ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೋದರಿ ನಿವೇದಿತಾ ಜಯಂತಿ: ಜೀವನ ಮತ್ತು ಸಂದೇಶದ ಒಂದು ಮೆಲುಕು

By ಅನುಷಾ ದೇಶ್ ಮುಖ್, ಸೋದರಿ ನಿವೇದಿತಾ ಪ್ರತಿಷ್ಠಾನದ ಕಾರ್ಯಕರ್ತೆ
|
Google Oneindia Kannada News

ಬೆಂಗಳೂರು, ಅಕ್ಟೋಬರ್ 27: ಸೋದರಿ ನಿವೇದಿತಾ ಅವರ ಬದುಕು, ಬರಹ, ಸೇವೆಯ ಕುರಿತು ಕವಿ ಸುಬ್ರಹ್ಮಣ್ಯ ಭಾರತಿ ರಚಿಸಿದ ಕವನದ ಸಾಲುಗಳಿವು.

ಹತಾಶರ, ಅಸಾಹಯಕರ, ಹೇ, ನೆರವಿನ ದೇವತೆಯೆ
ಹೇ, ಪ್ರಸನ್ನತೆಯ ಸಾಕಾರ
ಹೇ, ಸತ್ಯಸೂರ್ಯನ ದಿವ್ಯ ಸ್ಫೂರ್ತಿಕಿರಣವೆ
ತಾಯೆ, ನಿನಗೆ ನನ್ನ ಅನಂತಾನಂತ ಪ್ರಣಾಮಗಳು!

ಪಶ್ಚಿಮದಿಂದ ಬಂದ ಮಾರ್ಗರೇಟ್, ವಿವೇಕಾನಂದರಿಂದ ಭಾರತದ ಸೇವೆಗೆ ನಿವೇದನೆಗೊಂಡ ಶ್ರೇಷ್ಠ ಪುಷ್ಪವಾಗಿ, ಭಾರತದ ಹೆಮ್ಮೆಯ ಕುವರಿಯಾಗಿ, ಎಲ್ಲರ ಪ್ರೀತಿಯ, ವಾತ್ಸಲ್ಯದ ಸೋದರಿ' ನಿವೇದಿತೆಯಾದಳು. ಅಷ್ಟೇ ಅಲ್ಲ, ಇಲ್ಲಿನ ಜನರ ಹೃದಯ ಸಿಂಹಾಸನಾಧೀಶ್ವರಿಯಾಗಿ ಮನ್ನಣೆ ಗಳಿಸಿದ್ದ ಪರಿ ನಿಜಕ್ಕೂ ಪ್ರೇರಣಾದಾಯಿ.

ಕೊನೆ ಉಸಿರಿನವರೆಗೂ ಆಕೆ ಭಾರತೀಯರ ಸೇವೆಯಲ್ಲೇ ಬದುಕು ಸವೆಸಿದಳು. ಇಲ್ಲಿನ ಎಲ್ಲ ಕ್ಷೇತ್ರಗಳಲ್ಲೂ ರಾಷ್ಟ್ರೀಯತೆಯ ಚಿಂತನೆ ವ್ಯಾಪಿಸುವಂತೆ ಮಾಡಿದಳು. ಕಲೆ, ರಾಜಕೀಯ, ವಿಜ್ಞಾನ, ಶಿಕ್ಷಣ ಹೀಗೆ ವಿಭಿನ್ನ ಆಯಾಮಗಳಲ್ಲಿ ಕೆಲಸ ಮಾಡಿದಳು. ದಾಸ್ಯದಲ್ಲಿ ಸಿಲುಕಿ ತೊಳಲಾಡುತ್ತಿರುವವರಿಗೆ ಸ್ವಾಭಿಮಾನದ ಮದ್ದೆರೆದವಳು ಸೋದರಿ ನಿವೇದಿತಾ.

