ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟಿಸುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಸಿದ್ದು ಬೆಂ'ಬಲ'

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 20: ನಗರದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ರಾಜ್ಯದ ಉದ್ಯೋಗಾಕಾಂಕ್ಷಿಗಳನ್ನು ಭೇಟಿ ಮಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಉದ್ಯೋಗಾಕಾಂಕ್ಷಿಗಳ ಪರ ನಿಲ್ಲುವುದಾಗಿ ಸದನದಲ್ಲಿ ಮಾತನಾಡುವುದಾಗಿ ಹೇಳಿದರು.

ತಮ್ಮ ಎಲ್ಲಾ ಬೇಡಿಕೆಗಳನ್ನು ನಾನು ಸರ್ಕಾರದ ಮುಂದಿಡುವ ಕೆಲಸ ಮಾಡುತ್ತೇನೆ. ಈಗ ನಡೆದಿರುವಂತಹ ಅಕ್ರಮ ನೇಮಕಾತಿಗಳಾದ ಎಫ್‌.ಡಿ.ಎ, ಎಸ್‌.ಡಿ.ಎ, ಇಂಜಿನಿಯರ್‌, ಕೆಪಿಟಿಸಿಎಲ್‌ ಹುದ್ದೆಗಳ ನೇಮಕ, ಕಾನ್ಸ್‌ ಟೇಬಲ್‌, ಪಿಎಸ್‌ಐ ನೇಮಕಾತಿಯಲ್ಲಿನ ಅಕ್ರಮಗಳ ಬಗ್ಗೆ ತಾವು ಪ್ರಸ್ತಾಪ ಮಾಡಿದ್ದೀರಿ, ನ್ಯಾಯಕ್ಕಾಗಿ ಮನವಿ ಮಾಡಿದ್ದೀರಿ. ಇದರ ಜೊತೆಗೆ ಎರಡೂವರೆ ಲಕ್ಷ ಸರ್ಕಾರಿ ಹುದ್ದೆಗಳು ಈಗಾಗಲೇ ಮಂಜೂರಾಗಿದ್ದು, ಅವು ಭರ್ತಿಯಾಗದೆ ಹಾಗೆ ಉಳಿದಿವೆ ಅವನ್ನು ಕೂಡ ಭರ್ತಿ ಮಾಡಬೇಕು ಎಂದು ತಾವು ಒತ್ತಾಯ ಮಾಡಿದ್ದೀರಿ.

ನಿಮ್ಮ ಬಳಿ ಲಂಚ ನೀಡಲು ಹಣವಿಲ್ಲ, ಹಾಗಾಗಿ ಲಂಚದ ಬದಲು ಪೋಷಕರು ಬೆಳೆದಿರುವ ದವಸ ಧಾನ್ಯಗಳನ್ನು ಸರ್ಕಾರಕ್ಕೆ ನೀಡಿ, ಉದ್ಯೋಗ ನೀಡುವಂತೆ ಒತ್ತಾಯಿಸಿದ್ದೀರಿ, ನೀವು ನನಗೆ ಕೊಟ್ಟಿರುವ ಈ ಧಾನ್ಯದ ಗಂಟನ್ನು ಸರ್ಕಾರಕ್ಕೆ ತಲುಪಿಸುವ ಕೆಲಸ ಮಾಡುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಪೊಲೀಸ್‌ ಹುದ್ದೆಗಳ ನೇಮಕಾತಿಯಲ್ಲಿ ಸಾಮಾನ್ಯ ವರ್ಗಕ್ಕೆ 25 ಹಾಗೂ ಪರಿಶಿಷ್ಟ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 27 ವರ್ಷ ಗರಿಷ್ಠ ಮಿತಿಯನ್ನು ವಿಧಿಸಲಾಗಿದೆ. ಈ ಮಿತಿ ಬೇರೆ ರಾಜ್ಯಗಳಲ್ಲಿ ಹೆಚ್ಚಿರುವುದರಿಂದ ನಮ್ಮಲ್ಲೂ ಹೆಚ್ಚು ಮಾಡಬೇಕು ಎಂಬುದು ನಿಮ್ಮ ಬೇಡಿಕೆ, ಇದನ್ನು ಕೂಡ ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.

