ದೂರವಾಣಿ ಕರೆ ಮಾಡಿ ಹಾಗೂ ಸಂದೇಶ ಕಳುಹಿಸುವ ಮೂಲಕ ಮಾಹಿತಿ ನೀಡಲಾಗುತ್ತಿದೆ.
ಆರೋಗ್ಯ ಕಾರ್ಯಕರ್ತರು ಕಾರ್ಯ ನಿರ್ವಹಿಸುವ ಆಸ್ಪತ್ರೆಯ ಮುಖ್ಯಸ್ಥರಿಗೂ ಈ ಬಗ್ಗೆ ಮಾಹಿತಿ ತಿಳಿಸಲಾಗುತ್ತದೆ. ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವ ಕಾರ್ಯಕ್ರಮ ಮೂರು ದಿನಗಳಲ್ಲಿ ಮುಗಿಯಲಿದೆ.