Sister Nivedita Birth Anniversary On October 28

ಶಿಕ್ಷಣ ಬಗ್ಗೆ ನಿಲುವು: ಶಿಕ್ಷಣ ಸದಾ ರಾಷ್ಟ್ರಪ್ರಜ್ಞೆಯನ್ನು ಆಧರಿಸಿರಬೇಕು. ಮಕ್ಕಳಲ್ಲಿ ರಾಷ್ಟ್ರಪ್ರಜ್ಞೆ ಜಾಗೃತಗೊಳಿಬೇಕು. ಅಲ್ಲದೆ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಬೆಳಕು ಚೆಲ್ಲಬೇಕು. ಸನಾತನ ಹಿಂದೂಧರ್ಮದ ಶಿಕ್ಷಣದಲ್ಲಿ ಅಡಕವಾಗಿದ್ದ ಮನಸ್ಸಿನ ತರಬೇತಿ ಹಾಗೂ ಏಕಾಗ್ರತೆಯನ್ನು ವೃದ್ಧಿಸಿಕೊಳ್ಳುವ ಕಲಿಕಾ ಪದ್ಧತಿಯ ಬಗ್ಗೆ ಅರಿತಿದ್ದ ನಿವೇದಿತಾ ಆ ಕಲಿಕೆಯೊಂದಿಗೆ ರಾಷ್ಟ್ರೀಯತೆಯ ಪ್ರವಾಹ ಹರಿಯುವಂತೆ ಮಾಡಲು ಶ್ರಮಿಸಿದಳು.

1904 ರಲ್ಲಿ ಪಟ್ನಾದ ಹಿಂದೂ ಬಾಯ್ಸ್ ಅಸೋಸಿಯೇಷನ್' ಆಯೋಜಿಸಿದ್ದ ಸಭೆಯೊಂದರಲ್ಲಿ ವಿದ್ಯಾರ್ಥಿಗಳ ಕರ್ತವ್ಯ ಕುರಿತು ಮಾತನಾಡುತ್ತ, ಈ ದೇಶದ ಒಳಿತೇ ನಿಮ್ಮ ನಿಜವಾದ ಗುರಿಯಾಗಿರಬೇಕು. ಇಡಿಯ ದೇಶವೇ ನಿಮ್ಮದು ಎಂದು ತಿಳಿಯಿರಿ ಮತ್ತು ನಿಮ್ಮ ದೇಶಕ್ಕೆ ಬೇಕಿರುವುದು ಕೆಲಸ! ಜ್ಞಾನ, ಶಕ್ತಿ, ಆನಂದ ಮತ್ತು ಸಮೃದ್ಧಿಗಾಗಿ ಪರಿತಪಿಸಿ. ಇವೇ ನಿಮ್ಮ ಜೀವನದ ಗುರಿಯಾಗಲಿ. ಯುದ್ಧಕ್ಕಾಗಿ ಕರೆ ಬಂದಾಗ ಎಂದೂ ನಿದ್ರಿಸದಿರಿ!' ಎನ್ನುವ ಮೊನಚಾದ ಮಾತುಗಳಿಂದ ಯುವಕರನ್ನು ಜಾಡ್ಯದಿಂದ ಹೊರತಂದಳು.

ಆಕ್ರಮಕ 'ಹಿಂದೂಧರ್ಮ' ಎನ್ನುವ ಪುಸ್ತಕದಲ್ಲಿ ಕಲೆಯ ಕುರಿತು ತನ್ನ ನಿಲುವನ್ನು ಈ ರೀತಿ ಪ್ರಕಟಿಸಿದ್ದಾಳೆ ಸೋದರಿ. ಕಲೆ ಮರುಹುಟ್ಟು ಪಡೆಯಬೇಕು.