ಸರ್ಕಾರದ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಆರೋಪ

ಸರ್ಕಾರದ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಆರೋಪ

ಪಿಎಸ್‌ಐ ಪರೀಕ್ಷೆಯಲ್ಲಿ ಪ್ರಾಮಾಣಿಕವಾಗಿ ಪರೀಕ್ಷೆ ಎದುರಿಸಿರುವ ಅಭ್ಯರ್ಥಿಗಳಿಗೆ ಆದ ಅನ್ಯಾಯವನ್ನು ಕೂಡ ಸದನದಲ್ಲಿ ಪ್ರಸ್ತಾಪ ಮಾಡುತ್ತೇನೆ. ಕಿಮ್ಮನೆ ರತ್ನಾಕರ್‌ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿದ್ದವರು, ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಈ ಸರ್ಕಾರ ತನ್ನ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ಕಿಮ್ಮನೆ ರತ್ನಾಕರ್‌ ಅವರ ಅಧಿಕಾರದ ಅವಧಿಯಲ್ಲೂ ಭ್ರಷ್ಟಾಚಾರ ನಡೆದಿತ್ತು ಎಂದು ಸುಳ್ಳು ಆರೋಪ ಮಾಡುತ್ತಿದೆ. ಸರ್ಕಾರಕ್ಕೆ ನಾನು ಹೇಳುವುದೇನೆಂದರೆ 2006 ರಿಂದ ಈ ವರೆಗೆ ಯಾವೆಲ್ಲಾ ನೇಮಕಾತಿಗಳು ನಡೆದಿವೆ ಅವೆಲ್ಲವನ್ನೂ ತನಿಖೆ ಮಾಡಿಸಲಿ ಈ ಸರ್ಕಾರದ ಬುಟ್ಟಿಯೊಳಗೆ ಹಾವಿಲ್ಲ, ಸುಮ್ಮನೆ ಬುಸ್‌ ಅಂತ ಶಬ್ದ ಮಾಡುತ್ತಿದ್ದಾರೆ. ಕೇರೆ ಹಾವೂ ಇಲ್ಲ, ನಾಗರ ಹಾವೂ ಇಲ್ಲ. ಶಬ್ದ ಮಾತ್ರ ಮಾಡ್ತಾರೆ ಎಂದು ಹೇಳಿದರು.

ನಿಮ್ಮ ಪರವಾಗಿ ನಾವು ಹೋರಾಟ ಮಾಡುತ್ತೇವೆ

ನಿಮ್ಮ ಪರವಾಗಿ ನಾವು ಹೋರಾಟ ಮಾಡುತ್ತೇವೆ

ನಿಮ್ಮ ಪ್ರತಿಭಟನೆಗೆ ಸಂಜೆ 5 ಗಂಟೆ ವರೆಗೆ ಮಾತ್ರ ಅವಕಾಶ ನೀಡಿದ್ದರು ಎಂಬ ವಿಚಾರ ನಮ್ಮ ಪಕ್ಷದ ನಾಯಕರಾದ ಪ್ರಿಯಾಂಕ್‌ ಖರ್ಗೆ ಅವರ ಮೂಲಕ ಗೊತ್ತಾಯಿತು. ಆ ಕೂಡಲೇ ನಾನು ಸಂಬಂಧಪಟ್ಟ ಪೊಲೀಸರಿಗೆ ಕರೆ ಮಾಡಿ, ಶಾಂತಿಯುತವಾಗಿ ಪ್ರತಿಭಟನೆ ಮಾಡಲು ಮುಕ್ತ ಅವಕಾಶ ನೀಡುವಂತೆ ಹೇಳಿದ್ದೇನೆ. ಶಾಂತಿಯುತ ಪ್ರತಿಭಟನೆ ಎಲ್ಲರ ಹಕ್ಕು, ಇದನ್ನು ಸಂವಿಧಾನ ದೇಶದ ಪ್ರತಿಯೊಬ್ಬ ನಾಗರಿಕನಿಗೂ ನೀಡಿದೆ. ನಿಮ್ಮ ಹೋರಾಟವನ್ನು ನೀವು ಮುಂದುವರೆಸಿ, ನಿಮ್ಮ ಪರವಾಗಿ ನಾವು ಕೂಡ ನಮ್ಮ ಹೋರಾಟವನ್ನು ಮಾಡುತ್ತೇವೆ ಎಂದು ಸಿದ್ದರಾಮಯ್ಯ ಆಶ್ವಾಸನೆ ನೀಡಿದರು.