ಜನರನ್ನು ಕೂಡಿಕೊಳ್ಳಲು ಇರುವ ಪ್ರಮುಖವಾದ ದನಿ ಕಲೆಯೇ. ಕಲೆ ಎಲ್ಲ ಜನರ ನಡುವೆ ಸಂಚರಿಸುತ್ತದೆ. ಕಲೆಯಲ್ಲಿ ಭಾರತೀಯತೆ ತುಳುಕುತ್ತಿರಬೇಕು. ಮದ್ರಾಸಿನ ಮರಳುದಂಡೆ ಮೇಲೆ ಕೆಲಸ ಮುಗಿಸಿ ಕೈ ಬೀಸಿ ಮರಳುತ್ತಿರುವವನನ್ನು, ಸಂಜೆ ವೇಳೆ ಪೂಜೆಯಲ್ಲಿ ನಿರತಳಾಗಿರುವ ಮಹಿಳೆಯನ್ನು, ಸೀರೆಯ ಸೌಂದರ್ಯ ತೋರುವ ಚಿತ್ರವನ್ನು, ಹಳ್ಳಿಯ ಸರಳ ಜೀವನ, ಮಕ್ಕಳು ಆಟವಾಡುತ್ತಿರುವ ದೃಶ್ಯ, ಇವೆಲ್ಲದರ ಚಿತ್ರವನ್ನು ಜಗತ್ತಿನ ಮುಂದೆ ತೋರ್ಪಡಿಸಬೇಕು'. ರವೀಂದ್ರನಾಥ ಟ್ಯಾಗೋರರ ತಮ್ಮ ಶ್ರೇಷ್ಠ ಚಿತ್ರಕಾರ ಅವನೀಂದ್ರನಾಥ್ ಟ್ಯಾಗೋರ್ ಅಕ್ಕನ ಭೇಟಿ ನಂತರ ತಮ್ಮ ಚಿತ್ರಗಳಲ್ಲಿ ಭಾರತೀಯತೆಯ ಭಾವ ಮಿಳಿತಗೊಳಿಸಿದರು ಎಂಬುದು ಗಮನಾರ್ಹ.

ಮಹಿಳೆಯರ ಬಗ್ಗೆ ಹೆಮ್ಮೆಯ ಭಾವ: ಭಾರತೀಯ ನಾರಿಯರು ಅಜ್ಞಾನಿಗಳು ಮತ್ತು ತುಳಿತಕ್ಕೆ ಒಳಗಾದವರು ಎಂದು ಪಾಶ್ಚಿಮಾತ್ಯರು ತಮ್ಮ ದೇಶದ ವೇದಿಕೆಗಳಲ್ಲಿ ನಿಂತು ದೂಷಿಸುವುದನ್ನು ಕಂಡ ಅಕ್ಕ ಅದೇ ವೇದಿಕೆಯಲ್ಲಿ ನಿಂತು ಭಾರತೀಯರನ್ನು ಪ್ರತಿನಿಧಿಸಿ ಅವರಿಗೆ ಸರಿಯಾದ ಉತ್ತರ ನೀಡಿದಳು. ಭಾರತೀಯ ನಾರಿಯರು ಖಂಡಿತವಾಗಿ ತುಳಿತಕ್ಕೊಳಗಾದವರಲ್ಲ. ಇನ್ನೂ ಪ್ರಾಮಾಣಿಕವಾಗಿ ಹೇಳಬೇಕೆಂದರೆ ಈಗಿನ್ನೂ ಜನ್ಮತಳೆದ ಈ ರಾಷ್ಟ್ರಗಳಲ್ಲಿ ಮಹಿಳೆಯರನ್ನು ಕ್ರೂರವಾಗಿ ನಡೆಸಿಕೊಳ್ಳುತ್ತಾರೆ.

ಭಾರತೀಯ ಮಹಿಳೆಯರ ಸಾಮಾಜಿಕ ಕಳಕಳಿ, ಸಂತೋಷ, ಉದಾತ್ತ ವ್ಯಕ್ತಿತ್ವ ಇವೆಲ್ಲವೂ ರಾಷ್ಟ್ರೀಯ ಜೀವನದ ಸ್ವತ್ತು' ಎಂದು ಪ್ರತಿಪಾದಿಸಿದಳು. ಮತ್ತೆ ಅಕ್ಕ ಆಕ್ರೋಶದಿಂದಲೇ ಪಶ್ಚಿಮದವರಲ್ಲಿ ಕೇಳುತ್ತಾಳೆ, ಭಾರತೀಯ ನಾರಿಯರು ಅಜ್ಞಾನಿಗಳಾಗಲು ಹೇಗೆ ತಾನೆ ಸಾಧ್ಯ? ಪ್ರತಿ ತಾಯಿ ಹಾಗೂ ಅಜ್ಜಿಯೂ ತನ್ನ ಮಕ್ಕಳು-ಮೊಮ್ಮಕ್ಕಳಿಗೆ ಹೇಳುವ ರಾಮಾಯಣ, ಮಹಾಭಾರತ ಮತ್ತು ಪುರಾಣದ ಕಥೆಗಳು ಅತ್ಯುನ್ನತ ಸಾಹಿತ್ಯಗಳಲ್ಲವೇ? ಹಾಗಿದ್ದ ಮೇಲೆ ಭಾರತೀಯ ಮಹಿಳೆಯರು ಅಜ್ಞಾನಿಗಳಾಗಲು ಹೇಗೆ ಸಾಧ್ಯ? ಕೇವಲ ಓದುವುದು ಮತ್ತು ಬರೆಯುವುದರಿಂದ ಸಂಸ್ಕೃತಿ ಹುಟ್ಟುವುದಿಲ್ಲ. ಭಾರತೀಯ ಮಹಿಳೆ ಘನತೆ, ದಯಾಪರತೆ, ಪಾವಿತ್ರ್ಯತೆ, ಧಾರ್ಮಿಕ ವಿಚಾರಗಳನ್ನು ತನ್ನ ಮನೆಯಲ್ಲಿಯೇ ಕಲಿಯುತ್ತಾಳೆ.

ಮನಸ್ಸು ಮತ್ತು ಹೃದಯ ಸದಾ ಅತ್ಯುನ್ನತ ಮಟ್ಟದಲ್ಲಿರುವಂಥ ಜೀವನ ಪದ್ಧತಿ ಭಾರತೀಯರದ್ದು. ಆದ್ದರಿಂದ ಆಕೆಗೆ ಓದಲು ಮತ್ತು ಒಂದಕ್ಷರ ಬರೆಯಲು ಬರದಿದ್ದರೂ ಬೇರೆಲ್ಲರಿಗಿಂತ ಸುಶಿಕ್ಷಿತಳಾಗಿದ್ದಾಳೆ'.

ಪಶ್ಚಿಮದ ರಾಷ್ಟ್ರಗಳಲ್ಲಿನ ಸ್ತ್ರೀವಾದವನ್ನು ಕಂಡ ಭಾರತದ ಬಗ್ಗೆ ಅಭಿಮಾನದಿಂದ ಈ ರೀತಿ ಹೇಳುತ್ತಾಳೆ-ಭಾರತದಲ್ಲಿ ತಾಯಿ ಸ್ತ್ರೀತ್ವದ ಪ್ರತಿಪಾದಕಿ. ಪ್ರೀತಿ ಮತ್ತು ಪವಿತ್ರತೆ ತಾಯಿಯಲ್ಲಿರುವ ಸಹಜ ಗುಣ. ಸ್ತ್ರೀವಾದ, ಮಹಿಳಾವಾದ ಅಂತ ಹೇಳುವವರೆಲ್ಲ ಬಟ್ಟೆ, ಮಾತುಗಳಲ್ಲಿ ಸ್ವಾತಂತ್ರ್ಯ ಬೇಕು' ಅನ್ನುವುದರಲ್ಲೆ ತಮ್ಮ ವಾದಗಳನ್ನು ಸೀಮಿತಗೊಳಿಸಿಕೊಂಡಿವೆ. ಇಷ್ಟಕ್ಕೂ ಭಾರತದಲ್ಲಿ ತಾಯಿಗೆ ಮೊದಲ ಸ್ಥಾನ ಭಾರತವನ್ನೇ ಮಾತೃಭಾವದಲ್ಲಿ ಕಂಡ ಶ್ರೇಷ್ಠ ಪರಂಪರೆ ನಮ್ಮದು. ವಿಶ್ವಮಾನವ ಪ್ರೇಮ, ಭ್ರಾತೃತ್ವ ಎಂದೆಲ್ಲ ಅರಚುವ ಜನರೆದುರು ಅದನ್ನು ಆಚರಣೆಗೆ ತಂದು ಅಗಾಧವಾಗಿ ಬೆಳೆದು ನಿಲ್ಲುತ್ತಾಳೆ ತಾಯಿ. ಭಾರತೀಯರದ್ದು ಸ್ತ್ರೀವಾದವಲ್ಲ ಮಾತೃವಾದ'.