 ಭ್ರಷ್ಟಾಚಾರ ರಹಿತ ನೇಮಕಾತಿ

ಭ್ರಷ್ಟಾಚಾರ ರಹಿತ ನೇಮಕಾತಿ

ನಿಮ್ಮೆಲ್ಲರ ಮತ್ತು ರಾಜ್ಯದ ಜನರ ಸಹಕಾರದಿಂದ ನಾವು ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ನಿಮ್ಮ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ರೂಪಿಸುತ್ತೇವೆ. ಹೂಟ ಸಮಿತಿ ರಚನೆ ಮಾಡಿದ್ದು ನಾವೇ, ಅವರ ಶಿಫಾರಸುಗಳಲ್ಲಿ ಕೆಲವನ್ನು ಜಾರಿ ಮಾಡಿದ್ದೆವು, ಇನ್ನು ಕೆಲವನ್ನು ಜಾರಿ ಮಾಡಲು ಆಗಿರಲಿಲ್ಲ, ಮುಂದೆ ನಮ್ಮ ಸರ್ಕಾರ ಬಂದರೆ ನೇಮಕಾತಿಯಲ್ಲಿ ಭ್ರಷ್ಟಾಚಾರ ತೊಡೆದು ಹಾಕಿ, ನ್ಯಾಯಯುತವಾಗಿ ನೇಮಕಾತಿ ಆಗಲು ಹೂಟ ಸಮಿತಿಯ ಶಿಫಾರಸುಗಳನ್ನು ಜಾರಿ ಮಾಡುವ ಕೆಲಸ ಮಾಡುತ್ತೇವೆ. ಕೇಂದ್ರ ಲೋಕಸೇವಾ ಆಯೋಗದಲ್ಲಿ ಅಧ್ಯಕ್ಷರಾಗಿದ್ದ ಹೂಟ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ, ಅವರಿಂದ ಶಿಫಾರಸುಗಳನ್ನು ಪಡೆದು ಕೆಲವನ್ನು ಜಾರಿ ಮಾಡಿದ್ದೆವು. ಇನ್ನು ಕೆಲವು ಉಳಿದುಕೊಂಡಿದ್ದಾವೆ. ನಾವು ಭ್ರಷ್ಟಾಚಾರ ರಹಿತ ನೇಮಕಾತಿ ಮಾಡಲು ಯಾವೆಲ್ಲ ಕ್ರಮ ಕೈಗೊಳ್ಳಬೇಕು ಅವೆಲ್ಲವನ್ನು ಮಾಡುತ್ತೇವೆ ಎಂದು ತಿಳಿಸಿದರು.

ಶಾಂತಿಯುವ ಪ್ರತಿಭಟನೆಗೆ ನನ್ನ ಬೆಂಬಲ

ಶಾಂತಿಯುವ ಪ್ರತಿಭಟನೆಗೆ ನನ್ನ ಬೆಂಬಲ

ಭ್ರಷ್ಟಾಚಾರ, ಅಕ್ರಮಗಳಲಿ ಲಂಚ ಪಡೆಯುವವರಷ್ಟೇ ಲಂಚ ತೆಗೆದುಕೊಳ್ಳುವವರು ಅಪರಾಧಿಗಳು. ಕೆಲವರು ಪಿಎಸ್‌ಐ ನೇಮಕಾತಿಯಲ್ಲಿ ಲಂಚ ಕೊಟ್ಟು, ಪರೀಕ್ಷೆಯಲ್ಲಿ ಖಾಲಿ ಉತ್ತರ ಪತ್ರಿಕೆ ಉಳಿಸಿ ಹೋಗಿ ನೇಮಕವಾಗಿದ್ದರು. ಕೆಲವರು ದುಡ್ಡು ಇದ್ದವರು ಲಂಚ ಕೊಡ್ತಾರೆ, ಆದರೆ ದುಡ್ಡು ಇಲ್ಲದೆ ಇರುವವರು ಏನು ಮಾಡಬೇಕು? ಈ ರೀತಿ ಅಕ್ರಮಗಳನ್ನು ನಾವು ನೀವೆಲ್ಲಾ ಜೊತೆಯಾಗಿ ವಿರೋಧಿಸೋಣ, ನಿಮ್ಮ ಹೋರಾಟ ಮತ್ತು ಶಾಂತಿಯುತ ಪ್ರತಿಭಟನೆಗೆ ನನ್ನ ಬೆಂಬಲ ಸದಾ ಇರಲಿದೆ.

English summary
Leader of the Opposition Siddaramaiah, who met the protesting state job seekers at Freedom Park in the city, addressed the protestors and said that he will speak in the House to stand for the job seekers, Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X