ಭಾರತದಲ್ಲಿದ್ದು ಇಲ್ಲಿನ ಸಂಸ್ಕೃತಿ, ಧಾರ್ಮಿಕ ವಿಚಾರ, ಋಷಿಮುನಿಗಳ ಪರಂಪರೆ ಎಲ್ಲ ಮರೆತು ನಮ್ಮತನವನ್ನೇ ಮರೆಯುತ್ತ, ಬ್ರಿಟಿಷರಿಂದ ಭಾರತ ಒಂದಾಯಿತು' ಎನ್ನುತ್ತಿದ್ದವರನ್ನು ಕಂಡು ಸಿಡಿದೆದ್ದ ಅಕ್ಕ- ಹಿಂದುಸ್ಥಾನದ ಏಕತೆ ಮೂಲಭೂತವಾದುದು. ಶಕ್ತಿಪೂರ್ಣವಾದುದು. ಉಜ್ವಲ ಭವಿತವ್ಯ ಅದಕ್ಕಿದೆ' ಎಂದು ಸ್ವಾಭಿಮಾನದ ಕಿಡಿಯನ್ನು ಜಾಗೃತಗೊಳಿಸಿದಳು.

ಏಕತೆಯ ಮೂಲಮಂತ್ರವನ್ನು ಹೇಳುತ್ತ-ಧರ್ಮದ ಪುನಃ ಸ್ಥಾಪನೆ ಆದಾಗಲೇ ಈ ದೇಶಕ್ಕೆ ಏಳಿಗೆ. ರಾಷ್ಟ್ರವು ವೈಭವಕ್ಕೆ ಏರುವುದು. ಸಮಾನ ದುರ್ಬಲತೆ, ಸಮಾನ ದುಃಖ ವಿಪತ್ತುಗಳ ಆಧಾರದ ಮೇಲಲ್ಲ. ಸಹಜವಾದ, ಸರ್ವದಾ ಸಾಮರ್ಥ್ಯ ನೀಡಬಲ್ಲ ರಾಷ್ಟ್ರೀಯ ಚೈತನ್ಯದ ಆಧಾರದ ಮೇಲೆ, ಸಮಾನ ಪರಂಪರೆ, ಸಮಾನ ಪರಿಶ್ರಮ, ಸಮಾನ ಆಸೆ-ಆಕಾಂಕ್ಷೆಗಳ ಆಧಾರದ ಮೇಲೆ! ಆ ರೀತಿ ಈ ರಾಷ್ಟ್ರ ಪುನಃ ಮೇಲೇಳುವುದು ನಿಶ್ಚಿತ' ಎಂದಿದ್ದಳು ಅಕ್ಕ.

ಜಾಗೃತಿಯ ಕೆಲಸಕ್ಕೆ ಸೀಮಿತಗೊಳ್ಳದ ನಿವೇದಿತಾ ಸ್ವತಃ ಕಾರ್ಯಪ್ರವೃತ್ತಳಾಗುತ್ತಿದ್ದಳು. ಸ್ವಾತಂತ್ರ್ಯ ಚಳವಳಿಯ ದಿನಗಳಲ್ಲಿ ಕ್ರಾಂತಿಕಾರಿ ಹೋರಾಟಗಾರರಿಗೆ ಹಣಕಾಸಿನ ಮುಗ್ಗಟ್ಟು ತೀವ್ರವಾಗಿತ್ತು. ಅದನ್ನು ನಿರ್ವಹಿಸಲು ಸ್ವದೇಶಿ ಉತ್ಪನ್ನಗಳ ಮಾರಾಟ ವ್ಯವಸ್ಥೆ ಆಗಬೇಕಿತ್ತು.

ಇದಕ್ಕಾಗಿ ನಿವೇದಿತಾಳ ಸಹಾಯ ಕೋರಿ ಕ್ರಾಂತಿಕಾರಿ ಬಾರೀಂದ್ರ ಕುಮಾರ ಘೋಷ್ ಆಕೆಯ ಮನೆಗೆ ಹೋಗಿ, ಅಕ್ಕ ಕೈಯಲ್ಲಿ ಬಿಡಿಗಾಸು ಇಲ್ಲ. ಈ ಉತ್ಪನ್ನಗಳು ಮಾರಾಟವಾಗಬೇಕು' ಎಂದಾಗ ಅಕ್ಕ ಕೈಗಾಡಿಯಲ್ಲಿ ಎಲ್ಲ ಉತ್ಪನ್ನಗಳನ್ನು ಹಾಕಿಕೊಂಡು, ರಸ್ತೆಯಲ್ಲಿ ತಳ್ಳಿಕೊಂಡು ಹೋಗುತ್ತ, ಸ್ವದೇಶಿ ವಸ್ತುಗಳು ಬಂದಿವೆ, ಬನ್ನಿರಿ ಕೊಳ್ಳಿರಿ' ಎಂದು ಕೂಗುತ್ತ ಹೊರಟಳು.

ಜನರು ಧಾವಿಸಿ ಬಂದು ಉತ್ಪನ್ನ ಕೊಂಡರು. ಇನ್ನೂ ಬಂಗಾಳದ ಕ್ರಾಂತಿ ಚಟುವಟಿಕೆಗಳ ತಾಣವಾಗಿದ್ದ 'ಅನುಶೀಲನ' ಸಮಿತಿಯಲ್ಲಿ ಕ್ರಾಂತಿಕಾರಿಗಳ ಬೌದ್ಧಿಕ ಬೆಳವಣಿಗೆಗಾಗಿ ಪುಸ್ತಕ ಭಂಡಾರ ಆರಂಭಿಸಲಾಗಿತ್ತು. ಇದಕ್ಕೆ ನಿವೇದಿತಾ 200ಕ್ಕೂ ಹೆಚ್ಚು ಪುಸ್ತಕಗಳನ್ನು ಕೊಟ್ಟಳು.

Recommended Video

ಕಾಂಗ್ರೆಸ್ ನಲ್ಲಿ ಗೊಂದಲ ! | DK Shivkumar | RR Nagar By Election | Oneindia Kannada

ಹೀಗೆ ಭಾರತದ ಹಿತಕ್ಕಾಗಿ ತಾನೇ ಗಂಧದ ಕಡ್ಡಿ ಆದಳು. ತನ್ನ ತಾನು ಸುಟ್ಟುಕೊಳ್ಳುತ್ತಲೇ ಸುತ್ತಲಿನವರಿಗೆ ಪರಿಮಳವನ್ನು ಪಸರಿಸಿದಳು. ಶಾಶ್ವತವಾಗಿ ಭಾರತೀಯರ ಹೃನ್ಮನಗಳಲ್ಲಿ ಸೋದರಿಯಾಗಿ ನೆಲೆಸಿದಳು.

ರಾಷ್ಟ್ರಚೇತನ, ರಾಷ್ಟ್ರಪ್ರಜ್ಞೆ, ಉತ್ಸಾಹದ ಸಂಗಮವಾಗಿ ಎಂದೆಂದಿಗೂ ಪ್ರೇರಣೆ ನೀಡುವ ಸೋದರಿ ನಿವೇದಿತಾಳ ಜೀವನ ಮತ್ತು ಸಂದೇಶ ಈಗಿನ ಭಾರತವನ್ನು ಮತ್ತಷ್ಟು ಶಕ್ತಿಶಾಲಿಯಾಗಿಸಬಲ್ಲದು. ವಿಶೇಷವಾಗಿ ಸ್ತ್ರೀಶಕ್ತಿಗೆ ಮತ್ತಷ್ಟು ಬಲ ತುಂಬಬಲ್ಲದು.

English summary
Sodari Nivedita Pratishtana Celebrating Sister Nivedita Birth Anniversary On October 28.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X